Published in the Sunday Vijay Karnataka on 22 September, 2024
ಪ್ರತಿಯೊಬ್ಬರೂ ತಮಗೆ ಎಷ್ಟು ಸಾಧ್ಯವೋ ಅಷ್ಟು ಗರಿಷ್ಠ ಪ್ರಮಾಣದಲ್ಲಿ ಮುಂಬರುವ ಪೀಳಿಗೆಗಾಗಿ ಕೊಡುಗೆ ನೀಡುತ್ತಿದ್ದಾರೆ. ನಾವು ಕೂಡ ಅದನ್ನೇ ಅನುಸರಿಸಬೇಕು.
ನೀವು ಎಂದಾದರೂ ಶಿಮ್ಲಾದ ಮಾಲ್ ರಸ್ತೆಯಲ್ಲಿ ಅಡ್ಡಾಡಿದ್ದೀರಾ? ಅದೊಂದು ಅದ್ಭುತ ಅನುಭವ. ಒಬ್ಬ ಟೂರ್ ಮ್ಯಾನೇಜರ್ ಆಗಿ ಪ್ರವಾಸಿಗರನ್ನು ನಮ್ಮ ಪ್ರವಾಸದ ಭಾಗವಾಗಿ ಈ ಮಾಲ್ ರಸ್ತೆಗೆ ಕರೆದುಕೊಂಡು ಹೋಗುವುದು ನನಗೆ ಯಾವಾಗಲೂ ಸಂತಸದ ವಿಷಯವೇ ಸರಿ. ಇಂತಹ ಅವಕಾಶಕ್ಕಾಗಿ, ಮೈಮನಸ್ಸುಗಳನ್ನು ಹುರುಪುಗೊಳಿಸುವ ಅಲ್ಲಿನ ನಡಿಗೆಗಾಗಿ ನಾನು ಎದುರುನೋಡುತ್ತಲೇ ಇರುತ್ತೇನೆ. ಹಿಂದಿನಂತೆಯೇ ಈಗಲೂ ಈ ರಸ್ತೆಯು ಬದಲಾಗದೆ ಹಾಗೆಯೇ ಉಳಿದುಕೊಂಡಿದೆ. ಈ ಮಾಲ್ ರಸ್ತೆಯಲ್ಲಿ ನಡೆದಾಡಿದಾಗ ಆಗುವ ಖುಷಿಯ ಅನುಭವವೇ ನೈನಿತಾಲ್, ಡಾರ್ಜಿಲಿಂಗ್, ಊಟಿ, ಮುಸ್ಸೋರಿ, ಪಂಚಮರ್ಹಿ, ಶಿಲ್ಲಾಂಗ್, ಡಾಲ್‌ಹೌಸಿ, ಕೊಡೈಕೆನಾಲ್ ಹಾಗೂ ಮಾತೇರನ್ ನಂತಹ ಗಿರಿಧಾಮಗಳ ಮುಖ್ಯ ಮಾರುಕಟ್ಟೆಗಳಲ್ಲಿ ಅಡ್ಡಾಡಿದಾಗಲೂ ಉಂಟಾಗುತ್ತದೆ. ಈ ಬಹುತೇಕ ಸ್ಥಳಗಳ ಮಾಲ್ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಿ ಜನರಿಗೆ ಮುಕ್ತವಾಗಿ ಓಡಾಡಲು ಅವಕಾಶ ಮಾಡಿಕೊಡಲಾಗಿದೆ. ಸುಮಾರು 150 ವರ್ಷಗಳ ಕಾಲ ನಮ್ಮನ್ನು ಆಳಿದ ಬ್ರಿಟಿಷರು ಕೆಲವು ನಿಧಿಗಳನ್ನು ಕೂಡ ನಮಗೆ ಬಿಟ್ಟುಹೋಗಿದ್ದಾರೆ. ಹಲವಾರು ಗಿರಿಧಾಮಗಳು ನಿರ್ಮಾಣಗೊಂಡಿದ್ದು ಅವರ ಅವಧಿಯಲ್ಲೇ. ಬಿಸಿಲಿನ ತಾಪದ ಪರಿಣಾಮ ತಗ್ಗಿಸಲು ಈ ಗಿರಿಧಾಮಗಳನ್ನು ಕಲೋನಿಯಲ್ ಶೈಲಿಯಲ್ಲಿ ನಿರ್ಮಿಸಲಾಗಿದೆ. ಸದ್ಯ, ಆ ಕಾಲದಲ್ಲಿ ನಿರ್ಮಾಣಗೊಂಡ ಅಂತಹ ಗಿರಿಧಾಮಗಳು ನಮಗೆ ಬೇಸಿಗೆ ಋತುವಿನಲ್ಲಿ ವಿಶ್ರಾಂತಿಯನ್ನು ಹಾಗೂ ಅನುಕೂಲಗಳನ್ನು ಒದಗಿಸುತ್ತಿವೆ.
