Published in the Sunday Prajavani on 26 January 2025
ನನಗೆ ಭಾರತದಲ್ಲಿನ ಚಳಿಗಾಲವೆಂದರೆ ಬಲು ಇಷ್ಟ. ನೀವು ವಾಸವಿರುವ ಸ್ಥಳವನ್ನು ಅವಲಂಬಿಸಿ ಹವಾಮಾನದಲ್ಲಿ ಚೇತೋಹಾರಿಯಾದ ಬದಲಾವಣೆಯ ಅನುಭವ ಈ ಅವಧಿಯಲ್ಲಿ ನಿಮಗಾಗುತ್ತದೆ. ಕರಾವಳಿ ತೀರದ ಪ್ರದೇಶಗಳಲ್ಲಿ ತೇವಾಂಶದಿAದ ಕೂಡಿದ ವಾತಾವರಣವು ಒಣಹವೆಯಾಗಿ ಬದಲಾಗುವ ಸಮಯ ಇದಾಗಿರುತ್ತದೆ. ಇಂತಹ ಸ್ಥಳಗಳಲ್ಲಿ ಈ ಸಂದರ್ಭದಲ್ಲಿ ತಾಪಮಾನದ ಝಳ ಇಲ್ಲದಿರುವುದರಿಂದ ಹೊರಹೋಗುವುದು ಹಿತಕರ ಎನ್ನಿಸುತ್ತದೆ. ಉಳಿದಂತೆ, ಬೇರೆಡೆಗಳಲ್ಲಿ ಈ ಋತುವಿನಲ್ಲಿ ಚಳಿಯು ಮೈಕೊರೆವ ಅನುಭವ ಉಂಟುಮಾಡುತ್ತದೆ. ಸುತ್ತಲ ಪರಿಸರವನ್ನು ಮಂಜು ಮುಸುಕುವುದರಿಂದ ಮೈ ಬೆಚ್ಚಗಿರಿಸಿಕೊಳ್ಳಲು ಉಣ್ಣೆಯ ಪೋಷಾಕುಗಳು ಅಥವಾ ಜಾಕೆಟ್‌ಗಳನ್ನು ಕಪಾಟಿನಿಂದ ಹೊರತೆಗೆಯಬೇಕಾಗುತ್ತದೆ. ಇವೆಲ್ಲದರ ನಡುವೆ, ನೀವು ಯಾವುದೇ ಸ್ಥಳದವರಾಗಿದ್ದರೂ ಭಾರತದಲ್ಲಿ ಚಳಿಗಾಲವು ಆಪ್ತವಾಗಿ ಬರಮಾಡಿಕೊಳ್ಳಬೇಕಾದ ಋತುಮಾನವಾಗಿರುತ್ತದೆ.
ಈ ಅವಧಿಯಲ್ಲಿ ಚುಮುಚುಮು ಶುದ್ಧಗಾಳಿಯು ಪ್ರತಿಯೊಂದು ವಸ್ತುವಿಗೂ ತಾಜಾತನವನ್ನು ನೀಡುತ್ತದೆ. ವರ್ಷದ ಈ ಸಮಯವು ಮೈಮನಗಳನ್ನು ರಮ್ಯ ಭಾವನೆಗಳು ಮುತ್ತಿಕ್ಕುವ ಕಾಲ ಎಂಬುದನ್ನು ಅಲ್ಲಗಳೆಯಲಾಗದು. ಸೂರ್ಯೋದಯದ ವೇಳೆಯ ಹೊಂಬಣ್ಣದ ಕಿರಣಗಳು ಬಂದು ಆರ್ದ್ರವಾಗಿ ಅಪ್ಪಿಕೊಂಡು, ಆ ದಿನ ಸೊಗಸಾಗಿರುತ್ತದೆ ಎನ್ನುವ ಭರವಸೆ ನೀಡುತ್ತಿದೆಯೇನೋ ಎಂಬAತೆ ಭಾಸವಾಗುತ್ತದೆ. ದಿನ ಸಾಗುತ್ತಾ ಹೋದಂತೆ ಗಾಳಿಯ ಬೀಸಿನಲ್ಲಿ ರಮ್ಯಸ್ಪರ್ಶ ಇದೆಯೇನೋ ಎಂದೆನ್ನಿಸದೆ ಇರದು. ಬೆಳಗಿನ ಚುಮುಚುಮ ಚಳಿಯಲ್ಲಿ ವಾಕಿಂಗ್ ಮಾಡುತ್ತಿರಿ ಅಥವಾ ಸಂಜೆಯ ವೇಳೆ ಬೆಂಕಿಯ ಮುಂದೆ ಮೈ ಕಾಯಿಸುತ್ತಿರಿ, ಮನದಾಳದಲ್ಲಿ ಈ ಭಾವನೆ ಮೂಡುವುದನ್ನು ತಡೆಯಲಾಗದು. ಫೆಬ್ರವರಿ ಬರುತ್ತಿದ್ದಂತೆ ನಮ್ಮನ್ನು ಪ್ರೀತಿಯ ಭಾವನೆಗಳು ಆವರಿಸಿಕೊಳ್ಳುತ್ತವೆ. ಆ ಭಾವನೆಯು ಸಂಗಾತಿಗೆ ಸಂಬAಧಿಸಿದ್ದಿರಬಹುದು, ಕೌಟುಂಬಿಕವಿರಬಹುದು ಅಥವಾ ಸ್ನೇಹಿತರೆಡೆಗೆ ಆಗಿರಬಹುದು. ಇದೇ ಸಮಯಕ್ಕೆ ಸರಿಯಾಗಿ, ಈ ಸಂಬಂಧಗಳನ್ನು ಎಲ್ಲಾ ಸ್ವರೂಪಗಳಲ್ಲಿ ಸಂಭ್ರಮಿಸಲು ವ್ಯಾಲೆಂಟೈನ್ ದಿನವು ಸುಸಂದರ್ಭವಾಗಿ ಆಗಮಿಸುತ್ತದೆ.
