Published in the Sunday Vijay Karnataka on 25 August, 2024
`ಮನೆಯಲ್ಲಿ ಪೂಜಾಪೀಠ ಇಲ್ಲ' ಎಂಬ ಯೋಚನೆ ನನ್ನನ್ನು ಬಿಟ್ಟೂಬಿಡದೆ ಕಾಡುತ್ತಿತ್ತು. ನಾನು ಮನಸ್ಸಿನಲ್ಲಿ ಅಂದುಕೊಂಡಿದ್ದನ್ನು ಕೃತಿಗೆ ಇಳಿಸಲು ಮುಂದಾಗದಿದ್ದುದೇ ಇಷ್ಟೆಲ್ಲವನ್ನೂ ಅನುಭವಿಸಲು ಕಾರಣವಾಗಿತ್ತು.
ಜನವರಿ ತಿಂಗಳು ವೀಣಾ ವರ್ಲ್ ನಲ್ಲಿ ವೇತನ ಪರಿಷ್ಕರಣೆಯಾಗುವ ಅವಧಿಯಾಗಿರುತ್ತದೆ. ಮಾನವ ಸಂಪನ್ಮೂಲ (ಎಚ್ ಆರ್) ವಿಭಾಗವು ಪ್ರತಿಯೊಬ್ಬರನ್ನೂ ಮೌಲ್ಯಮಾಪನ ಮಾಡುವುದರಲ್ಲಿ ಮುಳುಗಿದ್ದರೆ, ಮ್ಯಾನೇಜರುಗಳು ಕಾತರದಿಂದ ಕಾಯುತ್ತಿರುವ ಸಂದರ್ಭ ಕೂಡ ಇದಾಗಿರುತ್ತದೆ. ಈ ಪ್ರಕ್ರಿಯೆ ಇನ್ನಷ್ಟು ಸುಲಭವಾಗಬೇಕು ಎಂದು ಪ್ರತಿವರ್ಷವೂ ಅನ್ನಿಸುತ್ತದೆ. ಆದರೆ, ಅದು ಕಾರ್ಯರೂಪಕ್ಕೆ ಮಾತ್ರ ಬಂದಿಲ್ಲ. ವೇತನದ ಹೆಚ್ಚಳವು ಹಣದುಬ್ಬರವನ್ನು ಸರಿದೂಗಿಸಿ, ಅದರ ಮೇಲೆ ಶೇಕಡ 1ರಷ್ಟು ಇರಬೇಕು ಎಂಬುದು ವರ್ಷದ ಕೊನೆಯಲ್ಲಿ ನಮ್ಮ ನಿರ್ಧಾರವಾಗಿರುತ್ತದೆ. ಈ ವಿಷಯದಲ್ಲಿ ನಾವು ಅಮೆರಿಕದ ಪದ್ಧತಿಯನ್ನು ಅನುಸರಿಸುತ್ತೇವೆ. ಆದರೆ, ವಾಸ್ತವದಲ್ಲಿ ಇದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ವಿಭಿನ್ನ ತೊಡಕುಗಳಿರುತ್ತವೆ. ಕೆಲವು ಉದ್ಯೋಗಿಗಳು ವರ್ಷಪೂರ್ತಿ ನಿರೀಕ್ಷೆ ಮೀರಿ ಸಾಧನೆ ತೋರಿರುತ್ತಾರೆ. ಇನ್ನು ಕೆಲವರು, ಸಾಧನೆಯಲ್ಲಿ ಹಿಂದುಳಿದಿರುತ್ತಾರೆ. ಎಲ್ಲೋ ಒಂದು ಕಡೆ ಉದ್ಯೋಗಿಯೊಬ್ಬರು ತಮ್ಮ ಸಾಧನೆಯಿಂದಾಗಿ ಬೆಳಕಿನ ಕಿರಣದಂತೆ ಗೋಚರಿಸಿದರೆ, ಮತ್ತೊಂದು ಕಡೆ ಬೇರೊಬ್ಬರ ಸಾಧನೆ ಇಳಿಮುಖವಾಗಿರುತ್ತದೆ. ಹೀಗಾಗಿ, ಎಲ್ಲರಿಗೂ ಒಂದೇ ಮಾನದಂಡ ಅನ್ವಯಿಸುವುದು ಅಸಾಧ್ಯವಾಗುತ್ತದೆ.