ರಾಷ್ಟ್ರಪತಿ ಭವನದಲ್ಲಿ ನಡೆಯುವ ಗಾರ್ಡನ್ ಫೆಸ್ಟಿವಲ್‌ನಲ್ಲಿ ಪಾಲ್ಗೊಳ್ಳಲು ಕೋರಿ ನನಗೆ ಕಳೆದ ವಾರ ಆಹ್ವಾನ ಪತ್ರಿಕೆ ಬಂತು. ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಲು ಭಾರತೀಯರಿಗೆ ಫೆಬ್ರುವರಿ 2ರಿಂದ ಮಾರ್ಚ್ 31ರವರೆಗಿನ ಅವಧಿಯಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಅವಕಾಶವಿದ್ದು, ಗೇಟ್ 35ರ ಮೂಲಕ ಪ್ರವೇಶಿಸಬೇಕಾಗುತ್ತದೆ. ಇದಕ್ಕೆ ಉಚಿತ ಪ್ರವೇಶಾವಕಾಶವಿದ್ದರೂ ಮುಂಗಡ ನೋಂದಣಿ ಅಗತ್ಯವಿರುತ್ತದೆ. ಬ್ರಿಟಿಷರ ಆಳ್ವಿಕೆ ಸಂದರ್ಭದಲ್ಲಿ ಮೂಲತಃ ವೈಸ್‌ರಾಯ್ ಅವರ ನಿವಾಸವಾಗಿ ನಿರ್ಮಾಣಗೊಂಡ ರಾಷ್ಟ್ರಪತಿ ಭವನವು 320 ಎಕರೆಯಷ್ಟು ಪ್ರದೇಶದಲ್ಲಿ ವ್ಯಾಪಿಸಿದ್ದು, 340 ಕೊಠಡಿಗಳು ಮತ್ತು ಹಲವಾರು ಭವ್ಯ ಸಭಾಂಗಣಗಳನ್ನು ಹೊಂದಿದೆ. ಇಟಲಿಯ ಕ್ವಿರಿನಲ್ ಅರಮನೆ ಬಿಟ್ಟರೆ ಯಾವುದೇ ಸರ್ಕಾರದ ಮುಖ್ಯಸ್ಥರೊಬ್ಬರಿಗೆ ಮೀಸಲಾದ ಪ್ರಪಂಚದ ಎರಡನೇ ದೊಡ್ಡ ಭವನ ಇದಾಗಿದೆ.
