ಉಸಿರುಗಟ್ಟಿದಂತಾಗುವುದು ಒಂದು ರೀತಿಯ ಭಯಾನಕ ಪರಿಸ್ಥಿತಿ. ನಿಮಗೆ ಹೀಗನ್ನಿಸುತ್ತಿದ್ದಂತೆಯೇ, ಅದನ್ನು ಸಂಕಷ್ಟದ ಸ್ಥಿತಿ ಎಂದು ಭಾವಿಸಿ ತಕ್ಷಣವೇ ಪರಿಹಾರ ಕಂಡುಹಿಡಿಯಲು ಮುಂದಾಗಿ.
ಇದು ಹೆಚ್ಚಿನ ಜನರು ತಮ್ಮ ವಾಡಿಕೆಯ ಕೆಲಸಗಳನ್ನು ಬದಗಿರಿಸಿ ಬೇಸಿಗೆ ರಜೆಯ ಖುಷಿ ಅನುಭವಿಸುತ್ತಿರುವ ಸಂದರ್ಭವಾಗಿದೆ. ಆದರೆ, ನಮಗೆ ಬೇಸಿಗೆ ರಜೆಯೆಂದರೆ ಪ್ರತಿ ಕ್ಷಣವೂ ತುದಿಗಾಲ ಮೇಲೆ ನಿಂತು ಕೆಲಸ ಮಾಡುವ ಅವಧಿಯಾಗಿರುತ್ತದೆ. ಈ ವೇಳೆ ನಾವು ಆಸ್ಪತ್ರೆಯ ತೀವ್ರ ನಿಗಾ ಘಟಕದವರಂತೆ ಕಾರ್ಯನಿರತರಾಗಿರುತ್ತೇವೆ. ಉಸಿರಾಡುವುದಕ್ಕೂ ಪುರುಸೊತ್ತಿಲ್ಲ ಎಂಬAತಿರುತ್ತದೆ ನಮ್ಮ ಪರಿಸ್ಥಿತಿ. ಏಪ್ರಿಲ್‌ನಿಂದ ಜೂನ್‌ವರೆಗೆ ನಮ್ಮ ತಂಡದಲ್ಲಿ ಯಾರಿಗೂ ರಜೆ ತೆಗೆದುಕೊಳ್ಳುವುದಕ್ಕೂ ಅವಕಾಶವಿರುವುದಿಲ್ಲ. ವಿವಿಧ ಸ್ಥಳಗಳಲ್ಲಿ ಪ್ರವಾಸ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಸಂಸ್ಥೆಯ ಪ್ರಮುಖರಾದ ನಾವು ಪ್ರತಿದಿನದ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳುವುದಿಲ್ಲ; ಆದರೂ ನಮ್ಮ ತಂಡದವರಿಗೆ ಕಚೇರಿಯಲ್ಲಿ ಸದಾ ಲಭ್ಯವಿದ್ದು, ಪ್ರತಿಯೊಂದರ ಬಗ್ಗೆಯೂ ಗಮನಹರಿಸುತ್ತೇವೆ. ವಿಮಾನಗಳು ರದ್ದಾಗುವುದು, ರಸ್ತೆಗಳು ಬಂದ್ ಆಗುವುದು, ವೈದ್ಯಕೀಯ ತುರ್ತು ಸನ್ನಿವೇಶ ಉದ್ಭವಿಸುವುದು ಅಥವಾ ಪ್ರಮುಖ ಪ್ರೇಕ್ಷಣೀಯ ಸ್ಥಳಗಳು ಅನಿರೀಕ್ಷಿತವಾಗಿ ಮುಚ್ಚುವುದು ಇಂತಹ ಪ್ರಸಂಗಗಳು ಎದುರಾಗುತ್ತಿರುತ್ತವೆ. ಜೂನ್ ಮಧ್ಯದವರೆಗೂ ಬಿಡುವೆಂಬುದೇ ಇರುವುದಿಲ್ಲ. ನಂತರ, ಪ್ರವಾಸಿಗರ ದಟ್ಟಣೆ ಕಡಿಮೆಯಾಗುತ್ತಿದ್ದಂತೆ ನಮಗೆ ಸಮಾಧಾನವಾಗಿ ಉಸಿರಾಡುವ ಸಂದರ್ಭ ಬರುತ್ತದೆ.
