Published in the Sunday Vijay Karnataka on 20 October, 2024
----ನನಗೆ ಅವರು ತಿಳಿಸದೇ ಹೋಗಿದ್ದರೆ ಪ್ರಾಯಶಃ ನಾನು ಅದನ್ನು ಗಮನಿಸುತ್ತಲೇ ಇರಲಿಲ್ಲ ಹಾಗೂ ಇನ್ನಷ್ಟು ಒಳ್ಳೆಯ ಮನಃಸ್ಥಿತಿಯಲ್ಲಿರುತ್ತಿದ್ದೆ.
ನಮ್ಮ ಚಿಕ್ಕ ಮಗ ರಾಜ್‌ನನ್ನು ನೋಡಲೆಂದು ನಾನು ಇದೇ ಫೆಬ್ರುವರಿಯಲ್ಲಿ ಸ್ಯಾನ್‌ಫ್ರಾನ್ಸಿಸ್ಕೊಗೆ 10 ದಿನಗಳ ಅವಧಿಯ ಭೇಟಿ ಕೊಟ್ಟಿದ್ದೆ. ಅದು ಅಲ್ಪಾವಧಿಯ ಪ್ರವಾಸವಾಗಿದ್ದರೂ ಎಲ್ಲವೂ ಸುಸೂತ್ರವಾಗಿ ನಡೆಯಿತು. ಯಾವಾಗ ಸಮಯದ ಒತ್ತಡವಿರುತ್ತದೋ ಆಗ ನಾವು ಹೆಚ್ಚು ಯೋಜನಾಬದ್ಧರಾಗುತ್ತೇವೆ ಎಂಬುದು ಅಚ್ಚರಿಯ ವಿಷಯವೇ ಹೌದು. ಇದೇ ಕಾರಣಕ್ಕಾಗಿ ನಾನು ಪ್ರವಾಸಗಳನ್ನು ಆನಂದಿಸುತ್ತೇನೆ. ಅಂದರೆ, ಅದು ನನ್ನ ಚಟುವಟಿಕೆಗಳನ್ನು ಹೆಚ್ಚು ದಕ್ಷತೆಯಿಂದ ನಿರ್ವಹಿಸಲು ಸಹಕಾರಿಯಾಗುತ್ತದೆ. ನಾನು ಮನೆಯಲ್ಲಿದ್ದಾಗ ಯಾವ ಕೆಲಸಗಳನ್ನು ಮಾಡಲು ಅಧಿಕ ಸಮಯ ಹಿಡಿಯುತ್ತಿತ್ತೋ ಅವುಗಳನ್ನು ಇಂತಹ ಪ್ರವಾಸದ ವೇಳೆ ಶೀಘ್ರವಾಗಿ ಮಾಡಿ ಮುಗಿಸಲು ಸಾಧ್ಯವಾಗುತ್ತದೆ. ಆ ಹತ್ತು ದಿನಗಳಲ್ಲಿ ಕೆಲವೊಂದು ಕೆಲಸಗಳು ನನಗಾಗಿ ಕಾಯ್ದಿದ್ದವಾದರೂ ರಾಜ್ ಜೊತೆ ಕಾಲ ಕಳೆಯಲು ಕೂಡ ಸಾಕಷ್ಟು ಸಮಯ ಸಿಗುತ್ತದೆಂಬುದೂ ನನಗೆ ಗೊತ್ತಿತ್ತು.
