Published in the Sunday Vijay Karnataka on 08 December, 2024
…..ಎಲ್ಲೋ ಒಂದು ಕಡೆ, ಅವನ ನಿರ್ಧಾರದ ಬಗ್ಗೆ ನಮಗೆ ಹೆಮ್ಮೆ ಎನ್ನಿಸಿತು. ವಿದೇಶದಲ್ಲಿರುವ ಬಹಳಷ್ಟು ಭಾರತೀಯ ಮಕ್ಕಳಂತೆ ಅವನು ಕೂಡ, ತನ್ನ ಕಾಲ ಮೇಲೆ ತಾನು ನಿಲ್ಲಲು ನಿರ್ಧಾರ ಮಾಡಿದ್ದ…..
ನಾನು ಯಾವಾಗ ಪ್ರವಾಸ ಹೊರಟರೂ ಎರಡು ಅಂಶಗಳು ನನ್ನ ಚೆಕ್‌ಲಿಸ್ಟ್ ನಲ್ಲಿ ಇದ್ದೇ ಇರುತ್ತವೆ- ಮೊದಲನೆಯದು, ವ್ಯಾನ್‌ನಲ್ಲಿ ಒಂದು ಟೇಬಲ್ ಇರಬೇಕು ಎಂಬುದು; ಎರಡನೆಯದು, ಉಳಿಯುವ ಹೋಟೆಲ್ ರೂಮಿನಲ್ಲಿ ವರ್ಕ್ ಡೆಸ್ಕ್ ಇರಬೇಕು ಎನ್ನುವುದು. ನಮ್ಮ ಹೆಚ್ಚಿನ ಪ್ರವಾಸಗಳು 15 ದಿವಸಗಳದ್ದಾಗಿರುತ್ತವೆ. ಒಮ್ಮೆ ನಾವು ರಸ್ತೆಗಿಳಿಯಿತೆಂದರೆ, ಪ್ರವಾಸದ ಯೋಜನೆಯಲ್ಲಿರುವ ಪ್ರತಿಯೊಂದು ಸ್ಥಳದ ಅನ್ವೇಷಣೆಯೇ ನಮ್ಮ ಉದ್ದೇಶವಾಗಿರುತ್ತದೆ. ಅದರಲ್ಲಿ, ರಾಜಿಯ ಮಾತೇ ಇಲ್ಲ. ಪೋಲೆಂಡ್‌ನ ವಾರ್ಸಾದಿಂದ ಕ್ರೊಯೋಷಿಯಾದ ಡುಬ್ರೋವ್ನಿಕ್‌ಗೆ ಪಯಣವಿರಬಹುದು, ನ್ಯೂಜಿಲೆಂಡ್‌ನಲ್ಲಿ ನಾರ್ಥ್ ಐಲೆಂಡ್‌ನಿಂದ ಸೌಥ್ ಐಲೆಂಡ್‌ನಲ್ಲಿರುವ ಇನ್ವೆಕಾಗಿಲ್‌ಗೆ ಇರಬಹುದು ಅಥವಾ ಪೋರ್ಚುಗಲ್ ಡೋರೋ ವ್ಯಾಲಿಯಿಂದ ದಕ್ಷಿಣದ ಅಲ್‌ಗಾವ್, ಸ್ಪೇನ್‌ನ ಸವಿಲ್, ಮ್ಯಾಲಗ್ಹ, ಬಾರ್ಸಿಲೋನ ಮತ್ತು ಮಾಂತ್‌ಸೆರಾತ್ ಇರಬಹುದು- ಅದೊಂದು ಕೊನೆಯಿರದ ಶೋಧನೆಯ ಪ್ರಯಾಣವಾಗಿರುತ್ತದೆ. ಗ್ರೀಸ್‌ನಲ್ಲಿ ಸಿರೋಸ್, ಮೀಕೊನೋಸ್, ಸಾಂಟರೀನಿ, ರೋಡ್ಸ್, ಕ್ರೀಟ್ ಹಾಗೂ ಥೆಸ್ಸಲನಿಕಿ ದ್ವೀಪಗಳಿಂದ ಅಥೆನ್ಸ್ ವರೆಗಿರಬಹುದು, ಹಾಗೆಯೇ, ಸೈರೋಸ್, ಮೈಕೊನೋಸ್, ಸ್ಯಾಂಟೋರಿನಿ, ರೋಡ್ಸ್, ಕ್ರೀಟ್ ಮತ್ತು ಥೆಸ್ಸಲನಿಕಿಯವರೆಗೆ ಅಥವಾ ಉತ್ತರ ವಿಯೆಟ್ನಾಂನಲ್ಲಿ ಹಾನಯ್ ಮತ್ತು ಹಾಲಂಗ್‌ನಿಂದ ದಕ್ಷಿಣದಲ್ಲಿ ಸೈಗಾನ್ (ಹೋ ಚಿ ಮಿನ್ ನಗರ)ವರೆಗೆ ನಮ್ಮದು ಬಿಡುವಿರದ ಸಾಹಸಯಾನವಾಗಿರುತ್ತದೆ. ನಮ್ಮ ಪ್ರವಾಸ ಯೋಜನೆಗಳು ಹೇಗಿರುತ್ತವೆಂದರೆ, ನಮಗೆ ಬರೋಬ್ಬರಿ ರಜಾ ದಿವಸ ಎನ್ನುವುದು ಇರುವುದೇ ಇಲ್ಲ. ಕಚೇರಿ ಕೆಲಸ ಯಾವಾಗಲೂ ಇದ್ದೇ ಇರುತ್ತದೆ. ಅದನ್ನು ತಪ್ಪಿಸಲಾಗದು. ಹೀಗಾಗಿ, ನಮ್ಮ ಪ್ರತಿಯೊಂದು ವ್ಯಾನಿನಲ್ಲೂ ವರ್ಕ್ ಡೆಸ್ಕ್ ಆಗಿ ಬಳಸಬಹುದಾದ ಒಂದು ಪುಟ್ಟ ಬಿಲ್ಟ್-ಇನ್ ಫೋಲ್ಡಿಂಗ್ ಟೇಬಲ್ ಇದ್ದೇ ಇರಬೇಕು. ಮತ್ತೊಂದು ಆದ್ಯತೆಯೆಂದರೆ, ವ್ಯಾನಿನಲ್ಲಿರುವ ಸೀಟುಗಳು