ಕಳೆದ ಫೆಬ್ರುವರಿಯಲ್ಲಿ ನಾವು ಜೈಪುರಕ್ಕೆ ಒಂದು ಮದುವೆಗೆಂದು ಹೋಗಿದ್ದೆವು. ರಾಜಸ್ಥಾನದಲ್ಲಿ ರಾಜರ ಕಾಲದ ಅರಮನೆಗಳು ಮತ್ತು ಹವೇಲಿಗಳು ವಿವಾಹ ಶುಭ ಸಂದರ್ಭಗಳು ನಡೆಯುವ ಸ್ಥಳಗಳಾಗಿ ಮಾರ್ಪಟ್ಟಿವೆ. ನಾವು ಹೋಗಿದ್ದ ಮದುವೆ ಕೂಡ ಹವೇಲಿಯಲ್ಲಿ ಏರ್ಪಾಡಾಗಿತ್ತು. ಅದೇ ಸಂದರ್ಭದಲ್ಲಿ ನಮ್ಮ ಯುಎಸ್‌ಎ ಪ್ರವಾಸ ಕೂಡ ನಿಗದಿಯಾಗಿದ್ದರಿಂದ ನಾವು ಒಂದು ರಾತ್ರಿ ಮಾತ್ರ ಅಲ್ಲಿ ಉಳಿಯಲಿಕ್ಕಿದ್ದೆವು. ಮದುವೆಯು ಬಹಳ ವಿಜೃಂಭಣೆಯಿಂದ ನೆರವೇರಿತು. ಅದೊಂದು ಅವಿಸ್ಮರಣೀಯ ದಿನವಾಗುತ್ತದೆ ಎಂದು ನನಗೆ ತಕ್ಷಣವೇ ಅನ್ನಿಸಿತು. ನಮ್ಮನ್ನೂ ಒಳಗೊಂಡು ಅತಿಥಿಗಳೆಲ್ಲರನ್ನೂ ಭವ್ಯವಾಗಿ ಸ್ವಾಗತಿಸಲಾಯಿತು. ಆತಿಥ್ಯ ನೀಡಿದವರು ನಮ್ಮನ್ನು ಉಳಿದುಕೊಳ್ಳಲಿದ್ದ ಕೊಠಡಿಯವರೆಗೂ ಬಂದು ಬೀಳ್ಕೊಟ್ಟರು. ನಾವು ಧನ್ಯವಾದ ಹೇಳಿ ಕೊಠಡಿ ಒಳಪ್ರವೇಶಿಸಿದೆವು.
ನಾವಿದ್ದುದು ಮೂಲೆಯ ಕೊಠಡಿಯಾಗಿತ್ತು. ಅದರಲ್ಲಿದ್ದ ಸಾಂಪ್ರದಾಯಿಕ ರಾಜಸ್ಥಾನಿ ಕಿಟಕಿ (ಝರೋಖಾ) ಮೂಲಕ ಸಮಾರಂಭದ ನೋಟವು ನೀಟಾಗಿ ಕಾಣುತ್ತಿತ್ತು.
“ಸುಧೀರ್, ಇಲ್ಲಿ ಏನೋ ಸ್ವಲ್ಪ ಬದಲಾವಣೆ ಮಾಡಬೇಕಿದೆ”, ಎಂದೆ
“ಏನು, ಇವಾಗಲೇ?” ಎಂದು ಸುಧೀರ್ ಎಂದಿನAತೆ ಪ್ರಶ್ನಾರ್ಥಕ ನೋಟ ಬೀರಿದರು.
“ನಾವು ಇಲ್ಲಿರುವುದು ಬರೀ ಹನ್ನೆರಡು ಗಂಟೆಗಳ ಕಾಲವಷ್ಟೇ. ಈಗ ಇಲ್ಲಿರುವ ವಸ್ತುಗಳನ್ನು ಹೊಸ ರೀತಿಯಲ್ಲಿ ಜೋಡಣೆಗೊಳಿಸಲು ಶುರು ಮಾಡಲು ಹೋಗಬೇಡ” ಎಂದು ಅವರು ಎಚ್ಚರಿಸಿದರು. “ನಾನು ಸ್ನಾನಕ್ಕೆ ಹೋಗುತ್ತೇನೆ. ಇನ್ನೊಂದು ಗಂಟೆಯಲ್ಲಿ ನಾವು ರೆಡಿ ಆಗಬೇಕು. ಗೊತ್ತಿದೆ ತಾನೇ” ಎಂದೂ ಹೇಳಿದರು .
