Published in the Sunday Vijay Karnataka on 11 August, 2024
ಯಾವುದೇ ಕಾರ್ಯವನ್ನು ಮೆಚ್ಚುಗೆಗೆ ಪಾತ್ರವಾಗುವಂತೆ ಮಾಡಬಹುದು. ಸನ್ನಿವೇಶಗಳನ್ನು ನಿಶ್ಚಿತವಾಗಿಯೂ ಸಂಪೂರ್ಣವಾಗಿ ಬದಲಾಯಿಸಬಹುದು ಎಂಬುದನ್ನು “ವಂದೇ ಭಾರತ್" ರೈಲುಗಳು ತೋರಿಸಿವೆ.
ಕೆಲವು ದಿನಗಳ ಹಿಂದೆ ನಮ್ಮ ಸೇಲ್ಸ್ ಪಾರ್ಟ್ನರ್ ಗಳ ಜೊತೆ ಸಭೆಯೊಂದು ನಡೆಯಿತು. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಸಭೆಗಳನ್ನು ಜೂಮ್ ಮತ್ತು ಟೀಮ್ ನಂತಹ ತಂತ್ರಜ್ಞಾನ ವೇದಿಕೆಗಳ ಮೂಲಕವೇ ನಡೆಸಲಾಗುತ್ತದೆ ಎಂಬುದು ನಿಮಗೆ ಗೊತ್ತೇ ಇದೆ. ಇಂತಹ ವೇದಿಕೆಗಳನ್ನು ರೂಪಿಸಿದವರಿಗೆ ಧನ್ಯವಾದಗಳು. ಕಳೆದ ವರ್ಷ ಸ್ಯಾನ್ ಹೊಸೆದಲ್ಲಿರುವ ಜೂಮ್ ಪ್ರಧಾನ ಕಚೇರಿಯ ಕಟ್ಟಡದ ಮುಂದೆ ನಾನು ಕಾರು ನಿಲ್ಲಿಸಿ ಆ ಕಚೇರಿಗೆ ಮುಖಮಾಡಿ ಹೃದಯಪೂರ್ವಕವಾಗಿ ನನ್ನ ಕೃತಜ್ಞತೆಗಳನ್ನು ಸಲ್ಲಿಸಿದೆ. ಕೋವಿಡ್ ಸಂದರ್ಭದ ಎರಡು ವರ್ಷಗಳಲ್ಲಿ ಜೂಮ್ ಎಂಬುದು ರಕ್ಷಕನಂತೆ ಧಾವಿಸಿ ಬಂದು ನಮ್ಮೆಲ್ಲರಿಗೆ ಪರಸ್ಪರ ಸಂಪರ್ಕದಲ್ಲಿರಲು ನೆರವಿಗೆ ಬಂದಿತು. ಆ ಮೂಲಕ ಒಂದರ್ಥದಲ್ಲಿ ನಮ್ಮನ್ನು ಜೀವಂತಿಕೆಯಿಂದ ಇರಿಸಲು ಅನುವು ಮಾಡಿಕೊಟ್ಟಿತು. ಆ ಪ್ರವಾಸದ ವೇಳೆ ಸುನೀಲ ಹಾಗೂ ನಾನು ಆ್ಯಪಲ್ ಮತ್ತು ಗೂಗಲ್ ಕ್ಯಾಂಪಸ್ ಗಳಿಗೆ ಭೇಟಿ ಕೊಡಲೆಂದು ಕಾರೊಂದನ್ನು ಬಾಡಿಗೆಗೆ ಪಡೆದೆವು. ನಂತರ ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೋದಲ್ಲಿರುವ ಆ್ಯಪಲ್‌ನ ಪ್ರಧಾನ ಕಚೇರಿಯಲ್ಲಿನ ಷೋರೂಮ್‌ಗೆ ಭೇಟಿಯನ್ನೂ ಕೊಟ್ಟು ಅಲ್ಲಿ ಗಿಫ್ಟ್ ಒಂದನ್ನು ಖರೀದಿಸಿದೆವು. ಈ ಕಂಪನಿಗಳು ಅಪ್ಪಟ ವ್ಯಾಪಾರ ಧೋರಣೆ ಹೊಂದಿದ್ದರೂ ನಮ್ಮಗಳ ಬದುಕನ್ನು ಎಷ್ಟು ಸುಲಭಗೊಳಿಸಿವೆ ಎಂದರೆ, ಅವು ಆಧುನಿಕ ಕಾಲದ ಪವಿತ್ರ ಸ್ಥಳಗಳು ಎಂಬ ಭಾವನೆ ಮೂಡುತ್ತದೆ. ನಾವು ಆ ಸ್ಥಳಗಳಿಗೆ ನಮ್ಮ ಕೃತಜ್ಞತೆಗಳನ್ನು ವ್ಯಕ್ತಪಡಿಸಲು ಭೇಟಿ ಕೊಡುತ್ತೇವೆ.