ಉಲ್ಟಾ ಮಾಡುವಂತಿರಬೇಕು. ನಾನು ಮತ್ತು ಸುಧೀರ ಕೆಲಸವಿದ್ದಾಗ, ಪರಸ್ಪರ ಎದುರುಬದುರು ಕುಳಿತು ವ್ಯಾನಿನ ಕ್ಯಾಬಿನ್ನನ್ನೇ ಸಂಚಾರಿ ಕಚೇರಿಯಾಗಿಸಿಕೊಳ್ಳುತ್ತೇವೆ. ನಮ್ಮ ಕೆಲಸ ಮುಗಿದ ಮೇಲೆ ಸೀಟುಗಳನ್ನು ಹೊಂದಾಣಿಕೆ ಮಾಡಿಕೊಂಡು ಮಾಮೂಲಿನಂತೆ ಕೂರುತ್ತೇವೆ. ಅಷ್ಟಕ್ಕೂ, ಜೊತೆಯಾಗಿರುವುದು ಹಾಗೂ ಪ್ರತ್ಯೇಕವಾಗಿರುವುದು, ಇವೆರಡರ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯ ತಾನೇ. ಯಾರೇ ಆಗಲಿ, ಯಾವಾಗಲೂ ಇನ್ನೊಬ್ಬರಿಗೆ ಸದಾ ಅಂಟಿಕೊಂಡಿರಲು ಸಾಧ್ಯವಿಲ್ಲವಲ್ಲ. ಹೀಗಾಗಿ, ನಮ್ಮ ವ್ಯಾನು ನಮ್ಮ ಕೆಲಸಕ್ಕೆ ಸೂಕ್ತವಾಗಿರುವುದನ್ನು ಹಾಗೂ ಬಹು ಉಪಯೋಗಿ ಆಗಿರುವುದನ್ನು ನಾವು ಖಾತರಿಪಡಿಸಿಕೊಳ್ಳುತ್ತೇವೆ. ಮೊದಲೇ ಹೇಳಿದಂತೆ, ನಾವು ಗಮನಕೊಡುವ ಮತ್ತೊಂದು ಮುಖ್ಯ ಅಂಶವೆಂದರೆ, ಹೋಟೆಲ್ ಕೊಠಡಿಯಲ್ಲಿ ಎಕ್ಸಿಕ್ಯುಟಿವ್ ಡೆಸ್ಕ್ ಇರಬೇಕು ಎಂಬುದಾಗಿರುತ್ತದೆ. ಈ ಡೆಸ್ಕ್, ಹೋಟೆಲ್ ರೂಮಿನ ಕಿಟಕಿಯ ಬಳಿ ಇದ್ದರೆ ಉತ್ತಮ; ಹಾಗೆಯೇ, ಅದು ಹೊಂಬಣ್ಣದ್ದಾಗಿರುವುದಕ್ಕಿಂತ ಹಳದಿ ಬಣ್ಣದ್ದಾಗಿದ್ದರೆ ಹೆಚ್ಚು ಹಿತವೆನ್ನಿಸುತ್ತದೆ. ಹೋಟೆಲಿನ ರೂಮಿನೊಳಕ್ಕೆ ಕಾಲಿಡುತ್ತಿದ್ದಂತೆ, ನಾನು ಮಾಡುವ ಮೊದಲ ಕೆಲಸವೆಂದರೆ, ನನಗೆ ಬೇಕಾದ ರೀತಿಯಲ್ಲಿ ವರ್ಕ್ ಡೆಸ್ಕ್ ಅಣಿಗೊಳಿಸಿಕೊಳ್ಳುವುದೇ ಆಗಿರುತ್ತದೆ. ನನ್ನ ಬಳಕೆಗೆ ಬೇಕಾಗುವ ಚಾರ್ಜರ್‌ಗಳು, ಐಪ್ಯಾಡ್, ಓದಬೇಕಾದ ಪುಸ್ತಕ, ಬರೆಯುವ ಪ್ಯಾಡುಗಳು, ಹಾಗೂ ಪೆನ್ನಿನ ಸ್ಟ್ಯಾಂಡು ಇವುಗಳನ್ನು ಅನುಕೂಲಕರ ಜಾಗಗಳಲ್ಲಿ ಇರಿಸಿಕೊಳ್ಳುತ್ತೇನೆ. ಇವೆಲ್ಲವನ್ನೂ ಅಚ್ಚುಕಟ್ಟಾಗಿ ಜೋಡಣೆಗೊಳಿಸಿಕೊಂಡು ನನ್ನ ಕೆಲಸಕ್ಕೆ ಸ್ಫೂರ್ತಿದಾಯಕ ಎನ್ನಿಸುವಂತೆ ಹಾಗೂ ಏಕಾಗ್ರತೆಗೆ ಭಂಗಬಾರದಂತೆ ಸಜ್ಜುಗೊಳಿಸಿಕೊಳ್ಳುತ್ತೇನೆ. ನಮ್ಮ ‘ವೀಣಾ ವರ್ಲ್ಡ್’ ಲೆಕ್ಕ ಶಾಖೆಯವರು ನಾವು ಬುದ್ಧಿಪೂರ್ವಕವಾಗಿ ರೂಪಿಸುವ ಯಾವುದೇ ಯೋಜನೆಗೆ ಹಾಗೂ ಪ್ರವಾಸ ವೇಳೆಯ ಆದ್ಯತೆಗಳ ಬಗ್ಗೆ ಯಾವತ್ತೂ ಆಕ್ಷೇಪ ಎತ್ತುವುದಿಲ್ಲ. ಏಕೆಂದರೆ, ನಮ್ಮ ಪ್ರವಾಸಗಳು ಎರಡು ಉದ್ದೇಶಗಳನ್ನು ಹೊಂದಿರುತ್ತವೆ. ಹೋದ ಸ್ಥಳಗಳಲ್ಲಿ ಗಂಭೀರ ಅನ್ವೇಷಣೆಗಳು ನಡೆಯಬೇಕು; ಜೊತೆಗೆ, ಅದೇ ವೇಳೆ ಕಚೇರಿ ಕಾರ್ಯವೂ ನಿರ್ವಹಣೆಗೊಳ್ಳಬೇಕು ಎಂಬುದೇ ಆ ಎರಡು ಉದ್ದೇಶಗಳಾಗಿರುತ್ತವೆ.