ಮೌನವಾಗಿ ಸೋಫಾ ಮೇಲೆ ಕುಳಿತ ನಾನು, ನನ್ನನ್ನು ಕಾಡುತ್ತಿರುವ ಸಂಗತಿಯಾದರೂ ಏನು ಎಂದು ಅಚ್ಚರಿಯಿಂದ ಅವಲೋಕಿಸಿಕೊಂಡೆ. ದೊಡ್ಡದಾಗಿದ್ದ ಆ ಕೊಠಡಿಯು ಸಾಕಷ್ಟು ಸ್ಥಳಾವಕಾಶದಿಂದಲೂ ಕೂಡಿತ್ತು. ಆದರೆ, ಅಲ್ಲಿ ಸೋಫಾವನ್ನು ಸಾಂಪ್ರದಾಯಿಕ ರಾಜಸ್ಥಾನಿ ಹಾಸಿಗೆಗೇ ಜೋಡಣೆಗೊಳಿಸಲಾಗಿತ್ತು. ನಮ್ಮ ಮುಂಬೈನ ಪುಟ್ಟ ಬೆಡ್‌ರೂಮ್ ಹಾಸಿಗೆಗಳಿಗೆ ಹೋಲಿಸಿದರೆ ಆ ಹಾಸಿಗೆ ಭಾರೀ ಎನ್ನುವಂತಿತ್ತು. ಅದಕ್ಕೆ ಹೊಂದಿಕೊಂಡಂತೆಯೇ ಮೂರು ಆಸನಗಳ ಸೋಫಾ, ಎರಡು ಕುರ್ಚಿಗಳು ಹಾಗೂ ದೊಡ್ಡದಾದ ಒಂದು ಕಾಫಿ ಟೇಬಲ್ ಇತ್ತು. ಆಸನಗಳು ಹಾಸಿಗೆಯೇ ಹೊಂದಿಕೊAಡAತೆಯೇ ಇದ್ದುದರಿಂದ ಅವನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಕದಲಿಸುವುದು ಅಷ್ಟು ಸುಲಭವಿರಲಿಲ್ಲ. ಅದೊಂದು ಅನವಶ್ಯಕ ಅಡಚಣೆಯಾಗಿತ್ತು.
ಸಾಮಾನ್ಯವಾಗಿ ಕೊಠಡಿಯಲ್ಲಿ ಹಾಸಿಗೆ ಹಾಗೂ ಕೂರುವ ಜಾಗಗಳು ಪ್ರತ್ಯೇಕವಾಗಿರುತ್ತವೆ. ಅದು ಒಂದೇ ಕುರ್ಚಿಯಿರಲಿ ಅಥವಾ ಪೂರ್ತಿ ಸೋಫಾ ಸೆಟ್ ಆಗಿರಲಿ ಅವಕ್ಕೆ ಅವುಗಳದ್ದೇ ಆದ ಪ್ರತ್ಯೇಕ ಜಾಗವಿರಬೇಕು. ಕೊಠಡಿಯು ಬಿಡುಬೀಸಾಗಿ ಓಡಾಡಲು ಸಾಧ್ಯವಾಗುವಂತೆ ಇರಬೇಕು. ಹಾಸಿಗೆ ಹಾಗೂ ಸೋಫಾ ಸೆಟ್ಟಿಂಗ್‌ಅನ್ನು ಬೇರ್ಪಡಿಸಿದರೆ ಅಲ್ಲಿನ ಜಾಗವು ಹೆಚ್ಚು ಮುಕ್ತವಾಗಲಿದ್ದು, ಹಿತಕರವಾಗಿರುತ್ತದೆ. ನಾವು ಅಲ್ಲಿರುವುದು ಕೆಲವೇ ಗಂಟೆಗಳಾದರೂ ಅದು ವ್ಯತ್ಯಾಸವನ್ನುಂಟು ಮಾಡುತ್ತದೆ ಎಂದು ನನ್ನಗೆ ಅನ್ನಿಸಿತು.
ಸುಧೀರ್ ಅವರು ಸ್ನಾನದ ಕೊಠಡಿಯಲ್ಲಿದ್ದುದರಿಂದ ಅಲ್ಲಿ ನನ್ನನ್ನು ತಡೆಯುವವರು ಯಾರೂ ಇರಲಿಲ್ಲ. ನನ್ನೊಳಗಿನ ಭೀಮ ಶಕ್ತಿಯನ್ನು ಒಟ್ಟೈಸಿಕೊಂಡು ಸೋಫಾವನ್ನು ಕದಲಿಸಿ ಹಾಸಿಗೆಯಿಂದ ಅದನ್ನು ಬೇರ್ಪಡಿಸಿದೆ. ಹಾಸಿಗೆಯು ಪ್ರತ್ಯೇಕಗೊಂಡಿತು. ಆಸನಗಳು ಕೂಡ ಎಲ್ಲಾ ಕಡೆಗಳಿಂದಲೂ ಹೋಗಿ ಕೂರಲು ಅನುಕೂಲಕರವಾಗಿದೆ ಎನ್ನಿಸಿತು. ಕೊಠಡಿಯು ಹೆಚ್ಚು ಓಪನ್ ಆಗಿರುವಂತೆ ಭಾಸವಾಗತೊಡಗಿತು. ಉಸಿರುಗಟ್ಟಿಸುವಂತಿದ್ದ ಸ್ಥಿತಿಯೂ ಇಲ್ಲವಾಯಿತು. ಹೀಗಾಗಿ, ನನಗಂತೂ ಹುಷ್ ಎಂಬ ಸಮಾಧಾನದ ನಿಟ್ಟುಸಿರು ಹೊರಹೊಮ್ಮಿದ ಗಳಿಗೆ ಅದಾಯಿತು.
ಆಚೆ ಬರುತ್ತಿದ್ದಂತೆ ಸುಧೀರ್ ಸಹಜವಾಗಿಯೇ ಬೇಸರದ ಧ್ವನಿಯಲ್ಲಿ, “ಹೀಗೆಯೇ ಶಿಫ್ಟಿಂಗ್ ಮಾಡುತ್ತಾ ಇದ್ದರೆ ಒಂದಲ್ಲಾ ಒಂದು ನೀನು ನಿನ್ನ ಬೆನ್ನಿಗೆ ಪೆಟ್ಟು ಮಾಡಿಕೊಳ್ಳುತ್ತೀಯ. ಏನನ್ನಾದರೂ ಕದಲಿಸಬೇಕೆಂದಾಗ ಹೌಸ್ ಕೀಪಿಂಗ್‌ನವರಿಗೆ ಫೋನ್ ಮಾಡು” ಎಂದು ಬೈದರು.
ನಾನು ಏನೊಂದೂ ಮರುಮಾತನಾಡದೆ ಅವರ ಮಾತನ್ನು ಕೇಳಿಸಿಕೊಂಡೆ. ಆದರೆ, ಈಗ ಕೊಠಡಿ ಭಾಸವಾಗುತ್ತಿರುವ ರೀತಿಯ ಬಗ್ಗೆ ಒಳಗೆ ಖುಷಿಯಿಂದಿದ್ದೆ. ಮುಂಚೆ ನಮ್ಮಿಬ್ಬರಿಗೂ ಅಲ್ಲಿ ಸ್ವಲ್ಪ ಉಸಿರುಕಟ್ಟಿದಂತಾಗುತ್ತಿತ್ತು ಎಂಬುದನ್ನು ಸುಧೀರ್ ಕೂಡ ಒಪ್ಪಲೇಬೇಕಿತ್ತು. ಉಸಿರುಗಟ್ಟಿದಂತಾಗುವುದು ಒಂದು ರೀತಿಯ ಭಯಾನಕ ಪರಿಸ್ಥಿತಿ. ನಿಮಗೆ ಹೀಗನ್ನಿಸುತ್ತಿದ್ದಂತೆಯೇ, ಅದನ್ನು ಸಂಕಷ್ಟದ ಸ್ಥಿತಿ ಎಂದು ಭಾವಿಸಿ ತಕ್ಷಣವೇ ಪರಿಹಾರ ಕಂಡುಹಿಡಿಯಲು ಮುಂದಾಗಿ.