ವಿಮಾನ ಪ್ರಯಾಣದ 16 ಗಂಟೆಗಳನ್ನು ಜಾಣ್ಮೆಯಿಂದ ಬಳಸಿಕೊಳ್ಳಬೇಕೆಂದು ನಾನು ಆಲೋಚಿಸಿದ್ದೆ. ಮುಂಬರುವ ವಾರ ದಿನಪತ್ರಿಕೆಗೆ ನೀಡಬೇಕಿದ್ದ ಎರಡು ನಿಗದಿತ ಲೇಖನಗಳನ್ನು ಬರೆದು, ಒಂದೆರಡು ಒಳ್ಳೆಯ ಸಿನಿಮಾಗಳನ್ನು ನೋಡಿದ ಮೇಲೂ ಏಳೆಂಟು ಗಂಟೆಗಳ ಸಖತ್ ನಿದ್ದೆಯನ್ನೂ ಮಾಡಬಹುದೆಂದು ಯೋಜನೆ ರೂಪಿಸಿಕೊಂಡಿದ್ದೆ. ಇದನ್ನೇ ಮನಸ್ಸಿನಲ್ಲಿರಿಸಿಕೊಂಡು ನಾನು ವಿಮಾನ ನಿಲ್ದಾಣಕ್ಕೆ ಹೊರಟೆ. ವಿಮಾನದ ಮುಂಗಡ ಟಿಕೆಟ್ ಕಾಯ್ದಿರಿಸುವ ತಂಡದ ಸುಪರ್ಣಾ ಜಾಧವ್ ಅವರು ನನಗೆ ಮೊದಲ ಸಾಲಿನಲ್ಲಿ ಸೀಟು ಬುಕ್ ಮಾಡಿದ್ದರು. ನಾನು ಸ್ವತಂತ್ರ ಟಿಕೆಟ್ (ಬಿಡಿಯಾಗಿ ಖರೀದಿಸಿದ ಪ್ರತ್ಯೇಕ ಟಿಕೆಟ್) ಮೇಲೆ ಪ್ರಯಾಣ ಹೊರಟಿದ್ದೆನಾದ್ದರಿಂದ ಸೀಟು ಲಭ್ಯತೆಯ ಬಗ್ಗೆ ಯಾವ ತಲೆಬಿಸಿಯೂ ಇರಲಿಲ್ಲ.
ವಿಮಾನ ನಿಲ್ದಾಣದಲ್ಲಿ ನನ್ನ ಲಗೇಜ್‌ಗಳ ತಪಾಸಣಾ ಕಾರ್ಯ ಮುಗಿದ ಮೇಲೆ ಬೋರ್ಡಿಂಗ್ ಪಾಸ್‌ಗಾಗಿ ಕಾಯುತ್ತಿದ್ದೆ. ಆಗ ನಾನು ಕೌಂಟರ್ ಸಿಬ್ಬಂದಿಯನ್ನು ಗಮನಿಸಿದಾಗ, ಏಕೋ ಏನೋ ಅವರು ಮಾಮೂಲಿನಂತಿರದೆ ಚಡಪಡಿಸುತ್ತಿದ್ದಾರಲ್ಲ ಎನ್ನಿಸಿತು. ಅಲ್ಲಿನ ಏಜೆಂಟರೊಬ್ಬರು ಒಂದು ಕ್ಷಣ ನನ್ನನ್ನೂ ಮತ್ತೊಂದು ಕ್ಷಣ ಕಂಪ್ಯೂಟರ್ ಪರದೆಯನ್ನೂ ನೋಡುತ್ತಿದ್ದರು. ಆಕೆ ಅಲ್ಲಿದ್ದ ತನ್ನ ಹಿರಿಯ ಸಹೋದ್ಯೋಗಿಯೊಂದಿಗೆ ಏನೋ ಮಾತುಕತೆ ನಡೆಸಿದ ಮೇಲೆ ನನ್ನ ಬಳಿ ಬಂದು ಕ್ಷಮೆ ಕೇಳುತ್ತಾ ಹೀಗೆ ಹೇಳಿದರು: “ನಿಮ್ಮ ಸೀಟಿನ ಕ್ಯಾಬಿನ್ ಡೋರ್ ಕೆಲಸ ಮಾಡುತ್ತಿಲ್ಲ” ಎಂದು. ಬೇಸರಗೊಂಡ ನಾನು, “ಹೌದಾ, ಹಾಗಾದರೆ ನನ್ನ ಸೀಟನ್ನು ಬದಲಿಸಿ” ಎಂದೆ. ಆಗ ಆಕೆ, “ಸಮಸ್ಯೆಯಾಗಿರುವುದೇ ಅದು. ವಿಮಾನ ಭರ್ತಿಯಾಗಿಬಿಟ್ಟಿದೆ. ಮೂರನೇ ಸಾಲಿನಲ್ಲಿ ಒಂದು ಸೀಟು ಇದೆ. ಆದರೆ ಅದರ ಟ್ರೇ ಟೇಬಲ್ ಸರಿಯಾಗಿ ಕೆಲಸ ಮಾಡುತ್ತಿಲ್ಲ” ಎಂದರು.