ಕೋಲ್ಕತ್ತದಲ್ಲಿನ ವಿಕ್ಟೋರಿಯಾ ಸ್ಮಾರಕವು ಬ್ರಿಟಿಷರ ಕಾಲದ ಮತ್ತೊಂದು ಅದ್ಭುತವಾಗಿದೆ. ಅದೇ ರೀತಿಯಾಗಿ, ದೆಹಲಿಯಲ್ಲಿನ ಸಂಸತ್ ಭವನ ಮತ್ತು ಮುಂಬೈನ ಗೇಟ್ ವೇ ಆಫ್ ಇಂಡಿಯಾ ಕೂಡ ಬ್ರಿಟಿಷರ ಆಡಳಿತದ ಅವಧಿಯಲ್ಲೇ ವಿನ್ಯಾಸಗೊಂಡ ಐತಿಹಾಸಿಕ ಹೆಗ್ಗುರುತಿನ ತಾಣಗಳಾಗಿವೆ. ಮುಂಬೈ, ಕೋಲ್ಕತ್ತ, ಚೆನ್ನೈ ಮತ್ತು ಬೆಂಗಳೂರಿನಂತಹ ನಗರಗಳು ಕೂಡ ಅವರ ಕಾಲದಲ್ಲಿ ಅಭಿವೃದ್ಧಿಗೊಂಡವು. ಅಮೆರಿಕ, ರಷ್ಯಾ, ಚೀನಾದ ನಂತರ ಜಗತ್ತಿನಲ್ಲಿ ನಾಲ್ಕನೇ ಅತ್ಯಂತ ದೊಡ್ಡದಾದ ನಮ್ಮ ರೈಲ್ವೆ ಜಾಲದ ನಿರ್ಮಾಣ ಚಾಲನೆ ಪಡೆದಿದ್ದು ಕೂಡ ಆ ಸಂದರ್ಭದಲ್ಲೇ. ಪ್ರಸ್ತುತ ಪ್ರಪಂಚದಲ್ಲಿ ಅತ್ಯಂತ ಮಹತ್ವವೆಂದು ಪರಿಗಣಿತವಾಗುವ ಆಡಳಿತ, ಆಧುನಿಕ ಶಿಕ್ಷಣ, ಆಸ್ಪತ್ರೆಗಳು ಮತ್ತು ವಹಿವಾಟು ಜಾಲಗಳನ್ನು ಅವರು ಇಲ್ಲಿ ಪರಿಚಯಿಸಿದರು. ಇವೆಲ್ಲವುಗಳಿಂದಾಗಿ ಬ್ರಿಟಿಷರಿಗೆ ಲಾಭವಾಗಿರಬಹುದು ಹಾಗೂ ಈ ಬಗ್ಗೆ ವಿಭಿನ್ನ ಅಭಿಪ್ರಾಯಗಳು ಇರಬಹುದು. ಆದರೆ ಚರಿತ್ರೆಯನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಏನಿದ್ದರೂ ಚರಿತ್ರೆಯಿಂದ ಪಾಠ ಕಲಿಯಬಹುದು ಅಷ್ಟೆ. ನಮ್ಮ ಮೇಲೆ ದಬ್ಬಾಳಿಕೆ ನಡೆಸಿದವರಿಗೆ `ಧನ್ಯವಾದ' ಗಳನ್ನು ಸಲ್ಲಿಸಿದಂತೆ ಭಾಸವಾದರೂ ಬ್ರಿಟಿಷರು ನಮಗೆ ನೀಡಿದ ಕೆಲವು ಕೊಡುಗೆಗಳ ಬಗ್ಗೆ ಮೆಚ್ಚುಗೆಯನ್ನೂ ವ್ಯ ಕ್ತಪಡಿಸಬಹುದು.
