Published in the Sunday Vijay Karnataka on 16 March, 2025
“ಇದನ್ನು ಏಕೆ ಬೇರೆ ರೀತಿಯಲ್ಲಿ ವಿನ್ಯಾಸಗೊಳಿಸಿಲ್ಲ?” ಎಂದು ನಮಗೆ ನಾವೇ ಪ್ರಶ್ನೆ ಕೇಳಿಕೊಳ್ಳಲಿಲ್ಲ. ನಾವು ಯಾವತ್ತೂ ಯಥಾಸ್ಥಿತಿಗೆ ಸವಾಲೊಡ್ಡಲಿಲ್ಲ.
“ನಮ್ಮ ಷೋರೂಮ್ ಅನ್ನು ಸಂಪೂರ್ಣ ನವೀಕರಿಸಲಾಗಿದೆ! ಹೊಚ್ಚ ಹೊಸ ಸಂಗ್ರಹಗಳನ್ನು ಕಾಣಬಹುದಾಗಿದೆ. ಒಮ್ಮೆ ಭೇಟಿ ನೀಡಿ!”- ಎಂಬ ಸಂದೇಶವೊAದು ಬಾಂದ್ರಾದಲ್ಲಿರುವ ಪ್ರೈಡ್ ಫರ್ನಿಂಷಿAಗ್ಸ್ನಿAದ ನನಗೆ ಬಂತು. ಸರಿ, ಪ್ರದರ್ಶನ ಮಳಿಗೆಗೆ ಭೇಟಿ ನೀಡುವ ಅವಕಾಶವನ್ನು ತಪ್ಪಿಸಿಕೊಳ್ಳಲಾದೀತೆ? ಅಲ್ಲದೆ, ಕುಷನ್‌ಗಳು ಮತ್ತು ತಲೆದಿಂಬುಗಳನ್ನು ಒಳಗೊಂಡ ಪೂರ್ತಿ ಬೆಡ್‌ಸ್ಪ್ರೆಡ್ ಸೆಟ್ ಅನ್ನು ಕೊಡುಗೆ ನೀಡುವ ಸಲುವಾಗಿ ಕೊಳ್ಳಬೇಕೆಂಬ ಆಲೋಚನೆಯೂ ನನ್ನಲ್ಲಿತ್ತು.
ನಂತರ, ಸಮೀಪದಲ್ಲೇ ವಾಸವಿದ್ದ ನೀಲ್ ಮತ್ತು ಹೆತಾ ಅವರಿಗೆ, “ನಾನು ಗಿಫ್ಟ್ಗೆಂದು ಬೆಡ್‌ಸ್ಪೆçಡ್ ಸೆಟ್ ಖರೀದಿಸಲು ಪ್ರೈಡ್‌ಗೆ ಹೋಗುವವಳಿದ್ದೇನೆ” ಎಂದೆ. “ನಾನೂ ಗಿಫ್ಟ್ ನೀಡುವ ಸಲುವಾಗಿ ಬೆಡ್‌ಸ್ಪೆçಡ್ ಸೆಟ್ ಕೊಳ್ಳಬೇಕಿದೆ. ಜೊತೆಯಲ್ಲೇ ಹೋಗೋಣ” ಎಂದಳು ಹೆತಾ. ಎಷ್ಟು ಅದ್ಭುತ ನೋಡಿ! ಶ್ರೇಷ್ಠ ಮನಸ್ಸುಗಳು ಒಂದೇ ರೀತಿಯಲ್ಲಿ ಆಲೋಚಿಸುತ್ತವೆ- ಅತ್ತೆ ಮತ್ತು ಸೊಸೆಯ ಯೋಚನೆಗಳು ಬರೋಬ್ಬರಿ ಒಂದೇ ಆಗಿದ್ದವು!
ನಾವು ಮೂವರೂ ಪ್ರೈಡ್ ಫರ್ನಿಷಿಂಗ್ಸ್ ತಲುಪಿ ಹಲವಾರು ಆಯ್ಕೆಗಳನ್ನು ಸಾಕಷ್ಟು ನೋಡಿ ಕೊನೆಗೆ ಎರಡು ಸೆಟ್‌ಗಳನ್ನು ಸೆಲೆಕ್ಟ್ ಮಾಡಿದೆವು. ಪ್ರತಿಯೊಂದು ಸೆಟ್ ಕೂಡ ಒಂದು ಬೆಡ್‌ಸ್ಪ್ರೆಡ್, ಎರಡು ದೊಡ್ಡ ತಲೆದಿಂಬುಗಳು, ಎರಡು ದೊಡ್ಡನೆಯ ಮೆದು ಕುಷನ್ ಗಳು, ಎರಡು ಸಣ್ಣ ಕುಷನ್‌ಗಳು ಹಾಗೂ ಒಂದು ಥ್ರೋ ಕುಷನ್ ಅನ್ನು ಒಳಗೊಂಡಿತ್ತು. ಇಷ್ಟೆಲ್ಲಾ ವಿವರಗಳನ್ನು ಏಕೆ ನಿಮ್ಮ ಮುಂದಿಡುತ್ತಿದ್ದೇನೆ ಎಂದು ನಿಮಗೆ ಅಚ್ಚರಿಯಾಗುತ್ತಿರಬಹುದು. ಸೆಟ್ ಎಂದ ಮೇಲೆ ಇವೆಲ್ಲಾ ಇದ್ದೇ ಇರುತ್ತವಲ್ಲಾ?- ಎಂದೂ ನೀವು ಕೇಳಬಹುದು. ಪ್ರಾಯಶಃ, ನನ್ನ ಒಂದಷ್ಟು ಹೆಚ್ಚಿನ ಉತ್ಸಾಹ ಇದಕ್ಕೆ ಕಾರಣವಿರಬಹುದು.
