Published in the Sunday Prajavani on 27 October, 2024
ಇತ್ತೀಚೆಗೆ ನಾನು ನನ್ನ ಗೆಳೆಯನ ಮನೆಯಲ್ಲಿ ನಡೆದ ಪಾರ್ಟಿಗೆ ಹೋಗಿದ್ದೆ. ನಾವು ಇನ್ನೇನು ಹೊರಡುವುದರಲ್ಲಿದ್ದಾಗ ನನ್ನ ಮಗಳು ಸಾರಾ ತನಗೆ ಭಾರತ ಮತ್ತು ಏಷ್ಯಾದ ಸಂಸ್ಕೃತಿಯೆಂದರೆ ಎಷ್ಟು ಇಷ್ಟ ಎನ್ನುವ ಬಗ್ಗೆ ಹೇಳುತ್ತಾ, “ನಾವು ಷೂಗಳನ್ನು ಹೊರಭಾಗದಲ್ಲೇ ಬಿಡುವುದರಿಂದ ಯಾವ ಷೂ ಹಾಕುತ್ತೇವೆ ಎಂಬುದು ಅಷ್ಟೇನೂ ಮುಖ್ಯವಲ್ಲ. ಹೀಗಿದ್ದಾಗ, ಪಾರ್ಟಿ ನಡೆಯುವ ಜಾಗವು ಕೂಡ ಮನೆಯೇ ಎನ್ನುವಂತಹ ಭಾವನೆ ಮೂಡುತ್ತದೆ!” ಎಂದಳು. ಅವಳ ಆ ಮಾತು, ಮನೆಯ ಒಳಕ್ಕೆ ಹೋಗುವ ಮುನ್ನ ಷೂಗಳನ್ನು ಹೊರಗೆ ಬಿಡುವುದು ನಮಗೆ ಅದೆಷ್ಟು ರೂಢಿಯಾಗಿಬಿಟ್ಟಿದೆ ಎಂಬುದರ ಕುರಿತು ಆಲೋಚಿಸಲು ನನ್ನನ್ನು ದೂಡಿತು. ಈ ಅಭ್ಯಾಸವು ಮನೆಯನ್ನು ಸ್ವಚ್ಛವಾಗಿಡುವ ಜೊತೆಗೆ ಅದನ್ನೊಂದು ಆಪ್ತ ಸ್ಥಳವನ್ನಾಗಿ ಮಾರ್ಪಡಿಸುತ್ತದೆ. ಜೊತೆಗೆ, ಇದು ನಾವು ಬೇರೊಬ್ಬರಿಗೆ ಸೇರಿದ ಸ್ಥಳದಲ್ಲಿದ್ದಾಗಲೂ ನಮ್ಮ ಮನೆಯಲ್ಲಿಯೇ ಇದ್ದೇವೇನೋ ಎಂಬ ಭಾವನೆಯನ್ನೂ ಮೂಡಿಸುತ್ತದೆ. ಈ ಪದ್ಧತಿಯು ಪಾಶ್ಚಿಮಾತ್ಯ ದೇಶಗಳಲ್ಲಿ ಬಹುತೇಕರಿಗೆ ಅಪರಿಚಿತ. ಆದರೆ, ನಾನು ಪ್ರಪಂಚದ ಉತ್ತರದ ತುತ್ತತುದಿಯ ನಗರವಾದ ಸ್ವ್ಯಾಲ್ ಬಾಡ್ ಗೆ ಭೇಟಿ ನೀಡಿದ್ದಾಗ ಈ ಪದ್ಧತಿಯು ಅಲ್ಲಿನ ಹೋಟೆಲ್ ಗಳಲ್ಲಿ ಹಾಗೂ ರೆಸ್ಟೋರೆಂಟ್ ಗಳಲ್ಲಿ ಪಾಲನೆಯಾಗುವುದನ್ನು ನೋಡಿ ನನಗೆ ಖುಷಿಯ ಜೊತೆಗೆ ಅಚ್ಚರಿ ಆಯಿತು. ಅಲ್ಲಿ ಷೂಗಳನ್ನು ಹೊರಬಿಡುವ ಪ್ರವಾಸಿಗರಿಗೆ ಅನುಕೂಲಕರವಾದ ಫ್ಲೀಸ್-ಲೈನ್ಡ್ ಚಪ್ಪಲಿಗಳನ್ನು ಕೊಡಲಾಗುತ್ತದೆ. ಇದು ಕಲ್ಲಿದ್ದಲು ಗಣಿಗಾರಿಕೆ ಉದ್ಯಮದಿಂದ ಹುಟ್ಟಿದ ಪದ್ಧತಿಯಾಗಿದೆ. ಇದು ಈ ನಗರದಾದ್ಯಂತ ಯಾವ ಹೋಟೆಲ್ ಇಲ್ಲವೇ ರೆಸ್ಟೋರೆಂಟ್ ಗೆ ಹೋದರೂ ಒಂದು ಬಗೆಯ ಆಪ್ತತೆ ಮೂಡಿಸಿ ಅದು ನಮ್ಮದೇ ಮನೆಯೇನೋ ಎಂಬ ಭಾವನೆ ಉಂಟುಮಾಡುತ್ತದೆ.