ನಮ್ಮ ಸೇಲ್ಸ್ ಭಾಗೀದಾರರ ಸಭೆಗೆ ಯಾರಿಗೆ ಇಷ್ಟವಾಗುತ್ತದೋ ಅವರು ಬಂದು ಪಾಲ್ಗೊಳ್ಳುತ್ತಾರೆ. ಅಲ್ಲಿ ಸುಮಾರು ಮೂರರಿಂದ ನಾಲ್ಕು ಗಂಟೆಗಳ ಕಾಲ ನಾವು ಒಬ್ಬರಿಗೊಬ್ಬರು ವಿಷಯಗಳನ್ನು ಮಾತನಾಡಿಕೊಳ್ಳುತ್ತೇವೆ. ಇದು ಒಂದು ರೀತಿಯಲ್ಲಿ ವರ್ಚುಯಲ್ ಮೀಟಿಂಗ್‌ಗಳಿಂದ ನಮ್ಮನ್ನು ನಾವು ಬಿಡುಗಡೆಗೊಳಿಸಿಕೊಂಡ ಭಾವನೆಯನ್ನೂ ಮೂಡಿಸುತ್ತದೆ. ಇಂತಹ ಸಭೆಯ ಸಾಮಾನ್ಯ ಅಜೆಂಡಾವು ಅವರು ಕೇಳುವ ಪ್ರಶ್ನೆಗಳು ಹಾಗೂ ನಾವು ಕೊಡುವ ಉತ್ತರಗಳನ್ನು ಒಳಗೊಂಡಿರುತ್ತದೆ. ಅಥವಾ, ಕೆಲವೊಮ್ಮೆ ಇಂತಹ ಸಭೆಗೆ ಯಾವುದೇ ನಿರ್ದಿಷ್ಟ ಕಾರ್ಯಸೂಚಿ ಕೂಡ ಇರುವುದಿಲ್ಲ. "ನೇರವಾಗಿ ಬಂದು ಭೇಟಿಯಾಗೋಣ, ಮಾತುಕತೆ ಆಡೋಣ, ಆಮೇಲೆ ಯಾವುದಾದರೂ ಪ್ರಶ್ನೆಗಳಿದ್ದರೆ ಪರಿಹರಿಸೋಣ" ಎಂಬುದಷ್ಟೇ ಸಭೆಯ ನಿರೀಕ್ಷೆಯಾಗಿರುತ್ತದೆ. ಅಂತಹ ಮಾತುಕತೆಯ ಸಂದರ್ಭದಲ್ಲಿ ಭಾಗೀದಾರರೊಬ್ಬರು, "ನಾವು ರೈಲಿನಲ್ಲಿ ಪ್ರವಾಸಗಳನ್ನು ಏಕೆ ಏರ್ಪಡಿಸುತ್ತಿಲ್ಲ?" ಎಂದು ಕೇಳಿದರು. ನಾವು ಅದಕ್ಕೆ ಪ್ರತಿಕ್ರಿಯಿಸುವ ಮುಂಚೆಯೇ ಮತ್ತೊಬ್ಬರು, "ಇಲ್ಲ, ಇತ್ತೀಚಿನ ದಿನಗಳಲ್ಲಿ ಯಾರೂ ರೈಲಿನಲ್ಲಿ ಪ್ರಯಾಣಿಸಲು ಇಷ್ಟಪಡುವುದಿಲ್ಲ. ಯಾರಿಗೆ ಅಷ್ಟು ಸಮಯ ಇರುತ್ತದೆ" ಎಂದರು. ಅಲ್ಲಿದ್ದ ಬಹಳಷ್ಟು ಮಂದಿ ಇದಕ್ಕೆ ತಲೆಯಾಡಿಸಿ ಒಪ್ಪಿಗೆ ಸೂಚಿಸಿದರು. ಆಗ ಒಂದು ಧ್ವನಿ ಕೇಳಿಬಂದು, "ಓಹ್, ನೀವು ಎಂದಾದರೂ ವಂದೇ ಭಾರತ್ ರೈಲಿನಲ್ಲಿ ಪ್ರಯಾಣ ಮಾಡಿದ್ದೀರಾ? ಆ ರೈಲುಗಳು ಎಷ್ಟು ಅದ್ಭುತವಾಗಿವೆ! ಸ್ವಚ್ಛತೆ, ಹೆಚ್ಚಿನ ವೇಗ, ಆಟೋಮ್ಯಾಟಿಕ್ ಬಾಗಿಲುಗಳು, ಬೆಂಕಿ ಸೂಚಕ ಸೆನ್ಸರುಗಳು, ಸಿಸಿಟಿವಿ ಕ್ಯಾಮೆರಾಗಳು, ವೈಫೈ, ಬ್ಯಾಟರಿ ಬ್ಯಾಕಪ್, ಜಿಪಿಎಸ್… ಈ ರೈಲುಗಳು ನಿಜವಾಗಿಯೂ ಚೆನ್ನಾಗಿವೆ"' ಎಂಬ ಮಾತುಗಳು ಹೊರಹೊಮ್ಮಿದವು. ಈ ರೀತಿಯಾಗಿ “ವಂದೇ ಭಾರತ್” ರೈಲುಗಳ ಬಗ್ಗೆ ಪ್ರಸ್ತಾಪ ಶುರುವಾಯಿತು.