ವ್ಯಾಲೆಂಟೈನ್ ದಿನವನ್ನು ಹೆಚ್ಚಾಗಿ ಗಂಡು-ಹೆಣ್ಣಿನ ಪ್ರಣಯದ ಸಂಭ್ರಮಾಚರಣೆಯೆAದು ಭಾವಿಸಲಾಗುತ್ತದೆ. ಆದರೆ, ಅದರ ಮೂಲವು ಅದನ್ನು ಮೀರಿದುದಾಗಿದೆ. ಇಟಲಿಯ ಸಂತ ವ್ಯಾಲೆಂಟೈನ್ ಹೆಸರಿನಲ್ಲಿ ಕರೆಯಲಾಗುವ ಆ ದಿನದ ಸುತ್ತ ಹಲವಾರು ಪ್ರತೀತಿಗಳಿವೆ. ಸಂತ ವ್ಯಾಲೆಂಟೈನ್‌ಗೆ ಸಂಬಂಧಿಸಿದ ಹಲವು ಪ್ರತೀತಿಗಳ ಪೈಕಿ ಒಂದು ಹೀಗಿದೆ: ಕ್ರಿಸ್ತಶಕ 3ನೇ ಶತಮಾನದಲ್ಲಿ ಪಾದ್ರಿಯಾಗಿದ್ದ ಸಂತ ವ್ಯಾಲೆಂಟೈನನು ಯುವ ಜೋಡಿಗಳ ವಿವಾಹಕ್ಕೆ ಚಕ್ರವರ್ತಿ ಎರಡನೇ ಕ್ಲಾಡಿಯಸ್ಸನು (ಚಿಜಜ ಣhis) ವಿಧಿಸಿದ್ದ ನಿಷೇಧಾಜ್ಞೆಯನ್ನು ಆ ಜೋಡಿಗಳನ್ನು ರಹಸ್ಯವಾಗಿ ಒಂದಾಗಿಸುವ ಮೂಲಕ ಉಲ್ಲಂಘಿಸಿದ. ಹೀಗೆ ಸಾಮ್ರಾಟ ವಿಧಿಸಿದ್ದ ನಿಷೇಧವನ್ನು ಉಲ್ಲಂಘಿಸಿದ್ದಕ್ಕಾಗಿ ಆತನಿಗೆ ಫೆ.14ರಂದು ಮರಣದಂಡನೆ ವಿಧಿಸಲಾಯಿತು. ಮತ್ತೊಂದು ಪ್ರತೀತಿಯ ಪ್ರಕಾರ, ಜೈಲರೊಬ್ಬನ ಮಗಳ ಜೊತೆ ಪ್ರೀತಿಯ ಸೆಳೆತಕ್ಕೆ ಒಳಗಾದ ವ್ಯಾಲೆಂಟೈನ್, ತಾನು ಸಾವಿಗೀಡಾಗುವ ಮುನ್ನ ತನ್ನ ಸಹಿ ಇರುವ ಪತ್ರವನ್ನು ಆಕೆಗೆ ಕಳುಹಿಸಿದ್ದ. ಅಂತೂ ಮೂಲ ಅದೇನೇ ಆಗಿರಲಿ, ವ್ಯಾಲೆಂಟೈನ್ ದಿನವು ನಮ್ಮ ಬದುಕಿನಲ್ಲಿನ ಸಂಬಂಧಗಳನ್ನು ಕಾಪಿಟ್ಟುಕೊಳ್ಳಲು ನೆನಪಿಸುವ ಸುಂಸದರ್ಭವಾಗಿ ಒದಗಿಬರುತ್ತದೆ. ಪ್ರಣಯದ, ದೈಹಿಕ ವಾಂಛೆ ಮೀರಿದ, ಕೌಟುಂಬಿಕ ಅನುಬಂಧದ ಈ ಎಲ್ಲಾ ರೀತಿಯ ಪ್ರೀತಿಗಳಿಗೂ ಇದು ಅನ್ವಯವಾಗುತ್ತದೆ.
ಈ ವಿಶಿಷ್ಟ ದಿನ ಹತ್ತಿರವಾಗುತ್ತಿರುವಂತೆ, ಗಂಡು ಹೆಣ್ಣಿನ ಪ್ರಣಯಕ್ಕೆ ಹೆಸರಾದ ಪ್ರಪಂಚದ ಕೆಲವು ಸ್ಥಳಗಳನ್ನು ಅವಲೋಕಿಸುವುದು ಸೂಕ್ತ ಎಂದು ನನಗೆ ಅನ್ನಿಸುತ್ತಿದೆ. ಪ್ರತಿಯೊಬ್ಬರ ಬದುಕಿನ ಪ್ರೇಮ ಕಥಾನಕಗಳಿಗೆ ಸ್ಫೂರ್ತಿ ತುಂಬುವ ತಾಣಗಳು ಇವಾಗಿವೆ. ನೀವು ಹನಿಮೂನ್‌ಗೆ ಯೋಜಿಸುವುದೇ ಆಗಿರಲಿ, ವಿವಾಹ ವಾರ್ಷಿಕೋತ್ಸವ ಸಂಭ್ರಮಾಚಣೆಗಾಗಲಿ ಅಥವಾ ಸುಮ್ಮನೆ ಜಂಜಡದಿಂದ ಒಂದಷ್ಟು ಮುಕ್ತಿ ಬಯಸುತ್ತಿರಲಿ, ಈ ಸ್ಥಳಗಳು ಅನನ್ಯವೆನ್ನಿಸುವ ಅಚ್ಚಳಿಯದ ಅನುಭವಗಳನ್ನು ಕೊಡಮಾಡುತ್ತವೆ.
ಸಂತ ವ್ಯಾಲೆಂಟೈನ್‌ನ ಕಥೆಯೊಂದಿಗೆ ಬೆಸೆದುಕೊಂಡಿರುವ ಇಟಲಿಯೊಂದಿಗೆ ನಮ್ಮ ಅವಲೋಕನ ಆರಂಭಿಸುವುದು ಸೂಕ್ತವೇನೋ. ಕಳೆದ ನವೆಂಬರ್‌ನಲ್ಲಿ ನನ್ನ ಆತ್ಮೀಯ ಸ್ನೇಹಿತ ಮಹಾನ ಜೊತೆಯಲ್ಲಿ ಸಿಸಿಲಿಗೆ ಪ್ರವಾಸ ತೆರಳಿದ್ದಾಗ ಆ ದ್ವೀಪದ ಮನಮೋಹಕ ಇತಿಹಾಸ, ಸಂಸ್ಕೃತಿ ಹಾಗೂ ರಮಣೀಯತೆಯ ಸಂಯೋಜನೆಗೆ ನಾವು ಸಾಕ್ಷಿಯಾಗಿದ್ದೆವು. ಕಟೀನ್ಯ, ಟೌಮೀನ, ಪಲೋಮೊ, ಸಿರುಕ್ಯೂಸ್, ನೋಟೋ ಈ ಪ್ರತಿಯೊಂದು ನಗರವೂ ಸಮ್ಮೋಹಕತೆಯನ್ನು ನಮಗೆ ಮೊಗೆದು ಕೊಟ್ಟಿದ್ದವು. ಪ್ರಾಚೀನ ಅವಶೇಷಗಳು, ಸೂರ್ಯಕಾಂತಿಯಲ್ಲಿ ಮಿಂದಂತೆ ಕಾಣುವ ಗುಡ್ಡಗಾಡು ಪ್ರದೇಶಗಳು ಮತ್ತು ಕರಾವಳಿಯ ಸೊಬಗಿನೊಂದಿಗೆ ಸಿಸಿಲಿಯು ನೋಡುಗರನ್ನು ವಾಸ್ತವ ಪ್ರಪಂಚದಿಂದ ದೂರದ ಬೇರೆಲ್ಲಿಗೋ ಸೆಳೆದು ಭೂಮಿಯ ಮೇಲಿನ ಸ್ವರ್ಗವೇನೋ ಎಂಬ ಭಾವನೆ ಮೂಡಿಸುತ್ತದೆ.