ನಾವು ಗೆಳೆಯನ ಮನೆ ತಲುಪಿ ಬಾಗಿಲ ಮುಂದೆ ಷೂಗಳನ್ನು ಬಿಟ್ಟಾಗ ನನಗೆ ನಾನೇ ಜೋಕ್ ಮಾಡಿಕೊಂಡು, “ಸರಿ, ಸದ್ಯ ಅವರು ನಮ್ಮನ್ನು ಸ್ವಾಗತಿಸುವಾಗ ನಮ್ಮ ಮೂಗನ್ನು ಉಜ್ಜುವುದಿಲ್ಲವಲ್ಲ!” ಎಂದುಕೊಂಡೆ. ಈ ಆಲೋಚನೆಯು ನನ್ನನ್ನು ನನ್ನ ನ್ಯೂಜಿಲೆಂಡ್ ನ ಮೊದಲ ಭೇಟಿಗೆ ಕೊಂಡೊಯ್ದಿತ್ತು. ಆ ಭೇಟಿಯ ವೇಳೆ ನನಗೆ ಸಾಂಪ್ರದಾಯಿಕ ಮೌರಿ ಶುಭಾಶಯ ವಿನಿಮಯವಾದ ‘ಹೋಂಜಿ’ಯ ಅನುಭವವಾಗಿತ್ತು. ಪರಸ್ಪರ ಮೂಗು ಮತ್ತು ಹಣೆಯನ್ನು ಒತ್ತುವ, ಆ ಮೂಲಕ ಉಸಿರು ಹಾಗೂ ಜೀವಬಲದ ಹಂಚಿಕೆಯನ್ನು ಸೂಚಿಸುವ ಪದ್ಧತಿ ಇದಾಗಿದೆ. ಇದು ಏಕತೆ ಮತ್ತು ಗೌರವದ ಸಶಕ್ತ ಅಭಿವ್ಯಕ್ತಿಯೂ ಆಗಿದೆ. ಹೊರಗಿನ ವ್ಯಕ್ತಿಯನ್ನು ಸಮುದಾಯಕ್ಕೆ ಸ್ವಾಗತಿಸುವ ಹಾಗೂ ಆ ವ್ಯಕ್ತಿಯನ್ನು ಸರಿಸಮಾನವೆಂದು ಪರಿಭಾವಿಸುವ ಮನೋಧರ್ಮವನ್ನೂ ಇದು ಸಂಕೇತಿಸುತ್ತದೆ. ಈ ಬಾಂಧವ್ಯವು ಮಾನವ ಸ್ಪಂದನಶೀಲತೆಯ ಪ್ರಾಮುಖ್ಯವನ್ನು ಒತ್ತಿ ಹೇಳುವ ಜೊತೆಗೆ ಸ್ವೀಕಾರಾರ್ಹತೆಯ ವಿಶ್ವಾತ್ವಕ ಅಗತ್ಯವನ್ನು ಕೂಡ ಪ್ರತಿಪಾದಿಸುತ್ತದೆ. ವೀಣಾ ವರ್ಲ್ಡ್ ನ ನ್ಯೂಜಿಲೆಂಡ್ ಪ್ರವಾಸದ ವೇಳೆ ದಿಗ್ಮೂಢಗೊಳಿಸುವಂತಹ ಸೌಥ್ ಐಲ್ಯಾಂಡ್ ನ ನೈಸರ್ಗಿಕ ಸೊಬಗಿನ ಜೊತೆಗೆ ನಮ್ಮ ಅತಿಥಿಗಳಿಗೆ ರೂಟರುವಾದಲ್ಲಿನ ಈ ಸಾಂಸ್ಕೃತಿಕ ಸ್ಪಂದನಶೀಲತೆಯು ಅನನ್ಯ ಅನುಭವವಾಗಿ ಸದಾ ಮನಸ್ಸಿನಲ್ಲಿ ಉಳಿಯುತ್ತದೆ.