ಈ ಸಮಾಲೋಚನೆ ವೇಳೆ ನಾನು ಗಮನಿಸಿದ ಬಹಳ ಮುಖ್ಯವಾದ ಅಂಶವೆಂದರೆ, “ವಂದೇ ಭಾರತ್” ರೈಲುಗಳ ಬಗ್ಗೆ ಎಲ್ಲರೂ ಹೆಮ್ಮೆ ವ್ಯಕ್ತಪಡಿಸಿದ್ದು. ನಾವು ಹಾಗೂ ಇನ್ನಿತರ ಪ್ರವಾಸಿಗರೆಲ್ಲರೂ ಬರೀ ರೈಲಿನಲ್ಲೇ ಪ್ರಯಾಣಿಸುವ ಕಾಲವೊಂದಿತ್ತು. ನಂತರ, ರೈಲು ಅಥವಾ ವಿಮಾನದ ಆಯ್ಕೆಯ ಸೌಲಭ್ಯ ಪ್ರಚಲಿತಕ್ಕೆ ಬಂದಿತು. ಆದರೆ, ರೈಲಿನಲ್ಲಿ ಮತ್ತು ವಿಮಾನದಲ್ಲಿ ಪ್ರಯಾಣಿಸುವ ಪ್ರವಾಸಿಗರನ್ನು ತಾರತಮ್ಯದಿಂದ ನೋಡುವ ಪ್ರವೃತ್ತಿಯೂ ಬೆಳೆಯಿತು. ಇನ್ನು ರೈಲು ಪ್ರಯಾಣಿಕರ ಪೈಕಿಯೇ ದ್ವಿತೀಯ ದರ್ಜೆಯಲ್ಲಿ ಪ್ರಯಾಣಿಸುವವರನ್ನು ಕಡಿಮೆ ದರ್ಜೆಯವರೆಂದೂ, ಎ.ಸಿ ಕ್ಲಾಸ್‌ನಲ್ಲಿ ಪ್ರಯಾಣಿಸುವವರನ್ನು ಮೇಲಿನ ದರ್ಜೆಯವರೆಂದೂ ನೋಡುವ ಪರಿಪಾಟ ಇತ್ತು. ಅದೇ ರೀತಿಯಾಗಿ, ರೈಲಿನಲ್ಲಿ ಎ.ಸಿ ದರ್ಜೆಯಲ್ಲಿ ಪ್ರಯಾಣಿಸುವವರನ್ನು ವಿಮಾನದಲ್ಲಿ ಪಯಣ ಮಾಡುವವರಿಗಿಂತ ಕಡಿಮೆ ದರ್ಜೆಯವರು ಎಂಬಂತೆ ನೋಡಲಾಗುತ್ತಿತ್ತು. ಹಿಂದಿನ ವರ್ಷಗಳಲ್ಲಿ ಒಂದೇ ಪ್ರವಾಸಕ್ಕೆ ರೈಲು ಮತ್ತು ವಿಮಾನದಲ್ಲಿ ಹೊರಟಾಗ, ಕೆಲವು ವಿಮಾನ ಪ್ರಯಾಣಿಕರು ತಮ್ಮ ಸಂಪತ್ತನ್ನು ತೋರಿಸಿಕೊಳ್ಳುವ ಸಲುವಾಗಿ ಏರ್‌ಲೈನ್ ಟ್ಯಾಗ್ ಅನ್ನು ಪರ್ಸುಗಳಲ್ಲಿ ಅಥವಾ ಬ್ಯಾಗುಗಳಲ್ಲಿ ಇಟ್ಟುಕೊಳ್ಳುತ್ತಿದ್ದರು. ಕ್ರಮೇಣವಾಗಿ, ಸಮಯ ಎಂಬುದು ಮುಖ್ಯವಾಗುತ್ತಾ ಬಂದು ವಿಮಾನ ಸಂಚಾರವು ಬದುಕಿನ ಅವಶ್ಯಕತೆ ಎಂಬಂತಾಯಿತು. ರೈಲಿನ ಪ್ರಯಾಣಗಳು ನಮ್ಮ ಹಾಗೂ ಪ್ರವಾಸಿಗರ ನೆನಪಿನಿಂದ ಜಾರಿ ಮಂಕಾದವು.