ಸಿಸಿಲಿಯ ಶ್ರೀಮಂತ ಇತಿಹಾಸವು ತನ್ನದೇ ಆದ ಪ್ರೇಮ ಕಥಾನಕಗಳು ಹಾಗೂ ಜನಪದ ಕತೆಗಳಿಂದ ತುಂಬಿದೆ. ಯುವ ಮೂರಿಷ್ ವ್ಯಕ್ತಿಯೊಬ್ಬ ಸಿಸಿಲಿಯ ಸುಂದರ ಮಹಿಳೆಯೊಬ್ಬಳೊಡನೆ ಅನುರಾಗಕ್ಕೆ ಒಳಗಾದನು ಎಂಬುದು ಇಲ್ಲಿನ ಆಸಕ್ತಿಕರ ಕಥೆಗಳಲ್ಲಿ ಒಂದಾಗಿದೆ. ಇವರಿಬ್ಬರು ಪ್ರಣಯದಲ್ಲಿ ಮುಳುಗಿದರು. ಆದರೆ, ಕೆಲವೇ ದಿನಗಳಲ್ಲಿ ಆ ಮಹಿಳೆಗೆ, ತನ್ನ ಪ್ರೇಮಿಗೆ ಪತ್ನಿಯಿದ್ದು, ಆಕೆ ಊರಿನಲ್ಲಿದ್ದಾಳೆಂಬುದು ತಿಳಿಯುತ್ತದೆ. ವಂಚನೆಗೊಳಗಾದ ಹಾಗೂ ಹೃದಯ ಭಗ್ನಗೊಂಡ ಭಾವನೆಯಿಂದ ಘಾಸಿಗೊಂಡ ಆಕೆಯು ತೀವ್ರವಾದ ನಿರ್ಧಾರವನ್ನು ತೆಗೆದುಕೊಂಡು ಬಿಡುತ್ತಾಳೆ. ಒಂದು ರಾತ್ರಿ, ಮೂರ್ ನಿದ್ರಿಸುತ್ತಿದ್ದಾಗ ಆತನ ಶಿರವನ್ನು ಕತ್ತರಿಸಿಬಿಡುತ್ತಾಳೆ. ನಂತರ, ಅದನ್ನು ಬೇರೆಲ್ಲೋ ಹಾಕದೆ , ಕುಂಭವೊಂದರಲ್ಲಿ ಇರಿಸಿ ಅದರಲ್ಲಿ ತುಳಸಿ ಸಸಿಯನ್ನು ನೆಡುತ್ತಾಳೆ. ಸಂಪ್ರದಾಯದ ಪ್ರಕಾರ, ಇದು ಪ್ರೀತಿ ಹಾಗೂ ಶೋಕದೊಂದಿಗೆ ಬೆಸೆದುಕೊಂಡಿರುವ ಗಿಡಮೂಲಿಕೆಯಾಗಿದೆ. ಈ ತುಳಸಿ ಗಿಡದ ಪರಿಮಳವು ಎಲ್ಲರನ್ನೂ ತನ್ನೆಡೆಗೆ ಸೆಳೆಯುತ್ತದೆ. ಸ್ಥಳೀಯ ಕುಶಲಕರ್ಮಿಗಳು ಮೂರಿಷ್ ಶಿರದ ಆಕಾರದಲ್ಲಿ ಕುಂಭಗಳನ್ನು ಮಾಡುವುದರಲ್ಲಿ ತೊಡಗುತ್ತಾರೆ. ಇದು ಕಾಲ್ಟಾಜಿರೋನಿ ಮತ್ತು ಟೌಮೀನದಂತಹ ಸ್ಥಳದಲ್ಲಿ ಇಂದಿಗೂ ಸಂಪ್ರದಾಯವಾಗಿ ಮುಂದುವರಿದಿದೆ.
ಇನ್ನು, ರೋಮಿಯೋ ಅಂಡ್ ಜೂಲಿಯೆಟ್ ಬಹಳ ಪ್ರಸಿದ್ಧ ಪ್ರಣಯ ಕಥಾನಕವಾಗಿದೆ. ಶೇಕ್ಸ್ಪಿಯರ್ ಕೃತಿಯ ಈ ದುರಂತ ಕಥೆಯನ್ನು ಅಸಂಖ್ಯ ರೂಪಗಳಲ್ಲಿ ಪುನಃ ಪುನಃ ಹೇಳುತ್ತಲೇ ಬರಲಾಗುತ್ತಿದೆ. ಈ ಕಥೆಯ ಪ್ರಧಾನ ಭಾಗವು ನೆಲೆಯಾಗಿರುವುದು ಇಟಲಿಯ ವೆರೋನಾದಲ್ಲಿ. ಈ ವೆರೋನಾವು ರೋಮಿಯೋ ಮತ್ತು ಜೂಲಿಯಟ್ ಅವರು ವಾಸಿಸುತ್ತಿದ್ದ ನಗರವಾಗಿತ್ತು. ಈ ಯುವ ಪ್ರೇಮಿಗಳು ಪರಸ್ಪರ ಹಗೆ ಕಾರುತ್ತಿದ್ದ ತಂತಮ್ಮ ಕುಟುಂಬಗಳ ಕಟ್ಟಳೆಗಳನ್ನು ಉಲ್ಲಂಘಿಸಿದರು. ಇಲ್ಲಿರುವ ಜೂಲಿಯಟ್‌ಳ ಮನೆ (ಕಾಸಾ ಡಿ ಜೂಲೆಯೆಟ್ಟಾ) ಮತ್ತು ಆಕೆ ರೋಮಿಯೋಗಾಗಿ ಕಾದು ನಿಂತಿದ್ದ ಹೆಸರಾಂತ ಉಪ್ಪರಿಗೆ ಪ್ರಮುಖ ಆಕರ್ಷಣೆಗಳಾಗಿವೆ. ಕಾಲಾತೀತವಾದ ಪ್ರಣಯ ಕತೆಯೊಂದಿಗೆ ತಳುಕು ಹಾಕಿಕೊಂಡಿರುವ ಆ ನಗರಕ್ಕೆ ಪ್ರೇಮದ ಮಾಯೆ ಅನುಭವಿಸಲು ಬಯಸಿ ಪ್ರಪಂಚದೆಲ್ಲೆಡೆಯ ಪ್ರವಾಸಿಗರು ಭೇಟಿ ನೀಡುತ್ತಾರೆ. ತಮ್ಮದೇ ಪ್ರಣಯ ಕಥೆಗಳನ್ನು ಅಮರವಾಗಿಸುವ ಆಶಯದೊಂದಿಗೆ ಕಾಸಾ ಡಿ ಜೂಲೆಯೆಟ್ಟಾದ ಬಾಲ್ಕನಿ ಮೇಲೆ ನಿಂತು ಫೋಟೋಗಳನ್ನು ಸಡಗರದಿಂದ ಕ್ಲಿಕ್ಕಿಸಿಕೊಳ್ಳುತ್ತಾರೆ.
ಜೂಲಿಯೆಟ್‌ಗೆ ಪತ್ರ ಬರೆಯುವ ಪದ್ಧತಿಯು ವೆರೋನಾದಲ್ಲಿನ ಮತ್ತೊಂದು ವಿಶೇಷವಾಗಿದೆ. ಪ್ರಪಂಚದೆಲ್ಲೆಡೆಯ ಜನರು ಜೂಲಿಯೆಟ್‌ಗೆ ಪತ್ರ ಬರೆದು, ತಮ್ಮ ಪ್ರೀತಿಯ ಬಗ್ಗೆ ಸಲಹೆ ಕೋರುತ್ತಾರೆ, ಭರವಸೆಗಳನ್ನು ಹಂಚಿಕೊಳ್ಳುತ್ತಾರೆ ಅಥವಾ ತಮ್ಮ ಪ್ರೀತಿಯನ್ನು ಅಭಿವ್ಯಕ್ತಗೊಳಿಸುತ್ತಾರೆ. ಜೂಲಿಯೆಟ್ ಕ್ಲಬ್ ಎಂಬ ತಂಡದ ಸ್ವಯಂಸೇವಕರು ದಶಕಗಳ ಕಾಲದಿಂದಲೂ ಇಂತಹ ಪತ್ರಗಳಿಗೆ ಪ್ರತಿಕ್ರಿಯಿಸುವ ಕಾರ್ಯ ಮಾಡುತ್ತಾ ಬಂದಿದ್ದಾರೆ. ಇದು, ಜೂಲಿಯೆಟ್‌ಳ ಅರ್ಪಣೆ ಮತ್ತು ಅನುರಾಗದ ಭಾವನೆಗಳ ಚೈತನ್ಯದ ಪ್ರತೀಕವಾಗಿದೆ. ಶೇಕ್ಸ್ ಪಿಯರ್‌ನ ನಾಟಕದೊಂದಿಗೆ ಬೆಸೆದುಕೊಂಡಿರುವ ವೆರೋನಾ ನಗರವು ಅನ್ವೇಷಣೆಗೆ ಕೂಡ ಸೂಕ್ತವಾದ ಲವಲವಿಕೆಯ ನಗರವಾಗಿದೆ. ಕೆಫೆಗಳು ಹಾಗೂ ಕಾರಂಜಿಗಳಿಂದ ತುಂಬಿರುವ ಪ್ಯಜ್ಞ ಡೆಲ್ಲೆ ಅರ್ಬೆಯಲ್ಲಿ ಅಡ್ಡಾಡಬಹುದು ಅಥವಾ ಪ್ರತ್ಯಕ್ಷ ಪ್ರದರ್ಶನಗಳು ಹಾಗೂ ಅಪೇರಾಗಳಿಗೆ ಹೆಸರಾದ ಪ್ರಾಚೀನ ಅರೇನಾ ಡಿ ವೆರೋನಾಗೆ ಭೇಟಿ ಕೊಡಬಹುದು. ಆಪ್ತತೆಯ ಅನುಭವಕ್ಕಾಗಿ ಆದಿಜೆ ನದಿಯ ಗುಂಟ ಸುಂದರ ಸೇತುವೆಗಳು ಹಾಗೂ ಐತಿಹಾಸಿಕ ತಾಣಗಳನ್ನು ಎಡತಾಕುತ್ತಾ ಖಾಸಗಿಯಾಗಿ ಗಾಂಡಲ ಸವಾರಿ ಮಾಡಬಹುದು. ವೈನ್ ಪ್ರಿಯರು