ಮನೆಯಲ್ಲಿ ಕೂಡ ನಾನು ಯಾವಾಗಲೂ ಹೀಗೆಯೇ ಬದಲಾವಣೆಯ ಪ್ರಯೋಗಗಳನ್ನು ಮಾಡುತ್ತಿರುತ್ತೇನೆ. ಆದರೆ ಇಂತಹ ಸಂದರ್ಭಗಳಲ್ಲಿ ನಾನೊಂದು ನಿಯಮ ಪಾಲಿಸುತ್ತೇನೆ; ಅದೇನೆಂದರೆ, ಪುನರ್ ವಿನ್ಯಾಸಗೊಳಿಸಲು ದುಬಾರಿಯೆನ್ನಿಸುವ ಖರೀದಿಗಳನ್ನು ಮಾಡುವುದಿಲ್ಲ. ಅದಾಗಲೇ ಇರುವ ವಸ್ತುಗಳಿಂದಲೇ ಜಾಗದ ಸೊಗಸು ಹೆಚ್ಚಿಸಲು ಪ್ರಯತ್ನಿಸುತ್ತೇನೆ. ಕೇವಲ ಒಂದು ಟೇಬಲ್ಲಿನ ಜಾಗ ಬದಲಿಸುವುದು, ಆಸನ ಸರಿಯಾಗಿ ಇರಿಸುವುದು ಅಥವಾ ಆಚೀಚೆ ಹೊಂದಾಣಿಕೆಗೊಳಿಸುವುದು ಮನೆಗೆ ಹೊಸತನ, ಲವಲವಿಕೆ ಹಾಗೂ ಆಪ್ತತೆಯ ಭಾವನೆ ತಂದುಕೊಡಬಲ್ಲದು.
ನಮ್ಮ ವೃತ್ತಿಯ ಕಾರಣದಿಂದಾಗಿ ನಾವು ವರ್ಷದ ಅರ್ಧದಷ್ಟು ಅವಧಿಯನ್ನು ಅಲೆಮಾರಿಗಳಂತೆ, ಅಂದರೆ ಸಂಪೂರ್ಣ ಜಿಪ್ಸಿಗಳಂತೆ ಕಳೆಯುತ್ತೇವೆ. ಒಂದು ದಿನ ಭಾರತದ ಯಾವುದೋ ಒಂದು ರಾಜ್ಯದಲ್ಲಿದ್ದರೆ, ಮರುದಿನ ಪ್ರಪಂಚದ ಸರಿಸುಮಾರು ಅರ್ಧ ಭಾಗವನ್ನು ಕ್ರಮಿಸಿ ದೂರದ ಬೇರೊಂದು ದೇಶದಲ್ಲಿರುತ್ತೇವೆ. ಅಂತಹ ದಿನಗಳಲ್ಲಿ ನಾವು ವ್ಯಾಸ್ತವ್ಯ ಹೂಡುವ ಹೋಟೆಲ್ ಗಳು ಹಾಗೂ ರೆಸಾರ್ಟ್ ಗಳೇ ನಮ್ಮ ಮನೆಗಳಾಗಿರುತ್ತವೆ. ಎಲ್ಲೇ ಉಳಿದುಕೊಂಡರೂ ನನ್ನ ಕೆಲಸಗಳಿಗೆ ಬೇಕಾಗುವ ಹಾಗೂ ಬರವಣಿಗೆ ಮಾಡುವ ವರ್ಕ್ ಡೆಸ್ಕ್ ನನ್ನ ಮುಖ್ಯ ಗಮನವಾಗಿರುತ್ತದೆ. ಅದರಲ್ಲೂ, ಟೇಬಲ್‌ಅನ್ನು ಕಿಟಕಿಗೆ ಮುಖಮಾಡಿ ಇರಿಸಲು ಸಾಧ್ಯವಾಗುವಂತಿದ್ದರೆ ನನಗೆ ಸ್ವರ್ಗವೇ ಸಿಕ್ಕಷ್ಟು ಖುಷಿಯಾಗುತ್ತದೆ. ಮುಂಚೆ, ನಾನು ಮಹಿಳಾ ವಿಶೇಷ ಪ್ರವಾಸಗಳೊಟ್ಟಿಗೆ ತೆರಳುವಾಗ, ಪೂರ್ಣಾವಧಿ ಪ್ರವಾಸವಿರಲಿ ಅಥವಾ ಕೆಲವೇ ದಿವಸಗಳ ಪ್ರವಾಸವಿರಲಿ, ಬ್ಯಾಂಕಾಕ್‌ನಲ್ಲಿ ಮಾಂಟೀನ್ ರಿವರ್‌ಸೈಡ್ ಹೋಟೆಲ್‌ನಲ್ಲಿ ಇಳಿದುಕೊಳ್ಳುತ್ತಿದ್ದೆವು. ಅವರು ನನಗೆ ಯಾವಾಗಲೂ ಮೂಲೆಯ ಕೊಠಡಿ ಕಾಯ್ದಿರಿಸುತ್ತಿದ್ದರು. ಅಲ್ಲಿಗೆ ಹೋಗುತ್ತಿದ್ದಂತೆಯೇ, ಕಿಟಕಿ ಪಕ್ಕಕ್ಕೆ ವರ್ಕ್ಡೆಸ್ಕ್ ಇರಿಸಿಕೊಳ್ಳುವುದು ನಾನು ಮಾಡುತ್ತಿದ್ದ ಮೊದಲ ಕೆಲಸವಾಗಿತ್ತು. ಅಲ್ಲಿಂದ ನದಿ ಹಾಗೂ ದಿಗಂತದ ನೋಟಗಳತ್ತ ಕಣ್ಣು ಹಾಯಿಸುತ್ತಾ ಕೆಲಸ ಮಾಡಲು ಖುಷಿ ಎನ್ನಿಸುತ್ತಿತ್ತು. ಸ್ವಲ್ಪ ದಿನಗಳವರೆಗೆ ಇದನ್ನು ಗಮನಿಸಿದ ಹೋಟೆಲ್ ಸಿಬ್ಬಂದಿ, ನಂತರ ನಾನು ಅಲ್ಲಿಗೆ ತಲುಪುವುದಕ್ಕೆ ಮುಂಚೆಯೇ ಕಿಟಕಿ ಪಕ್ಕದಲ್ಲಿ ಡೆಸ್ಕ್ ವ್ಯವಸ್ಥೆ ಮಾಡಿರುತ್ತಿದ್ದರು.
ಹೇಳಬೇಕೆಂದರೆ, ಬೇರೆಯವರ ಮನೆಗೆ ಭೇಟಿ ನೀಡಿದಾಗಲೂ, “ಇದನ್ನು ಇಲ್ಲಿ ಏಕೆ ಇರಿಸಿದ್ದಾರೆ? ಇದನ್ನು ಅಲ್ಲಿ ಇರಿಸಿದರೆ ಇನ್ನೂ ಚೆಂದ ಕಾಣುತ್ತದಲ್ಲವೇ?” ಎಂಬ ಪ್ರಶ್ನೆಗಳು-ಅನಿಸಿಕೆಗಳು ನನ್ನೊಳಗೆ ತಂತಾನೇ ಮೂಡುತ್ತವೆ.
ಒಳಾಂಗಣ ವಿನ್ಯಾಸದ ಬಗೆಗಿನ ನನ್ನ ಆಸಕ್ತಿಯು ಇದಕ್ಕೆ ಮೂಲ ಕಾರಣವಿರಬಹುದು! ಒಂದೊಮ್ಮೆ ನಾನು ಪ್ರವಾಸೋದ್ಯಮ ಕ್ಷೇತ್ರಕ್ಕೆ ಬಾರದಿದ್ದರೆ ಖಂಡಿತವಾಗಿಯೂ ವಾಸ್ತುಶಿಲ್ಪ (ಆರ್ಕಿಟೆಕ್ಚರ್) ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುತ್ತಿದ್ದೆ. ಇನ್ನು, ಪೀಠೋಪಕರಣಗಳ ಜೋಡಣೆಯು ನನ್ನ ಹವ್ಯಾಸ ಎಂಬುದಂತೂ ನಿಶ್ಚಿತ. ಸುಧೀರ್ ಪ್ರಕಾರ, ಇದೊಂದು ಉಪದ್ರವ. ನನ್ನ ಮಕ್ಕಳ ಪ್ರಕಾರ, ಇದು ಅಬ್ಸೆಸೀವ್—ಕಂಪಲ್ಸೀವ್ ಡಿಸಾರ್ಡರ್ (ಒಸಿಡಿ) ಎಂಬ ಮಾನಸಿಕ ಸಮಸ್ಯೆ. ನನ್ನ ಅತ್ತೆ ಹಾಗೂ ನನ್ನ ತಂಡದ ಸದಸ್ಯರು, ನನಗೆ ಬುದ್ಧಿ ನಿಯಂತ್ರಣದಲ್ಲಿಲ್ಲ ಎನ್ನುತ್ತಾರೆ. ಹ ಹಾ! ಯಾರು ಏನೇ ಹೇಳಲಿ ನನ್ನ ಪ್ರಕಾರ ಇದು, “ಉತ್ಕೃಷ್ಟತೆಗಾಗಿ ತುಡಿತ”ವಾಗಿದೆ.