ಪ್ರತಿಯೊಂದು ಸೆಟ್‌ನೊಂದಿಗೆ ಕವರ್‌ಗಳು ಕೂಡ ಇದ್ದವು. ಸರಿ, ಫಿಲ್ಲರ್‌ಗಳನ್ನು ಖರೀದಿಸಲು ನನಗೆ ಸಮಯವಾಗುವುದು ಯಾವಾಗ?- ಎಂಬ ಪ್ರಶ್ನೆ ನನ್ನಲ್ಲಿ ಮೂಡಿತು. ಹೀಗಾಗಿ, ನಾನು ಕವರ್‌ಗಳನ್ನು ಸೂಕ್ತ ಫಿಲ್ಲರ್‌ಗಳಿಂದ ತುಂಬಲು ಅಲ್ಲಿನ ಸೇಲ್ಸ್ಪರ್ಸನ್‌ಗೆ ಹೇಳಿದೆ. ಹೀಗಾದರೆ, ಗಿಫ್ಟ್ ಕೊಟ್ಟ ಮೇಲೆ ಅದನ್ನು ಹಾಗೆಯೇ ಒಂದಷ್ಟು ದಿನ ಸುಮ್ಮನೇ ಇಡುವ ಬದಲು ತಕ್ಷಣವೇ ಬಳಸಲು ಆರಂಭಿಸಬಹುದು. ಕವರ್‌ಗಳನ್ನು ಸೇಲ್ಸ್ ಪರ್ಸನ್ ಫಿಲ್ಲರ್‌ಗಳಿಂದ ತುಂಬಿಸುತ್ತಿದ್ದಾಗ ನಾವು ಮೂವರು ಪರಸ್ಪರ ಅಚ್ಚರಿಯಿಂದ ನೋಡಿಕೊಳ್ಳುತ್ತಿದ್ದೆವು- ಆಗ ಅಚ್ಚರಿಯೊಂದು ಕಣ್ಣಿಗೆ ಬಿತ್ತು!
ಪಿಲ್ಲೊ ಕವರ್‌ಗಳ ಪೈಕಿ ಒಂದು ಆಯಾತಾಕಾರದಲ್ಲಿತ್ತು. ಇದು, ಮಾಮೂಲಿ ತಲೆದಿಂಬಿನ ಕವರ್‌ನಂತೆಯೇ ಇತ್ತಾದರೂ ಸ್ವಲ್ಪ ದೊಡ್ಡದಿತ್ತು. ನಮ್ಮ ಗಮನ ಸೆಳೆದ ಸಂಗತಿಯೇನೆಂದರೆ, ಅದರ ಜಿಪ್ಪರ್ ಅನ್ನು ರೂಢಿಯಂತೆ ಗಿಡ್ಡನೆಯ ಲಂಬವಾದ ಬದಿಗೆ ಹಾಕದೆ ದೀರ್ಘವಾದ ಸಮಾನಾಂತರ ಬದಿಯಲ್ಲಿ ಹಾಕಲಾಗಿತ್ತು. ಇದು, ಫಿಲ್ಲರ್ ಅನ್ನು ತುಂಬಿಸಿ ಜಿಪ್ ಎಳೆದು ಹಾಕಲು ತುಂಬಾ ಅನುಕೂಲಕರವಾಗಿತ್ತು!
“ಇದು ತುಂಬಾ ಸರಳವಾಗಿದೆ! ಇದರ ಬಗ್ಗೆ ಈ ಮುಂಚೆ ಯಾರೂ ಯಾಕೆ ಯೋಚಿಸಿರಲಿಲ್ಲ?”- ಎಂಬ ಪ್ರಶ್ನೆ ನಮ್ಮೊಳಗೆ ಆ ಕ್ಷಣದಲ್ಲಿ ಉದ್ಭವಿಸಿತು. ಸರಕ್ಕನೆ ನನಗೆ ನನ್ನ ಬಾಲ್ಯದ ದಿನಗಳ ನೆನಪಾಯಿತು. ಆಗ, ತಲೆದಿಂಬುಗಳಿಗೆ ಕವರ್ ಹಾಕುವುದೇ ಮನೆಯಲ್ಲಿ ಒಂದು ದೊಡ್ಡ ಕೆಲಸವಾಗಿತ್ತು. ದೊಡ್ಡ ತಲೆದಿಂಬನ್ನು ಪುಟ್ಟದಾಗಿ ತೆರೆದ ಬಾಯಿಯ ಮೂಲಕ ತುಂಬಾ ಎಚ್ಚರಿಕೆಯಿಂದ ಒಳಸೇರಿಸಬೇಕಾಗುತ್ತಿತ್ತು. ಎಲ್ಲಾ ಮೂಲೆಗಳೂ ಸರಿಯಾಗಿ ಕೂರುವಂತೆ ಜಾಗ್ರತೆ ವಹಿಸಬೇಕಾಗುತ್ತಿತ್ತು. ಒಳಮಡಿಕೆಗಳು ಕಾಣದಂತೆ ಕಾಳಜಿ ವಹಿಸಬೇಕಾಗುತ್ತಿತ್ತು. ಒಳಕ್ಕೆ ಹತ್ತಿ ಹಾಕುವಾಗ ಅದು ಒಂದೆಡೆ ಹೆಚ್ಚು, ಇನ್ನೊಂದೆಡೆ ಕಮ್ಮಿ ಆಗದಂತೆ ಸಮ ಪ್ರಮಾಣದಲ್ಲಿರುವಂತೆಯೂ ಗಮನ ನೀಡಬೇಕಿತ್ತು.