ಆಗ ನನ್ನನ್ನು ಹತಾಶೆ ಆವರಿಸಿಕೊಂಡಿತು. ಈಗ ನನ್ನ ಮುಂದೆ ಎರಡು ಆಯ್ಕೆಗಳಿದ್ದವು: ಒಂದೋ ದೋಷಪೂರಿತ ಬಾಗಿಲು ಇಲ್ಲವೇ ಮುರುಕಲು ಟ್ರೇ ಟೇಬಲ್. ಕಿರಿಕಿರಿಗೊಂಡ ನಾನು, “ಮುಂಗಡವಾಗಿಯೇ ಬುಕ್ ಮಾಡಿದ್ದಕ್ಕೆ ನನಗೆ ಸಿಕ್ಕಿರುವುದು ಇದೇ ತಾನೆ?” ಎಂದು ಕೇಳಿದಾಗ ನನ್ನ ಧ್ವನಿ ಸ್ವಲ್ಪ ಕರ್ಕಶವಾಗಿಯೇ ಇತ್ತು. ಅಂದಂತೆ, ಅಲ್ಲಿ ನಾನೇನೂ ವಿಐಪಿ ಆಗಿರಲಿಲ್ಲ. ಆದರೆ ಸಿಐಪಿ (ಕಮರ್ಷಿಯಲಿ ಇಂಪಾರ್ಟೆಂಟ್ ಪರ್ಸನ್) ಆಗಿದ್ದೆ. ಇನ್ನಿಬ್ಬರು ಹಿರಿಯ ಸಿಬ್ಬಂದಿ ಬಂದು ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು. ಅಲ್ಲಿ ಬೇರೆ ಯಾವ ಆಯ್ಕೆಯೂ ಇರಲಿಲ್ಲ. ನಾನು ಮೂರನೇ ಸೀಟಿನ ಆಯ್ಕೆಯನ್ನು ನಿರಾಕರಿಸಿ ಮುಂಚೆಯೇ ಬುಕ್ ಮಾಡಿದ್ದ ಮೊದಲ ಸಾಲಿನ ಸೀಟನ್ನೇ ಆಯ್ಕೆ ಮಾಡಿಕೊಂಡೆ. ವಿಮಾನ ಪ್ರಯಾಣದ ವೇಳೆ ಕೆಲಸ ಮಾಡುವುದು ನನ್ನ ಉದ್ದೇಶವಾಗಿತ್ತು. ನಾನು ಸಕಾರಾತ್ಮಕ ಮನೋಭಾವದಿಂದಲೇ ಇರಲು ಪ್ರಯತ್ನಿಸಿದೆನಾದರೂ ಆ ಅನುಭವವು ಅದಾಗಲೇ ನನ್ನ ಮನಃಸ್ಥಿತಿಯನ್ನು ಕದಡಿಬಿಟ್ಟಿತ್ತು.