ಭಾರತದ ವಾಸ್ತುಶಿಲ್ಪ ಹಾಗೂ ಸಾಂಸ್ಕೃತಿಕ ಪರಂಪರೆಯು ಸಮೃದ್ಧವಾಗಿದೆ. ದೆಹಲಿಯ ಕೆಂಪುಕೋಟೆ, ಆಗ್ರಾದ ತಾಜ್ ಮಹಲ್, ರಜಪೂತರ ಭದ್ರನೆಲೆಯಾಗಿದ್ದ ಜೋಧಪುರದ ಮೆಹ್ರಾನಗಡ ಕೋಟೆ ಹಾಗೂ ಜೈಸಲ್ಮೇರ್‌ನ ಗೋಲ್ಡನ್ ಫೋರ್ಟ್‌ಗಳು ಇದಕ್ಕೆ ಕಣ್ಣೆದುರಿನ ನಿದರ್ಶನಗಳಾಗಿವೆ. ಜೈಪುರದ ಭವ್ಯ ಅಮೀರ್ ಕೋಟೆ, ಚಿತ್ತೋರ್ ಗಡ ಮತ್ತು ಕುಂಭಾಲ್ ಗಡದ ಕೋಟೆಗಳು, ಹೈದರಾಬಾದಿನ ಫಾಲಕ್ ನುಮಾ ಅರಮನೆ, ವಿಶ್ವಪಾರಂಪರಿಕ ತಾಣಗಳಾದ ಹಂಪಿ, ಖಜುರಾಹೊ ದೇವಸ್ಥಾನಗಳು, ಕೊನಾರ್ಕ್ ನ ಸೂರ್ಯ ದೇವಾಲಯ, ಸಾಂಚಿ ಸ್ತೂಪ, ಅಜಂತಾ ಮತ್ತು ಎಲ್ಲೋರಾ ಗುಹೆಗಳು ಮತ್ತು ಮದುರೆಯ ಮೀನಾಕ್ಷಿ ದೇವಸ್ಥಾನಗಳು ನಮ್ಮ ಇತಿಹಾಸದ ಸಂಪತ್ತಿಗೆ ಸಾಕ್ಷಿಗಳಾಗಿವೆ. ನಳಂದಾ ವಿಶ್ವವಿದ್ಯಾಲಯ ಮತ್ತು ಮುಂಬೈನ ವಿಕ್ಟೋರಿಯಾ ಟರ್ಮಿನಸ್ ನ ಅವಶೇಷಗಳು ನಮ್ಮ ಪೂರ್ವಿಕರು ನಮಗೆ ಬಿಟ್ಟುಹೋದ ಅಮೂಲ್ಯ ಸಂಪತ್ತಿನ ಒಂದಂಶ ಮಾತ್ರವೇ ಆಗಿವೆ. ಸಾಮ್ರಾಟ ಅಶೋಕನಿಂದ ಹಿಡಿದು ಮೊಘಲ್ ದೊರೆಗಳು, ಛತ್ರಪತಿ ಶಿವಾಜಿ ಮಹಾರಾಜ್, ಚಂಡೇಲಾ ಸಾಮ್ರಾಜ್ಯ ಮುನ್ನಡೆಸಿದವರು, ಮೈಸೂರು ಮಹಾರಾಜರು, ಪಾಂಡ್ಯ ರಾಜರು ಹೀಗೆ ಪ್ರತಿಯೊಬ್ಬರೂ ಮುಂಬರುವ ಪೀಳಿಗೆಯವರಿಗೆ ಬಳುವಳಿಗಳನ್ನು ಬಿಟ್ಟು ಹೋಗಿದ್ದಾರೆ. ಈ ಎಲ್ಲರಿಗೂ ನಾವು ಆಭಾರಿಗಳಾಗಿದ್ದೇವೆ.