ಒಟ್ಟಿನಲ್ಲಿ, ತಲೆದಿಂಬುಗಳಿಗೆ ಕವರ್ ಹಾಕುವುದೆಂದರೆ ವರ್ಕ್ಷಾಪ್‌ನಲ್ಲಿ ಕೆಲಸ ಮಾಡಿದಂತಾಗುತ್ತಿತ್ತು! ಅದನ್ನು ಸರಿಯಾಗಿ ಮಾಡದಿದ್ದರಂತೂ ಮನೆಯಲ್ಲಿ ಬೈಗುಳ ಕೇಳಿಸಿಕೊಳ್ಳಲು ತಯಾರಾಗಿರಬೇಕಿತ್ತು! ಹೀಗಾಗಿಯೇ, ನನಗೆ ತಲೆದಿಂಬುಗಳಿಗೆ ಕವರ್ ಹಾಕುವುದೆಂದರೆ ಭೀತಿ ಹುಟ್ಟಿಸುವ ಕೆಲಸವಾಗಿತ್ತು.
ಪಿಲ್ಲೊ ಕವರ್‌ಗಳು ಸ್ವಲ್ಪ ದೊಡ್ಡದಾಗಿರಬಹುದಲ್ಲವೇ ಎಂಬುದು ಯಾಕೆ ನಮಗೆ ಹೊಳೆದಿರಲೇ ಇಲ್ಲ? ಇನ್ನು, ಜಿಪ್ಪರ್ ತಾಂತ್ರಿಕತೆ ಆಗಿನ್ನೂ ಬೆಳವಣಿಗೆ ಕಾಣುತ್ತಿದ್ದ ಹಂತದಲ್ಲಿತ್ತು ಸ್ಟೀಲ್ ಜಿಪ್ಪರ್‌ಗಳಿಗೆ ಬದಲಾಗಿ ನಯವಾದ ಪ್ಲ್ಯಾಸ್ಟಿಕ್-ಫೈಬರ್ ಜಿಪ್ಪರ್‌ಗಳನ್ನು ಹಾಕುವುದು ಕೂಡ ಆಗಷ್ಟೇ ರೂಢಿಗೆ ಬರುತ್ತಿತ್ತು. ಆದರೆ, ಅದೆಲ್ಲಕ್ಕಿಂತ ಮುಖ್ಯವಾಗಿ, ತಲೆದಿಂಬಿನ ಕವರ್‌ಗಳನ್ನು ಯಾಕೆ ಸ್ವಲ್ಪ ದೊಡ್ಡದಾಗಿ ಮಾಡುತ್ತಿರಲಿಲ್ಲ?- ಎಂಬುದು ನಮ್ಮನ್ನು ಕಾಡಿದ ಮುಖ್ಯ ಪ್ರಶ್ನೆಯಾಗಿತ್ತು.
ಇಂದಿನ ಸ್ಟಾರ್ಟ್ಅಪ್ ತಲೆಮಾರಿನವರಿಗೆ ಇಂತಹ ಪರಿಶ್ರಮಗಳು ಅರ್ಥವಾಗುವುದಿಲ್ಲ. ಈಗ ಕೇವಲ ಒಂದು ಕ್ಲಿಕ್ ಮಾಡಿಬಿಟ್ಟರೆ ಸಾಕು, ತಮಗೆ ಬೇಕಾದ ಅಳತೆಯ ಪಿಲ್ಲೊಗಳು ಹಾಗೂ ಕವರ್‌ಗಳನ್ನು ಆರ್ಡರ್ ಮಾಡಿಬಿಡಬಹುದು. ಆದರೆ, ಹಿಂದೆಲ್ಲಾ ಮಾರ್ಕೆಟ್‌ನಲ್ಲಿ ಸಿಗುತ್ತಿದ್ದುದು ಒಂದೇ ನಿಗದಿತ ಅಳತೆಯ ಪಿಲ್ಲೊ ಹಾಗೂ ಕವರ್ ಮಾತ್ರವೇ ಆಗಿತ್ತು.
ಈ ಸನ್ನಿವೇಶದಲ್ಲಿ, “ಜಿಸ್ ಪರ್ ಬೀತೀ ಹೈ, ಉಸೀ ಕೋ ಪತಾ ಹೈ” ಎಂಬ ಬಾಲಿವುಡ್ ಸಂಭಾಷಣೆಯ ಸಾಲು ನೆನಪಾಗುತ್ತದೆ. ನಾವೆಲ್ಲಾ ಪಿಲ್ಲೊ ಕವರ್‌ಗಳನ್ನು ಹಾಕಲು ಹಿಂದೆ ಪಡುತ್ತಿದ್ದ ಪಡಿಪಾಟಲೆಷ್ಟು ಎಂಬುದು ಅದರ ಖುದ್ದು ಅನುಭವವಾದವರಿಗೆ ಮಾತ್ರವೇ ಅರ್ಥವಾಗುತ್ತದೆ. ಅದರ ಜೊತೆಗೆ, ತಲೆದಿಂಬಿನಲ್ಲಿ ಜಗಳವಾಡುವುದು, ಅವುಗಳನ್ನು ಒಬ್ಬರಿಗೊಬ್ಬರು ಎಸೆದಾಡುವುದು ಇಂತಹ ಮೋಜಿನ ಕ್ಷಣಗಳೂ ಇರುತ್ತಿದ್ದವು ಎಂಬುದು ಬೇರೆ ಮಾತು. ಒಟ್ಟಾರೆ, ಪ್ರೈಡ್ ಫರ್ನಿಷಿಂಗ್ಸ್ನಲ್ಲಿನ ಆ ಕ್ಷಣಗಳು ನನ್ನ ಮಟ್ಟಿಗೆ ಜ್ಞಾನೋದಯದ ಗಳಿಗೆಗಳೂ ಆಗಿದ್ದವು.