ವಾಲ್ಪಲಿಚೆಲ್ಲಾ ಪ್ರಾಂತ್ಯದ ಮೂಲಕ ಖಾಸಗಿ ವೈನ್-ಟೂರ್ ಕೈಗೊಳ್ಳಬಹುದು. ಇಲ್ಲಿ ಹೆಸರಾಂತ ಅಮರೋನೆ ವೈನ್ ಸವಿಯುತ್ತಾ ದ್ರಾಕ್ಷಿ ತೋಟಗಳ ಹಾಗೂ ಬೆಟ್ಟ ಸಾಲುಗಳ ನಿಬ್ಬೆರಗಾಗಿಸುವ ನೋಟಗಳನ್ನು ಕಣ್ತುಂಬಿಕೊಳ್ಳಬಹುದು. ಕ್ರಿಪ್ರ ಪ್ರವಾಸದಲ್ಲಿ ಲೇಕ್ ಗಾಡಾಗೆ ಭೇಟಿ ನೀಡಿ ಅಲ್ಲಿನ ಪರಿಶುಭ್ರ ನೀರು ಹಾಗೂ ಸರೋವರದ ಆಸುಪಾಸಿನಲ್ಲಿರುವ ರಮಣೀಯ ಗ್ರಾಮಗಳನ್ನು ದರ್ಶಿಸಿ ರಮ್ಯ ಭಾವನೆಯಲ್ಲಿ ಮುಳಗಬಹುದು.
ಪ್ಯಾರಿಸ್ ಅಂತೂ ಪ್ರಣಯಿಗಳಿಗೆ ಹೇಳಿ ಮಾಡಿಸಿದ ಸ್ಥಳವಾಗಿದ್ದು, ಪ್ರಪಂಚದೆಲ್ಲೆಡೆ ‘ಸಿಟಿ ಆಫ್ ಲವ್” ಎಂದೇ ಹೆಸರಾಗಿದೆ. ಇದು ಸರಿಸಾಟಿಯಿಲ್ಲದ ರಮ್ಯ ಪರಿಸರದಿಂದ ಕೂಡಿದ ನಗರಿಯಾಗಿದೆ. ಐಫೆಲ್ ಟವರ್ ಅನ್ನು ಎವೆಯಿಕ್ಕಿ ನೋಡುವುದಿರಬಹುದು, ಮಾಂತ್ ಮಾರ್ಟ್ಜ ಅನ್ವೇಷಣೆ ಇರಬಹುದು ಅಥವಾ ಸೀನ್ ನದಿಯ ಗುಂಟ ಕ್ರೂಸಿಂಗ್ ಮಾಡುವುದಿರಬಹುದು ಈ ನಗರವು ದೀರ್ಘಕಾಲದಿಂದಲೂ ಪ್ರಪಂಚದ ಮೂಲೆಮೂಲೆಗಳ ಪ್ರೇಮಿಗಳ ಹೃದಯದಲ್ಲಿ ಸ್ಥಾನ ಗಿಟ್ಟಿಸಿದೆ. ಈ ನಗರದ ರಮ್ಯ ಭಾವನೆಗಳು ಹೀಲೋಯಿಸ್ ಮತ್ತು ಅಬಿಲಾದಂತಹ ಕತೆಗಳಿಂದ ಜನಜನಿತವಾಗಿವೆ. ಅತ್ಯಂತ ಪ್ರಸಿದ್ಧವಾದ ಮಧ್ಯಕಾಲೀನ ಯುಗದ ದುರಂತ ಕಥಾನಕ ಇದಾಗಿದೆ. ಅಂದು ಆ ಜೋಡಿಯನ್ನು ಬಲವಂತವಾಗಿ ಪರಸ್ಪರ ದೂರಗೊಳಿಸಲಾಯಿತಾದರೂ, ತೀವ್ರ ಪ್ರಣಯಾನುರಾಗದ ಅವರ ಪತ್ರಗಳು ಇಂದಿಗೂ ಅಮರವಾಗಿವೆ. ಅದೇ ರೀತಿಯಾಗಿ, ನೆಪೋಲಿಯನ್ ಮತ್ತು ಜಾಸಿಫಿನ್ ಅವರ ಪ್ರಣಯ ಕಥಾನಕವು ನಗರದೊಂದಿಗೆ ಬೆಸೆದುಕೊಂಡಿದೆ. ಪ್ಯಾರಿಸ್‌ಗೆ ಹೊಂದಿಕೊAಡAತೆ ಹೊರವಲಯದ ಷತ್ತು ದಿ ಮೆನ್ವಿಸುದಲ್ಲಿರುವ ಅವರ ನಿವಾಸವು ಅವರಿಬ್ಬರು ಐಷಾರಾಮದಿಂದ ಬದುಕು ಕಳೆದ ತಾಣವಾಗಿದೆ. ಷತ್ತುವು ಈಗ ವಸ್ತುಸಂಗ್ರಹಾಲಯವಾಗಿದ್ದು, ನೆಪೋಲಿಯನ್-ಜಾಸಿಫಿನ್ ಸಂಬAಧದ ರಮ್ಯ ಇತಿಹಾಸದ ಸಂರಕ್ಷಣೆಗೆ ಕೊಡುಗೆ ನೀಡುತ್ತಿದೆ.