ಪ್ರವಾಸವೆಂಬುದು ಹೊಸ ಸ್ಥಳಗಳಿಗೆ ಭೇಟಿ ಕೊಡುವುದಕ್ಕಿಂತ ಮಿಗಿಲಾದುದು; ಅದು ಮಾನವ ಸಂಸ್ಕೃತಿಯ ವೈವಿಧ್ಯತೆಯಲ್ಲಿ ನಮ್ಮನ್ನು ನಾವೇ ತೋಯಿಸಿಕೊಳ್ಳುವಂಥದ್ದು. ಅನನ್ಯ ಸಂಪ್ರದಾಯಗಳ ಹಾಗೂ ಆಯಾ ಸ್ಥಳದ ಹೆಗ್ಗುರುತಾದ ಆಚರಣೆಗಳ ಅನ್ವೇಷಣೆಯು ಪ್ರವಾಸದ ಅದ್ಭುತ ಆಯಾಮಗಳ ಪೈಕಿ ಒಂದಾಗಿರುತ್ತದೆ. ಈ ಸಂಪ್ರದಾಯಗಳು ಸಂಸ್ಕೃತಿಯೊಂದರ ಹೂರಣದ ಬಗೆಗೆ ಸೂಕ್ಷ್ಮನೋಟ ನೀಡುತ್ತವೆ. ಜನಸಮುದಾಯದ ಮೌಲ್ಯಗಳು, ನಂಬಿಕೆಗಳು ಹಾಗೂ ಚರಿತ್ರೆಯನ್ನೂ ಇವು ಅನಾವರಣಗೊಳಿಸುತ್ತವೆ. ಇದನ್ನು ಮನಸ್ಸಿನಲ್ಲಿರಿಸಿಕೊಂಡು, ಪ್ರವಾಸವನ್ನು ಸಮೃದ್ಧ ಅನುಭವವಾಗಿಸುವ ಕೆಲವು ಆಸಕ್ತಿದಾಯಕ ಪದ್ಧತಿಗಳು ಮತ್ತು ಆಚರಣೆಗಳ ಬಗ್ಗೆ ಈ ವಾರ ಗಮನಹರಿಸೋಣ.