ಭದ್ರತಾ ತಪಾಸಣೆ, ವಲಸೆ ಪರಿಶೀಲನೆ ಹಾಗೂ ಬೋರ್ಡಿಂಗ್ ನಂತರ ನನ್ನ ಸೀಟು ತಲುಪಿದೆ. ಡೋರ್ ಬಿಗಿಯಾಗಿರಲೆಂದು ಅದನ್ನು ಟೇಪ್‌ನಿಂದ ಅಂಟಿಸಿದ್ದುದು ನನಗೆ ಸಮಸ್ಯೆಯನ್ನು ಪದೇಪದೇ ನೆನಪಿಸುತ್ತಿತ್ತು. ಇದರ ನಡುವೆಯೂ ನಾನು ಮೊದಲ ಎಂಟು ಗಂಟೆಗಳ ಅವಧಿಯನ್ನು ಲೇಖನಗಳನ್ನು ಬರೆಯುವುದರಲ್ಲಿ ಕಳೆದೆ. ಅದಾದ ಮೇಲೆ ಎರಡು ಜಪಾನಿ ಸಿನಿಮಾಗಳನ್ನು ನೋಡಿದೆ. ಆಶ್ಚರ್ಯವೆಂದರೆ, ಅಲ್ಲಿನ ಡೋರ್ ಅನ್ನು ತೆಗೆಯಬೇಕಾದ ಸನ್ನಿವೇಶವೇ ನನಗೆ ಉಂಟಾಗಲಿಲ್ಲ. ಅದು ಹೆಚ್ಚುವರಿ ಜಾಗಕ್ಕೆ ಆಸ್ಪದವಿಲ್ಲದ ಅಡಕವಾದ ವಿಮಾನವಾಗಿತ್ತು. ಹೀಗಾಗಿ, ಕ್ಲಾಸ್ಟ್ರೋಫೋಬಿಯಾ (ಜಾಗ ಕಿರಿದಾಗಿದೆ ಎಂಬ ಆಲೋಚನೆಯಿಂದ ಮೂಡುವ ಆತಂಕ) ಉಂಟಾಗುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ವಿಮಾನದ ಸಿಬ್ಬಂದಿ ಪ್ರಯಾಣದುದ್ದಕ್ಕೂ ಅದ್ಭುತ ರೀತಿಯಲ್ಲಿ ಅತ್ಯುತ್ತಮ ಸೇವೆ ನೀಡುತ್ತಿದ್ದರು.
ವಿಮಾನ ಪ್ರಯಾಣದ ವೇಳೆ ನಾನು ಸಾಕಷ್ಟು ನೀರು ಕುಡಿಯಲು ಹೆಚ್ಚು ಗಮನ ಕೊಡುತ್ತೇನೆ. ವಿಮಾನದಲ್ಲಿದ್ದ ಸಹಾಯಕರು ಕೂಡ ಆಗಾಗ್ಗೆ ಬಿಸಿನೀರು ತಂದುಕೊಡುತ್ತಿದ್ದರು. ಅದೇ ರೀತಿಯಾಗಿ, ವಿಮಾನದಲ್ಲಿ ಪಯಣಿಸುವಾಗ ನಾನು ಹೆಚ್ಚು ಆಹಾರ ಸೇವನೆ ಮಾಡಲು ಬಯಸುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಹಣ್ಣು, ಸಲಾಡ್‌ನಂತಹ ಲಘು ಆಹಾರ ಸೇವನೆಯೇ ನನ್ನ ಆಯ್ಕೆಯಾಗಿರುತ್ತದೆ. ಒಂದು ಸಲವಂತೂ ಸಿಂಗಪುರದಿಂದ ನ್ಯೂಯಾರ್ಕ್‌ವರೆಗಿನ 19 ಗಂಟೆಗಳ ಅವಧಿಯನ್ನು ಏನೊಂದೂ ಆಹಾರ ಸೇವಿಸದೆ ಪ್ರಯಾಣಿಸಿದ್ದೆ! ಸ್ವಯಂ ನಿಯಂತ್ರಣವಿದ್ದರೆ ಇದೇನೂ ದೊಡ್ಡ ವಿಷಯವಲ್ಲ. ಈಗ ಕೂಡ ಲಘು ಆಹಾರವಾದ ಹಣ್ಣು ಹಾಗೂ ಸಲಾಡ್‌ಗಳೇ ನನ್ನ ಆಯ್ಕೆಯಾಗಿದ್ದವು.
ಆರಂಭದ ಎಡರುತೊಡರಿನ ನಡುವೆಯೂ ನಂತರ ಆ ಪ್ರಯಾಣವು ನನಗೆ ಖುಷಿಯನ್ನೇ ತಂದಿತು. ಬರವಣಿಗೆ, ಸಿನಿಮಾ ವೀಕ್ಷಣೆ ಹಾಗೂ ಒಂದಷ್ಟು ವಿಶ್ರಾಂತಿಯನ್ನು ಪೂರೈಸಿ ಅದಾಗಲೇ ಸ್ಯಾನ್‌ಫ್ರಾನ್ಸಿಸ್ಕೊಗೆ ಬಂದಿಳಿದಿದ್ದೆ. ವಿಮಾನದಲ್ಲಿನ ಬಹುತೇಕ ಸಿಬ್ಬಂದಿ ಮರಾಠಿಗರಾಗಿದ್ದರು. ನಾನು ಅವರೊಂದಿಗೆ ಮಾತನಾಡಿ ನನ್ನ ಪ್ರತಿಕ್ರಿಯೆ ಹಂಚಿಕೊಂಡೆ: “ಪ್ರಯಾಣ ಅದ್ಭುತವಾಗಿತ್ತು. ಆದರೆ, ಶುರುವಿನಲ್ಲಿ ನನಗೆ ಬಾಗಿಲ ಸಮಸ್ಯೆಯ ಬಗ್ಗೆ ತಿಳಿಸಿದಾಗ ನನ್ನ ಮೂಡ್ ಹಾಳಾಗಿತ್ತು. ಆ ವಿಷಯವನ್ನು ಅವರು ನನ್ನ ಗಮನಕ್ಕೆ ತರದೇ ಇದ್ದಿದ್ದರೆ ಬಹುಶಃ ನಾನು ಅದನ್ನು ಗಮನಿಸುತ್ತಲೇ ಇರಲಿಲ್ಲವೇನೊ. ಆಗ ನನ್ನ ಮೂಡ್ ಹಾಳಾಗುತ್ತಲೇ ಇರಲಿಲ್ಲ” ಎಂದೆ. ಹೀಗೆಂದಾಗ ಅವರು ಹೇಳಿದರು: “ಈ ರೀತಿ ಯಾವುದೇ ವಸ್ತು/ಸೌಲಭ್ಯ ಕಾರ್ಯಾಚರಿಸದಿದ್ದಾಗ ಅದರ ಬಗ್ಗೆ ನಾವು ಪ್ರಯಾಣಿಕರಿಗೆ ಮಾಹಿತಿ ನೀಡಬೇಕು. ಅದು ನಮ್ಮ ಶಿಷ್ಟಾಚಾರ ಸಂಹಿತೆ” ಎಂದು. ಈ ಸಣ್ಣ ಘಟನೆಯು ಪ್ರಮುಖ ಪಾಠವೊಂದನ್ನು ನಮಗೆ ಕಲಿಸುತ್ತದೆ; ಅದೇನೆಂದರೆ, ಟೈಮಿಂಗ್ ಈಸ್ ಎವೆರಿಥಿಂಗ್. ಅಂದರೆ, ಸಕಾಲಿಕತೆ ಎಂಬುದು ಅತ್ಯಮೂಲ್ಯ.
