Published in the Sunday Prajavani on 09 March, 2025
“ಅತ್ತರ್ ಹಾಕಿಕೊಳ್ಳುವ ರೀತಿ ಇದು”- ಕೊಂಚವೇ ಸುಗಂಧ ಸುರಿದುಕೊಂಡು, ಕೈಗಳಿಗೆ ಅದನ್ನು ಸವರಿಕೊಳ್ಳುತ್ತಾ, ನಂತರ, ನಾಜೂಕಾಗಿ ತಮ್ಮ ಅಂಗಿಯ ಮೇಲೆ , ಎದೆ, ಭುಜ ಹಾಗೂ ಕೊನೆಗೆ ತೋಳುಗಳ ಭಾಗಕ್ಕೆ ಲೇಪಿಸಿಕೊಳ್ಳುತ್ತಾ ಫಕ್ರಾನ್ ನಮಗೆ ಅತ್ಯಂತ ಮಧುರ ಧ್ವನಿಯಲ್ಲಿ ವಿವರಿಸಿದರು. “ಸುಗಂಧಗಳಿಗಿಂತ ಅತ್ತರ್ ನ ಪರಿಮಳ ಗಾಢವಾಗಿರುತ್ತದೆ” ಎಂದು ಸಂಕೋಚ ಬೆರೆತ ನಗುವಿನೊಂದಿಗೆ ಹೇಳಿದ ಅವರು, “ಇದನ್ನು ಪೋಷಾಕಿನ ಮೇಲೆ ಹಾಕಬೇಕು, ಚರ್ಮದ ಮೇಲಲ್ಲ” ಎಂಬುದನ್ನು ತಿಳಿಸಲು ಮರೆಯಲಿಲ್ಲ. ಅವರಾಡುತ್ತಿದ್ದ ಮಾತಿನಲ್ಲಿ ಮೋಡಿ ಮಾಡುವ ಲಯವಿತ್ತು; ಹಿಂದಿ, ಅರೇಬಿಕ್ ಹಾಗೂ ಉರ್ದು ಮಿಶ್ರಿತ ಮಧುರ ಕಾವ್ಯಾತ್ಮಕ ಧ್ವನಿ ಅದಾಗಿತ್ತು. ಜೇನಿನಲ್ಲಿ ಅದ್ದಿ ತೆಗೆದಂತಿತ್ತು ಅವರ ಮಾತಿನ ವೈಖರಿ. ಅದೆಷ್ಟು ಹೊತ್ತು ಬೇಕಾದರೂ ಅವರ ಮಾತುಗಳಿಗೆ ಕಿವಿಯಾಗಿರಬಹುದು ಎಂದು ನನಗೆ ಅನ್ನಿಸಿತು.
ಹಲವಾರು ಬಗೆಯ ಅತ್ತರ್‌ಗಳ ಪೈಕಿ, ‘ಮಿಟ್ಟಿ’ ಎಂಬುದು ನನಗೆ ಬಹಳ ಇಷ್ಟವಾಗಿಬಿಟ್ಟಿತು. ಆ ಬಾಟಲಿಯ ಮುಚ್ಚಳ ತೆಗೆಯುತ್ತಿದ್ದಂತೆಯೇ ಬೇಸಿಗೆ ಮುಗಿದು ಮುಂಗಾರು ಕಾಲಿಡುವ ಗಳಿಗೆಯ ನೆನಪು ನನ್ನ ಮನಸ್ಸನ್ನು ಆವರಿಸಿತು. ಕಾದು ಗಾರಾದ ಬೀಳುಮಣ್ಣು ಮಳೆಯ ಹನಿಗಳನ್ನು ಬರಮಾಡಿಕೊಳ್ಳುವ ಕ್ಷಣಗಳನ್ನು ಆ ಪುಟ್ಟ ಬಾಟಲಿಯಲ್ಲಿ ಹಿಡಿದಿಟ್ಟಿದ್ದಾರೇನೋ ಅನ್ನಿಸಿತು. ಅಷ್ಟರಲ್ಲಿ, ತನ್ನ ಪುಟ್ಟ ಅಂಗಡಿಯೊಳಗೆ ಬಂದು ಕೂರದ ಹೊರತು ತಾನು ಮುಂದುವರಿಸುವುದಿಲ್ಲವೆಂದು ಫಕ್ರಾನ್ ಮಧ್ಯಕ್ಕೇ ನಿಲ್ಲಿಸಿಬಿಟ್ಟರು. ನಮ್ಮನ್ನು ತಮ್ಮ ಅತಿಥಿಗಳೆಂದು ಭಾವಿಸಿದ್ದ ಅವರು, ಅಂಗಡಿಯಲ್ಲಿರುವ ಸುಗಂಧಗಳನ್ನು ತೋರಿಸುವಾಗ ನಮ್ಮನ್ನು ನಿಲ್ಲಿಸಬಾರದು ಎಂದು ನಿರ್ಧರಿಸಿದ್ದರು; ಬದಲಿಗೆ ಅಲ್ಲಿ ಕುಳಿತು ಅವನ್ನೆಲ್ಲಾ ನೋಡಲಿ ಎಂಬುದು ಅವರ ಭಾವನೆಯಾಗಿತ್ತು. ಆಗ, ಸಾಕಷ್ಟು ಕೇಳಿ ತಿಳಿದಿದ್ದ ‘ಲಖನೋಯಿ ತೆಹಜೀಬ್’ ಸಂಸ್ಕೃತಿಯ ಖುದ್ದು ಅನುಭವ ನನಗಾಯಿತು.
ಅರೇಬಿಕ್ ಮೂಲದ ‘ತೆಹಜೀಬ್’ ಎಂಬುದನ್ನು ಸಮೀಪದ ಅರ್ಥಕ್ಕೆ ಹತ್ತಿರವಿರುವಂತೆ ಭಾಷಾಂತರಿಸಿ ಹೇಳುವುದಾದರೆ, ಅದಕ್ಕೆ ‘ಶಿಷ್ಟಾಚಾರ’ ಅಥವಾ ‘ಸಭ್ಯತೆ’ ಎಂಬ ಅರ್ಥ ಬರುತ್ತದೆ. ಲಖನೌದ ಮಟ್ಟಿಗೆ ಹೇಳುವುದಾದರೆ, ಅದು ಅಲ್ಲಿ ಬದುಕಿನ ವಿಧಾನವೇ ಆಗಿದೆ.
ಲಖನೌ ಪ್ರವಾಸ ಮಾಡಬೇಕೆಂಬ ಆಸೆ ನನಗೆ ಬಹಳ ವರ್ಷಗಳಿಂದಲೂ ಇತ್ತು. ಆದರೂ, ಏಕೋ ಏನೋ ಅದನ್ನು ಈಡೇರಿಸಿಕೊಳ್ಳಲು ಆಗಿರಲಿಲ್ಲ. ಈ ಮಧ್ಯೆ, ಕೆಲವು ತಿಂಗಳುಗಳ ಹಿಂದೆ, ಗೆಳೆಯರೊಂದಿಗಿನ ಫುಡ್ ಟೂರ್ ಆಲೋಚನೆಯು ಆ ಕನಸನ್ನು ನನಸು ಮಾಡಿಕೊಳ್ಳಲು ಸೂಕ್ತ ಅವಕಾಶವಾಗಿ ಒದಗಿಬಂತು. ಇನ್ನು, ಲಖನೌವನ್ನು ಅಲ್ಲಿನ ಖಾದ್ಯಗಳನ್ನು ಸವಿದೇ ಅರ್ಥ ಮಾಡಿಕೊಳ್ಳಬೇಕು ಎಂಬರ್ಥದ ಮಾತು ಜನಜನಿತವಾದುದು. ಆದರೆ, ಅಲ್ಲಿ ಹೆಸರಾಂತ ಖಾದ್ಯಗಳ ಜೊತೆಗೆ ಕಂಡರಸಬೇಕಾದ್ದು ಇನ್ನೂ ಬಹಳಷ್ಟಿದೆ. ತ್ರಿವಳಿ ವಾಸ್ತುಶಿಲ್ಪ ಅದ್ಭುತಗಳಾದ, ಬಾರಾ ಇಮಾಂಬರ, ಚೋಟಾ ಇಮಾಂಬರ ಹಾಗೂ ರೂಮಿ ದರ್ವಾಜಾ, ಅಲ್ಲಿನ ಆಕರ್ಷಣೆಯ ಕೇಂದ್ರಬಿಂದುವಾಗಿವೆ. ಇವೀಗ ವಿವಾಹಪೂರ್ವ ಫೋಟೋಷೂಟ್‌ನ ನೆಚ್ಚಿನ ತಾಣವೂ ಆಗಿದೆ. ನವಾಬರ ನಾಡು ಎಂದು ಕರೆಯಲ್ಪಡುವ ಲಖನೌದ ಅಸ್ಮಿತೆಯು ಅಲ್ಲಿನ ಆಳ್ವಿಕೆಗಾರರ ಪರಂಪರೆಯಲ್ಲಿ ಆಳವಾಗಿ ಬೇರುಬಿಟ್ಟಿದೆ. ಉನ್ನತ ಗೌರವದ ಹುದ್ದೆಯಾದ ‘ನವಾಬ್’ ಎಂಬುದು ಮೂಲದಲ್ಲಿ ಪರ್ಷಿಯಾದ ‘ನೈಬ್’ ಅಥವಾ ‘ನನ್-ವಾಬ್’ ಎಂಬುದರಿಂದ ಬಂದಿದೆ. ಅಂದರೆ, ಇದರ ಅರ್ಥ, ಕುಟುಂಬದ ಪೋಷಕ ಅಥವಾ“ಅನ್ನದಾತ’ ಅಥವಾ “ಜೀವ ಸಂರಕ್ಷಕ’ ಎಂದಾಗಿದೆ. ಕಾಲಕ್ರಮೇಣ, ಇದು, ರಾಜವೈಭವ, ಅಧಿಕಾರ, ಆಧುನಿಕತೆ ಹಾಗೂ ಸಾಂಸ್ಕೃತಿಕ ಆಶ್ರಯವನ್ನು ಸಂಕೇತಿಸುವ ಪದವಾಗಿ ಮಾರ್ಪಟ್ಟಿತು.
ಬಾರಾ ಇಮಾಂಬರ ಹಾಗೂ ರೂಮಿ ದರ್ವಾಜಾಗಳು ನವಾಬಾ ಅಸಾಫ್-ಉದ್ ಆಳ್ವಿಕೆ ಅವಧಿಯಲ್ಲಿ 1784ರಲ್ಲಿ ಬರ ಪರಿಹಾರದ ಭಾಗವಾಗಿ ನಿರ್ಮಾಣಗೊಂಡವು. ಕಿಫಾಯದುಲ್ಲಾ ಎಂಬ ವಾಸ್ತುಶಿಲ್ಪಿಯಿಂದ ವಿನ್ಯಾಸಗೊಂಡ 164 ಅಡಿ ಉದ್ದ ಹಾಗೂ 52 ಅಗಲದ ಈ ಬಾರಾ ಇಮಾಂಬರವು ಸಂಪೂರ್ಣವಾಗಿ ಇಟ್ಟಿಗೆ ಮತ್ತು ಉತ್ಕೃಷ್ಟ ಗುಣಮಟ್ಟದ ಸುಣ್ಣದಕಲ್ಲುಗಳಿಂದ ಮಾಡಲ್ಪಟ್ಟಿದೆ. ಇದರ ಕಮಾನು ಶೈಲಿಯ ಮೇಲ್ಚಾವಣಿಯು ಒಂದು ಅದ್ಭುತವೇ ಸೈ. ಒಂದೇ ಒಂದು ತೊಲೆಯ ಆಸರೆಯೂ ಇಲ್ಲದ ಆ ಶೈಲಿಯ ಪ್ರಪಂಚದ ಅತ್ಯಂತ ದೊಡ್ಡ ನಿರ್ಮಿತಿ ಇದಾಗಿದೆ. ಬಾರಾ ಇಮಾಂಬರದ ಮತ್ತೊಂದು ಆಸಕ್ತಿದಾಯಕ ಸಂಗತಿಯೆAದರೆ, ಅದರ ಬುಲ್ ಬುಲಯ್ಯಾ. ಇದು ಕಿರಿದಾದ ಓಣಿಗಳು, ಕುಸುರಿ ಚಿತ್ರಾಕೃತಿಗಳಿಂದ ಕೂಡಿದ ಬಾಲ್ಕನಿಗಳು ಹಾಗೂ ಪಡಿಯಚ್ಚಿನಂತಿರುವ ಒಂದೇ ರೀತಿಯ 489 ದ್ವಾರಗಳಿಂದ ಕೂಡಿದ್ದು, ಚಕ್ರವ್ಯೂಹವೇನೋ ಅನ್ನಿಸುತ್ತದೆ. ಇದು ನೋಡುಗರಿಗೆ, ತಾವೇ ಕಳೆದುಹೋಗಿದ್ದೇವೇನೋ ಎಂಬ ಭ್ರಮೆ ಮೂಡಿಸುತ್ತದೆ. ಇಮಾಂಬರಾಗಳು ಪವಿತ್ರ ಪೂಜಾ ಸ್ಥಳಗಳೂ ಹೌದು. ಕಳವಳದ ವಿಷಯವೆಂದರೆ, ಇತ್ತೀಚೆಗೆ ಅವು ಕೆಟ್ಟ ಕಾರಣಕ್ಕೆ ಸುದ್ದಿಗಳಾಗಿ ಗಮನ ಸೆಳೆದವು. ಸಾಮಾಜಿಕ ಮಾಧ್ಯಮದ ಇನ್ ಫ್ಲುಯೆನ್ಸರ್ ಒಬ್ಬರು ಇಲ್ಲಿ ನೃತ್ಯದ ದೃಶ್ಯವೊಂದನ್ನು ಚಿತ್ರೀಕರಿಸಿದ ಮೇಲೆ ಸಂಬAಧಪಟ್ಟ ಅಧಿಕಾರಿಗಳು ಈ ತಾಣದ ‘ಪಾವಿತ್ರ್ಯ’ವನ್ನು ಸಂರಕ್ಷಿಸುವ ಉದ್ದೇಶದಿಂದ ಅಲ್ಲಿ ವಿಡಿಯೊ ಚಿತ್ರೀಕರಣವನ್ನು ನಿಷೇಧಿಸಿದ್ದಾರೆ. ಪ್ರವಾಸಿಗರಾಗಿ ನಾವು ಭೇಟಿ ನೀಡುವ ಸ್ಥಳಗಳ ಪಾವಿತ್ರ್ಯ, ಮನ್ನಣೆ ಹಾಗೂ ಸ್ವಚ್ಛತೆಯನ್ನು ಕಾಪಾಡಬೇಕಾದ ನಮ್ಮ ಜವಾಬ್ದಾರಿಯನ್ನು ಇದು ನನಗೆ ನೆನಪಿಸಿತು.
ಅಲ್ಲಿ ನಾವು ಛತ್ತರ್ ಮಂಜಿಲ್ ಗೂ (ಅಂಬ್ರೆಲಾ ಪ್ಯಾಲೆಸ್) ಭೇಟಿ ನೀಡಿದೆವು. ಇದು ಒಂದೊಮ್ಮೆ ನವಾಬರ ಸುಂದರ ನಿವಾಸವಾಗಿತ್ತು. ಈಗ ಇದು ಶಿಥಿಲಾವಶೇಷದಂತಿದ್ದರೂ ತನ್ನ ಗತವೈಭವವನ್ನು ಪಿಸುಗುಟ್ಟಿದಂತೆ ಭಾಸವಾಗುತ್ತದೆ.