ಈ ಪ್ರಸಂಗವನ್ನು ನಾನು ಮರುದಿನ ನಡೆದ ಮೀಟಿಂಗ್ ವೊಂದರಲ್ಲಿ ಹಂಚಿಕೊಂಡಾಗ, ನನ್ನ ಸಹೋದ್ಯೋಗಿಗಳು ತಮಗೂ ಜ್ಞಾನೋದಯವಾದಂತೆ, “ಓಹ್, ಹೌದಲ್ಲವೇ!” ಎಂಬ ಭಾವದೊಂದಿಗೆ ಕಣ್ಣಿನಲ್ಲಿ ಮಿಂಚು ತುಳುಕಿಸಿದರು.
ನಮ್ಮ ಸೀನಿಯರ್ ಎಚ್ ಆರ್ ಮ್ಯಾನೇಜರ್ ಆನಿ ಅಲ್ಮೀದ ಅವರು, “ಹಿಂದಿನದನ್ನು ಬಿಡಿ. ಇವತ್ತಿಗೆ ಕೂಡ ನಾವು ತಲೆದಿಂಬಿನ ಕವರ್‌ಗಳ ವಿಷಯದಲ್ಲಿ ಪರದಾಡುತ್ತಲೇ ಇರುತ್ತೇವೆ! ಇಂತಹ ವಿಷಯಗಳನ್ನು ನಾವು ಗಮನಿಸುವುದೇ ಇಲ್ಲ್ಲ ಅಲ್ಲವೇ? ಇದು ಎಷ್ಟು ಸರಳವಲ್ಲವೇ! ಅದು ಹೇಗೆ ಈ ಮುನ್ನ ಯಾರಿಗೂ ಇದು ಗೊತ್ತಾಗಿರಲಿಲ್ಲ?” ಎಂದರು.
ಹೆಸರಾಂತ ಚಿತ್ರನಿರ್ದೇಶಕ ರವಿ ಜಾಧವ್ ಅವರು ಒಮ್ಮೆ ಮಾರ್ಕೆಟಿಂಗ್ ಮಾಸ್ಟರ್ ಕ್ಲ್ಯಾಸ್‌ನಲ್ಲಿ, “ಪರಿಕಲ್ಪನೆ ಹೊಂದಿದ್ದರೆ ಯಾರು ಬೇಕಾದರೂ ಮುಂದೆ ಬರಬಹುದು. ಪರಿಕಲ್ಪನೆಯನ್ನು ಕಾರ್ಯರೂಪಕ್ಕಿಳಿಸಿದಾಗ, ಓಹ್, ಇದು ಇಷ್ಟು ಸರಳವೇ! ನಾನೇಕೆ ಈ ಮುಂಚೆಯೇ ಇದರ ಬಗ್ಗೆ ಯೋಚಿಸಲಿಲ್ಲ?- ಎಂದು ಬಹಳಷ್ಟು ಸಲ ಅನ್ನಿಸುತ್ತದೆ. ಆದರೆ, ಪರಿಕಲ್ಪನೆಯಲ್ಲಿ ನಂಬಿಕೆ ಹೊಂದಿರುವುದು, ನಂತರ, ಅದನ್ನು ಕಾರ್ಯಗತಗೊಳಿಸುವುದು ಹಾಗೂ ಸ್ಥಿರತೆ ಕಾಯ್ದುಕೊಳ್ಳುವುದು ಯಶಸ್ಸಿನ ಸೂತ್ರವಾಗಿರುತ್ತದೆ” ಎಂದು ಹೇಳಿದುದು ಜ್ಞಾಪಕಕ್ಕೆ ಬರುತ್ತದೆ.
ಹೌದು. ಇದು, ಅದೆಷ್ಟು ನಿಜವಲ್ಲವೇ? ಪಿಲ್ಲೊ ಕವರ್‌ನ ಸಾಧಾರಣ ಉದಾಹರಣೆಯು ಇದನ್ನು ನಿಚ್ಚಳವಾಗಿ ಸಾದರಪಡಿಸುತ್ತದೆ. ಇಂದಿನ ಸ್ಟಾರ್ಟಪ್ ಸಂಸ್ಕೃತಿಯು ಇಂತಹ ದೃಷ್ಟಿಕೋನಗಳನ್ನು ಸತತವಾಗಿ ಮುನ್ನೆಲೆಗೆ ತರುತ್ತಿದೆ. ಇದರೊಂದಿಗೆ, “ಹಿಂದಿನ ದಿನಮಾನಗಳಲ್ಲಿ ಜನರಿಗೆ ಇಂತಹ ಆಲೋಚನೆಗಳು ದೊಡ್ಡ ಪ್ರಮಾಣದಲ್ಲಿ ಯಾಕೆ ಮೂಡುತ್ತಿರಲಿಲ್ಲ?’ ಎಂಬ ಪ್ರಶ್ನೆಯೂ ತಲೆದೋರುತ್ತದೆ. ಇದು ಚರ್ಚೆಗೆ ಆಸಕ್ತಿದಾಯಕವಾದ ವಿಷಯ ಹೌದಲ್ಲವೇ?
ಹಿಂದೆ ನಮ್ಮ ಶಾಲಾ ದಿನಗಳಲ್ಲಿ, “ನಾನು ವಿಜ್ಞಾನಿಯಾದರೆ” ಎಂಬಂತಹ ವಿಷಯಗಳ ಬಗ್ಗೆ ಪ್ರಬಂಧ ಬರೆಸುತ್ತಿದ್ದರು. ಆಗೆಲ್ಲಾ ನನಗೆ, “ವಿಜ್ಞಾನಿ ಆಗಬೇಕೆಂದುಕೊಳ್ಳುವುದು ಗಗನ ಕುಸುಮವೇ ಸರಿ. ಅದರ ಬಗ್ಗೆ ನಾನು ಯಾಕಾದರೂ ಯೋಚಿಸಬೇಕು?” ಎಂದು ಅನ್ನಿಸುತ್ತಿತ್ತು. ಜೊತೆಗೆ, “ಹಿಂದಿನ ವಿಜ್ಞಾನಿಗಳು ಅದಾಗಲೇ ಪ್ರಮುಖ ಆವಿಷ್ಕಾರಗಳನ್ನೆಲ್ಲಾ ಮಾಡಿಬಿಟ್ಟಿದ್ದಾರೆ. ಇನ್ನು, ನಾನು ಮಾಡುವಂಥದ್ದಾದರೂ ಏನಿದೆ?” ಎಂದೂ ಅಂದುಕೊಳ್ಳುತ್ತಿದ್ದೆ. ಇಂತಹ ‘ಪ್ರಗತಿಪರ’ ಆಲೋಚನೆಯೊಂದಿಗೆ ಬರೆದ ನನ್ನ ಪ್ರಬಂಧ ಹೇಗಿದ್ದಿರಬೇಕು ಎಂಬುದನ್ನು ನೀವೇ ಊಹಿಸಿಕೊಳ್ಳಿ!
ಈ ಬಗ್ಗೆ ಅವಲೋಕಿಸಿದರೆ, ಹಿಂದೆಲ್ಲಾ ನಮ್ಮ ದೃಷ್ಟಿಕೋನಗಳು ಸೀಮಿತ ಪ್ರಮಾಣದಲ್ಲಿದ್ದುದಕ್ಕೆ, ನಮ್ಮಲ್ಲಿ ಆಳವಾಗಿ ಬೇರುಬಿಟ್ಟಿದ್ದ ಹೊಂದಾಣಿಕೆ ಧೋರಣೆಯೇ ಕಾರಣ ಎಂಬುದು ನನ್ನ ಅಭಿಪ್ರಾಯವಾಗಿದೆ. “ನಿನ್ನ ಬಳಿ ಎಷ್ಟಿದೆಯೋ ಅಷ್ಟರಲ್ಲೇ ಬದುಕು ಸಾಗಿಸು”, “ಹಾಸಿಗೆ ಇದ್ದಷ್ಟು ಮಾತ್ರವೇ ಕಾಲುಚಾಚು”, ಇಂತಹ ಬುದ್ಧಿಮಾತುಗಳು ಸಮಾಜದಲ್ಲಿ ಬಹುಮಟ್ಟಿಗೆ ಸಂಗತಿಗಳನ್ನು ಅವು ಹೇಗಿವೆಯೋ ಅದೇ ಸ್ಥಿತಿಯಲ್ಲಿ ಪ್ರಶ್ನಿಸದೇ ಒಪ್ಪಿಕೊಳ್ಳುವಂತೆ ಮಾಡಿದ್ದವು.
“ಇದನ್ನು ಏಕೆ ಬೇರೆ ರೀತಿಯಲ್ಲಿ ವಿನ್ಯಾಸಗೊಳಿಸಿಲ್ಲ?”- ಎಂದು ನಮಗೆ ನಾವೇ ಯಾವತ್ತೂ ಕೇಳಿಕೊಳ್ಳಲಿಲ್ಲ. ನಾವು ಯಥಾಸ್ಥಿತಿಗೆ ಎಂದಿಗೂ ಸವಾಲೆಸೆಯಲಿಲ್ಲ. ಹಾಗೆಂದ ಮಾತ್ರಕ್ಕೆ, ಈ ಪ್ರವೃತ್ತಿಗೆ ಅಪವಾದಗಳು ಇರಲೇ ಇಲ್ಲ ಎಂದೇನಲ್ಲ. ಭಿನ್ನವಾಗಿ ಆಲೋಚಿಸಿ ಪಟ್ಟುಬಿಡದೆ ತಮ್ಮ ಪರಿಕಲ್ಪನೆಗಳನ್ನು ಸಾಕಾರಗೊಳಿಸಿಕೊಂಡವರು ಆಗಲೂ ಇದ್ದರು. ನಾವು ಇಂದು ಆಧುನಿಕ ಬದುಕಿನ ಅನುಕೂಲಗಳನ್ನು ಅನುಭವಿಸುತ್ತಿರುವ ಸಂದರ್ಭದಲ್ಲಿ ಅಂಥವರಿಗೆಲ್ಲಾ ಧನ್ಯವಾದಗಳನ್ನು ಸಲ್ಲಿಸಲೇಬೇಕು. ಅಂತಹ ಸಾಕಾರ ಪುರುಷರ ದೃಢಸಂಕಲ್ಪ ಹಾಗೂ ನಾವೀನ್ಯತಾ ಮನೋಭಾವಕ್ಕೆ ನಾವು ಆಭಾರಿಗಳಾಗಿರಲೇಬೇಕು.