ಒಂದೆಡೆ ರೈಲು ಪ್ರಯಾಣವು ಹೆಚ್ಚಿನ ಸಮಯ ಹಿಡಿಯುತ್ತಿದ್ದರೆ, ಮತ್ತೊಂದೆಡೆ ಮಧ್ಯಮ ವರ್ಗದ ಜನತೆ ವಿಮಾನ ನಿಲ್ದಾಣಗಳಲ್ಲಿನ ಸ್ವಚ್ಛತೆ ಹಾಗೂ ಆಹಾರ ಸೌಲಭ್ಯಗಳನ್ನು ಇಷ್ಟಪಡತೊಡಗಿದರು. ಇದರ ಹೊರತಾಗಿಯೂ ರಾಜಧಾನಿ ಎಕ್ಸ್‌ಪ್ರೆಸ್, ಶತಾಬ್ದಿ ಎಕ್ಸ್‌ಪ್ರೆಸ್, ತೇಜಸ್ ಎಕ್ಸ್‌ಪ್ರೆಸ್, ಗತಿಮಾನ್, ತುರಂತೊ ಇತ್ಯಾದಿಗಳು ಜನರ ನಿರೀಕ್ಷೆಗೆ ತಕ್ಕಂತೆ ಇದ್ದು ರೈಲ್ವೆ ಇಲಾಖೆಗೂ ಗೌರವ ತರುವಂತೆ ಕಾರ್ಯಾಚರಿಸುತ್ತಿದ್ದವು. ಇದೀಗ ಅವುಗಳ ಜೊತೆಗೆ “ವಂದೇ ಭಾರತ್” ರೈಲುಗಳು ಉತ್ಕೃಷ್ಟ ರೀತಿಯಲ್ಲಿ ಸುಧಾರಣೆಗೊಂಡು ಗರಿಷ್ಠ ಮಟ್ಟದ ಅನುಕೂಲಗಳನ್ನು ಒದಗಿಸುತ್ತಿವೆ. ಇದರಿಂದಾಗಿ ರೈಲ್ವೆಯ ಬಗ್ಗೆ ಜನರ ವಿಶ್ವಾಸ ಹೆಚ್ಚಾಗಿದ್ದು, ರೈಲಿನಲ್ಲಿ ಪ್ರಯಾಣವನ್ನೇ ಮಾಡದವರು ಕೂಡ ಅದರಲ್ಲಿ ಪಯಣಿಸಬೇಕೆಂಬ ಆಸಕ್ತಿ ವ್ಯಕ್ತಪಡಿಸುತ್ತಿದ್ದಾರೆ. “ವಂದೇ ಭಾರತ್” ರೈಲುಗಳು ಮನೆಮನೆಗಳಲ್ಲಿ ಹಾಗೂ ಸ್ನೇಹಿತರ ಮಾತುಕತೆಗಳ ಮುಖ್ಯ ವಿಷಯವಾಗಿ ಚರ್ಚಿತವಾಗುತ್ತಿವೆ. “ವಂದೇ ಭಾರತ್” ರೈಲಿನಲ್ಲಿ ಪಯಣಿಸುವುದು ನಮ್ಮ ಜನರ ಆಕಾಂಕ್ಷೆಯಾಗಿ ಪ್ರಚಲಿತಕ್ಕೆ ಬರುತ್ತಿದ್ದು, ಜನರು ರೈಲ್ವೆಯೆಡೆಗೆ ಮುಖ ಮಾಡುವಂತಾಗಿದೆ. ಇವುಗಳಿಂದಾಗಿ ರೈಲು ಪ್ರಯಾಣಕ್ಕೆ ಅಂಟಿಕೊಂಡಿದ್ದ ಕೀಳರಿಮೆಯೂ ಕ್ಷೀಣಿಸಿದೆ. ಮುಂದುವರಿದ ವಿದೇಶಗಳಲ್ಲಿ ರೈಲುಗಳು ಹಾಗೂ ವಿಮಾನಗಳ ನಡುವೆ ಯಾವುದೇ ಭೇದಭಾವ ಕಂಡುಬರುವುದಿಲ್ಲ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಚರಿಸಬೇಕಾದರೆ ಅನುಕೂಲ ಮಾತ್ರವೇ ಪರಿಗಣಿತವಾಗುವ ಒಂದೇ ಒಂದು ಅಂಶವಾಗಿರುತ್ತದೆ. ಅದು ಇರಬೇಕಾದ ರೀತಿ ಕೂಡ ಹಾಗೆಯೇ. “ವಂದೇ ಭಾರತ್” ರೈಲುಗಳಿಂದ ಇದು ಸಾಧ್ಯವಾಗುತ್ತಿರುವುದು ನನ್ನ ಗಮನಕ್ಕೆ ಬರುತ್ತಿದೆ. ರೈಲು ಪ್ರಯಾಣದ ಬಗೆಗಿನ ಹೆಮ್ಮೆಯು ಭಾರತೀಯರಲ್ಲಿ ಈಗ ಮರುಕಳಿಸಿದೆ.