ಅಮೆರಿಕದಲ್ಲಿ ಉದ್ಯೋಗಕ್ಕೆ ಸಂಬಂಧಿಸಿದಂತೆ, “ಹೈರ್ ಅಂಡ್ ಫೈರ್” ಪದ್ಧತಿ (ಬೇಕೆಂದಾಗ ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳುವ ಹಾಗೂ ಬೇಡವೆಂದಾಗ ಮುಲಾಜಿಲ್ಲದೆ ಉದ್ಯೋಗದಿಂದ ಕಿತ್ತುಹಾಕುವುದಕ್ಕೆ ಹೀಗೆನ್ನಲಾಗುತ್ತದೆ) ರೂಢಿಯಲ್ಲಿದೆ. ಆದರೆ, ಜಪಾನ್‌ನಲ್ಲಿ, ಯಾವುದೇ ಉದ್ಯೋಗಿಯು ಸಂಸ್ಥೆಯೊಂದರ ಜೊತೆ ಸಂಪರ್ಕಕ್ಕೆ ಬಂದರೆ, ಅದು ಬಹುತೇಕ ಕೊನೆಯವರೆಗೂ ಉಳಿಯುತ್ತದೆ. ಭಾರತವು, ಈ ಪಶ್ಚಿಮ ಮತ್ತು ಪದ್ಧತಿಗಳ ನಡುವೆ ಇದ್ದು, ಇಲ್ಲಿ ಇವೆರಡರ ಸಂಯೋಜಿತ ನೀತಿಯು ಕಂಡುಬರುತ್ತದೆ. ವೇತನ ಹೆಚ್ಚಳವನ್ನು ಪರಿಗಣಿಸುವಾಗ ನಾವು ತಾಂತ್ರಿಕ ಅಂಶಗಳ ಬಗ್ಗೆ ಭಾವನಾತ್ಮಕ ನೆಲೆಯಲ್ಲಿ ಅವಲೋಕಿಸುತ್ತೇವೆ. ನಾವು ಪ್ರತಿಯೊಬ್ಬ ಉದ್ಯೋಗಿಯನ್ನೂ ತಂಡದ ಸದಸ್ಯ ಎಂದು ಭಾವಿಸುತ್ತೇವೆ. ಇಂತಹ ಅವಲೋಕನ ಪ್ರಕ್ರಿಯೆಯು ಸಾಕಷ್ಟು ಸಮಯವನ್ನು ಹಿಡಿಯುತ್ತದೆ. ಅದೇನೇ ಇರಲಿ, ಅಂತಿಮವಾಗಿ ಪ್ರತಿಯೊಬ್ಬ ಉದ್ಯೋಗಿಯೂ ಮುಖ್ಯವೇ ಹೌದು. ಸಂಸ್ಥೆಯನ್ನು ರೂಪಿಸಲು ತಂಡದ ಪ್ರತಿಯೊಬ್ಬ ಸದಸ್ಯರೂ ಕೊಡುಗೆ ನೀಡುತ್ತಾರೆ.
ಈ ಪ್ರಕ್ರಿಯೆ ವೇಳೆ, ಎಲ್ಲಾ ಮ್ಯಾನೇಜರುಗಳು, ಹಿರಿಯ ಮ್ಯಾನೇಜರುಗಳು ಮತ್ತು ಜನರಲ್ ಮ್ಯಾನೇಜರುಗಳು ಗಂಭೀರ ಆಲೋಚನೆಯಲ್ಲಿ ತೊಡಗಿರುತ್ತಾರೆ. ಅಂತಿಮವಾಗಿ, ನಾವು ಕೂಡ ಚರ್ಚೆಯಲ್ಲಿ ಪಾಲ್ಗೊಂಡು, ಯಾವುದೋ ನಿರ್ಧಾರ ತಳೆಯುವುದರ ಸಂಬಂಧ ಡೋಲಾಯಮಾನ ಪರಿಸ್ಥಿತಿ ಇದ್ದಾಗ ನಮ್ಮ ಅಭಿಪ್ರಾಯಗಳನ್ನು ನೀಡುತ್ತೇವೆ. ಈ ಸಭೆಗಳಲ್ಲಿ, ಕೆಲವು ಉದ್ಯೋಗಿಗಳು ಅಥವಾ ತಂಡದ ಸದಸ್ಯರು ದೀರ್ಘಚರ್ಚೆಯ ಕೇಂದ್ರವಾಗುತ್ತಾರೆ. ಅಭಿಪ್ರಾಯಗಳಲ್ಲಿ ವ್ಯತ್ಯಾಸಗಳು ಇರುತ್ತವೆ. ಕೆಲವರು ತಂಡದ ನಿರ್ದಿಷ್ಟ ಸದಸ್ಯನನ್ನು ಸಮರ್ಥಿಸಿಕೊಂಡರೆ, ಇನ್ನು ಕೆಲವರು ಅದೇ ಸದಸ್ಯನಲ್ಲಿರುವ ಕೊರತೆಗಳ ಬಗ್ಗೆ ಪ್ರಸ್ತಾಪಿಸುತ್ತಾರೆ.