ಆದರೆ, ಇದೀಗ ಕಳೆದ ಎರಡು ಮೂರು ದಶಕಗಳಿಂದ ನಮ್ಮ ಯುವಜನತೆಯ ದೃಷ್ಟಿಕೋನದಲ್ಲಿ ಬದಲಾವಣೆಯಾಗಿದೆ. ಈ ಬದಲಾವಣೆಯು ಸುಧಾರಣೆಯ ದಿಸೆಯಲ್ಲಿ ಆಗಿರುವುದು ಬಹಳ ಪ್ರಮುಖವಾಗಿ ಗಮನಕ್ಕೆ ಬರುತ್ತದೆ. “ನಿಮ್ಮ ಪಾಲಿಗೆ ಏನು ಲಭ್ಯವಾಗುತ್ತದೋ ಅದನ್ನು ಇರುವಂತೆಯೇ ಒಪ್ಪಿಕೊಳ್ಳಿ” ಎಂಬುದು ಈಗ ಹಳೆಯ ಮಾತಾಗಿದೆ. “ಏಕೆ?’ ‘ಹೇಗೆ? ‘ಯಾವ ಉದ್ದೇಶಕ್ಕಾಗಿ?’- ಎಂದು ಪ್ರಶ್ನಿಸುವುದನ್ನು ಈಗ ಪ್ರೋತ್ಸಾಹಿಸಲಾಗುತ್ತಿದೆ. ಹೀಗೆ ಪ್ರಶ್ನೆ ಕೇಳುವುದನ್ನು ಈಗ ಯಾರೂ ಬಂಡಾಯ ಪ್ರವೃತ್ತಿ ಎಂದು ಭಾವಿಸುವುದಿಲ್ಲ.
ಒಂದೊಮ್ಮೆ ಮನೆಯ ಮಕ್ಕಳಿಗೆ, “ಏನು ಹೇಳುತ್ತೇನೋ ಅದನ್ನು ಮಾತ್ರ ಮಾಡು. ಅನವಶ್ಯಕವಾಗಿ ಪ್ರಶ್ನೆಗಳನ್ನು ಕೇಳಬೇಡ”, “ಅತ್ಯುತ್ಸಾಹ ಬೇಕಿಲ್ಲ. ಹೇಳಿದಷ್ಟನ್ನು ಮಾತ್ರವೇ ಮಾಡು” ಎಂಬ ಮಾತುಗಳನ್ನು ಹೇಳುವುದು ಸಾಮಾನ್ಯವಾಗಿತ್ತು (ಕೆಲವು ಕುಟುಂಬಗಳಲ್ಲಿ ಈಗಲೂ ಇದೇ ಧೋರಣೆಯಿದ್ದು, ಇದು ಬದಲಾಗಬೇಕಿದೆ). ಹೀಗಾಗಿ, ಪ್ರಶ್ನೆ ಕೇಳುವ ಬಗ್ಗೆ ಭೀತಿ ಎಂಬುದು ಅದೆಷ್ಟು ಆಳವಾಗಿ ಬೇರು ಬಿಟ್ಟಿತ್ತೆಂದರೆ, ಸ್ವತಂತ್ರ ಆಲೋಚನೆಯನ್ನೇ ಇದು ಉಸಿರುಗಟ್ಟಿಸಿಬಿಡುತ್ತಿತ್ತು.
ಆದರೆ, ಇಂದಿನ ತಲೆಮಾರಿನವರು ಯಾವುದೇ ವಿಷಯದ ಬಗ್ಗೆ ಸಹಜವಾಗಿ ಪ್ರಶ್ನೆಗಳನ್ನು ಕೇಳಿ, ಅವಕ್ಕೆ ಉತ್ತರಗಳನ್ನು ನಿರೀಕ್ಷಿಸುತ್ತಾರೆ. ಇದಕ್ಕೆ ಬೇಕಿರುವ ಸ್ವಾತಂತ್ರ‍್ಯ ಅವರಿಗಿದೆ. ಹಿಂದಿನ ದಿನಗಳಲ್ಲಿ ಇಂತಹ ಸ್ವಾತಂತ್ರ‍್ಯವು ಈಗಿನಷ್ಟು ವ್ಯಾಪಕವಾಗಿರಲಿಲ್ಲ. ಸ್ವಾತಂತ್ರ್ಯದ ಜೊತೆಗೆ ಶಿಸ್ತು ಕೂಡ ಮುಖ್ಯ ಪಾತ್ರ ವಹಿಸುತ್ತದೆ. ಆದರೆ, ಯಾವುದೇ ವ್ಯಕ್ತಿಯು, ತಾನು ಏನನ್ನೂ ಸಾಧಿಸದಿರುವುದಕ್ಕೆ ಹೆತ್ತವರನ್ನು ಅಥವಾ ಹಿಂದಿನ ತಲೆಮಾರಿನವರನ್ನು ದೂಷಿಸಿದರೆ ಅದು ನೆಪವಷ್ಟೇ ಆಗುತ್ತದೆ. ಮುಕ್ತ ಕೌಟುಂಬಿಕ ವ್ಯವಸ್ಥೆ, ಹೊಸ ಆಲೋಚನೆಗಳನ್ನು ಪ್ರೋತ್ಸಾಹಿಸುವ ಮನೋಭಾವ, ಹೊಸ ಆಲೋಚನೆಗಳನ್ನು ಸ್ವಾಗತಿಸುವ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಬೆಂಬಲದ ವಾತಾವರಣ ಇವು ಯುವ ಪೀಳಿಗೆಗೆ ಭಾರಿ ಪ್ರಯೋಜನಗಳನ್ನು ಉಂಟುಮಾಡಿವೆ. ಅವರು ಈ ಅನುಕೂಲಗಳ ಸದ್ಬಳಕೆ ಮಾಡಿಕೊಳ್ಳುತ್ತಿದ್ದು, ಪರಿಣಾಮವಾಗಿ ಪ್ರಸ್ತುತದ ಜಗತ್ತಿನಲ್ಲಿ ಅನೇಕ ಕಾರ್ಯಗಳ ನಿರ್ವಹಣೆ ಬಹಳ ಸುಲಭಗೊಂಡಿದೆ.