ಸುಧೀರ್ ಮತ್ತು ನಾನು “ವಂದೇ ಭಾರತ್” ರೈಲಿನಲ್ಲಿ ಎರಡು ಪ್ರಯಾಣಗಳನ್ನು ಯೋಜಿಸಿದೆವು. ಈ ಪ್ರಯಾಣವನ್ನು "ಮೇಕ್ ಇನ್ ಇಂಡಿಯಾ" ಅಡಿ ಸಾಧ್ಯವಾಗಿಸಿದ್ದಕ್ಕಾಗಿ ಶ್ರೀ ಸುಧಾಂಶು ಮಣಿ ಮತ್ತು ಅವರ ತಂಡದವರಿಗೆ ಧನ್ಯವಾದಗಳು. ಈ ದಿಸೆಯಲ್ಲಿ, ನಮ್ಮ ಸನ್ಮಾನ್ಯ ಪ್ರಧಾನ ಮಂತ್ರಿಯವರು "ಆತ್ಮನಿರ್ಭರ್ ಭಾರತ್" ಪರಿಕಲ್ಪನೆಯಡಿ ನಿರಂತರವಾಗಿ ಪ್ರೋತ್ಸಾಹಿಸಿದರು. ಅದರ ಫಲಶ್ರುತಿ ಎಂಬಂತೆ ಈಗ 41 “ವಂದೇ ಭಾರತ್” ಎಕ್ಸ್‌ಪ್ರೆಸ್ ರೈಲುಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಪರ್ಕ ಕಲ್ಪಿಸಿವೆ. ಇಂತಹ ಇನ್ನೂ 500 ರೈಲುಗಳನ್ನು ತಯಾರಿಸುವ ಪ್ರಸ್ತಾವ ಇದೆ. ಜೊತೆಗೆ, “ವಂದೇ ಭಾರತ್” ರೈಲುಗಳಿಗೆ ಸ್ಲೀಪರ್ ಕೋಚ್ ಅನ್ನೂ ಅಳವಡಿಸಲಾಗುತ್ತಿದೆ. ಮುಖ್ಯವಾದ ಸಂಗತಿಯೆಂದರೆ, “ವಂದೇ ಭಾರತ್” ಭಾರತೀಯರಲ್ಲಿ ರೈಲು ಪ್ರಯಾಣದ ಬಗ್ಗೆ ಆಸಕ್ತಿ ಮರುಕಳಿಸುವಂತೆ ಮಾಡಿ ನಮ್ಮ ರೈಲ್ವೆಯ ಬಗ್ಗೆ ಹೆಮ್ಮೆ ಮೂಡಿಸಿದೆ.
ಯಾವುದೇ ಸನ್ನಿವೇಶವನ್ನು ಯಾವುದೇ ಸಂಗತಿಯೊಂದಕ್ಕೆ ಸಂಬಂಧಿಸಿದಂತೆ ಮನಸ್ಸಿಗೆ ಒಪ್ಪುವ ಅನುಭವವನ್ನಾಗಿ ರೂಪಿಸಲು ಸಾಧ್ಯವಿದೆ. “ವಂದೇ ಭಾರತ್” ರೈಲು ಯೋಜನೆಯು ಇದಕ್ಕೆ ನಿದರ್ಶನವಾಗಿದ್ದು, ಯಾವುದೇ ಪರಿಸ್ಥಿತಿಯನ್ನು ಮಾರ್ಪಡಿಸಬಹುದು ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. "ಅಯ್ಯೋ, ಈ ಸಲ ನಾನು ಬೋರು ಹೊಡೆಸುವ ರೈಲಿನಲ್ಲಿ ಪ್ರಯಾಣಿಸಬೇಕು" ಎಂದೆನ್ನುತ್ತಿದ್ದವರು ಈಗ "ನಾನು ವಂದೇ ಭಾರತ್ ರೈಲಿನಲ್ಲಿ ಪ್ರಯಾಣ ಹೊರಡುತ್ತಿದ್ದೇನೆ, ನಿಮಗೆ ಗೊತ್ತಾ?" ಎಂದು ಕೇಳುತ್ತಿದ್ದಾರೆ. ಎಂತಹ ಅದ್ಭುತ ರೈಲು. ಎಷ್ಟು ಒಳ್ಳೆಯ ಅನುಭವ. ನನಗೆ ಅನ್ನಿಸುವ ಪ್ರಕಾರ, ಈ ರೈಲು ಈಗ ವಿಮಾನಕ್ಕಿಂತ ಉತ್ತಮವಾಗಿದೆ. ಅದೇ ದೇಶ, ಅದೇ ಜನರು ಈಗ ಬದಲಾವಣೆ ಮಾಡಬಲ್ಲ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಆ ಮೂಲಕ "ಅಯ್ಯೋ, ರೈಲಿನಲ್ಲಿ ಹೋಗಬೇಕಲ್ಲ" ಎಂಬ ಉದ್ಗಾರವನ್ನು "ನಾನು ರೈಲಿನಲ್ಲಿ ಪ್ರಯಾಣಿಸಬೇಕು" ಎಂದು ಹಂಬಲಿಸುವಷ್ಟರ ಮಟ್ಟಿಗೆ ಮಾರ್ಪಡಿಸಿದ್ದಾರೆ.