ನಾನು ಮನವರಿಕೆ ಮಾಡಿಕೊಂಡಿರುವ ವಿಷಯವೇನೆಂದರೆ, ತಂಡದ ನಿರ್ದಿಷ್ಟ ಸದಸ್ಯರೊಬ್ಬರ ಬಗ್ಗೆ ದೀರ್ಘವಾದ ಚರ್ಚೆ ಯಾವಾಗ ಆಗುತ್ತದೋ ಅದು ಎಚ್ಚರಿಕೆಯ ಸೂಚನೆಯಾಗಿರುತ್ತದೆ. ಆ ಉದ್ಯೋಗಿಯು ಸಂಸ್ಥೆಯಲ್ಲಿ ಉಳಿಯಬೇಕೇ? ಆ ವ್ಯಕ್ತಿಯು ಕೇವಲ ಉದ್ಯೋಗದ ಕಾರಣಕ್ಕಾಗಿ ಇಲ್ಲಿ ಇದ್ದಾರೆಯೇ ಅಥವಾ ಅವರಿಗೆ ನಿಯೋಜಿಸಲಾಗಿರುವ ಉದ್ಯೋಗ ನಿರ್ವಹಣೆಯ ಜವಾಬ್ದಾರಿಯಲ್ಲೇ ತಪ್ಪಾಗಿದೆಯೇ? ಅಥವಾ ಅವರು ಆಯ್ಕೆ ಮಾಡಿಕೊಂಡಿರುವ ವೃತ್ತಿಯಲ್ಲಿಯೇ ದೋಷವಿದೆಯೇ?- ಎಂಬ ಪ್ರಶ್ನೆಗಳು ಮೂಡುತ್ತವೆ. ನಾವು, ಪ್ರತಿಯೊಬ್ಬ ಉದ್ಯೋಗಿಯ ವಿಷಯದಲ್ಲೂ, “ನೇಮಿಸಿಕೊಳ್ಳು-ಪರಿಶೀಲಿಸು-ಸ್ಥಾನಂತರ ಗೊಳಿಸು- ಬಿಡುಗಡೆಗೊಳಿಸು” (ರೆಕ್ರೂಟ್-ರೆವ್‌ಯೂ- ರೀಲೊಕೇಟ್-ರಿಲೀಸ್) ಪದ್ಧತಿಯನ್ನು ಅನುಸರಿಸುತ್ತೇವೆ. ಆದರೆ, ಈ ಪದ್ಧತಿಯ ಪಾಲನೆಯ ಸನ್ನಿವೇಶ ಎದುರಾದಾಗ, ಯಾವುದೇ ಸದಸ್ಯರೊಬ್ಬರ ಬಗ್ಗೆ ತುಂಬಾ ಚರ್ಚಿಸಬೇಕಾಗಿ ಬಂದರೆ ನಾವು ಕ್ರಮ ತೆಗೆದುಕೊಳ್ಳಲೇಬೇಕು. ಯಾವುದೇ ಉದ್ಯೋಗಿಯು ಸಂಸ್ಥೆಯೊಂದರಲ್ಲಿ ಬಂಧನಕ್ಕೆ ಸಿಲುಕಿಕೊಳ್ಳಬಾರದು ಹಾಗೂ ಅದೇ ರೀತಿಯಾಗಿ ಯಾವುದೇ ಸಂಸ್ಥೆ ಕೂಡ ಉದ್ಯೋಗಿಯಿಂದ ಸಮಸ್ಯೆಗೆ ಸಿಲುಕಬಾರದು. ಕೆಲವೊಮ್ಮೆ, ಬೇರ್ಪಡೆಗೊಳ್ಳುವುದು ಉತ್ತಮವಾಗಿದ್ದು, ಉಭಯತ್ರರ ಒಳಿತಿಗಾಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಇದು ಅತ್ಯಂತ ಕಠಿಣ ಆನ್ನಿಸಬಹುದು. ಆದರೆ, ದೀರ್ಘಾವಧಿಯಲ್ಲಿ ಇದು ಸಂಬಂಧಪಟ್ಟವರೆಲ್ಲರ ಒಳಿತಿಗಾಗಿಯೇ ತೆಗೆದುಕೊಳ್ಳುವ ನಿರ್ಧಾರವಾಗಿರುತ್ತದೆ.