ಪ್ಯಾರಿಸ್ ಹೊರತುಪಡಿಸಿದರೆ ಬಿಯರಿಟ್ಜ್ ಮತ್ತೊಂದು ರಮ್ಯ ತಾಣವಾಗಿದೆ. ನೆಪೋಲಿಯನ್‌ನ ಸೋದರ ಅಳಿಯನಾದ ನೆಪೋಲಿಯನ್ III ಹಾಗೂ ಆತನ ಹೆಂಡತಿ ಯೂಜೀನಿ ಅವರು ಬಿಯರಿಟ್ಜ್ ಅನ್ನು ಯೂರೊಪ್ ರಾಜಕುಟುಂಬದ ವಿಹಾರಧಾಮವಾಗಿ ಪರಿವರ್ತಿಸಿದರು. ಅವರಿಗಾಗಿ 1854ರಲ್ಲಿ ನಿರ್ಮಾಣಗೊಂಡ ಹೋಟೆಲ್ ಡು ಪಲೇ ವೈಭವ ಹಾಗೂ ಐಷಾರಾಮದ ಸಂಕೇತವಾಗಿ ಎದ್ದುಕಾಣುತ್ತದೆ. ಇತಿಹಾಸ ಹಾಗೂ ರಮ್ಯತೆಯ ಸಂಗಮವಾದ ಬಿಯರಿಟ್ಜ್ ಪ್ರೇಮಿಗಳಿಗೆ ಮತ್ತೊಂದು ಆಯ್ಕೆಯಾಗಿದೆ.
ಯೂರೊಪ್ ಹೊರತುಪಡಿಸಿ ಜಗತ್ತಿನ ಇನ್ನಿತರ ಕತೆಗಳು ಹಾಗೂ ಪ್ರತೀತಿಗಳೆಡೆಗೆ ಗಮನಹರಿಸೋಣ. ಚೀನಾದ ಮಹಾಗೋಡೆಯು ಜಗತ್ತಿನ ಹೆಗ್ಗುರುತಿನ ಸ್ಥಳಗಳಲ್ಲಿ ಒಂದಷ್ಟೇ ಅಲ್ಲ, ಇದು ಪ್ರತೀತಿಗಳು ಮಡುಗಟ್ಟಿರುವ ತಾಣವೂ ಹೌದು. ತನ್ನ ಪತಿಯ ಅಗಲಿಕೆಯ ನೋವಿನಿಂದ ಮೆಂಗ್ ಜಿಯಾಂಗ್ನು ಸುರಿಸಿದ ಕಣ್ಣೀರಿನಿಂದಾಗಿ ಈ ಮಹಾನ್ ಗೋಡೆಯ ಒಂದಷ್ಟು ಭಾಗ ಕುಸಿದುಹೋಯಿತಂತೆ. ಇದು, ಮೆಂಗ್‌ಳ ಪ್ರೀತಿಯ ಹಾಗೂ ತ್ಯಾಗದ ಪ್ರತೀಕ ಎನ್ನಲಾಗುತ್ತದೆ. ಮಹಾನ್ ಗೋಡೆಯ ವೀಕ್ಷಣೆಗೆ ಆಗಮಿಸುವ ಪ್ರಣಯ ಜೋಡಿಗಳಿಗೆ ಈ ಮನ ಕರಗಿಸುವ ಪ್ರತೀತಿಯು ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ.
ಜೋರ್ಡನ್‌ನ ಪ್ರಾಚೀನ ನಗರವಾದ ಪೆಟ್ರಾವು ಪ್ರೇಮಿಗಳು ನೋಡಲೇಬೇಕಾದ ಮತ್ತೊಂದು ಸ್ಥಳವಾಗಿದೆ. ತಾನು ಪ್ರೀತಿಸಿದ ರಾಜಕುಮಾರಿಗಾಗಿ ಬೆದೋಯೆನ್ ಈ ನಗರವನ್ನು ನಿರ್ಮಿಸಿದ ಎಂಬುದು ಪ್ರತೀತಿ. ನಗರದ ಈ ರಮ್ಯ ಕಥಾನಕವು ಪ್ರವಾಸಿಗರನ್ನು ಇಂದಿಗೂ ಇಲ್ಲಿಗೆ ಸೆಳೆಯುತ್ತಾ ಪ್ರೇಮ ಕಥಾನಕಗಳಿಗೆ ಸ್ಫೂರ್ತಿಯಾಗಿದೆ.