ಕಬಾಬ್‌ಗಳು ಹಾಗೂ ಬಿರಿಯಾನಿಗಳ ರುಚಿಯಿಂದ ಗುರುತಿಸಿಕೊಂಡಿರುವ ಲಖನೌದ ಪಾಕ ಕಲೆಯು ಬಹಳ ಪ್ರಸಿದ್ಧವಾದುದು. ಅಲ್ಲಿನ ಭಕ್ಯಗಳು ಅಲ್ಲಿನ ಪ್ರಖ್ಯಾತಿಗೆ ತಕ್ಕಂತೆಯೇ ಇವೆ. ಅಲ್ಲಿ ನಮಗೆ ಚಳಿಗಾಲದ ಸವಿಗಳಾದ ಕಾಲಿ ಗಾಜರ್ ಕಾ ಹಲ್ವಾ ಮತ್ತು ಮಖಾನ್ ಮಲಯ್‌ಗಳನ್ನು ಮೆಲ್ಲುವ ಅವಕಾಶವೂ ಲಭ್ಯವಾಯಿತು. ಈ ಖಾದ್ಯಗಳ ವಿವಿಧ ಬಗೆಗಳು ಹಾಗೂ ಅವುಗಳ ಸ್ವಾದಿಷ್ಟಕ್ಕೆ ಸರಿಸಾಟಿಯಾದುದು ಬೇರೊಂದಿಲ್ಲ ಎನ್ನಬಹುದು. ಅಲ್ಲಿ ಮಾಂಸಾಹಾರ ಭಕ್ಷ್ಯಗಳದ್ದೇ ಮೇಲುಗೈಯಾಗಿದ್ದರೂ ಸಾಕಷ್ಟು ಸಸ್ಯಾಹಾರ ಖಾದ್ಯಗಳ ಆಯ್ಕೆಗಳೂ ಇದ್ದವು. ಹುಳಿಯುಕ್ತ ಮಸಾಲೆ ಸ್ವಾದಗಳಿಂದ ಕೂಡಿದ ಪ್ರಸಿದ್ಧ ಚಾಟ್‌ನ ರುಚಿಯನ್ನೂ ಸವಿದೆವು. ತರುವಾಯ, ಪುರಾತನ ಅಡುಗೆ ವಿಧಾನಗಳಿಂದ ಸಿದ್ಧಗೊಂಡ ಭೂರಿಭೋಜನವನ್ನೂ ಉಂಡು ಸುಖಿಸಿದೆವು.
ನೈಮತ್ ಖಾನಾದಲ್ಲಿ, ಮನೆಯಲ್ಲಿ ಸಿದ್ಧಪಡಿಸಿದ ಆಹಾರ ಸೇವಿಸಿದ್ದಂತೂ ಮರೆಯಲಾಗದ ಅನುಭವವಾಗಿದೆ. ಸರಳವಾಗಿ ತೋರುವ ಆ ಖಾದ್ಯಗಳ ಸ್ವಾದ ಮಾತ್ರ ಎಣೆಯಿಲ್ಲದಂಥದ್ದು. ಕೊನೆಯ ದಿನ, ನಾವು ಐಷಾರಾಮಿ ಸಾರಕಾ ಹೋಟೆಲ್‌ಗೆ ತೆರಳಿ ‘ಅಜ್ರಾಕ್’ನಲ್ಲಿ ಔತಣ ಮಾಡಿದೆವು. 12 ಗಂಟೆಗಳಷ್ಟು ಅವಧಿಯವರೆಗೆ ನಿಧಾನವಾಗಿ ಬೇಯಿಸಿ ಸಿದ್ಧಪಡಿಸಿದ ‘ರಾನ್’ ಕೂಡ ಈ ಔತಣದಲ್ಲಿ ಸೇರಿದ್ದುದು ವಿಶೇಷ.