ಒಬ್ಬ ಪ್ರಯಾಣಿಕನಾಗಿ ನಾನು ಈ ಘಟನೆಯನ್ನು ನನ್ನ ದೃಷ್ಟಿಕೋನದಿಂದ ನೋಡಿದ್ದೆ. ಆದರೆ, ಏರ್‌ಲೈನ್ ಸಿಬ್ಬಂದಿ ಅದನ್ನು ತಮ್ಮದೇ ದೃಷ್ಟಿಕೋನದಲ್ಲಿ ನೋಡಿದ್ದರು. ಯಾವುದೇ ವ್ಯಾಪಾರ ಕ್ಷೇತ್ರದಲ್ಲಿ, ಅದರಲ್ಲೂ ಪ್ರಯಾಣೋದ್ಯಮದಲ್ಲಿ ಸಕಾಲಿಕತೆ (ಟೈಮಿಂಗ್) ಎಂಬುದು ಸಂವಹನದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂಬುದನ್ನು ಇದು ನಿಚ್ಚಳವಾಗಿ ತೋರಿಸುತ್ತದೆ. ಉದಾಹರಣೆಗೆ ಹೇಳುವುದಾದರೆ, ನಾವು ವೀಣಾ ವರ್ಲ್ಡ್‌ನಲ್ಲಿ ನಮ್ಮ ಪ್ರವಾಸಿಗರಿಗೆ ಯಾವುದೇ ಬದಲಾವಣೆಯ ಬಗ್ಗೆ ಅಥವಾ ಯಾವುದೇ ಸಮಸ್ಯೆಯ ಬಗ್ಗೆ ಮುಂಚಿತವಾಗಿಯೇ ಮಾಹಿತಿ ನೀಡುತ್ತೇವೆ. ಹವಾಮಾನದ ಕಾರಣಕ್ಕಿರಬಹುದು, ಏರ್‌ಲೈನ್ ಬದಲಾವಣೆ ಇರಬಹುದು ಅಥವಾ ಬೇರೆ ಯಾವುದೇ ಅನಿರೀಕ್ಷಿತ ಘಟನೆ ಇರಬಹುದು, ಆ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತೇವೆ. ಜೊತೆಗೆ, ಪ್ರಯಾಣಿಕರ ಸ್ಫೂರ್ತಿಯನ್ನು ಕಾಯ್ದುಕೊಳ್ಳಲು ಉತ್ತಮ ಪರ್ಯಾಯಗಳನ್ನು ನಾವು ಯಾವಾಗಲೂ ಖಾತರಿಗೊಳಿಸುತ್ತೇವೆ.
ಸಕಾಲಿಕತೆ (ಟೈಮಿಂಗ್) ಎಂಬುದು ಬದುಕಿನಲ್ಲಿ ಕೂಡ ಬಹಳ ಮಹತ್ವದ್ದು. ನಾನು ಏನಾದರೂ ಚೇಷ್ಟೆ ಮಾಡಿದ ಸಂದರ್ಭದಲ್ಲಿ ನನ್ನ ತಂದೆ ತಾಯಿ, “ನಿನಗೆ ಯಾವಾಗ ಏನು ಮಾತಾಡಬೇಕೆಂದು ಗೊತ್ತಿಲ್ಲ!” ಎಂದು ಹೇಳುತ್ತಿದ್ದುದು ನನಗೆ ನೆನಪಾಗುತ್ತದೆ. ಅವರು ಹೇಳಿದ ಈ ಪಾಠ ನನ್ನೊಳಗೆ ಅಂತರ್ಗತವಾಗಿಬಿಟ್ಟಿದೆ. ಅದರಲ್ಲೂ ನನ್ನ ವ್ಯಾಪಾರ ಚಟುವಟಿಕೆಯೊಂದಿಗೆ ಆ ಪಾಠ ಒಂದಾಗಿಬಿಟ್ಟಿದೆ. ಒಬ್ಬ ಟೂರ್ ಮ್ಯಾನೇಜರ್ ಆಗಿ ಹಾಗೂ ಈಗ ಇತರರಿಗೆ ಒಬ್ಬ ಗೈಡ್ ಆಗಿ (ಮಾರ್ಗದರ್ಶಕನಾಗಿ) ಟೈಮಿಂಗ್‌ನ ಪ್ರಾಮಖ್ಯದ ಬಗ್ಗೆ ವೈಯಕ್ತಿಕವಾಗಿ ನನಗೆ ಹಾಗೂ ನಮ್ಮ ಕಂಪನಿಗೆ ಯಾವಾಗಲೂ ಕಾಳಜಿ ಇರುತ್ತದೆ. ಪ್ರವಾಸದ ವೇಳೆ ಒಳ್ಳೆಯ ಸುದ್ದಿಯೇ ಇರಬಹುದು ಅಥವಾ ಬೇಸರದ ಸುದ್ದಿಯೇ ಇರಬಹುದು ಅದನ್ನು ಹೇಗೆ ಹಾಗೂ ಯಾವಾಗ ತಿಳಿಸಬೇಕು ಎಂಬುದೇ ಪ್ರಮುಖವಾಗುತ್ತದೆ. ಟೂರ್ ಮ್ಯಾನೇಜರ್ ಒಬ್ಬರು ಬೇಸರದ ಸುದ್ದಿಯನ್ನು ನಗೆಮುಖದೊಂದಿಗೆ ಅಥವಾ ಒಳ್ಳೆಯ ಸುದ್ದಿಯನ್ನು ಪೇಲವ ಮುಖಭಾವದೊಂದಿಗೆ ಪ್ರಕಟಿಸುವುದನ್ನು ಒಮ್ಮೆ ಹಾಗೆಯೇ ಕಲ್ಪಿಸಿಕೊಳ್ಳಿ; ಹೀಗಾದಾಗ ಗೊಂದಲ ಮೂಡುವುದು ನಿಶ್ಚಿತವೇ ಸರಿ!
ನಾನು ಪ್ರವಾಸದ ವೇಳೆ ಗೈಡ್ ಮಾಡುವಾಗ ಪ್ರವಾಸಿಗರಿಗೆ ಸಮಯದ ಬಗ್ಗೆ ಸಾಮಾನ್ಯವಾದ ಸಲಹೆಗಳನ್ನು ಕೊಡುತ್ತಿರುತ್ತೇನೆ. ಆಹಾರ, ಶಾಪಿಂಗ್ ಅಥವಾ ಬಾತ್‌ರೂಮ್ ಬ್ರೇಕ್‌ಗಳ ಬಗೆಗಿನ ಸೂಚನೆಗಳೂ ಇವುಗಳಲ್ಲಿ ಇರುತ್ತವೆ. “ನಾನು ಈಗಲೇ ತಿನ್ನಲೋ ಅಥವಾ ನಂತರ ತಿನ್ನಲೋ?” ಎಂದು ಯಾರೇ ಕೇಳಿದರೂ, “ಅತಿಯಾದ ಆಹಾರ ಸೇವನೆ ಬೇಡ” ಎಂಬುದೇ ಸಾಮಾನ್ಯವಾಗಿ ನನ್ನ ಸಲಹೆಯಾಗಿರುತ್ತದೆ. “ನಾನು ಈಗ ಬಾತ್‌ರೂಮ್‌ಗೆ ಹೋಗಲೋ ಅಥವಾ ಕಾಯಲೋ?” ಎಂದು ಕೇಳಿದರೆ, “ಸಂಕೋಚಪಡಬೇಡಿ- ಈಗಲೇ ಹೋಗಿ!” ಎನ್ನುತ್ತೇನೆ. ಹಾಗೆಯೇ ಶಾಪಿಂಗ್ ವಿಷಯದಲ್ಲಿ, “ಇದನ್ನು ಈಗಲೇ ಕೊಂಡುಕೊಳ್ಳಲೋ ಅಥವಾ ಕಾಯಲೋ?” ಎಂದು ಕೇಳಿದರೆ, “ನಿಮಗೆ ಏನಾದರೂ ಇಷ್ಟವಾದರೆ ಅದನ್ನು ಇಲ್ಲೇ ಈಗಲೇ ಕೊಂಡುಕೊಳ್ಳಿ. ಏಕೆಂದರೆ, ಅದು ಆನಂತರ ಮತ್ತೊಮ್ಮೆ ಸಿಗದೇ ಹೋಗಬಹುದು” ಎನ್ನುತ್ತೇನೆ.