ನಮ್ಮ ಭಾರತದ ತಾಜ್ ಮಹಲ್ ಪ್ರಸ್ತಾಪವಿಲ್ಲದೇ ಪ್ರಣಯಾನುರಾಗದ ತಾಣಗಳ ಪಟ್ಟಿ ಕೊನೆಯಾಗುವುದು ಸಾಧ್ಯವೇ ಇಲ್ಲ ಬಿಡಿ. ಆಗ್ರಾದಲ್ಲಿರುವ ಶ್ವೇತವರ್ಣದ ಅಮೃತಶಿಲೆಯ ಈ ಸಮಾಧಿಯನ್ನು ಷಹಜಹಾನ್ ಚಕ್ರವರ್ತಿಯು ತನ್ನ ಪ್ರೀತಿಯ ಪತ್ನಿಯ ನೆನಪಿನಲ್ಲಿ ‘ಮುಮ್ತಾಜ್ ಮಹಲ್’ ಹೆಸರಿನಲ್ಲಿ ನಿರ್ಮಿಸಿದ. ತಾಜ್ ಮಹಲ್ ಚಿರಂತನ ಪ್ರೀತಿಯ ಸಂಕೇತವಾಗಿದ್ದು, ಸುಂದರ ಹಾಗೂ ಕಾಲಾತೀತವಾದ ಕಾಣಿಕೆಯಾಗಿದೆ. ಇದರ ಭವ್ಯತೆ ಹಾಗೂ ಸೂಕ್ಷ್ಮ ಕುಸುರಿ ಕಲೆಯಿಂದಾಗಿ ಪ್ರೇಮಿಗಳು ಭೇಟಿ ನೀಡಲೇಕಾದ ಸ್ಥಳವಾಗಿದೆ. ಆಗ್ರಾವು ತನ್ನ ಶ್ರೀಮಂತ ಇತಿಹಾಸ ಮತ್ತು ಮಂತ್ರಮುಗ್ಧಗೊಳಿಸುವ ತಾಜ್‌ನ ನೋಟಗಳಿಂದಾಗಿ ಪ್ರಣಯಾನುಭವಗಳನ್ನು ಮೆಲುಕು ಹಾಕಲು ಭಾರತದಲ್ಲಿ ಸೂಕ್ತ ತಾಣವಾಗಿದೆ.
ನೀವು ಹೊರದೇಶದ ಪ್ರವಾಸದ ಆಲೋಚನೆಯಲ್ಲಿರಬಹುದು ಅಥವಾ ಈ ದೇಶದಲ್ಲೇ ವಿಶಿಷ್ಟ ಸ್ಥಳಕ್ಕೆ ತೆರಳಿ ಪ್ರಣಯಾನುಭೂತಿಗೆ ಅನುಭವಿಸಲು ಹಂಬಲಿಸುತ್ತಿರಬಹುದು. ಅದೇನೇ ಇರಲಿ, ಬರುವ ವ್ಯಾಲೆಂಟೈನ್ ದಿನದ ಸಂಭ್ರಮಾಚರಣೆಗೆ ತಾಣಗಳ ಕೊರತೆಯಂತೂ ಇಲ್ಲವೇ ಇಲ್ಲ. ರಮ್ಯ ಭಾವನೆಗಳು ಆವರಿಸುವ ವೆರೋನಾದ ಬೀದಿಗಳಿಂದ ಹಿಡಿದು ತಾಜ್ ಮಹಲ್‌ವರೆಗಿನ ಅದ್ಭುತದವರೆಗೆ ಎಲ್ಲೆಡೆಗಳಲ್ಲೂ ಪ್ರೀತಿಯ ಭಾವನೆ ಮನೆಮಾಡಿದೆ. ನಿಮ್ಮ ಪಾದಗಳು ಪ್ರಣಯಕ್ಕೆ ಹೆಸರಾದ ಪ್ರಪಂಚದ ಅತ್ಯಂತ ಆಕರ್ಷಕ ತಾಣಗಳನ್ನು ಸ್ಪರ್ಶಿಸುವಂತಾಗಲಿ ಹಾಗೂ ನಿಮ್ಮ ಪ್ರಣಯ ಕಥಾನಕ ನಿರೂಪಿಸಲು ನೆರವಾಗುವಂತಹ ಪ್ರವಾಸ ಆತಿಥ್ಯ ನೀಡುವ ಅವಕಾಶ ವೀಣಾ ವರ್ಲ್ಡ್ ಗೆ ಲಭ್ಯವಾಗಲಿ.
Post your Comment
Please let us know your thoughts on this story by leaving a comment.