ಸೇಲ್ಸ್ ಪಾರ್ಟ್ನರ್‌ಗಳ ಜೊತೆಗಿನ ಸಭೆಯು ನನ್ನನ್ನು ಆಲೋಚನೆಗೆ ದೂಡಿತು. ಈ ಒಂದು ರೈಲು ಯೋಜನೆಯು ಸನ್ನಿವೇಶವನ್ನು ಹಾಗೂ ಗ್ರಹಿಕೆಯನ್ನು ಬದಲಿಸಿದೆ. ಇದು ಮುಂಚೆ ಇದ್ದುದಕ್ಕಿಂತ ವಿಭಿನ್ನವಾಗಿ, ತಾತ್ಸಾರಕ್ಕೆ ಬದಲಾಗಿ ಮೆಚ್ಚುಗೆ ಉಂಟಾಗುವಂತೆ ಮಾಡಿದೆ. ಈ ನಿದರ್ಶನವು, ನನ್ನ ಮನೆಯ ಬಗ್ಗೆ ನಾನು ಯೋಚಿಸುವಂತೆಯೂ ಪ್ರೇರೇಪಿಸಿತು. ನಾನು ‘ಹೋಮ್ ಸಿಕ್’ ಹೌದಾ? ಕೆಲವೊಮ್ಮೆ ನಾನು ವರ್ಷದ ಆರು ತಿಂಗಳ ಕಾಲ ಮಹಾರಾಷ್ಟ್ರದಿಂದ ಅಥವಾ ಈ ದೇಶದಿಂದ ಹೊರಗಿರುತ್ತೇನೆ. ನಾನು ವಿದೇಶದಲ್ಲಿ ಬದುಕಲು ಇಷ್ಟಪಡುತ್ತೀನಾ ಅಥವಾ ನಾನು ನನ್ನ ತಾಯ್ನಾಡಿಗೆ ಬರಲು ಹಂಬಲಿಸುತ್ತೀನಾ? ನನಗೆ ಇಲ್ಲಿಂದ ಹೊರಹೋಗಬೇಕು ಎನ್ನಿಸಿದರೆ ಹಾಗೂ ಇಲ್ಲಿಗೆ ಬರಬೇಕು ಎಂಬ ಸೆಳೆತ ಉಂಟಾಗದಿದ್ದರೆ, ಅದಕ್ಕೆ ಕಾರಣವೇನು ಎಂಬುದನ್ನು ನಾನು ಹುಡುಕಬೇಕು. ನನ್ನ ಮನೆಯಲ್ಲಿ ಸ್ವಚ್ಛತೆ ಇಲ್ಲದಿರುವುದು ಅದಕ್ಕೆ ಕಾರಣವೇ? ಅಲ್ಲಿರಬಹುದಾದ ಜಗಳಗಳ ಕಾವು ಅದಕ್ಕೆ ಕಾರಣವೇ? ಮನೆಯಲ್ಲಿನ ಸದಸ್ಯರು ನಾನು ಹೇಳುವುದನ್ನು ಕಿವಿಗೆ ಹಾಕಿಕೊಳ್ಳದಿರುವುದು ಕಾರಣವೇ? ಹೀಗೆ, ಹಲವು ಅಂಶಗಳ ಬಗ್ಗೆ ನಾನೊಬ್ಬ ಮಾತ್ರವಲ್ಲದೆ ನನ್ನ ಕುಟುಂಬದ ಬೇರೆ ಸದಸ್ಯರು ಕೂಡ ಪರಿಶೀಲಿಸಿಕೊಳ್ಳಬೇಕು. ತಮಗೆ ನಿಜವಾಗಿಯೂ ಮನೆಗೆ ಹೋಗಬೇಕೆಂದು ಅನ್ನಿಸುತ್ತಿದೆಯೇ ಎಂಬುದನ್ನು ಪ್ರತಿಯೊಬ್ಬರೂ ಕೇಳಿಕೊಳ್ಳಬೇಕು. ರೈಲ್ವೆಯ ಈ ಮೇಲಿನ ಉದಾಹರಣೆಯಿಂದ ಪ್ರೇರಣೆ ಪಡೆದು, ಪ್ರತಿಯೊಬ್ಬರೂ ಸನ್ನಿವೇಶವನ್ನು ಬದಲಿಸಲು ಒಟ್ಟಾಗಿ ಪ್ರಯತ್ನಿಸಬೇಕು. ನನ್ನ ಅಭಿಪ್ರಾಯದ ಪ್ರಕಾರ, “ತಾಯ್ನಾಡಿಗೆ ಮರಳುವ” (ಹೋಮ್ ಕಮಿಂಗ್- ತಮ್ಮ ನೆಲೆಗೆ ಮರಳುವ) ಭಾವನೆ ಮೂಡಬೇಕು. ನಮ್ಮ ಮನೆಯ ಸಹಾಯಕರಾದ ವರ್ಷಾ ಮತ್ತು ಶ್ರುತಿ ಅವರನ್ನು ಕೆಲಸಕ್ಕೆ ಸೇರಿಸಿಕೊಳ್ಳುವ ಆರಂಭದಲ್ಲಿ, "ನಮಗೆ ಇರುವುದು ಇದೊಂದೇ ಮನೆ ಎಂಬುದು ನಿಮ್ಮ ಮನಸ್ಸಿನಲ್ಲಿ ಇರಬೇಕು. ಇದನ್ನು ನಾವು ದೇವಸ್ಥಾನದ ರೀತಿಯಲ್ಲಿ ಕಾಳಜಿಯಿಂದ ನೋಡಿಕೊಳ್ಳಬೇಕು" ಎಂದು ಹೇಳಿದ್ದು ಕೂಡ ಈ ಸಂದರ್ಭದಲ್ಲಿ ನೆನಪಿಗೆ ಬರುತ್ತಿದೆ.
ಯಾವುದು ಮನೆಗೆ ಅನ್ವಯಿಸುತ್ತದೋ ಅದು ಶಾಲೆಗೂ ಅನ್ವಯಿಸುತ್ತದೆ. ಇಲ್ಲಿ ಕೂಡ ನಾವು ನಮ್ಮ ಮಕ್ಕಳು ಶಾಲೆಗೆ ಹೋಗಲು ಒಲವು ತೋರಿಸುತ್ತಿದ್ದಾರಾ ಎಂಬುದನ್ನು ಗಮನಿಸಬೇಕು. ಶಾಲೆಗಳು ಮಕ್ಕಳಲ್ಲಿ ಈ ಆಸಕ್ತಿಯನ್ನು ಕಾಣಲು ಹೆಚ್ಚಿನ ಪರಿಶ್ರಮ ವಹಿಸಬೇಕು. ಮಕ್ಕಳಿಗೆ ಶಾಲೆಗೆ ಹೋಗುವುದು ಬೋರು ಎನಿಸಿದರೆ ಶಾಲೆಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮಕ್ಕಳು ಶಾಲೆಗೆ ಹೋಗಲು ಸಂತಸಪಡಬೇಕು ಹಾಗೂ ಶಾಲೆ ಮುಗಿದ ನಂತರ ಮನೆಗೆ ಬರಲು ಕಾತರರಾಗಿರಬೇಕು.
ನಿಮಗೆ ಪ್ರತಿದಿನ ಬೆಳಿಗ್ಗೆ, ನೀವು ಕೆಲಸ ಮಾಡುವ ಆಫೀಸಿಗೆ ಹೋಗಲು ಹಾಗೂ ಸಂಜೆ ಮನೆಗೆ ವಾಪಸ್ ಬರಲು ಖುಷಿ ಅನ್ನಿಸುತ್ತಿದ್ದರೆ, ನಿಮ್ಮ ವೃತ್ತಿ, ಕುಟುಂಬ ಹಾಗೂ ಬದುಕನ್ನು ಸಮರ್ಪಕವಾಗಿ ನಿರ್ವಹಿಸುತ್ತಿರುವಿರಿ ಎಂದೇ ಅರ್ಥ. ಆದರೆ, ಇವೆಲ್ಲವೂ ತಾನೇ ತಾನಾಗಿ ಆಗಿಬಿಡುವುದಿಲ್ಲ; ಅಂತಹ ಸ್ಥಿತಿಯನ್ನು ತಲುಪಲು ಸಾಕಷ್ಟು ಪರಿಶ್ರಮ ಹಾಕಬೇಕಾಗುತ್ತದೆ. ಬದುಕನ್ನು ಅಡೆತಡೆಗಳಿಂದ ಕೂಡಿದ ಒಂದು ಸ್ಪರ್ಧೆ ಎನ್ನಲಾಗುತ್ತದೆ. ನಾವು ಈ ಅಡೆತಡೆಗಳನ್ನು ಮೀರಿ ಮುಂದೆ ಸಾಗಲು ತಯಾರಾಗಿರಬೇಕಾಗುತ್ತದೆ.