ಉದಾಹರಣೆಗೆ, ಸರಳ ವಿಷಯಗಳನ್ನೇ ತೆಗೆದುಕೊಳ್ಳಿ. ಅದೊಂದು ದಿನ ಕಚೇರಿಯಲ್ಲಿ ಹೀಗೆ ಆಯಿತು. ನಾನು ಕಚೇರಿಯ ಒಂದು ಕೊನೆಯಲ್ಲಿ ಕುಳಿತು ಕೆಲಸ ಮಾಡುತ್ತೇನೆ. ಸುಧೀರ್, ಸುನೀಲಾ ಮತ್ತು ನೀಲ್ ಅವರು ಮತ್ತೊಂದು ಕೊನೆಯಲ್ಲಿ ಕುಳಿತು ಕೆಲಸ ಮಾಡುತ್ತಾರೆ. ಕೆಲವೊಮ್ಮೆ, ಕೆಲಸದ ವೇಳೆಯಲ್ಲಿ ನಾವು ಕಚೇರಿಯೊಳಗೆ ಪರಸ್ಪರರನ್ನು ಹಾದು ಹೋಗಬೇಕಾಗುತ್ತದೆ. ಹೀಗೆ ಮುಖಾಮುಖಿಯಾದ ಸಂದರ್ಭಗಳಲ್ಲಿ ನಮ್ಮ ಲೋಕಾಭಿರಾಮದ ಚರ್ಚೆಗಳು ಶುರುವಾಗುತ್ತವೆ. ಅಲ್ಲೇ ಹತ್ತಿರದಲ್ಲೇ ಇರುವ ವಾಷ್‌ರೂಮ್ ಬಳಿ ಒಮ್ಮೆ ಇಂತಹ ಚರ್ಚೆ ಶುರುವಾದಾಗ, ಸುನೀಲಾಳು, “ಈ ವಾಷ್‌ರೂಮ್ ನಲ್ಲಿ ಒಂದು ಸಣ್ಣ ಕಬೋರ್ಡ್ ಇರುವುದು ಅಗತ್ಯ. ಉಡುಪುಗಳನ್ನು ಇರಿಸಲು ಬೇರೆ ಯಾವ ಜಾಗವೂ ಇಲ್ಲ. ಟಿ-ಶರ್ಟ್ ಸಮವಸ್ತ್ರವನ್ನು ತೂಗು ಹಾಕುವುದಕ್ಕೂ ಜಾಗವಿಲ್ಲ. ಏನಾದರೂ ವ್ಯವಸ್ಥೆ ಇರಬೇಕಲ್ಲವೇ?” “ಎಂದಳು. ಇದೇ ಚರ್ಚೆಯು ಪ್ರತಿ ವರ್ಷವೂ ಆಗುತ್ತಿದೆ ಎಂಬುದು ಆಗ ನಮ್ಮೆಲ್ಲರ ಮನಸ್ಸಿಗೂ ಬರುತ್ತದೆ. “ಓಹ್, ಇಲ್ಲಿ ಎಷ್ಟೊಂದು ಜಾಗ ಇದೆ?” ಎಂಬ ಅನಿಸಿಕೆಯು ನಮ್ಮನ್ನು ಪದೇ ಪದೇ ಕಾಡುತ್ತಿರುತ್ತದೆ ಎಂಬುದೂ ನಿಜವೇ. ಆದರೆ, ನಾವು ಆಡಳಿತ ನಿರ್ವಾಹಕರಿಗೆ ಸೂಚನೆ ನೀಡಿದ್ದರೆ ಈ ಕೆಲಸವು ಯಾವಾಗಲೇ ಕೇವಲ ಎಂಟರಿಂದ ಹತ್ತು ದಿನಗಳೊಳಗೆ ಮುಗಿದಿರುತ್ತಿತ್ತು. ಅದಕ್ಕೆ ಬದಲಾಗಿ ನಾವು ಎಂಟರಿಂದ ಹತ್ತು ವರ್ಷಗಳವರೆಗೆ ಅನಾನುಕೂಲವನ್ನು ಸಹಿಸಿಕೊಂಡಿದ್ದೇವೆ. ಏಕೆಂದರೆ, ನಾವು ಯಾರಿಗೂ ಆ ಕಾರ್ಯ ಪೂರೈಸುವ ಜವಾಬ್ದಾರಿಯನ್ನು ನಿಯೋಜಿಸಲೇ ಇಲ್ಲವಲ್ಲ.