ಈಗ ಕೆಲವು ತಿಂಗಳುಗಳ ಹಿಂದೆ ನಮ್ಮ ಚಿಕ್ಕ ಮಗ ರಾಜ್ ಜೊತೆ ಇರಲು ನಾವು ಸ್ಯಾನ್‌ಫ್ರ್ಯಾನ್ಸಿಸ್ಕೊಗೆ ಹೋಗಿದ್ದೆವು. ಅಲ್ಲಿ ಹತ್ತು ದಿನಗಳ ಕಾಲ ಇದ್ದೆವು. ನಾನು, ಸುನೀಲಾ ಮತ್ತು ಸುಧೀರ್ ಅವರೊಂದಿಗೆ ಅಲ್ಲಿಗೆ ತೆರಳಿದ್ದೆ. ಹೊರಡುವುದಕ್ಕೆ ಎರಡು ದಿನಗಳ ಮುಂಚೆ ಸುನೀಲಾಳು, “ಮೇಡಂ, ಈ ಸಲ ನಿಮ್ಮ ವ್ಯಾನನ್ನು ಮರೆತುಬಿಡಿ; ರಾಜ್, ಅವನ ಕಾರಿನಲ್ಲಿ ನಿಮ್ಮನ್ನು ಎಲ್ಲಾ ಕಡೆ ಸುತ್ತಾಡಿಸುತ್ತಾನೆ. ಅದರಲ್ಲಿ ಡೆಸ್ಕ್ ಇರುವುದಿಲ್ಲ. ನೀವು ಅದಕ್ಕೆ ತಯಾರಾಗಿ” ಎಂದಳು. ನಾನು ಸಹ, ಆ ಹತ್ತು ದಿನಗಳ ಅವಧಿಯಲ್ಲಿ ಕಚೇರಿಯ ಯಾವುದೇ ಕೆಲಸದೊಂದಿಗೆ ಹೋಗಬಾರದು ಎಂದು ಮೊದಲೇ ಅಂದುಕೊಂಡಿದ್ದೆ. ವಾರದ ಲೇಖನಗಳನ್ನು ಹೋಟೆಲ್‌ನಲ್ಲಿ ಬೆಳಿಗ್ಗೆ ಹೊತ್ತು ಬರೆದುಬಿಡಬೇಕು ಎಂದು ಯೋಜಿಸಿಕೊಂಡಿದ್ದೆ. ಈ ಮಧ್ಯೆ ರಾಜ್ ತಮಾಷೆ ಮಾಡುತ್ತಾ, “ನೀವು ಇಲ್ಲೂ ಕೆಲಸ ಮಾಡುವುದಾದರೆ, ಇಲ್ಲಿಗೆ ಬರುವ ಶ್ರಮವನ್ನಾದರೂ ಏಕೆ ತೆಗೆದುಕೊಳ್ಳಬೇಕು?” ಎಂದ. ಅವನು ಹಾಗೆ ಹೇಳಿದ್ದು, ನನ್ನನ್ನು ಒಂದು ಕ್ಷಣ ಮರು ಆಲೋಚನೆಗೆ ದೂಡಿತು. ಆ ಹತ್ತು ದಿನಗಳ ವೇಳೆ ಪೂರ್ತಿಯಾಗಿ ಪ್ರವಾಸದ ಖುಷಿ ಅನುಭವಿಸಲು ಮೀಸಲಿಟ್ಟು, ರಾಜ್ ಹೇಳಿದಂತೆ ನಡೆದುಕೊಳ್ಳಬೇಕೆಂದು ತೀರ್ಮಾನಿಸಿದೆ. ಅದಾದಮೇಲೆ, ರಾಜ್ ಜೊತೆ, ಅವನ ಕಾರಿನಲ್ಲಿ ಎಂಟ್ಹತ್ತು ದಿವಸಗಳ ಕಾಲ ಸುತ್ತಾಡಿದೆ. ಅದೊಂದು ಪುಟ್ಟ, ಬಹಳ ಬೇಸಿಕ್ ಆದ, ಮನುಷ್ಯ ಚಾಲಿತ (ಅಂದರೆ, ಸ್ವಯಂಚಾಲಿತವಲ್ಲದ) ಫೋಕ್ಸ್ ವ್ಯಾಗನ್ ಕಾರು. ಆ ಅಡಕವಾದ ಕಾರಿನಲ್ಲೇ ನಾವು ಯಾವುದೇ ಕಿರಿಕಿರಿ ಇಲ್ಲದೆ ಸಾಕಷ್ಟು ದೂರ ಸಂಚರಿಸಿದೆವು. ಕೊನೆಯ ದಿವಸ, ಹೋಟೆಲಿನ ಲಾಬಿಯಲ್ಲಿ ವಿಮಾನ ನಿಲ್ದಾಣಕ್ಕೆಂದು ಉಬರ್ ಕಾರಿಗೆ ಕಾಯುತ್ತಿದ್ದಾಗ, ಸುನೀಲಾಳು, “ಯಾವಾಗಲೂ ದೊಡ್ಡ ಕಾರು ಅಥವಾ ವ್ಯಾನುಗಳಲ್ಲಿ ಪ್ರಯಾಣಿಸಬೇಕೆನ್ನುವ ನಾವು ಈ ಸಲ ಪುಟ್ಟ ಕಾರಿಗೆ ಅದೆಷ್ಟು ಚೆನ್ನಾಗಿ ಹೊಂದಿಕೊಂಡುಬಿಟ್ಟೆವು. ಕಾರು ಪುಟ್ಟದಾಗಿತ್ತೋ ಅಥವಾ ಐಷಾರಾಮವಾಗಿತ್ತೋ ಎಂಬುದು ಮನಸ್ಸಿಗೆ ಬರಲೇ ಇಲ್ಲ ನೋಡಿ” ಎಂದಳು. ನಾನು ಮುಗಳ್ಳಕ್ಕು, “ಸುನೀಲಾ, ಈ ಸಲ ನಮ್ಮ ಉದ್ದೇಶದಲ್ಲಿ ವ್ಯತ್ಯಾಸವಿತ್ತು. ಹೀಗಾಗಿ, ಬೇರೆ ಯಾವುದೂ ಮುಖ್ಯವಾಗಲೇ ಇಲ್ಲ” ಎಂದೆ. ಜೊತೆಗೆ, “ನಿನಗೊಂದು ವಿಷಯ ಗೊತ್ತಾ? ನನ್ನ ಮುಂದಿನ ಲೇಖನಕ್ಕೆ ಇದು ಬಹಳ ಸೂಕ್ತ ವಿಷಯ” ಎಂಬ ಒಕ್ಕಣೆಯನ್ನೂ ಕಣ್ಣಿನಲ್ಲಿ ಮಿಂಚು ತಂದುಕೊಂಡು ಸೇರಿಸಿದೆ.
ರಾಜ್, ಆ ಕಾರನ್ನು ಹೋದ ವರ್ಷ ತಾನೇ ಸ್ವಂತ ಹಣದಲ್ಲಿ ಖರೀದಿಸಿದ. ಅವನು ಸ್ನಾತಕೋತ್ತರ ಪದವಿ ಮುಗಿಸಿ ಉದ್ಯೋಗಕ್ಕೆ ಸೇರಿದಾಗ, ನಾವು, ಅವನಿಗೆ ಏನಾದರೊಂದು ವಿಷಿಷ್ಟ ಉಡುಗೊರೆಯನ್ನು, ಸಾಧ್ಯವಾದಷ್ಟು ಮಟ್ಟಿಗೆ ಒಂದು ಕಾರನ್ನೇ ಕೊಡಬೇಕು ಎಂದುಕೊAಡಿದ್ದೆವು. ಆಗ ನಾವು, “ರಾಜ್, ನಿನ್ನ ಹುಟ್ಟುಹಬ್ಬಕ್ಕೆ ಒಂದು ಕಾರನ್ನು ಉಡುಗೊರೆ ನೀಡುತ್ತೇವೆ” ಎಂದೆವು. ಆದರೆ, ಅವನು ವಿನಯದಿಂದಲೇ ಅದನ್ನು ನಿರಾಕರಿಸಿದ. ತಮಗೆ ಬೇಕಾದವರು ಉಡುಗೊರೆ ಕೊಡದಿದ್ದರೆ ಬೇಸರಗೊಳ್ಳುವ ಸಾಕಷ್ಟು ಜನರನ್ನು ನಾವು ನೋಡುತ್ತೇವೆ. ಆದರೆ, ಇಲ್ಲಿ, ಉಡುಗೊರೆ ಕೊಡಬೇಕು ಎಂದುಕೊಂಡಿದ್ದರೂ, ಅದನ್ನು ನಿರಾಕರಿಸುತ್ತಿದ್ದುದಕ್ಕೆ ನಾವು ಖುದ್ದು ಸಾಕ್ಷಿಯಾಗಿದ್ದೆವು. ಅವನ ನಿರ್ಧಾರದ ಬಗ್ಗೆ ಹೆಮ್ಮೆಯೂ ಆಯಿತು. ವಿದೇಶಗಳಲ್ಲಿರುವ ನಮ್ಮ ಭಾರತದ ಬಹಳಷ್ಟು ಮಕ್ಕಳಂತೆ ಅವನು ಕೂಡ, ತನ್ನ ಕಾಲಿನ ಮೇಲೆ ತಾನು ನಿಲ್ಲಬೇಕೆಂದು ದೃಢ ನಿರ್ಧಾರ ಮಾಡಿದ್ದ. ರಾಜ್, ಕಾರು ಖರೀದಿಸುವಾಗ ಹತ್ತಿರದಲ್ಲೇ ಇರುವ ನಮ್ಮ ಬಂಧುವಾದ ಮುಗ್ಧಾ ಠಾಕೂರ್ ತಮ್ಮ ಪತಿ ಆಶಿಷ್ ಜೊತೆ ಷೋರೂಂಗೆ ಹೋಗಿದ್ದರು. ಅವನು ಸಾಧಾರಣ ಕಾರು ಆಯ್ಕೆ ಮಾಡಿಕೊಂಡಿದ್ದನ್ನು ನೋಡಿದ ಮುಗ್ಧಾ ಆಮೇಲೆ, “ವೀಣಾ ಮಾವ್‌ಶಿ. ನೀವು ರಾಜ್‌ಗೆ ಹಣ ಕಳಿಸುತ್ತಿದ್ದೀರಾ ತಾನೆ? ಅವನನ್ನು ನೋಡಿದರೆ ಹಣಕಾಸು