ಮುಂಬೈನಲ್ಲಿ ಕಳೆದ ವಾರ ನಡೆದ ಪ್ರಮುಖ ಪ್ರವಾಸ ಪ್ರದರ್ಶನ ಕಾರ್ಯಕ್ರಮಕ್ಕೆ ಪ್ರಪಂಚದ ಎಲ್ಲಾ ಕಡೆಗಳಿಂದ ಟ್ರ್ಯಾವೆಲ್ ಏಜೆಂಟರು ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ನಮ್ಮ ಕಚೇರಿ ಕೂಡ ಎಡೆಬಿಡದ ಚಟುವಟಿಕೆಗಳ ತಾಣವಾಗಿತ್ತು. ಇದು ವೀಣಾ ವರ್ಲ್‌್ಡ ಟೀಮ್ ಸೇರಿದಂತೆ ನಮ್ಮ ಪಾಲುದಾರರನ್ನು ಭೇಟಿಯಾಗಲು ಸುವರ್ಣಾವಕಾಶವನ್ನೂ ಒದಗಿಸಿತ್ತು. ಇದೇ ವೇಳೆ, ಒಂದು ದಿನ ನಾವು ಕಾಶ್ಮೀರ ಪ್ರವಾಸದ ಯೋಜನೆ ರೂಪಿಸಿದ್ದರಿಂದ ನಮ್ಮ ಕಚೇರಿಯು ಕಾಶ್ಮೀರಿ ಹೋಟೆಲ್ ಉದ್ಯಮಿಗಳು, ಟ್ರ್ಯಾನ್‌್ಸ ಪೋರ್ಟರ್‌ಗಳಿಂದ ತುಂಬಿಹೋಗಿತ್ತು. ಅಲ್ಲಿಗೆ ಬಂದಿದ್ದವರೆಲ್ಲಾ ಇತ್ತೀಚಿನ ವರ್ಷಗಳಲ್ಲಿ ಕಾಶ್ಮೀರ ಹೇಗೆ ಬದಲಾಗಿದೆ ಎಂಬುದರ ಬಗ್ಗೆ ತಿಳಿಸುತ್ತಾ ಹೋದರು. ಕಳೆದ ಐದಾರು ವರ್ಷಗಳಿಂದ ಕಂಡುಬರುತ್ತಿರುವ ಈ ಬದಲಾವಣೆ ಬಗ್ಗೆ ನೇರವಾಗಿ ಅಲ್ಲಿನವರಿಂದಲೇ ಕೇಳಿ ತಿಳಿಯೋಣವೆಂದು ನಾನು, “ಕಾಶ್ಮೀರ ಈಗ ಹೇಗಿದೆ?”, “ನಿಮಗೆ ನಿಜವಾಗಿಯೂ ಬದಲಾವಣೆ ಕಂಡುಬಂದಿದೆಯೇ?” ಹೀಗೆ ಕೆಲವಾರು ಪ್ರಶ್ನೆಗಳನ್ನು ಕೇಳುತ್ತಾ ಹೋದೆ. ಆಗ ಅವರು ನೀಡಿದ ಪ್ರತಿಕ್ರಿಯೆಗಳು ನಿರೀಕ್ಷೆಗೂ ಮೀರಿ ಧನಾತ್ಮಕವಾಗಿದ್ದವು. “ಈಗ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ, ಯಾವುದೇ ಸಮಸ್ಯೆಗಳಿಲ್ಲ”, ಪ್ರವಾಸೋದ್ಯಮ ಚಟುವಟಿಕೆಗಳು ಹೆಚ್ಚಾಗಿವೆ. ಯುವಕರು ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಲ್ಲು ತೂರಾಟ ಪ್ರಕರಣಗಳು ನಿಂತಿವೆ”, “ನೀವು ಈಗ ದಾಲ್ ಸರೋವರವನ್ನು ನೋಡಿದರೆ, ಇದು ಅದೇ ಸರೋವರ ಎಂದು ನಂಬಲಾರಿರಿ. ಅದು ಈಗ ಅಷ್ಟು ಪರಿಶುಭ್ರವಾಗಿದೆ” ಎಂಬ ಅಭಿಪ್ರಾಯಗಳು ರಿಂಗಣಿಸಿದವು. ಇದೇ ಪ್ರಗತಿ ಮುಂದುವರಿದರೆ ಕಾಶ್ಮೀರವು ಶೀಘ್ರವೇ ಪ್ರಪಂಚದ ಅತ್ಯುತ್ತಮ ಪ್ರವಾಸೋದ್ಯಮ ತಾಣಗಳಲ್ಲಿ ಒಂದಾಗಲಿದೆ. ಸರ್ಕಾರದ ಪ್ರಯತ್ನಗಳು ಧನಾತ್ಮಕ ಪರಿಣಾಮ ಬೀರಿವೆ. ಇದಕ್ಕಾಗಿ ನಾವು ನಮ್ಮ ಬೆಂಬಲ ಹಾಗೂ ಸದ್ಭಾವನೆಗೆ ಉತ್ತೇಜನವನ್ನು ಮುಂದುವರಿಸಬೇಕಾಗುತ್ತದೆ.