ಇವೆಲ್ಲಾ ಒಂದು ತೂಕವಾದರೆ, ಅಲ್ಲಿನ ಕಿರಿದಾದ ಬೀದಿಗಳಲ್ಲಿನ ಖಾದ್ಯಗಳ ಸ್ವಾದವೇ ಮತ್ತೊಂದು ತೂಕ. ಅಲ್ಲಿನ ಪುಟ್ಟದಾದ, ಮೊದಲ ನೋಟಕ್ಕೆ ಒಂದಿಷ್ಟು ಭೀತಿ ಹುಟ್ಟಿಸುವಂತಿರುವ, ಸಾಮಾನ್ಯವಾದ ತಿನಿಸು ಮುಂಗಟ್ಟುಗಳಲ್ಲಿ ನಾನು ಈ ಹಿಂದೆಂದೂ ತಿಂದಿರದ ಖಾದ್ಯಗಳ ರುಚಿಗೆ ಸಾಕ್ಷಿಯಾದೆ.
ಜನಜನಿತ ‘ಟುಂಡೆ ಗಲಾವತೀ ಕಬಾಬ್’ಗಳು ಅಲ್ಲಿ ಲಭ್ಯವಾದವು. ದೀರ್ಘ ಇತಿಹಾಸ ಹಾಗೂ ಸ್ವಾದಿಷ್ಟತೆಗೆ ಹೆಸರಾದ ಖಾದ್ಯ ಇವು. ಹಲ್ಲುಗಳು ಅದಾಗಲೇ ಬಿದ್ದಿದ್ದರೂ ಕಬಾಬ್‌ಗಳ ರುಚಿಗಾಗಿ ಹಂಬಲಿಸುತ್ತಿದ್ದ ನವಾಬನಿಗಾಗಿ ಬಾಯಿಗಿಡುತ್ತಿದ್ದಂತೆಯೇ ಕರಗುವ ಕಬಾಬ್ ಗಳು ಈ ನಗರದಲ್ಲಿ ಮೊದಲಿಗೆ ಸಿದ್ಧಗೊಂಡವು ಎಂಬುದು ಇಲ್ಲಿನ ಪ್ರತೀತಿ.
ಹಾಗೆಂದ ಮಾತ್ರಕ್ಕೆ ಅಲ್ಲಿ ನನಗೆ ಇಷ್ಟವಾಗದ್ದು ಏನೊಂದೂ ಇರಲೇ ಇಲ್ಲವೆಂದೇನೂ ಅಲ್ಲ. ಹೇಳಬೇಕೆಂದರೆ, ‘ದಬಾಂಗ್’ ಸಿನಿಮಾ ಚಿತ್ರೀಕರಣಗೊಂಡ ಮೇಲೆ ಜನಪ್ರಿಯಗೊಂಡ ಅಲ್ಲಿನ ‘ದಬಾಂಗ್ ಟೀ’ ನನಗೆ ಅಷ್ಟೇನೂ ರುಚಿಸಲಿಲ್ಲ. ಅದು ಚಿಟ್ಟೆನ್ನಿಸುವಷ್ಟು ಕೆನೆಯುಕ್ತ ಎಂದು ನನಗೆ ಅನ್ನಿಸಿತು. ಇನ್ನು, ಅಲ್ಲಿ ಕಾಶ್ಮೀರಿ ಚಹಾ ಕುಡಿಯಲು ಅಷ್ಟು ಆಸಕ್ತಿ ತೋರದ ನಾನು, ಅದಕ್ಕೆ ಬದಲಾಗಿ ಗಲಾವತೀ ಕಬಾಬ್‌ಗಳ ರುಚಿಗೇ ಅಂಟಿಕೊಂಡೆ!