ಮುಗ್ಗಟ್ಟಿನಲ್ಲಿರುವಂತಿದೆ!” ಎಂದರು. ಆಗ ನಾನು ಸುಮ್ಮನೆ ನಕ್ಕು, “ಮುಗ್ಧಾ. ಅವನು ತನಗೆಷ್ಟು ಅಗತ್ಯವೋ ಅಷ್ಟು ಮಾತ್ರವೇ ಬಳಸುವುದನ್ನು ಈಗಾಗಲೇ ರೂಢಿಸಿಕೊಂಡುಬಿಟ್ಟಿದ್ದಾನೆ. ಅವನು, “ದೊಡ್ಡ ಕಾರು ಏಕೆ ಮುಖ್ಯವಾಗುತ್ತದೆ? ನನ್ನ ಓಡಾಟದ ಅನುಕೂಲಕ್ಕಾಗಿ ನನಗೆ ಕಾರು ಬೇಕೇ ವಿನಾ ಬೇರೆಯವರಿಗೆ ತೋರಿಸಿಕೊಳ್ಳುವುದಕ್ಕಾಗಿ ಅಲ್ಲ” ಎನ್ನುತ್ತಾನೆ. ಅವನು ತಾನು ಸ್ವತಃ ನಡೆದುಕೊಳ್ಳುವ ಮೂಲಕ ಹೇಗೆ ಅನೇಕ ವಿಷಯಗಳಲ್ಲಿ ನಮಗೆ ಕಲಿಸುತ್ತಿದ್ದಾನೆ ಎನ್ನುವುದಕ್ಕೆ ಇದೊಂದು ಉದಾಹರಣೆ ಮಾತ್ರವಾಗಿದೆ. ಹೀಗಿರುವಾಗ, ಅವನ ಆಯ್ಕೆಗಳನ್ನು ಗೌರವಿಸದೇ ಇರಲು ಹಾಗೂ ಪ್ರೋತ್ಸಾಹಿಸದೇ ಇರಲು ಹೇಗೆ ಸಾಧ್ಯ? ಇದು ಮನಸ್ಸಿನಲ್ಲಿ ಮೂಡಿದಾಗ ನನಗೆ ಅವನ ಬಗ್ಗೆ ಹೆಮ್ಮೆ ಉಂಟಾಗದಿರಲು ಸಾಧ್ಯವೇ ಇಲ್ಲ.
ಯಾವುದಾದರೂ ಮುಖ್ಯ ಎಂದು ಏಕೆ ಅನ್ನಿಸುತ್ತದೆ? ಅಥವಾ, ಯಾವುದು ಕೂಡ ನಿಜವಾಗಿಯೂ ಮುಖ್ಯವಲ್ಲವೇ?- ನಾನು ಈವರೆಗೆ ಕಂಡಿರುವ ಬದುಕು ಹಾಗೂ ಸಾಗಿ ಬಂದಿರುವ ಪಯಣದ ಬಗ್ಗೆ ಆಲೋಚಿಸಿದಾಗ ನನ್ನ ಮನಸ್ಸಿನಲ್ಲಿ ಈ ಪ್ರಶ್ನೆಗಳು ಮೂಡುತ್ತಿವೆ. ನಾನು ನನ್ನ ತಂದೆಯ ಜೊತೆ 20ನೇ ವಯಸ್ಸಿನಲ್ಲಿ ಪ್ರವಾಸೋದ್ಯಮ ಜಗತ್ತಿಗೆ ಕಾಲಿಟ್ಟೆ. ವಯಸ್ಸು 22ರ ವೇಳೆಗೆ ಹಿಮಾಚಲ ಪ್ರದೇಶಕ್ಕೆ ನನ್ನ ಮೊದಲ ಭೇಟಿ ಮುಗಿಸಿದ್ದೆ. ಅದಾಗಿ ಮುಂದಿನ ಹತ್ತು ವರ್ಷಗಳ ಕಾಲ ಟೂರ್ ಮ್ಯಾನೇಜರ್ ಆಗಿ ಪ್ರವಾಸಗಳನ್ನು ಏರ್ಪಡಿಸುತ್ತಿದ್ದೆ. ಆಗಿನ ಸಂದರ್ಭದಲ್ಲಿ ಹಣದ ಉಳಿತಾಯವು ನನ್ನ ಮೊದಲ ಆದ್ಯತೆಯಾಗಿತ್ತು. ಅದು, ಹೊಸ ವ್ಯಾಪಾರೋದ್ಯಮ ಕಟ್ಟುವುದು, ಮುಂಬೈನಲ್ಲಿ ಸ್ವಂತ ಮನೆಯಿಲ್ಲದೆ ಬದುಕು ಸಾಗಿಸುವುದು, ಹೀಗೆ ಆರ್ಥಿಕ ಸವಾಲುಗಳ ಸನ್ನಿವೇಶವಾಗಿತ್ತು. ಆಗ ಪ್ರತಿಯೊಂದು ರೂಪಾಯಿಯೂ ಮುಖ್ಯವಾಗಿತ್ತು. ನಮ್ಮ ಬಳಿ ಏನಿರುತ್ತಿತ್ತೋ ಅದರಲ್ಲಿ ತೃಪ್ತಿಯಿಂದ ಇರುತ್ತಿದ್ದೆವು. ಪ್ರವಾಸಕ್ಕಾಗಿ ನಾವು ಏರ್ಪಾಡು