ಹಲವಾರು ಕೆಲಸಗಳಿಗೆ ಮುಂಚೆ ದೀರ್ಘ ಸಮಯ ಹಿಡಿಯುತ್ತಿತ್ತು. ಆದರೆ, ಇದೀಗ ಅವೇ ಕೆಲಸಗಳನ್ನು ಸಾಕಷ್ಟು ಕಡಿಮೆ ಸಮಯದಲ್ಲಿ ಮಾಡಬಹುದಾಗಿದೆ. ಇದರಿಂದಾಗಿ, ನಮಗೆ ಉಳಿಯುವ ಸಮಯವನ್ನು ಹೇಗೆ ಬಳಸಿಕೊಳ್ಳಬೇಕು? ಆತ್ಮಾವಲೋಕನಕ್ಕೆ ಎಷ್ಟು ಸಮಯ ಮೀಸಲಿಡಬೇಕು?- ಎಂಬ ಬಗ್ಗೆ ಗಮನ ನೀಡುವುದು ಮುಖ್ಯವಾಗುತ್ತದೆ. ನಾವು ಲಭ್ಯವಾಗುವ ಹೆಚ್ಚುವರಿ ಸಮಯವನ್ನು ಸಾಮಾಜಿಕ ಮಾಧ್ಯಮದ ಮುಂದೆ ಕಳೆದರೆ, ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿದವರಿಗೆ ಅನ್ಯಾಯ ಎಸಗಿದಂತಾಗುತ್ತದೆ. ಪರಿಹಾರಗಳನ್ನು ಕಂಡುಹಿಡಿದವರ ಉದ್ದೇಶವು, ವ್ಯರ್ಥವಾಗುತ್ತಿದ್ದ ಸಮಯವು ವೈಯಕ್ತಿಕ ಬೆಳವಣಿಗೆ, ಕುಟುಂಬ, ವೃತ್ತಿ, ಸಮಾಜ ಅಥವಾ ದೇಶಕ್ಕೆ ಧನಾತ್ಮಕ ಕೊಡುಗೆ ನೀಡಲು ಉಪಯೋಗವಾಗಬೇಕು ಎಂಬುದೇ ಆಗಿರುತ್ತದೆ. ಹೀಗಾಗಿ, ನಾವೆಲ್ಲರೂ ಸಮಯದ ಸದ್ಬಳಕೆ ಕುರಿತು ಬಹಳ ಎಚ್ಚರಿಕೆ ವಹಿಸಬೇಕಾಗಿರುತ್ತದೆ.
ಮುಂಚೆ, ನಾನು ವಿದೇಶ ಪ್ರವಾಸಗಳ ವೇಳೆ ಸಮಯವಿದ್ದಾಗಲ್ಲೆಲ್ಲಾ ಐಕಿಯಾ ಮಳಿಗೆಗೆ ಭೇಟಿ ನೀಡುತ್ತಿದ್ದೆ. ತುಂಬಾ ಸರಳವೆನ್ನಿಸುವ, ಆದರೂ ಚಮತ್ಕಾರದಿಂದ ಕೂಡಿದ ಉತ್ಪನ್ನಗಳ ಹಿಂದಿನ ಆಲೋಚನೆಗಳನ್ನು ಹಾಗೂ ಪರಿಹಾರಗಳನ್ನು ನೋಡಿದಾಗ ಬಹಳ ಖುಷಿಯಾಗುತ್ತಿತ್ತು. ಕೆಲವೊಮ್ಮೆ ಏನನ್ನಾದರೂ ನೋಡಿದೊಡನೆ, “ಓಹ್, ಇದೆಷ್ಟು ಸರಳವಾಗಿದೆ!” ಎಂದುಕೊಳ್ಳುತ್ತಿದ್ದೆ. ಅಂಥದ್ದೊAದು ಪರಿಹಾರವಿಲ್ಲದಿದ್ದರೆ, ನಿರ್ದಿಷ್ಟ ಕಾರ್ಯಗಳನ್ನು ನಿರ್ವಹಿಸಲು ಅದೆಷ್ಟು ಸಮಯ ಹಾಗೂ ಶ್ರಮ ವ್ಯರ್ಥವಾಗುತ್ತದಲ್ಲವೇ ಎಂದು ಆಶ್ಚರ್ಯವೂ ಆಗುತ್ತಿತ್ತು.