ಲಖನೌದ ಹೆಸರಾಂತ ಸ್ಮರಣಿಕೆಯಾದ ‘ಚಿಕಂಕರಿ ಕಸೂತಿ’ಯನ್ನು ಎಡತಾಕದೆ ಆ ನಗರಿಯನ್ನು ಬಿಟ್ಟು ಹೊರಡಲು ಸಾಧ್ಯವೇ? ಬೇಗನೇ ಒಂದು ಸಣ್ಣ ಭೇಟಿ ನೀಡಿ, ಅದನ್ನು ಮುಗಿಸೋಣವೆಂದು ಹೊರಟ ನಾವು, ಅಲ್ಲಿ ಬರೋಬ್ಬರಿ ಎರಡು ಗಂಟೆಗಳ ಕಾಲ ಬಿಡುವಿಲ್ಲದೆ ಶಾಪಿಂಗ್‌ನಲ್ಲಿ ಮುಳುಗಿದೆವು. ಇದರಿಂದಾಗಿ ನಮ್ಮ ಸೂಟ್ ಕೇಸುಗಳು ಸೂಕ್ಷ್ಮ ಕೈಚಳಕದ ಕಸೂತಿ ಡ್ರೆಸ್ ಗಳಿಂದ ತುಂಬಿ ತುಳುಕುವಂತಾದವು. ವ್ಹೋಲ್‌ಸೇಲ್ ಮಾರ್ಕೆಟ್‌ಗಳಿಂದ ಹಿಡಿದು ಬೊಟಿಕ್ ಡಿಸೈನರ್ ಸ್ಟೋರ್‌ಗಳವರೆಗೆ ಅಸಂಖ್ಯ ಆಯ್ಕೆಗಳನ್ನು ಲಖನೌ ನಮಗೆ ಕೊಡಮಾಡಿತ್ತು.
ಚಿಕಂಕರಿ ಚಿತ್ರಾಕೃತಿಗಳು ಲಖನೌದ ವಾಸ್ತುಶಿಲ್ಪವನ್ನು ಪ್ರತಿಫಲಿಸುತ್ತವೆ. ಮೀನಿನ ಚಿತ್ರವು ನವಾಬಿ ಕಲೆ ಹಾಗೂ ಸಂಸ್ಕೃತಿಯಲ್ಲಿ ವ್ಯಾಪಕವಾಗಿ ಕಂಡುಬರುವ ಸಂಕೇತವಾಗಿದೆ. ಪರ್ಷಿಯನ್ ಹಾಗೂ ಇಸ್ಲಾಂ ಪರಂಪರೆಗಳಲ್ಲಿ ಅದೃಷ್ಟ, ಫಲವಂತಿಕೆ ಹಾಗೂ ಸಮೃದ್ಧಿಯನ್ನು ಮೀನು (ಮಾಹೀ) ಪ್ರತಿನಿಧಿಸುತ್ತದೆ. ಪರ್ಷಿಯನ್ ಮೂಲದವರಾದ ಅವಧ್ ನವಾಬರು ತಮ್ಮ ಆಡಳಿತ ಹಾಗೂ ಸೌಂದರ್ಯಪ್ರಜ್ಞೆಯ ಪ್ರಧಾನ ಸಂಕೇತವಾಗಿ ಮೀನಿನ ಚಿತ್ರವನ್ನು ಬಳಸಿದರು.
ಹೆಬ್ಬಾಗಿಲುಗಳು, ರಾಜಮನೆತನದ ಧ್ವಜಗಳು ಹಾಗೂ ಚಾರಿತ್ರಿಕ ನಿರ್ಮಿತಿಗಳ ಮುಖಮಂಟಪಗಳಲ್ಲಿ ಮೀನಿನ ಚಿತ್ರಗಳು ಕಂಡುಬರುತ್ತವೆ. ಇದು, ಸೇನಾ ಕಮಾಂಡರ್‌ಗಳು ಹಾಗೂ ಅಧಿಕಾರಿಗಳಿಗೆ ನವಾಬರು ಪ್ರದಾನ ಮಾಡುತ್ತಿದ್ದ ಗೌರವ ಹಾಗೂ ಶ್ರೇಷ್ಠತೆಯ ದ್ಯೋತಕವಾದ ‘ಮಾಹೀ-ಮರಾತಿಬ್’ನ ಭಾಗವಾಗಿತ್ತು. ಈ ಚಿತ್ರಾಕೃತಿಗಳು ಸಮೃದ್ಧಿ ಹಾಗೂ ಸಂರಕ್ಷಣೆಯನ್ನು ಪ್ರತಿನಿಧಿಸುತ್ತಾ ಲಖನೌದ ಸಾಂಸ್ಕೃತಿಕ ಹಾಗೂ ಕಲಾ ಅಸ್ಮಿತೆಯೊಂದಿಗೆ ಹಾಸುಹೊಕ್ಕಾಗಿವೆ. ಇಂತಹ ಅನನ್ಯ ನಗರಿಯಾದ ಲಖನೌಗೆ ಭೇಟಿ ನೀಡಬೇಕೆಂಬ ಕಾತರ ನಿಮ್ಮದಾಗಿದ್ದರೆ, ಭಾರತದ ಸಾರ-ಸತ್ವವೇ ಆಗಿರುವ ಸಂಸ್ಕೃತಿಗಳ ಮೋಹಕ ಸಂಯೋಜನೆಯಾದ ‘ವೀಣಾ ವರ್ಲ್ಡ್ ಟೂರ್ ಆಫ್ ಲಖನೌ, ಅಯೋಧ್ಯಾ ಅಂಡ್ ವಾರಾಣಸಿ’ಯಲ್ಲಿ ಭಾಗಿಯಾಗಿ.