ಕೋವಿಡ್ ಮಹಾಮಾರಿಯು ನಾವು ಊಹಿಸದ ರೀತಿಯಲ್ಲಿ ನಮ್ಮೆಲ್ಲರನ್ನೂ ಪರೀಕ್ಷಿಸಿತು. ಆದಾಯ ನಿಂತುಹೋದರೂ ಮನೆ ಸಾಲದ ಕಂತುಗಳು ನಿಲ್ಲದೆ ಮುಂದುವರಿದವು. ಬ್ಯಾಂಕುಗಳು ಒಂದಷ್ಟು ಮಟ್ಟಿಗೆ ನೀಡಿದ ಒತ್ತಾಸೆಯು ಪೂರ್ವಿಕರ ಅಥವಾ ತಾವೇ ಸಂಪಾದಿಸಿ ಕಟ್ಟಿಸಿಕೊಂಡ ಮನೆ ಹೊಂದಿದ್ದವರಿಗೆ ಆ ಸಂದರ್ಭದಲ್ಲಿ ನೆರವಿಗೆ ಬಂತು. ಆ ಅವಧಿಯಲ್ಲಿ, ಪೂರ್ವಜರಿಂದ ಬಂದ ಮನೆ ಹೊಂದಿದ್ದವರು ತಮ್ಮ ಹಿರಿಯರ ದೂರದೃಷ್ಟಿಯನ್ನು ಮನಸ್ಸಿನಲ್ಲೇ ನೆನೆದು ಧನ್ಯವಾದಗಳನ್ನು ಸಲ್ಲಿಸಿರುತ್ತಾರೆ ಎಂಬುದರಲ್ಲಿ ಅನುಮಾನವೇ ಇಲ್ಲ. ಒಂದೊಮ್ಮೆ ಯಾರಾದರೂ ಆಗ ತಮ್ಮ ಪೂರ್ವಿಕರಿಗೆ ಕೃತಜ್ಞತೆ ಸಲ್ಲಿಸಿರದಿದ್ದರೆ ಈಗಲೂ ಅದನ್ನು ಮಾಡಬಹುದು. ತುಂಬಾ ತಡವಾಯಿತೆಂದು ಧನ್ಯವಾದಗಳನ್ನು ಸಲ್ಲಿಸದೆ ಹಾಗೆಯೇ ಇರಬಾರದು. ಆದರೆ, ಯಾವುದೇ ಆಸ್ತಿ ಇಲ್ಲದವರು ಅದಕ್ಕಾಗಿ ತಮ್ಮ ಪೂರ್ವಿಕರನ್ನು ದೂಷಿಸಬಾರದು. ಪ್ರತಿಯೊಬ್ಬರೂ ಮುಂಬರುವ ತಲೆಮಾರಿನವರಿಗಾಗಿ ತಮಗೆ ಎಷ್ಟು ಸಾಧ್ಯವೋ ಅಷ್ಟು ಕೊಡುಗೆ ನೀಡಿರುತ್ತಾರೆ. ನಾವು ಕೂಡ ಅದನ್ನೇ ಮುಂದುವರಿಸಬೇಕು.