ಮಾಡಿಕೊಳ್ಳುತ್ತಿದ್ದ ಬಸ್ಸುಗಳಲ್ಲಿ 35 ಜನರು ಹೋಗಬಹುದಿತ್ತು. ನನಗೆ ಮತ್ತು ನನ್ನ ಸಹವರ್ತಿಗೆ ಡ್ರೈವರ್ ಕ್ಯಾಬಿನ್ ಬಿಟ್ಟರೆ ಬೇರೆ ಯಾವ ಜಾಗವೂ ಇರುತ್ತಿರಲಿಲ್ಲ. ಆ ಕ್ಯಾಬಿನ್‌ನಲ್ಲಿ ಸೌಕರ್ಯದ ಮಾತು ಹಾಗಿರಲಿ, ಸರಿಯಾಗಿ ಸೀಟು ಕೂಡ ಇರುತ್ತಿರಲಿಲ್ಲ. ಬದಲಿಗೆ, ಒಂದು ಬೆಂಚು ಮಾತ್ರ ಇರುತ್ತಿತ್ತು. ನಾವು ಅದೆಷ್ಟೋ ರಾತ್ರಿಗಳನ್ನು ಇಂತಹ ಕ್ಯಾಬಿನ್‌ನಲ್ಲಿದ್ದೇ ಪ್ರಯಾಣಿಸಿದ್ದೇವೆ. ಕೆಲವೊಮ್ಮೆ ಒಂದಷ್ಟು ಹೊತ್ತು ಮಲಗುತ್ತಿದ್ದೆವು. ಮಿಕ್ಕ ಸಮಯದಲ್ಲಿ ಅಲ್ಲಿನ ಅಸೌಕರ್ಯಗಳನ್ನೆಲ್ಲಾ ಸಹಿಸಿಕೊಂಡು ಕುಳಿತೇ ಇರುತ್ತಿದ್ದೆವು. ಎಲ್ಲೋ ಅಪರೂಪಕ್ಕೊಮ್ಮೆ ಬಸ್ಸು ಪೂರ್ತಿ ಬುಕ್ ಆಗಿರದಿದ್ದಾಗ ಮಾತ್ರ ಬಸ್ಸಿನೊಳಗಿನ ಸೀಟು ಸಿಗುತ್ತಿತ್ತು. ಈಗ ಅವೆಲ್ಲವನ್ನೂ ಹಿಂದಿರುಗಿ ನೋಡಿದಾಗ, ಆಗಿನ ಕಷ್ಟಗಳು ಹಾಗೂ ನೋವುಗಳು ಈಗ ಅದೇ ರೀತಿಯಾಗಿ ಕಾಣುತ್ತಿಲ್ಲ. ಹೇಳಬೇಕೆಂದರೆ, ಅದನ್ನು ನೆನೆಸಿಕೊಂಡಾಗ ಒಂದು ರೀತಿಯ ಹೆಮ್ಮೆ ಹಾಗೂ ಖುಷಿ ಉಂಟಾಗುತ್ತದೆ. ಆಗ, ನಿದ್ದೆಯಿರದ ರಾತ್ರಿಗಳ ನಡುವೆಯೂ ಮರುದಿನ ಬೆಳಿಗ್ಗೆ ನಮ್ಮ ಪ್ರವಾಸಿಗರನ್ನು ಖುಷಿಯಿಂದ ಮುಗಳ್ನಗುತ್ತಾ ಸ್ವಾಗತಿಸುತ್ತಿದ್ದೆವು. ಏಕೆಂದರೆ, ನಮ್ಮ ಗುರಿಗಳಲ್ಲಿ ಸ್ಪಷ್ಟತೆ ಹಾಗೂ ಅಚಲತೆ ಇತ್ತು. ಮುಂಬೈನಲ್ಲಿ ಮನೆಯೊಂದನ್ನು ಖರೀದಿಸಬೇಕು ಹಾಗೂ ನಮ್ಮ ತಂದೆ ಶುರುಮಾಡಿದ ಪುಟ್ಟ ಟ್ರ್ಯಾವೆಲ್ ಕಂಪನಿ ಬೆಳೆಸಲು ಕೊಡುಗೆ ನೀಡಬೇಕು ಎನ್ನುವುದಷ್ಟೇ ನಮ್ಮ ಮನಸ್ಸಿನಲ್ಲಿ ರಿಂಗಣಿಸುತ್ತಿತ್ತು. ಈ ಕನಸುಗಳು ಎಷ್ಟು ಪ್ರಬಲವಾಗಿದ್ದವೆಂದರೆ, ಇಕ್ಕಟ್ಟಿನ ಕ್ಯಾಬಿನ್‌ನಲ್ಲಿನ ರಾತ್ರಿ ಪ್ರಯಾಣದ ದಣಿವು ಮುಖ್ಯ ವಿಷಯವೆಂದು ಅನ್ನಿಸುತ್ತಲೇ ಇರಲಿಲ್ಲ. ಹಿಂದಿರುಗಿ ನೋಡಿದಾಗ, ನಮ್ಮ ಗುರಿಗಳು ಶಕ್ತಿಯುತವಾಗಿದ್ದು, ಗಮನ ಒಂದೆಡೆಗೆ ನೆಟ್ಟಿದ್ದರೆ ಬೇರೆ ಯಾವುದೂ ಮುಖ್ಯವಾಗದು ಎಂಬುದು ಸ್ಪಷ್ಟವಾಗಿ ಮನವರಿಕೆಯಾಗುತ್ತದೆ.