ಜನರನ್ನು ಭೇಟಿ ಮಾಡುವುದು ಹಾಗೂ ಅವರ ಬಗ್ಗೆ ತಿಳಿದುಕೊಳ್ಳುವುದು ಕೂಡ ಪ್ರವಾಸದ ಖುಷಿಯ ಒಂದು ಭಾಗವಾಗಿರುತ್ತದೆ. ನನ್ನ ಮಟ್ಟಿಗೆ ಹೇಳುವುದಾದರೆ, ಚಹಾ ಅಥವಾ ಕಾಫಿ ಕುಡಿಯುತ್ತಾ ಮಾತಿಗಿಳಿಯುವುದು ಇದಕ್ಕೆ ಅತ್ಯುತ್ತಮ ಮಾರ್ಗವಾಗಿರುತ್ತದೆ. ಆಯಾ ಪ್ರದೇಶದ (ಸ್ಥಳೀಯ) ಗೆಳೆಯರ ಜೊತೆಯಲ್ಲಿ ಅಥವಾ ಏಕಾಂಗಿಯಾಗಿ ಕಾಫಿ ಶಾಪ್ ನಲ್ಲಿ ಕುಳಿತು ಅಲ್ಲಿನ ಜನ ಹೇಗೆ ಚಹಾ ಅಥವಾ ಕಾಫಿ ಕುಡಿಯುತ್ತಾರೆ ಎಂಬುದನ್ನು ಗಮನಿಸುವುದು ನಮ್ಮ ತಿಳಿವಳಿಕೆ ಹೆಚ್ಚಿಸಿ, ಆಯಾ ಸಂಸ್ಕೃತಿ ಮತ್ತು ಸಂಪ್ರದಾಯದ ಬಗ್ಗೆ ಸೂಕ್ಷ್ಮನೋಟವನ್ನು ಲಭ್ಯವಾಗಿಸಬಹುದು. ಸಾಂಸ್ಕೃತಿಕ ಸಿರಿವಂತಿಕೆಯನ್ನು ಪ್ರತಿಫಲಿಸುವ ಜಪಾನಿ ಚಹಾ ವ್ರತಾಚರಣೆ ಅಥವಾ ಚನೊಯು ಬಗ್ಗೆ ನಮಗೆಲ್ಲರಿಗೂ ಪರಿಚಯವಿದೆ. ಈ ಆಚರಣೆಯು ‘ಮ್ಯಾಚೊ’ವನ್ನು(ಒಂದು ಬಗೆಯ ಗ್ರೀನ್ ಟೀ) ಪ್ರಶಾಂತವಾದ ಧಾನ್ಯಸ್ಥ ಪರಿಸರದಲ್ಲಿ ಕಾಳಜಿಯಿಂದ ತಯಾರಿಸಿ ಕೊಡಮಾಡುವುದನ್ನು ಒಳಗೊಂಡಿರುತ್ತದೆ. ಇದು ಸಾಮರಸ್ಯ , ಗೌರವ, ಪರಿಶುದ್ಧತೆ ಮತ್ತು ಅನುಭೂತಿಯನ್ನು ಸಂಕೇತಿಸುತ್ತದೆ. ಇಲ್ಲಿ ಪ್ರತಿಯೊಂದು ಚಲನೆ ಮತ್ತು ಭಂಗಿಯು ಪ್ರಜ್ಞಾವಂತಿಕೆಯನ್ನು ಹಾಗೂ ವರ್ತಮಾನದ ಕ್ಷಣದ ಬಗೆಗೆನ ಮೆಚ್ಚುಗೆಯನ್ನು ಪ್ರತಿಬಿಂಬಿಸುತ್ತದೆ. ಇದು ಶಾಂತಿಯ ಮತ್ತು ಬಾಂಧವ್ಯದ ಭಾವನೆಯನ್ನು ಉತ್ತೇಜಿಸುತ್ತದೆ. ‘ಮ್ಯಾಚೊ’ ಚಹಾ ಎಂದೇ ಹೆಸರಾದ ತುಳಸಿ ಪರಿಮಳದ ಚಹಾವನ್ನು ಬಹುತೇಕ ಜನರು ಸೇವಿಸಲು ಇಷ್ಟಪಡುತ್ತಾರೆ ಎಂಬುದನ್ನು ನಾನು ಕಂಡಿದ್ದೇನೆ. ಮೋರೊಕ್ಹೊದಲ್ಲಿನ ನನ್ನ ಪ್ರವಾಸದ ವೇಳೆ ಕೂಡ ನಾನು ಎಲ್ಲಾ ಕಡೆ ತುಳಸಿ ಚಹಾ ಸೇವಿಸಿ ಖುಷಿಪಟ್ಟಿದ್ದೇನೆ. ಪದೇಪದೇ ನಮ್ಮಲ್ಲಿನ ಡಾಭಾಗಳಂತಿರುವ ಅಲ್ಲಿನ ಸಣ್ಣ ಅಂಗಡಿಗಳ ಮುಂದೆ ನಿಂತು ಕುದಿಸಿ ಸಿದ್ಧಪಡಿಸಿದ ತಾಜಾ ತುಳಸಿ ಚಹಾದ ಆಹ್ಲಾದವನ್ನು ಸವಿದಿದ್ದೇನೆ.
ಪ್ರಪಂಚದ ವಿವಿಧೆಡೆ ಕಂಡುಬರುವ ಚಹಾ ಹಾಗೂ ಕಾಫಿ ಪದ್ಧತಿಗಳ ಬಗ್ಗೆಯೇ ಒಂದಿಡೀ ಲೇಖನ ಬರೆಯಬಹುದು. ಇವುಗಳ ಪೈಕಿ ಇಥಿಯೋಪಿಯಾದಲ್ಲಿನ ಕಾಫಿ ಸೇವನೆ ಬಗ್ಗೆ ವಿಶೇಷವಾಗಿ ಉಲ್ಲೇಖಿಸುವುದು ಅಗತ್ಯ. ಇಥಿಯೋಪಿಯಾದಲ್ಲಿ ಕಾಫಿಯು ಕೇವಲ ಒಂದು ಪಾನೀಯವಲ್ಲ. ಅದು ಅದನ್ನು ಮೀರಿದುದು. ಅದು ಅಲ್ಲಿನ ಸಾಮಾಜಿಕ ಬದುಕಿನ ಬಹುಮುಖ್ಯ ಭಾಗ. ಅಲ್ಲಿ ಅದೊಂದು ಬಗೆಯ ವ್ರತಾಚರಣೆಯೇ ಸರಿ. ಕುದಿಸಿ ಸಿದ್ಧಪಡಿಸಿದ ತಾಜಾ ಕಾಫಿ ಗುಟುಕರಿಸುತ್ತಾ ಬಾಂಧವ್ಯಗಳನ್ನು ಗಟ್ಟಿಗೊಳಿಸಿಕೊಳ್ಳಲು ಕುಟುಂಬಗಳು ಮತ್ತು ಸಮುದಾಯಗಳು ಒಟ್ಟು ಸೇರುವ ಪದ್ಧತಿ ಅಲ್ಲಿದೆ. ನೆರೆದವರು ಪರಸ್ಪರ ಸುದ್ದಿಗಳ ವಿನಿಮಯ ಮಾಡಿಕೊಳ್ಳುತ್ತಾ, ಸ್ಥಳೀಯ ವಿಷಯಗಳ ಬಗ್ಗೆ ಚರ್ಚಿಸುತ್ತಾ, ಜ್ಞಾನ ವಿನಿಮಯ ಮಾಡಿಕೊಳ್ಳುತ್ತಾ ಕಾಫಿ ಹೀರುತ್ತಾರೆ. ಈ ಕಾಫಿ ವ್ರತಾಚರಣೆಯು ಹಲವಾರು ಮಹತ್ವದ ಹಂತಗಳನ್ನು ಒಳಗೊಂಡಿರುತ್ತದೆ: ಇಲ್ಲಿ ಕಾಫಿ ಬೀಜಗಳ ತೊಳೆಯುವಿಕೆಯು ಪರಿಶುದ್ಧಗೊಳ್ಳುವ ಪ್ರಕ್ರಿಯೆಯನ್ನು ಸಂಕೇತಿಸುತ್ತದೆ; ರೋಸ್ಟಿಂಗ್ (ಹುರಿಯುವಿಕೆ) ಹಂತವು ಪರಿವರ್ತನೆಯನ್ನು ಹಾಗೂ ಸಂವೇದನೆಗಳ ಜಾಗೃತಿಯನ್ನು ಪ್ರತಿನಿಧಿಸುತ್ತದೆ; ಪುಡಿ ಮಾಡುವಿಕೆಯ ಪ್ರಕ್ರಿಯೆಯಲ್ಲಿ ಒಳಗೊಂಡಿರುವ ಪರಿಶ್ರಮ ಹಾಗೂ ಕಾಳಜಿಯನ್ನು ಸೂಚಿಸುತ್ತದೆ. ಜೆಬಾನ್ ಎಂಬ ವಿಶೇಷ ಕುಡಿಕೆಯಲ್ಲಿ ಕಾಫಿ ಕುದಿಸುವುದು ಸಹನೆ ಹಾಗೂ ಸಂಪ್ರದಾಯವನ್ನು ಸೂಚಿಸುತ್ತದೆ; ಹಾಗೂ ಅದನ್ನು ಮೂರು ಬಾರಿ (ಆಬೊಲ್, ತೊನಾ ಮತ್ತು ಬಾರಕ) ನೀಡುವುದು (ಸರ್ವ್ ಮಾಡುವುದು) ಆತಿಥ್ಯವನ್ನು ಬಿಂಬಿಸುವುದು. ಆಧುನೀಕರಣದ ಮಧ್ಯೆಯೂ ಈ ವ್ರತಾಚರಣೆಯು ಇಥಿಯೋಪಿಯಾದ ಮನೆಗಳಲ್ಲಿ ಮತ್ತು ಕಾಫಿ ಅಂಗಡಿಗಳಲ್ಲಿ ಅಮೂಲ್ಯ ಸಂಪ್ರದಾಯವಾಗಿ ಉಳಿದು ಸಾಗುತ್ತಿದೆ.