ನಾನು ವಿದೇಶಗಳಿಗೆ ಹೋದಾಗ ಸಾಮಾನ್ಯವಾಗಿ ನನಗೆ ಗೆಸ್ಟ್ ಮೀಟಿಂಗ್‌ಗಳು ಅಥವಾ ಕಾರ್ಯಕ್ರಮಗಳು ಸಂಜೆಯ ವೇಳೆ ಇರುತ್ತಿದ್ದವು. ಬೆಳಗಿನ ಹೊತ್ತು ಮೀಟಿಂಗ್ ಇಲ್ಲದಿದ್ದರೆ, ಐಕಿಯಾ ಮಳಿಗೆಗೆ ಹೋಗುವುದೆಂದರೆ ನನಗೆ ಸೈಟ್ ಸೀಯಿಂಗ್ ತಾಣಕ್ಕೆ ಹೋದಷ್ಟು ಖುಷಿಯಾಗುತ್ತಿತ್ತು. ಇದೀಗ ಪ್ರತಿಯೊಂದೂ ಅಮೆಜಾನ್‌ನಲ್ಲಿ ಲಭ್ಯವಾಗುತ್ತದೆ. ಆದರೆ, ನನಗೆ ಅದನ್ನು ಲಾಗಿನ್ ಮಾಡುವುದಕ್ಕೆ ಕೂಡ ಭಯವಾಗುತ್ತದೆ. ಏಕೆಂದರೆ, ಬೇಕಿಲ್ಲದ ವಸ್ತುಗಳನ್ನು ಸಹ ಕೊಂಡುಕೊಳ್ಳಲು ಮನಸ್ಸು ಎಳೆಯುತ್ತದೆ.
ಐಕಿಯಾದಂತೆಯೇ ನನ್ನ ಮತ್ತೊಂದು ಅಚ್ಚುಮೆಚ್ಚಿನ ತಾಣವೆಂದರೆ, ಅದು ಮ್ಯುಜಿ. ಅಲ್ಲಿ ಅದೆಷ್ಟು ಸರಳವಾದ ಹಾಗೂ ಸುಸ್ಥಿರವಾದ ಪರಿಹಾರಗಳನ್ನು ಕಾಣಬಹುದು! ನಾನು ಉಡುಪುಗಳನ್ನು ಖರೀದಿಸುವುದು ಕಡಿಮೆ. ಆದರೆ, ನಾವೀನ್ಯತಾ ಪರಿಹಾರಗಳಿಂದ ಕೂಡಿದ ಆ ಕಂಪನಿಯ ಸ್ಟೋರ್‌ಗಳಿಗೆ ಭೇಟಿ ನೀಡಲು ಅಥವಾ ಸುಮ್ಮನೆ ತೆರಳಿ ವಿಂಡೊ ಷಾಪಿಂಗ್ ಮಾಡಲು ತುಂಬಾ ಇಷ್ಟಪಡುತ್ತೇನೆ.
ನಾವು ಅದೆಷ್ಟು ಸುಂದರವಾದ ಪ್ರಪಂಚದಲ್ಲಿ ಬದುಕುತ್ತಿದ್ದೇವೆ ಅಲ್ಲವೆ? ಜೊತೆಗೆ, ಇಂತಹ ಪರಿಹಾರಗಳು ಮಾರುಕಟ್ಟೆಗೆ ಪದಾರ್ಪಣೆಗೊಳ್ಳುವುದಕ್ಕೆ ಇದ್ದ ಮುಂಚಿನ ಪ್ರಪಂಚವನ್ನೂ ನಾವು ಕಂಡವರಾಗಿದ್ದೇವೆ. ಹೀಗಾಗಿಯೇ, ನಮ್ಮ ಬದುಕನ್ನು ಸುಲಭಗೊಳಿಸುವಂತಹ ಪರಿಹಾರಗಳನ್ನು ರೂಪಿಸಿರುವ ನಮ್ಮ ಯುವ ತಲೆಮಾರಿನವರೆಡೆಗೆ ನಾವು ಹೆಚ್ಚಿನ ಕೃತಜ್ಞತೆ ಹೊಂದಿದವರೂ ಆಗಿದ್ದೇವೆ.
ನಮಗೆ ವೈಯಕ್ತಿಕವಾಗಿ ಈ ಪರಿಹಾರಗಳು ಅಗತ್ಯವೋ ಅಥವಾ ಇಲ್ಲವೋ ಅದು ಒತ್ತಟ್ಟಿಗಿರಲಿ. ಆದರೆ, ಆಗೊಮ್ಮೆ ಈಗೊಮ್ಮೆಯಾದರೂ ನಗರಗಳಲ್ಲಿರುವ ದೊಡ್ಡ ಮಾಲ್‌ಗಳಿಗೆ ನಾವು ಭೇಟಿ ಕೊಡಬೇಕು. ಯಾವ್ಯಾವ ನಾವೀನ್ಯತೆಗಳು ಪ್ರಚಲಿತಕ್ಕೆ ಬರುತ್ತಿವೆ ಎಂಬುದನ್ನು ಕುತೂಹಲದಿಂದ ಗಮನಿಸಬೇಕು, ಅವುಗಳ ಹಿಂದಿರುವ ಕ್ರಿಯಾಶೀಲತೆಯನ್ನು ಮೆಚ್ಚಬೇಕು ಹಾಗೂ ತೆರೆದ ಮನಸ್ಸಿನೊಂದಿಗೆ, “ಓಹ್, ಇದೆಷ್ಟು ಸರಳವಾಗಿದೆ! ಅದು ಹೇಗೆ ನನಗೆ ಇದರ ಬಗ್ಗೆ ಆಲೋಚಿಸಲು ಸಾಧ್ಯವಾಗಲಿಲ್ಲ?’ ಎಂದುಕೊಳ್ಳಬೇಕು.
Post your Comment
Please let us know your thoughts on this story by leaving a comment.