ಈಗ ಇನ್ನೊಂದು ವಿಷಯ ಹಂಚಿಕೊಳ್ಳಲು ಬಯಸುತ್ತೇನೆ. ನಾವು ನಮ್ಮ ಮನೆಯನ್ನು ಬೇರೆ ಬೇರೆ ಕಾರಣಗಳಿಗಾಗಿ ಹಲವಾರು ಸಲ ಸ್ಥಳಾಂತರಿಸಿದ್ದೇವೆ. ಹೀಗೆ ಮಾಡಿದ ಪ್ರತಿಸಲವೂ ಹೊಸ ಮನೆಯ ಒಳಾಂಗಣಕ್ಕೆ ಕೆಲವು ಸಣ್ಣಪುಟ್ಟ ಅಥವಾ ಗಮನಾರ್ಹ ಬದಲಾವಣೆಗಳ ಅಗತ್ಯ ಇದ್ದೇ ಇರುತ್ತಿತ್ತು. ಅದೇ ರೀತಿಯಾಗಿ, ನಮಗೆ ಆಶ್ರಯ ನೀಡಿದ್ದ ಮನೆಯೊಂದರಲ್ಲಿ ದೇವರಿಗೆಂದು ಪ್ರತ್ಯೇಕ ಜಾಗ ಇಲ್ಲದಿದ್ದಾಗ. ಅದಕ್ಕಾಗಿ ನಾವೇ ವ್ಯವಸ್ಥೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇತ್ತು. ಹೊರಗಿನಿಂದ ಕೆಲಸ ಮುಗಿಸಿಕೊಂಡು ಆ ಮನೆಗೆ ಕಾಲಿಡುತ್ತಿದ್ದಂತೆಯೇ “ಓಹ್, ನಾವು ದೇವರಿಗೆಂದು ಪ್ರತ್ಯೇಕ ಜಾಗವೊಂದನ್ನು ಮಾಡಲಿಲ್ಲವಲ್ಲ” ಎಂಬ ಕೊರಗು ನನ್ನನ್ನು ಕಾಡುತ್ತಿತ್ತು. ಅದೊಂದು ದಿನ, “ಇನ್ನು, ದೇವರ ಜೊತೆ ಮೋಸ ಮಾಡಲು ಸಾಧ್ಯವಿಲ್ಲ; ಒಂದು ಪೂಜಾಪೀಠ ಇರಲೇಬೇಕು” ಎಂದು ತೀವ್ರವಾಗಿ ಅನ್ನಿಸತೊಡಗಿತು. ಆಗ ನಾನು ತಕ್ಷಣವೇ ಮುಂಬೈನ ಪ್ರಭಾದೇವಿಯಲ್ಲಿರುವ ಆಕಾರ್ ಆರ್ಟ್ ಗ್ಯಾಲರಿಯತ್ತ ಪಾದ ಬೆಳೆಸಿದೆ. ಆ ಗ್ಯಾಲರಿಯಲ್ಲಿ ಭವ್ಯವಾದ ಪೂಜಾಪೀಠಗಳು ಇರುವುದನ್ನು ಅದರ ಮುಂದೆ ಹಾದು ಹೋಗುವಾಗಲೆಲ್ಲಾ ನಾನು ಹಲವು ವರ್ಷಗಳಿಂದ ನೋಡುತ್ತಾ ಬಂದಿದ್ದೆ. ಆ ಗ್ಯಾಲರಿಯನ್ನು ಒಳ ಪ್ರವೇಶಿಸಿದ ಮೇಲೆ ನಾನು ಪೂಜಾಪೀಠವೊಂದನ್ನು ಆಯ್ಕೆ ಮಾಡಿದೆ. ಹಣ ಪಾವತಿಸಿ ಅದನ್ನು ಮನೆಗೆ ತೆಗೆದುಕೊಂಡು ಹೋಗುವುದಷ್ಟೇ ಉಳಿದ ಕೆಲಸವಾಗಿತ್ತು. ಆದರೆ, ಅಲ್ಲಿನ ಸೇಲ್‌್ಸ ಪರ್ಸನ್ ಹೇಳಿದ, “ಇದು ಜನರು ನೋಡಲೆಂದು ಡಿಸ್ ಪ್ಲೇಗೆ ಇಟ್ಟಿರುವ ಪೂಜಾಪೀಠ. ನಿಮಗೆ, ಇಂತಹ ಪೀಠ ಬೇಕಿದ್ದರೆ ಮುಂಗಡ ಹಣ ಪಾವತಿಸಬೇಕು. ಎರಡು ತಿಂಗಳ ಅವಧಿಯಲ್ಲಿ ನಿಮಗೆ ಪೀಠವನ್ನು ತಲುಪಿಸಲಾಗುತ್ತದೆ” ಎಂದು.