ನಮಗೆ ಬದುಕಿನಲ್ಲಿ ಏನು ಲಭ್ಯವೋ ಅದು ವಿಧಿಬರಹದಿಂದಲೋ ಅಥವಾ ಅದೃಷ್ಟದಿಂದಲೋ ಕೊಡಮಾಡಲ್ಪಟ್ಟಿರುತ್ತದೆ. ಆದರೆ, ಅದನ್ನು ಇನ್ನಷ್ಟು ಸೊಗಸುಗೊಳಿಸುವುದು ನಮ್ಮ ಕೈಯಲ್ಲೇ ಇರುತ್ತದೆ. ಅದು ನಮ್ಮ ಬಾಥ್‌ರೂಮ್ ಇರಬಹುದು ಅಥವಾ ರೂಮ್ ಇರಬಹುದು, ನಮ್ಮ ಮನೆ ಇರಬಹುದು ಅಥವಾ ಕಚೇರಿ ಇರಬಹುದು, ನಮ್ಮ ಜನರು ಅಥವಾ ಸ್ನೇಹಿತರು, ರಾಜ್ಯ ಅಥವಾ ದೇಶ ಅಥವಾ ಇಡೀ ಪ್ರಪಂಚವೇ ಆಗಿರಬಹುದು (ವಸುಧೈವ ಕುಟುಂಬಕಂ), ನಾವು ಯಾವಾಗಲೂ ಅವುಗಳನ್ನು ಈಗಿರುವುದಕ್ಕಿಂತ ಉತ್ತಮಗೊಳಿಸಲು ಪ್ರಯತ್ನಿಸಬೇಕು. ನಾವು ನಮ್ಮ ಕೈಲಾಗುವ ಸಣ್ಣ ಪ್ರಯತ್ನ ಮಾಡಬೇಕು. ದೂರುತ್ತಾ ಕೂರುವುದು ನಮ್ಮ ಆಯ್ಕೆಯಾಗಬಾರದು.
ಇದು ನಿಜವಾಗಿಯೂ ಸರಳ. ಇರುವುದು ಎರಡೇ ಆಯ್ಕೆಗಳು: ನೀವು ಒಪ್ಪಿಕೊಳ್ಳಲಾಗದ ಪರಿಸ್ಥಿತಿಯಲ್ಲಿದ್ದರೆ, ಒಂದೋ ಅಲ್ಲಿಂದ ಪೂರ್ತಿಯಾಗಿ ಹೊರನಡೆದುಬಿಡಬೇಕು ಅಥವಾ ಅದು ಸಾಧ್ಯವಾಗದಿದ್ದರೆ, ಅಲ್ಲಿನ ಪರಿಸ್ಥಿತಿಯನ್ನೇ ಸುಧಾರಿಸಲು ಶಕ್ತಿಮೀರಿ ಪ್ರಯತ್ನಿಸಬೇಕು. ದೂರುತ್ತಾ ಕೂರುವುದು ಸೂಕ್ತವಲ್ಲ. ದೂರಿನ ಮೊದಲ ಧ್ವನಿಯು ಬದುಕಿನ ಮಾಧುರ್ಯವೆಲ್ಲವನ್ನೂ ಕಸಿಯುವಷ್ಟು ವಿಧ್ವಂಸಕ ಶಕ್ತಿ ಹೊಂದಿರುತ್ತದೆ. ಆದ್ದರಿಂದ, ಸಕಾಲಿಕ ಎಚ್ಚರಿಕೆ ಅತ್ಯಗತ್ಯ.