ಆಫ್ರಿಕಾದಲ್ಲಿ ಕೆನ್ಯಾ ಮತ್ತು ತಾಂಜಾನಿಯಾದ ಮಸಾಯ್ ಸಮುದಾಯದವರ ವರ್ಣರಂಜಿತ ಸಂಸ್ಕೃತಿಯನ್ನೂ ನಾನು ಇಣುಕಿ ನೋಡಿದ್ದೇನೆ. ‘ಅದುಮು’ ಅಥವಾ ಜಂಪಿಂಗ್ ಡಾನ್ಸ್ ಅವರ ಅತ್ಯಂತ ಗಮನಸೆಳೆಯುವ ಆಚರಣೆಯಾಗಿದೆ. ಮೊರಾನ್ಸ್ ಎಂದು ಕರೆಯಲ್ಪಡುವ ಯುವ ಯೋಧರು ಲಯಬದ್ಧವಾಗಿ ಹಾಡುತ್ತಾ ನೇರವಾಗಿ ಮೇಲಕ್ಕೆ ಆಕರ್ಷಕ ರೀತಿಯಲ್ಲಿ ನೆಗೆಯುತ್ತಾರೆ. ಇದು ದೈಹಿಕ ಬಲ, ಬದುಕಿನ ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಪರಿವರ್ತನೆ ಮತ್ತು ಸಂಗಾತಿಯನ್ನು ಆಕರ್ಷಿಸುವ ವಿಧಾನವೂ ಆಗಿರುತ್ತದೆ. ಯಾರು ಹೆಚ್ಚು ಎತ್ತರಕ್ಕೆ ನೆಗೆಯುತ್ತಾರೋ ಅವರಿಗೆ ಸಾಮಾನ್ಯವಾಗಿ ಭಾವಿ ಸಂಗಾತಿ ಒಲಿಯುತ್ತಾಳೆ! ಈ ವಿಶಿಷ್ಟ ಮ್ಯಾಚ್ ಮೇಕಿಂಗ್ (ವಧುವರ ಅನ್ವೇಷಣೆ) ಪದ್ಧತಿಯು ಗ್ರೀಸ್ ನಲ್ಲಿ ನನ್ನ ಗೆಳೆಯರೊಬ್ಬರ ಮದುವೆ ವೇಳೆಯಲ್ಲಿನ ಮೋಜಿನ ಅನುಭವವನ್ನು ಕೂಡ ನೆನಪಿಸುತ್ತದೆ. ವಿವಾಹ ವಿಧಿಯ ವೇಳೆ ಪ್ರತಿಯೊಬ್ಬರೂ ಸುತ್ತ ನಿಂತು ನೃತ್ಯ ಮಾಡುತ್ತಿರುವಾಗ ನಮಗೆ ತಟ್ಟೆಗಳನ್ನು ಪುಡಿಗಟ್ಟುವುದಕ್ಕೆಂದು ಕೊಡಲಾಯಿತು. ಗ್ರೀಸ್ ನಲ್ಲಿ ತಟ್ಟೆಗಳನ್ನು ಪುಡಿಗಟ್ಟುವುದು ಸಂಭ್ರಮಾಚರಣೆಯನ್ನು, ಸಂತೋಷವನ್ನು ಹಾಗೂ ಹತ್ತಿಕ್ಕಿದ ಭಾವನೆಗಳ ಹೊರಹಾಕುವಿಕೆಯನ್ನು ಸಂಕೇತಿಸುತ್ತದೆ. ಅಲ್ಲಿನ ಮದುವೆಗಳು ಮತ್ತು ಪಾರ್ಟಿಗಳಲ್ಲಿ ಇದು ಸಾಮಾನ್ಯ ಆಚರಣೆಯಾಗಿದೆ. ಪ್ಲೇಟ್ ಸ್ಮ್ಯಾಷಿಂಗ್ ಮಾಡುವಾಗ ಸಂಗೀತ ಹಾಗೂ ನೃತ್ಯಗಳ ಸಾಥ್ ಕೂಡ ಇರುತ್ತದೆ. ಇದು ದುಷ್ಟ ಶಕ್ತಿಗಳನ್ನು ಹೊರದೂಡಿ ಅದೃಷ್ಟವನ್ನು ಹೊತ್ತು ತರುತ್ತದೆ ಎಂಬುದು ಅಲ್ಲಿನ ಜನರ ನಂಬಿಕೆ. ಈ ಬದುಕು ಇರುವುದು ಪರಿಪೂರ್ಣವಾಗಿ ಅನುಭವಿಸುವುದಕ್ಕಾಗಿ ಎಂಬುದನ್ನು ಇದು ನೆನಪಿಸುತ್ತದೆ.
ಹೀಗೆ ಹಲವಾರು ಆಚರಣೆಗಳನ್ನು ಸಂಭ್ರಮಿಸುವ ಮತ್ತೊಂದು ದೇಶವೆಂದರೆ ಅದು ಸ್ಪೇನ್. ಅಲ್ಲಿನ ಪುಟ್ಟ ಪಟ್ಟಣವಾದ ಬುನ್ ಯಾಲ್ ನಲ್ಲಿ ವಾರ್ಷಿಕ ‘ಲ ತೊಮತೀನ’ ಹಬ್ಬ ನಡೆಯುತ್ತದೆ. ಇಲ್ಲಿ ಪಾಲ್ಗೊಳ್ಳುವವರು ದೊಡ್ಡ ಟೊಮ್ಯಾಟೊ ಯುದ್ಧದಲ್ಲಿ ಭಾಗಿಯಾಗುತ್ತಾರೆ. ನೆರೆದ ಜನ ಹಣ್ಣಾಗಿ ಕಳಿತ ಟೊಮ್ಯಾಟೋಗಳನ್ನು ಬೀದಿಗಳಲ್ಲಿ ಎಸೆದಾಡುತ್ತಾರೆ. ಈ ವಿಶಿಷ್ಟ ಆಚರಣೆಯು 20ನೇ ಶತಮಾನದ ಮಧ್ಯಾವಧಿಯಲ್ಲಿ ಶುರುವಾಗಿ ಈಗ ಜನಪ್ರಿಯ ಆಚರಣೆಯಾಗಿ ಬೆಳೆದು ಸಾವಿರಾರು ಪ್ರವಾಸಿಗರನ್ನು ಸೆಳೆಯುತ್ತಿದೆ. ‘ಲ ತೊಮತೀನ’ ಸಂಭ್ರಮಾಚರಣೆಯು ಸರಳ ಚಟುವಟಿಕೆ ಕೂಡ ಅತ್ಯಂತ ಹೆಚ್ಚಿನ ಉಲ್ಲಾಸ ನೀಡಬಲ್ಲದು ಎಂಬುದಕ್ಕೆ ನಿದರ್ಶನವೂ ಆಗಿದೆ.