ಇದು, ನನಗೆ ನಮ್ಮ ದೇಶದ ಸ್ವಾತಂತ್ರ‍್ಯ ಹೋರಾಟವನ್ನೂ ನೆನಪಿಗೆ ತರುತ್ತದೆ. ನಾವು ನಮ್ಮ ಹಿರಿಯರಿಗೆ ಬಹಳಷ್ಟು ಋಣಿಗಳಾಗಿದ್ದೇವೆ. ಅದರಲ್ಲೂ ಸ್ವಾತಂತ್ರ್ಯ ಹೋರಾಟಗಾರರ ವಿಷಯದಲ್ಲಂತೂ ಇದು ಇನ್ನಷ್ಟು ಹೆಚ್ಚು. ಅಂತಹ ಹೋರಾಟಗಾರರ ತ್ಯಾಗಗಳಿಂದಾಗಿಯೇ ನಾವು ಇಂದು ಸ್ವತಂತ್ರ ಭಾರತದಲ್ಲಿ ಬದುಕಲು ಸಾಧ್ಯವಾಗಿದೆ. ಡೈವರ್ ಕ್ಯಾಬಿನ್‌ನಲ್ಲಿ ಕುಳಿತು, ಅದೂ ನಮ್ಮ ಸ್ವಂತ ವ್ಯಾಪಾರೋದ್ಯಮದ ಹಿತಾಸಕ್ತಿಗಾಗಿ ಕುಳಿತು ಮಾಡಿದ ಪ್ರಯಾಣಗಳನ್ನು ಜ್ಞಾಪಿಸಿಕೊಳ್ಳುವುದು ಒಂದು ರೀತಿ ಸ್ವಾನುಕಂಪದ ಭಾವನೆಯನ್ನು ನನ್ನಲ್ಲಿ ಮೂಡಿಸುತ್ತದೆ. ಜೊತೆಗೆ, ನಾವು ಕಠಿಣ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿದ್ದರ ಬಗ್ಗೆ ಒಂದು ಬಗೆಯ ಹೆಮ್ಮೆಯನ್ನೂ ಉಂಟುಮಾಡುತ್ತದೆ. ಇದೇ ವೇಳೆ, ತಕ್ಷಣವೇ, ನಮ್ಮ ಸ್ವಾತಂತ್ರ‍್ಯ ಹೋರಾಟಗಾರರ ಮನಃಸ್ಥಿತಿ ಹೇಗಿದ್ದಿರಬೇಕು? ತಾವು ಯಾವ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದರೋ ಅದನ್ನು ತಮ್ಮ ಬದುಕಿನಲ್ಲಿ ಕಣ್ಣಾರೆ ನೋಡುವುದು ಸಾಧ್ಯವಿಲ್ಲವೇನೋ ಎಂಬ ವಾಸ್ತವದ ನಡುವೆಯೂ ಅಪಾಯಗಳನ್ನು ಲೆಕ್ಕಿಸದೆ ಹೋರಾಡಿದ ಅವರ ದೃಢಸಂಕಲ್ಪ ಹಾಗೂ ಶೌರ್ಯ ಅದೆಂಥದ್ದಾಗಿರಬಹುದು? ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಬೇಕೆಂಬ ಏಕೈಕ ಗುರಿಯು ಅವರಲ್ಲಿ ಅದೆಷ್ಟು ಪ್ರಬಲವಾಗಿತ್ತೆಂದರೆ, ಬೇರೆ ಇನ್ನ್ಯಾವುದೂ ಅವರಿಗೆ ಮುಖ್ಯವಾಗಲೇ ಇಲ್ಲ. ಅಂಥವರ ಬದ್ಧತೆ ಹಾಗೂ ತ್ಯಾಗವು ಯಾವಾಗಲೂ ನಮ್ಮಗಳ ಮನಸ್ಸಿನಲ್ಲಿರಬೇಕು. ನಾವು ಇತಿಹಾಸವನ್ನು ಮರೆಯಬಾರದು; ಅದರಿಂದ ನಾವು ಸದಾ ಕಲಿಯುತ್ತಿರಬೇಕು.