ನಾವು ನಮ್ಮ ಕಾರ್ಪೊರೇಟ್ ಕಚೇರಿಯಲ್ಲಿ ಅನುಸರಿಸಬೇಕಾದ ಹತ್ತು ತತ್ವಾಜ್ಞೆಗಳನ್ನು ಬರೆದಿದ್ದೇವೆ. ಅದರಲ್ಲಿ ಒಂದು, "ನಾನು ಬೇರೆಯವರು ಇಷ್ಟಪಡುವ ವ್ಯಕ್ತಿಯಾಗಿದ್ದೇನೆಯೇ ಹಾಗೂ ನೆಲದ ಮೇಲಿನ ವಾಸ್ತವದಲ್ಲಿ ಇದ್ದೇನೆಯೇ?" ಎಂದು ಪ್ರಶ್ನಿಸಿಕೊಳ್ಳಬೇಕು ಎಂಬುದೂ ಸೇರಿದೆ. ನಾವು ನಮ್ಮನ್ನು ಸದಾ ಅವಲೋಕನ ಮಾಡಿಕೊಳ್ಳುತ್ತಿರಬೇಕು. ಯಾವುದೇ ಸಂಸ್ಥೆಯೊಂದರಲ್ಲಿ ಹಲವು ನಾಯಕರು ಇರುತ್ತಾರೆ. ಸಂಸ್ಥೆಯನ್ನು ನಿರ್ವಹಿಸುವಾಗ ಈ ನಾಯಕರು ಗುರಿಯೊಂದನ್ನು ಹೊಂದಿರಬೇಕು. ತಂಡದ ಸದಸ್ಯರು ನಾಯಕರೊಂದಿಗೆ ಇರಬೇಕೆಂಬ ಆಸಕ್ತಿ ಹೊಂದಿದ್ದಾರೆಯೇ? ಅವರೊಂದಿಗೆ ಮಾತನಾಡಲು ಇಚ್ಛಿಸುತ್ತಾರೆಯೇ? ಇಂತಹ ಪ್ರಶ್ನೆಗಳನ್ನು ಕೇಳಿಕೊಳ್ಳುವುದು ಮುಖ್ಯವಾಗುತ್ತದೆ. ನಾಯಕತ್ವದ ಯಶಸ್ಸಿನ ಮಂತ್ರದ ಹಲವು ಅಂಶಗಳಲ್ಲಿ ಇದು ಕೂಡ ಒಂದಾಗಿದ್ದು, ನಾಯಕ ಸ್ಥಾನದಲ್ಲಿರುವವರು ಈ ಬಗ್ಗೆ ಪದೇಪದೇ ಪರಿಶೀಲಿಸಿಕೊಳ್ಳಬೇಕು. ಒಂದೇ ಮಾತಿನಲ್ಲಿ ಹೇಳುವುದಾದರೆ, ಆತ್ಮಾವಲೋಕನದ ಅಭ್ಯಾಸ ಮೈಗೂಡಿಸಿಕೊಳ್ಳಬೇಕು.
ನಮ್ಮ ಮನೆಯ ಬಗ್ಗೆ ನಮಗೆ ಒಲವು ಇರಬೇಕು, ಮಕ್ಕಳಿಗೆ ತಮ್ಮ ಶಾಲೆಯ ಬಗ್ಗೆ ಪ್ರೀತಿ ಇರಬೇಕು, ಯುವಜನತೆಗೆ ತಮ್ಮ ವೃತ್ತಿಯ ಬಗ್ಗೆ ಕಾಳಜಿ ಇರಬೇಕು. ಪ್ರತಿಯೊಬ್ಬರೂ ತಂತಮ್ಮ ಕೆಲಸವನ್ನು ಇಷ್ಟಪಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಾವು ನಮ್ಮ ದೇಶದ ಬಗ್ಗೆ ಪ್ರೀತಿ ಬೆಳೆಸಿಕೊಳ್ಳಬೇಕು. ಒಂದು ದೇಶವನ್ನು ನಿರ್ಮಿಸುವಲ್ಲಿ ರಾಜಕಾರಣಿಗಳ ಪಾತ್ರ ಹಿರಿದೇನೋ ಹೌದು. ಆದರೆ ಈ ದೇಶವನ್ನು ನಿರ್ಮಿಸುವಲ್ಲಿ ನಮ್ಮ ಪಾಲಿನ ಪಾತ್ರ ವಹಿಸುವ ನಾವೆಲ್ಲರೂ ಉತ್ತಮ ನಾಗರಿಕರಾಗುವ ಜವಾಬ್ದಾರಿಯನ್ನು ಚ್ಯುತಿ ಇಲ್ಲದಂತೆ ನಿರ್ವಹಿಸಬೇಕು. ಈಗಾಗಲೇ ಪ್ರತಿಭಾ ಪಲಾಯನ ಎಂಬುದು ಸಾಕಷ್ಟು ಆಗಿ ಹೋಗಿದೆ. ಈಗಲಾದರೂ ಎಚ್ಚರವಾಗೋಣ. ನಮ್ಮೊಂದಿಗೇ ಇದು ಆರಂಭವಾಗಲಿ; ನಮ್ಮ ಮನೆಗಳಿಂದಲೇ ಚಾಲನೆ ಪಡೆಯಲಿ. ನಮ್ಮ ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸಿ “ಸುಜಲಾಂ ಸುಫಲಾಂ ಭಾರತ”ದ ಮುಂದಿನ ಪೀಳಿಗೆಗೆ ನಿಜವಾದ ಕೊಡುಗೆ ನೀಡೋಣ. ನಾವು ಕೇವಲ ಭಾರತೀಯರನ್ನು ಆಕರ್ಷಿಸಲು ಮಾತ್ರವಲ್ಲದೆ, ವಿದೇಶಿಯರು ಕೂಡ ಇಲ್ಲಿಗೆ ಬೇಟಿ ನೀಡುವಂತಾಗಲು ಶಕ್ತಿಮೀರಿ ಕಾರ್ಯತತ್ಪರರಾಗೋಣ. ಅದು ಮಾತ್ರವೇ ನಮ್ಮ ಗುರಿ ಆಗಿರಬೇಕು.
Post your Comment
Please let us know your thoughts on this story by leaving a comment.