ಸಂಪ್ರದಾಯವೆಂಬುದು ಆರಂಭದಲ್ಲಿ ಸಣ್ಣ ಆಚರಣೆಯಾಗಿ ಶುರುವಾಗುತ್ತದೆ. ಆದರೆ ಅದು ನೀಡುವ ಖುಷಿಯು ಅದನ್ನು ಸಾರ್ವಕಾಲಿಕ ಆಚರಣೆಯನ್ನಾಗಿ ಮಾರ್ಪಡಿಸುತ್ತದೆ. ಇದು ಪೀಳಿಗೆಯಿಂದ ಪೀಳಿಗೆಗೆ ಖುಷಿ ನೀಡುವ ಸಮೃದ್ಧ ನೆನಪಾಗಿ ಮುಂದುವರಿಯುತ್ತದೆ. ಭಾರತದಲ್ಲಿ ನಾವು ಆಚರಣೆಗಳು ಮತ್ತು ಸಂಪ್ರದಾಯಗಳ ಬೃಹತ್ ವೈವಿಧ್ಯವನ್ನು ಕಾಣಬಹುದಾಗಿದೆ. ಇವುಗಳಲ್ಲಿ ಕೆಲವು ಒಂದಕ್ಕಿಂತ ಮತ್ತೊಂದು ಸಂಪೂರ್ಣ ವಿಭಿನ್ನ ಎನ್ನಿಸಬಹುದು. ಆದರೆ ಇವುಗಳೆಲ್ಲದರ ಮಧ್ಯೆ ನಮ್ಮೆಲ್ಲರನ್ನೂ ಬೆಸೆಯುವ ಸಾಮಾನ್ಯ ಎಳೆಯೊಂದು ಹಾಸುಹೊಕ್ಕಾಗಿದೆ. ಪ್ರತಿಯೊಂದು ಸಂಸ್ಕೃತಿಯ ಆಚರಣೆಗಳು ಮತ್ತು ಸಂಪ್ರದಾಯಗಳು ಕತೆಯೊಂದನ್ನು ಹೇಳುತ್ತವೆ ಎಂಬುದು ಪ್ರಪಂಚ ಪರ್ಯಟನೆ ಮಾಡಿದ ಅನುಭವಿಗಳ ಮಾತಾಗಿದೆ. ಇವು, ಸಂಸ್ಕೃತಿಯೊಂದರ ಮೌಲ್ಯಗಳು, ನಂಬಿಕೆಗಳು ಹಾಗೂ ಚರಿತ್ರೆಯ ಬಗೆಗೆ ಒಳನೋಟವನ್ನು ಲಭ್ಯವಾಗಿಸುತ್ತವೆ. ಪ್ರಪಂಚದ ವಿವಿಧ ಭಾಗಗಳಿಗೆ ಪ್ರವಾಸ ತೆರಳುವುದು ಹಾಗೂ ಅಲ್ಲಿನ ಅನನ್ಯ ಪದ್ಧತಿಗಳು-ಆಚರಣೆಗಳನ್ನು ಅನುಭವಿಸುವುದು ನಮ್ಮ ಮನಸ್ಸು ಹಾಗೂ ಹೃದಯವನ್ನು ಮಾನವ ಜನಾಂಗದ ಅಮೂಲ್ಯ ವೈವಿಧ್ಯಕ್ಕೆ ತೆರೆದುಕೊಳ್ಳುವಂತೆ ಮಾಡುತ್ತದೆ. ಹೀಗಾಗಿ ನಿಮ್ಮ ಬ್ಯಾಗುಗಳನ್ನು ಪ್ಯಾಕ್ ಮಾಡಿಕೊಂಡು ಅನ್ವೇಷಣೆಯ ಪ್ರಯಾಣಕ್ಕೆ ಹೊರಡಿ. ನಿಮ್ಮ ಮುಂಬರುವ ಪ್ರವಾಸದಲ್ಲಿ ಯಾವ ವಿಶಿಷ್ಟ ಸಂಪ್ರದಾಯವನ್ನು ಅಥವಾ ಆಚರಣೆಯನ್ನು ಖುದ್ದು ಅನುಭವಿಸಲು ಇಷ್ಟಪಡುತ್ತೀರಿ ಎಂಬುದನ್ನು ನನ್ನೊಂದಿಗೆ ಹಂಚಿಕೊಳ್ಳಿರಿ.
Post your Comment
Please let us know your thoughts on this story by leaving a comment.