ನನ್ನ ಪಯಣ ಮುಗಿಯುತ್ತಾ ಬಂದಾಗ, ಲಖನೌದ ವಿಶಿಷ್ಟ ಸೊಬಗಿನ ಬಗ್ಗೆ ಬೆರಗುಗೊಳ್ಳದೆ ಇರಲು ಸಾಧ್ಯವಾದೀತೆ? ಚರಿತ್ರೆ ಎಂಬುದು ಅಲ್ಲಿ ಬೀಸುವ ಗಾಳಿಯಲ್ಲೇ ಮಿಳಿತಗೊಂಡುಬಿಟ್ಟಿದೆ. ನಮ್ಮ ಮೇಲೂ ಪ್ರಭಾವ ಬೀರುವಂತೆ ಕಾವ್ಯಾತ್ಮಕವಾಗಿ ಹಾಗೂ ಪಕ್ವಗೊಂಡ ಭಾಷೆಯಲ್ಲಿ ಮಾತನಾಡುವ ಅಲ್ಲಿನ ಜನರು ಆಪ್ತತೆಯನ್ನೇ ತುಳುಕಿಸಿದರು. ಆ ಪ್ರವಾಸ ಮುಗಿಯುವ ವೇಳೆಗೆ ನಾವು ಕೂಡ ಶುದ್ಧ ಹಿಂದಿಯಲ್ಲಿ ಮಾತನಾಡಲು ಶುರುಮಾಡಿದ್ದೆವು. ಆ ಮೂಲಕ, ಲಖನೌದ ‘ತೆಹಜೀಬ್’ ಅನ್ನು ನಮ್ಮೊಂದಿಗೆ ನಾವಿರುವಲ್ಲಿಗೆ ಕೊಂಡೊಯ್ಯುತ್ತೇ ವೇನೋ ಅನ್ನಿಸಿತು. ಅಲ್ಲಿನ ಭವ್ಯ ಇತಿಹಾಸದಿಂದ ಹಿಡಿದು ಅಲ್ಲಿನ ಆರ್ದ್ರತೆಯ ಭಾವ ಮೂಡಿಸುವ ಜನರವರೆಗೆ, ಅಲ್ಲಿನ ಪ್ರತಿಯೊಂದು ಕ್ಷಣವೂ ಸುಂದರ ಕಥಾನಕದೊಳಕ್ಕೆ ಇಣುಕಿ ಹಾಕಿದಂತಿತ್ತು. ಅಲ್ಲಿ ಗಾಳಿಯಲ್ಲೇ ತೀಡುವ ಅತ್ತರ್ ಇರಬಹುದು, ಕಬಾಬ್‌ಗಳ ಸವಿಯಿರಬಹುದು ಅಥವಾ ಭವ್ಯ ವಾಸ್ತುಶಿಲ್ಪದ ಇತಿಹಾಸದ ಪ್ರತಿಧ್ವನಿ ಇರಬಹುದು, ಮತ್ತೆ ಮತ್ತೆ ಆವರಿಸುವ ಗುಂಗು ಲಖನೌ ನಗರಿಯದ್ದಾಗಿದೆ.
Post your Comment
Please let us know your thoughts on this story by leaving a comment.