ಇತ್ತೀಚಿನ ವರ್ಷಗಳಲ್ಲಿ ದಂಪತಿಗಳು ಮಕ್ಕಳು ಬೇಡವೆಂದು ನಿರ್ಧರಿಸುವ ಪ್ರವೃತ್ತಿಯ ಬಗ್ಗೆ ನಾನು ಆಗಾಗ ಕೇಳುತ್ತಿರುತ್ತೇನೆ. ಕೆಲವರು ಇಂತಹ ನಿರ್ಧಾರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಬಹುದು ಅಥವಾ ಇದಕ್ಕೆ ಸಕಾರಣಗಳು ಇವೆ ಎನ್ನಬಹುದು. ಆದರೆ ನನ್ನ ಮಟ್ಟಿಗೆ ಹೇಳುವುದಾದರೆ, ದಂಪತಿಗಳ ಇಂತಹ ನಿರ್ಧಾರವು ಪರಮ ಸ್ವಾರ್ಥದ ಮನಃಸ್ಥಿತಿಯಾಗಿದೆ. ನಾವು ಬದುಕನ್ನು ಹಾಗೂ ಅದರ ಖುಷಿಗಳನ್ನು ಅನುಭವಿಸಿದ್ದೇವೆ. ಈ ಪ್ರಪಂಚಕ್ಕೆ ಹೊಸ ಜೀವವನ್ನು ಕರೆತರುವುದು ಹಾಗೂ ಆ ಜೀವವೂ ಇದನ್ನು ಅನುಭವಿಸಲು ಅವಕಾಶ ನೀಡುವುದು ನಮ್ಮ ಕರ್ತವ್ಯವಾಗಿರುತ್ತದೆ. ಕುಟುಂಬಕ್ಕೆ ಒಂದು ಮಗು ಇದ್ದರೆ ಸಾಲದು, ಕನಿಷ್ಠ ಇಬ್ಬರು ಮಕ್ಕಳಾದರೂ ಇರಬೇಕು. ಸರ್ಕಾರವು ನೀತಿಯನ್ನು ಹೊಂದಿದೆಯೋ ಅಥವಾ ಇಲ್ಲವೋ ಎಂಬುದನ್ನು ಬದಿಗಿರಿಸಿ, ಎರಡನೇ ಮಗು ಹೊಂದುವ ಕುಟುಂಬಕ್ಕೆ ಪ್ರೋತ್ಸಾಹಕ ಭತ್ಯೆಗಳನ್ನು ನೀಡುವ ಬಗ್ಗೆ ಪರಿಗಣಿಸಬೇಕು. ಭಾರತವು ಯುವಜನತೆಯಿರುವ ದೇಶವಾಗಿ ಮುಂದುವರಿಯಬೇಕು. ಈಗ ನಮ್ಮ ಭಾರತೀಯ ಪ್ರಜೆಯ ಸರಾಸರಿ ವಯಸ್ಸು 28 ವರ್ಷಗಳು. ಇದು ಯೂರೋಪಿನಲ್ಲಿ 45ರಿಂದ 50ರಲ್ಲಿದ್ದರೆ, ಇಂಗ್ಲೆಂಡಿನಲ್ಲಿ 40, ಜಪಾನ್‌ನಲ್ಲಿ 50, ಆಸ್ಟ್ರೇಲಿಯಾದಲ್ಲಿ 38, ಕೆನಡಾದಲ್ಲಿ 41 ಹಾಗೂ ಚೀನಾದಲ್ಲಿ 40 ವರ್ಷಗಳಾಗಿವೆ. ಆದರೆ, ನಮ್ಮ ನೆರೆಯ ಪಾಕಿಸ್ತಾನ ಹಾಗೂ ಅದಕ್ಕೆ ಹೊಂದಿಕೊಂಡ ಅಫಘಾನಿಸ್ತಾನದಲ್ಲಿನ ಪ್ರಜೆಗಳ ಸರಾಸರಿ ವಯಸ್ಸು ನಮ್ಮಲ್ಲಿರುವುದಕ್ಕಿಂಡ ಕಡಿಮೆ ಇದೆ. ಯಾವುದೇ ದೇಶವೊಂದರ ಶಕ್ತಿಯು ಅಲ್ಲಿನ ಯುವಜನತೆಯಲ್ಲಿ ಅಡಗಿರುತ್ತದೆ. ಇದನ್ನು ಮನಸ್ಸಿನಲ್ಲಿರಿಸಿಕೊಂಡು ನಾವು ನಮ್ಮ ಭವಿಷ್ಯದ ಪೀಳಿಗೆಗಳನ್ನು ಪೊರೆಯಬೇಕಾಗುತ್ತದೆ.
ಅದೊಂದು ದಿನ ನಾನು ಮಲೇಷ್ಯಾ ಏರ್‌ಲೈನ್‌್ಸನಲ್ಲಿ ಆಗ್ನೇಯ ಏಷ್ಯಾ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾ ವ್ಯಾಪ್ತಿಯ ಪ್ರಾದೇಶಿಕ ಮ್ಯಾನೇಜರ್ ಆಗಿರುವ ಶ್ರೀ ಅಮಿತ್ ಮೆಹ್ತಾ ಅವರೊಂದಿಗೆ ಊಟ ಮಾಡಿದೆ. ಪಶ್ಚಿಮ ಭಾರತ ವ್ಯಾಪ್ತಿಯ ಸೇಲ್‌್ಸ ಮ್ಯಾನೇಜರ್ ಎಂ.ಕೃಷ್ಣ ಅವರೂ ಇದ್ದರು. ದಿನನಿತ್ಯದ ವಿಷಯಗಳ ಬಗ್ಗೆ ಮಾತುಕತೆ ನಡೆಯುತ್ತಿದ್ದಾಗ ಶ್ರೀ ಅಮಿತ್ ಅವರು, “ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ನಾನು ನನ್ನ ಕೈಗಳನ್ನು ಜೋಡಿಸಿ ಮತ್ತೊಂದು ದಿನವನ್ನು ನನಗೆ ಕರುಣಿಸಿದ್ದಕ್ಕಾಗಿ ದೇವರಿಗೆ ನಮಸ್ಕರಿಸುತ್ತೇನೆ” ಎಂದಿದ್ದು ನನ್ನ ಮನಸ್ಸನ್ನು ತೀವ್ರವಾಗಿ ನಾಟಿತು. ಹೌದು, ನಾವು ಪ್ರತಿ ಕ್ಷಣದ ಇರುವಿಕೆಗಾಗಿ ಕೃತಜ್ಞರಾಗಿರಬೇಕು. ಮುಂಬೈನ ವಾಹನ ದಟ್ಟಣೆ ಅನಿಶ್ಚಿತವಾಗಿರಬಹುದು. ಕೆಲವು ಸಲ ನಾವು 15 ನಿಮಿಷಗಳಲ್ಲೇ ಮನೆಯನ್ನು ತಲುಪಿಬಿಡುತ್ತೇವೆ. ಇನ್ನು ಕೆಲವೊಮ್ಮೆ ರಸ್ತೆಗಳನ್ನು ಅಗೆದ ಕಾರಣಕ್ಕೋ ಮತ್ತೇನಕ್ಕೋ ಒಂದು ಗಂಟೆಗೂ ಹೆಚ್ಚು ಸಮಯ ಹಿಡಿಯಬಹುದು. ಆಗ ಇದ್ದಕ್ಕಿದ್ದಂತೆ ನಿಮಗೆ ಥಟ್ಟನೆ, “ಮುಂಬೈನ ಉಜ್ವಲ ಭವಿಷ್ಯಕ್ಕಾಗಿ” ಎಂಬ ಫಲಕ ಕಣ್ಣಿಗೆ ಬಿದ್ದು, ಮನಸ್ಸು ಸಮಾಧಾನಗೊಳ್ಳುತ್ತದೆ.
Post your Comment
Please let us know your thoughts on this story by leaving a comment.