ಓಹ್! ಆ ಕ್ಷಣದಲ್ಲಿ ನನಗೆ ಎರಡು ತಿಂಗಳ ಅವಧಿ ಎಂದರೆ ಅನಂತಕಾಲ ಅನ್ನಿಸಿಬಿಟ್ಟಿತು. ಹೀಗಾಗಿ, ನಾನು ಆರ್ಡರ್ ಮಾಡದೆ, ಸಾಂತಾ ಕ್ರೂಸ್‌ಗೆ (ಮುಂಬೈನಲ್ಲಿನ ಒಂದು ಉಪನಗರ) ಹೋಗೋಣ ಎಂದುಕೊಂಡು ಷೋರೂಮ್ ನಿಂದ ಆಚೆ ಬಂದೆ. ಇದಕ್ಕೆ ಬದಲಾಗಿ ಅಮೃತಶಿಲೆಯ ಪೂಜಾಪೀಠ ಖರೀದಿಸೋಣ ಎಂಬುದು ಆಗಿನ ನನ್ನ ಯೋಚನೆಯಾಗಿತ್ತು. ಆದರೆ ಏನೋ ಕಾರಣದಿಂದಾಗಿ ನಾನು ಸಾಂತಾ ಕ್ರೂಸ್‌ಗೆ ಹೋಗಲು ಆಗಲೇ ಇಲ್ಲ. ಅಮೃತಶಿಲೆಯ ಪೂಜಾಪೀಠ ಕೂಡ ನಮ್ಮ ಮನೆಗೆ ಬರಲಿಲ್ಲ. ಅದಾಗಿ, ಹತ್ತು ವರ್ಷಗಳು ಕಳೆದವು. ಕಾಲ ಸರಿಯುತ್ತಿತ್ತೇ ಹೊರತು ಆಗಬೇಕಿದ್ದ ಕೆಲಸ ಆಗಿರಲಿಲ್ಲ. ಕೊನೆಗೊಂದು ದಿನ, ಬರೋಬ್ಬರಿ ಒಂದು ದಶಕದ ನಂತರ ನಾನು ಅದೇ ಷೋ ರೂಮ್‌ಗೆ ವಾಪಸ್ಸು ಹೋದೆ. ಹಣ ಪಾವತಿಸಿದೆ. ಎರಡು ತಿಂಗಳ ನಂತರ ಪೂಜಾಪೀಠ ನಮ್ಮ ಮನೆಗೆ ಬಂದಿತು. ಅದುವರೆಗೆ ಹತ್ತು ವರ್ಷಗಳ ಕಾಲ ಮನೆಯಲ್ಲಿ ದೇವರಿಲ್ಲ ಎಂಬ ಚಿಂತೆ ನನ್ನನ್ನು ಬಿಟ್ಟೂಬಿಡದೆ ಆವರಿಸಿತ್ತು. ನಾನು ಮನಸ್ಸಿನಲ್ಲಿ ಅಂದುಕೊಂಡಿದ್ದನ್ನು ಕೃತಿಗೆ ಇಳಿಸಲು ಮುಂದಾಗದಿದ್ದುದೇ ಇಷ್ಟೆಲ್ಲವನ್ನೂ ಅನುಭವಿಸಲು ಕಾರಣವಾಗಿತ್ತು.