ಒಮ್ಮೆ ನಾನು ನನ್ನೊಳಗಿನ ಮಾತನ್ನೇ ಉದಾಸೀನ ಮಾಡಿದೆ. ಕಳೆದ ವರ್ಷ ಪೋರ್ಚುಗಲ್‌ಗೆ ಹೋಗಿದ್ದಾಗ ನನಗೆ ವರ್ಣಮಯ ರೂಸ್ಟರ್ ಸಾವೆನಿರ್ ಕೊಂಡುಕೊಳ್ಳಬೇಕೆಂದು ಅನ್ನಿಸಿತು. ಆದರೆ, ಮುಂದೆ ಅದಕ್ಕಿಂತ ಉತ್ತಮವಾದುದು ಸಿಗಬಹುದು ಎಂದುಕೊಂಡು ಆಗ ನಾನು ಕೊಂಡುಕೊಳ್ಳಲಿಲ್ಲ. ಆದರೆ ಪ್ರವಾಸದ ಮಿಕ್ಕುಳಿದ ಅವಧಿಯಲ್ಲಿ, ಫಾತಿಮಾದಿಂದ ಲಿಸ್ಬನ್‌ಗೆ, ಅಲ್ಲಿಂದ ಅಲ್‌ಗಾವ್‌ವರೆಗಿನ ಪ್ರಯಾಣದುದ್ದಕ್ಕೂ ನಾನು ಅದಕ್ಕಾಗಿ ಹುಡುಕುತ್ತಲೇ ಹೋದೆ. ಕೊನೆಗೆ, ಸಾದಾ ಬಿಳಿಬಣ್ಣದ ರೂಸ್ಟರ್ ಸಾವೆನಿರ್ ಮಾತ್ರವೇ ನನಗೆ ಸಿಕ್ಕಿತು. ಆದರೆ ಮುಂಚೆ ನೋಡಿದ್ದ ವರ್ಣಮಯ ರೂಸ್ಟರ್ ಇವತ್ತಿಗೂ ನನ್ನನ್ನು ಕಾಡುತ್ತಲೇ ಇದೆ! ಈಗ ನನಗೆ ಅದು ಬೇಕೆಂದರೆ ಕೇವಲ ಅದನ್ನು ಕೊಂಡುಕೊಳ್ಳಲೆಂದೇ ಪೋರ್ಚುಗಲ್‌ಗೆ ಹೋಗಬೇಕು.
ಸಕಾಲಿಕತೆಯ (ಟೈಮಿಂಗ್ ನ) ಪ್ರಾಮುಖ್ಯವನ್ನು ಉಪೇಕ್ಷಿಸಿದರೆ ಆಗುವುದು ಹೀಗೆಯೇ ನೋಡಿ. ತೀರಾ ಕಿರು ಪ್ರಶ್ನೆಯಾದ, “ಯಾವಾಗ?” ಎಂಬುದು ಕೂಡ ಆರ್ಥಿಕವಾಗಿ ಹಾಗೂ ಭಾವನಾತ್ಮಕವಾಗಿ ಬಲು ದೊಡ್ಡ ವ್ಯತ್ಯಾಸ ಉಂಟುಮಾಡಬಲ್ಲದು.
Post your Comment
Please let us know your thoughts on this story by leaving a comment.