ಒಮ್ಮೆ, ಉಲ್ಲಾಸ್ ಲತ್ಕರ್‌ರವರ ಅಮೇಯಾ ಪ್ರಕಾಶನದ ಮೂಲಕ ವರ್ಜಿನ್ ಗ್ರೂಪ್ ಸ್ಥಾಪಕರಾದ ರಿಚರ್ಡ್ ಬ್ರ್ಯಾನ್ಸನ್ ಅವರ “ಸ್ಕ್ರೂ ಇಟ್, ಲೆಟ್ಸ್ ಡೂ ಇಟ್’ ಅನ್ನು ಅನುವಾದಿಸಿದ್ದೆ. ಈ ಕೆಲಸ ಈಗ ನನ್ನ ಹವ್ಯಾಸವೂ ಅಲ್ಲ ಅಥವಾ ನನ್ನ ವೃತ್ತಿಯೂ ಅಲ್ಲ. ಆದರೆ, ಲತ್ಕರ್ ಅವರು ಬ್ರ್ಯಾನ್ಸನ್ ಅವರ ನಿರ್ವಹಣಾ ಸಿದ್ಧಾಂತಗಳ ಕುರಿತ ಈ ಪುಟ್ಟ ಪುಸ್ತಕವನ್ನು ಭಾಷಾಂತರಿಸುವಂತೆ ನನಗೆ ಪ್ರೀತಿಪೂರ್ವಕವಾಗಿ ಒತ್ತಾಯಿಸಿದ್ದರು. ನನಗೆ ಮೂಲ ಇಂಗ್ಲಿಷ್ ಕೃತಿ ಇಷ್ಟವಾದ್ದರಿಂದ ನಾನು ಒಪ್ಪಿಕೊಂಡೆ. ಆ ಪುಸ್ತಕದ ಶೀರ್ಷಿಕೆಯೂ ಅದೆಷ್ಟನ್ನು ಹೇಳುತ್ತದೆ!
“ಪ್ರತಿಯೊಂದು ಸಾಧನೆಯೂ ಸಂಕಷ್ಟದ ಸಾಧ್ಯತೆಯನ್ನು ಒಳಗೊಂಡಿರುತ್ತದೆ. ಇಂತಹ ಸಂಕಷ್ಟಕ್ಕೆ ಮುಖಾಮುಖಿಯಾಗಿ ಹಾಗೂ ಗುರಿಯೆಡೆಗೆ ಕಾರ್ಯಪ್ರವೃತ್ತರಾಗಿ” ಎಂಬುದೇ ಈ ಪುಸ್ತಕದ ಸಾರವಾಗಿದೆ. ಕೆಲವೊಮ್ಮೆ, ನಾವು ಯಡವಟ್ಟುಗಳನ್ನು ಎಸಗಬಹುದು. ದೊಡ್ಡದೋ ಅಥವಾ ಚಿಕ್ಕದೋ ತಪ್ಪುಗಳು ಆಗಿಯೇ ತೀರುತ್ತವೆ. ಚಿಂತಿತರಾಗಬೇಡಿ! ಅದರಿಂದ ಕಲಿತು ಮುಂದೆ ಸಾಗಿ. ಭೀತಿಯು ನಿಮ್ಮ ಪ್ರಯತ್ನವನ್ನೇ ನಿಲ್ಲಿಸುವುದಕ್ಕೆ ಕಾರಣವಾಗಲು ಅವಕಾಶ ಕೊಡಬೇಡಿ. ಈ ಪುಸ್ತಕವು ಈಗಲೂ ಬಜಾರ್‌ನಲ್ಲಿ ಲಭ್ಯವಿದೆಯೇ ಎಂಬುದು ನನಗೆ ಗೊತ್ತಿಲ್ಲ. ಆದರೆ, ಅದು ಖಂಡಿತವಾಗಿಯೂ ಸಂಗ್ರಹ ಯೋಗ್ಯ ಎಂಬುದರಲ್ಲಿ ಎರಡನೇ ಮಾತಿಲ್ಲ.
ಅದೇನೇ ಇರಲಿ, ನಾನು ಒಂದು ದೃಢ ನಿರ್ಧಾರವನ್ನಂತೂ ಮಾಡಿದ್ದೇನೆ. ಎಂದಿಗೂ ಸುಮ್ಮನೆ ದೂರುತ್ತಾ ಕೂರಬಾರದೆಂದು ಹಾಗೂ ನಂತರದಲ್ಲಿ ಪಶ್ಚಾತ್ತಾಪ ಪಡುವಂಥದ್ದೇನನ್ನೂ ಮಾಡಬಾರದೆಂದು.
Post your Comment
Please let us know your thoughts on this story by leaving a comment.