ಹೀಗೆ, ಹಲವು ಸಂಗತಿಗಳು ನಮ್ಮನ್ನು ಮನೆಯಲ್ಲಿ ಹಾಗೂ ಕಚೇರಿಯಲ್ಲಿ ಕಾಡುತ್ತಿರುತ್ತವೆ. ನಾವು ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಬದಲಿಗೆ ಆ ಸಮಸ್ಯೆಗಳ ಬಗ್ಗೆಯೇ ದೂರಲು ತೊಡಗುತ್ತೇವೆ. ಆದರೆ, ಅವು ದಿನವಿಡೀ ನಮ್ಮ ಶಕ್ತಿಯನ್ನು ಮುಕ್ಕುತ್ತಿರುತ್ತವೆ. ಈ ರೀತಿಯ ಕಿರಿಕಿರಿ ಹಾಗೂ ದೂರುವ ಪ್ರವೃತ್ತಿಯು ಕ್ರಮೇಣ ನಮ್ಮ ಮನಸ್ಸಿನೊಳಗಿನ ಯೋಚನೆಯಾಗಿ ಪರಿವರ್ತನೆಗೊಳ್ಳುತ್ತದೆ. ಆಮೇಲೆ ಇದಕ್ಕೆ ನಾವು “ಒತ್ತಡ” ಎಂಬ ಹೊಸ ಪದವೊಂದನ್ನು ಬಳಸಲು ಶುರು ಮಾಡುತ್ತೇವೆ. ಇದೇ ವೇಳೆ, ಯಾರೋ ಒಬ್ಬರು ಒಮ್ಮೆ ನನಗೆ ಹೀಗೆ ಹೇಳಿದುದು ನೆನಪಾಗುತ್ತಿದೆ- “ನಾವು ನಿಮ್ಮ ಸಂಸ್ಥೆಯನ್ನು ಒತ್ತಡ ಮುಕ್ತಗೊಳಿಸಲು ನೆರವು ನೀಡುತ್ತೇವೆ” ಎಂದು. ಅದಕ್ಕೆ ನಾನು, “ಧನ್ಯವಾದಗಳು. ನಾವು, ಬಹಳ ವರ್ಷಗಳನ್ನು ಕಳೆದ ಮೇಲೆ ಆರಂಭದಿಂದಲೇ ಸರಿಯಾದ ರೀತಿಯಲ್ಲಿ ಹೆಜ್ಜೆಗಳನ್ನು ಇಡುವುದು ಬಹಳ ಮುಖ್ಯ ಎಂಬುದನ್ನು ಅರ್ಥ ಮಾಡಿಕೊಂಡಿದ್ದೇವೆ. ಅಸಲಿಗೆ, ನಾವು ಒತ್ತಡ ಎಂಬುದು ಸಂಸ್ಥೆಗೆ ಕಾಲನ್ನೇ ಇಡಲಾಗದಂತೆ ಕಾಳಜಿ ವಹಿಸಿ ಕಾರ್ಯನಿರ್ವಹಿಸುತಿದ್ದೇವೆ” ಎಂದು ಅವರಿಗೆ ಪ್ರತಿಕ್ರಿಯಿಸಿದ್ದೆ.
ನಾವು ನಮ್ಮ ಸಂಸ್ಥೆಯಲ್ಲಿ ಪಾರದರ್ಶಕತೆಯನ್ನು ತಂದಿದ್ದೇವೆ. ಸಮಯಕ್ಕೆ ಸರಿಯಾಗಿ ಅಗತ್ಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಎಲ್ಲಾ ಅಂಶಗಳನ್ನು ಪರಿಗಣಿಸಿ ಸೂಕ್ತ ಆಯ್ಕೆಗಳನ್ನು ಮಾಡಲು ಪರಿಶ್ರಮಿಸುತ್ತೇವೆ. ನನ್ನ ಸೊಸೆಯಾದ ಹೇತಾ ಅವರು ಎಲ್ಲರೊಂದಿಗೂ “ಅಗ್ರಿ ಟು ಡಿಸ್ ಅಗ್ರಿ” (ಭಿನ್ನಾಭಿಪ್ರಾಯವನ್ನು ಒಪ್ಪಿಕೊಳ್ಳಿ) ಎಂಬ ನೀತಿಯ ಬಗ್ಗೆ ಹಂಚಿಕೊಂಡಿದ್ದಾರೆ. ಮುಂದೆ ಸಾಗುವ ದೃಷ್ಟಿಯಿಂದ ಕೆಲವರು ಈ ನೀತಿಯನ್ನು ಮನಸಾರೆ ಒಪ್ಪಿಕೊಂಡು ಅದರಂತೆ ನಡೆಯುತ್ತಿದ್ದಾರೆ. ಇದು ಕಾರ್ಪೊರೇಟ್ ಜಗತ್ತಿನಲ್ಲಿ ಚೆನ್ನಾಗಿ ಬೇರು ಬಿಟ್ಟಿರುವ ನೀತಿಯೂ ಆಗಿದೆ. ನಾವು ನಮ್ಮ ಕಚೇರಿಯಲ್ಲಿ ಓಪನ್ ಹೌಸ್ ಒಂದನ್ನು ಆರಂಭಿಸಿದ್ದೇವೆ. ಇಲ್ಲಿ ಯಾರು ಬೇಕಾದರೂ ಬಂದು ನನ್ನನ್ನು ಭೇಟಿಯಾಗಬಹುದು. ಹೊಸದಾಗಿ ಸೇರಿಕೊಂಡ ತಂಡದ ಸದಸ್ಯರು ಕೂಡ ನನ್ನನ್ನು ಭೇಟಿಯಾಗಿ ತಮ್ಮ ಮನಸ್ಸಿನಲ್ಲಿರುವ ಆತಂಕಗಳನ್ನು ತಗ್ಗಿಸಿಕೊಳ್ಳುತ್ತಾರೆ. ತಿಂಗಳಿಗೊಂದು ಸಲ ಭಾರತದಾದ್ಯಂತ ಇರುವ ವೀಣಾ ವರ್ಲ್‌್ಡ ತಂಡದ ಸದಸ್ಯರೆಲ್ಲರೂ ಮುಂಬರುವ ತಿಂಗಳ ಯೋಜನೆ ರೂಪಿಸುವ ಸಲುವಾಗಿ ಜೂಮ್ ಮೂಲಕ ಭೇಟಿಯಾಗುತ್ತೇವೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಇದು, ನಾವೆಲ್ಲರೂ ಸಮಾನ ಉದ್ದೇಶಕ್ಕಾಗಿ ಒಂದೆಡೆ ಇರಲು ಸಹಕಾರಿಯಾಗುತ್ತದೆ. ಇಷ್ಟೆಲ್ಲಾ ಸತತ ಪ್ರಯತ್ನಗಳ ನಂತರ ಒತ್ತಡ ಎಂಬುದು ಸಂಸ್ಥೆಗೆ ಯಾಕಾದರೂ ಕಾಲಿಡುತ್ತದೆ? ಮುಂಜಾಗ್ರತೆಯು ಚಿಕಿತ್ಸೆಗಿಂತ ಯಾವಾಗಲೂ ಉತ್ತಮ.
ನಮ್ಮನ್ನು ಚಿಂತೆಗೀಡು ಮಾಡುವ ವಿಷಯಗಳು, ಜನರು ಹಾಗೂ ಸಂಬಂಧಗಳ ಬಗ್ಗೆ ಏನನ್ನಾದರೂ ಮಾಡಲೇಬೇಕು. ಶಕ್ತಿಯನ್ನು ವ್ಯಯಿಸುತ್ತಾ ಅಥವಾ ಕೊನೆ ಎಂಬುದೇ ಇಲ್ಲದಂತೆ ದೂರುತ್ತಾ ಅವುಗಳ ಬಗ್ಗೆಯೇ ಯೋಚಿಸುತ್ತಾ ಕೂರುವುದರಲ್ಲಿ ಯಾವ ಅರ್ಥವೂ ಇರುವುದಿಲ್ಲ. ಅವುಗಳ ಪರಿಹಾರಕ್ಕಾಗಿಕಾರ್ಯಪ್ರವೃತ್ತವಾಗಬೇಕು ಅಥವಾತೆರೆದ ಮನಸ್ಸಿನೊಂದಿಗೆ ಸನ್ನಿವೇಶವನ್ನು ಒಪ್ಪಿಕೊಳ್ಳಬೇಕು, ಅದರಲ್ಲೇ ಖುಷಿ ಕಾಣಬೇಕು, ಅದರ ಬಗ್ಗೆ ನಂತರ ಇನ್ನೆಂದೂ ತಕರಾರು ಎತ್ತದಂತಿರಬೇಕು. ನಮ್ಮ ದೇಶದಬಗ್ಗೆ ದೂರದೇ ಇರುವುದು ನಾವು ವೀಣಾ ವರ್ಲ್‌್ಡನಲ್ಲಿ ಅನುಸರಿಸುವ ಮತ್ತೊಂದು ನೀತಿಯಾಗಿದೆ. ನಾವು ನಮ್ಮ ದೇಶಕ್ಕಾಗಿ ಸಲ್ಲಿಸಬೇಕಾದ ಕರ್ತವ್ಯದ ಬಗ್ಗೆ ಅರಿವು ಹೊಂದಿದವರಾಗಿದ್ದು, ಶಾಂತಚಿತ್ತತೆಯಿಂದ, ಆತವಿಶ್ವಾಸದಿಂದ ಹಾಗೂ ಲವಲವಿಕೆಯಿಂದ ಮುಂದೆ ಸಾಗಬೇಕು.
Post your Comment
Please let us know your thoughts on this story by leaving a comment.