ಪ್ರಸ್ತುತ, ನಮ್ಮಗಳ ಬದುಕು ಸರಾಗವಾಗಿದೆ. ಎಲ್ಲಾ ಅನುಕೂಲಗಳು ಹಾಗೂ ಸುಧಾರಿತ ತಾಂತ್ರಿಕತೆಯನ್ನು ನಮ್ಮ ಬೆರಳ ತುದಿಯಲ್ಲಿ ಇರಿಸಿಕೊಂಡಿದ್ದರೂ ನಾವು ಅತೃಪ್ತರಾಗಿದ್ದೇವೆ. ನಾವು ಹೊಂದಿರುವ ಅನುಕೂಲಗಳ ಬಗ್ಗೆ ಖುಷಿಪಡುವುದನ್ನು ಬಿಟ್ಟು, ಅವುಗಳ ಬಗ್ಗೆ ಟೀಕಿಸುತ್ತಾ ಅಥವಾ ಹೀಯಾಳಿಸುತ್ತಾ ನಮ್ಮ ಶಕ್ತಿಯನ್ನು ವ್ಯರ್ಥಗೊಳಿಸುತ್ತಿದ್ದೇವೆ. ಬದುಕಿನಲ್ಲಿ ಪ್ರಬಲವಾದ ಹಾಗೂ ಅರ್ಥಪೂರ್ಣವಾದ ಗುರಿ ಇಲ್ಲದಿರುವುದೇ ಇದರ ಮೂಲ ಎಂಬುದು ನನ್ನ ಖಚಿತ ನಂಬಿಕೆಯಾಗಿದೆ. ನಮ್ಮ ಪ್ರತಿಯೊಂದು ಗುರಿಯೂ ಮೈಲುಗಲ್ಲಾಗಬೇಕು. ಒಮ್ಮೆ ಅಂದುಕೊಂಡ ಗುರಿಯನ್ನು ಸಾಧಿಸಿದ ಮೇಲೆ, ಅದಕ್ಕಿಂತ ಸ್ವಲ್ಪ ಹೆಚ್ಚು ಸವಾಲಿನ ಮತ್ತೊಂದು ಗುರಿಯನ್ನು ನಾವು ಹೊಂದಬೇಕು. ಪ್ರತಿಯೊಂದು ಗುರಿ ದಾಟಿದ ಮೇಲೂ ಇನ್ನಷ್ಟು ಕಠಿಣವೆನ್ನಿಸುವಂತಹ ಹೊಸ ಗುರಿಯನ್ನು ನಿಶ್ಚಯಿಸಿಕೊಳ್ಳಬೇಕು. ಹೀಗೆ ನಿರಂತರ ಬೆಳವಣಿಗೆಯ ಯಾನವು ನಮ್ಮದಾದರೆ, ನಮ್ಮ ಗಮನ ಕೇಂದ್ರೀಕರಿಸುವಿಕೆಯು ತೀಕ್ಷ್ಣಗೊಳ್ಳುವ ಜೊತೆಗೆ ಬೇರೆಲ್ಲಾ ಸೆಳೆತಗಳು ಹಿನ್ನೆಲೆಗೆ ಸರಿಯುತ್ತವೆ. ನಾವು ಶಾಂತಗೊಳ್ಳುವ ಜೊತೆಗೆ ಹೆಚ್ಚು ಸಶಕ್ತರಾಗುತ್ತೇವೆ. ಹಾಗಾದಾಗ ಮಾತ್ರವೇ ನಮ್ಮ ಸುತ್ತಲ ಕ್ಷುಲ್ಲಕ ವಿಷಯಗಳನ್ನು ನೋಡಿ, ನಮಗೆ, “ಅವೆಲ್ಲವೂ ಮುಖ್ಯವಲ್ಲ!” ಎನ್ನಲು ಸಾಧ್ಯವಾಗುತ್ತದೆ.
ವೀಣಾ ವರ್ಲ್ಡ್
ಯೂರೊಪ್
ಯೂರೊಪ್ ಮಾಯೆಗೆ ‘ವೀಣಾ ವರ್ಲ್ಡ್’ನೊಂದಿಗೆ ಸಾಕ್ಷಿಯಾಗಿ! ಯಾವುದೇ ಬಗೆಯ ಪ್ರವಾಸಕ್ಕೆ ಒಪ್ಪುವ ಪ್ರವಾಸಗಳೊಂದಿಗೆ 47 ದೇಶಗಳನ್ನು ಅನ್ವೇಷಿಸಿ. ಮೊದಲ ಬಾರಿಯ ಪ್ರವಾಸಿಗರು 8 ದಿನಗಳಲ್ಲಿ 8 ದೇಶಗಳಿಗೆ, 10 ದಿನಗಳಲ್ಲಿ 10 ದೇಶಗಳಿಗೆ ಅಥವಾ 11 ದಿನಗಳಲ್ಲಿ 11 ದೇಶಗಳಿಗೆ ಭೇಟಿ ಕೊಡಬಹುದು. ಅನುಭವಿ ಪ್ರವಾಸಿಗರು 6ರಿಂದ 60 ದಿನಗಳ ಪ್ರವಾಸ ಆನಂದಿಸಬಹುದು. ನಮ್ಮ ಹಲವು ಅತಿಥಿಗಳು, “ವೀಣಾ ವರ್ಲ್ಡ್’ ಜೊತೆ ಯೂರೊಪ್‌ಗೆ ಎಂಟು-ಹತ್ತನೇ ಬಾರಿಯೂ ಆಗಮಿಸುತ್ತಿರುವುದರಲ್ಲಿ ಅಚ್ಚರಿಯೇನಿಲ್ಲ. ಇಂದೇ ಬುಕ್ ಮಾಡಿ ಹಾಗೂ ಕಾನ್ಸುಲೇಟ್‌ಗಳಲ್ಲಿ ದಟ್ಟಣೆ ಹೆಚ್ಚುವ ಮುನ್ನ ನಿಮ್ಮ ವೀಸಾ ಪ್ರಕ್ರಿಯೆಗೆ ಚಾಲನೆ ನೀಡಿ.
ಚಲೋ, ಬ್ಯಾಗ್ ಭರೋ, ನಿಕಲ್ ಪಡೋ
ಯೂರೊಪ್‌ಗೆ ‘ವೀಣಾ ವರ್ಲ್ಡ್’ನೊಂದಿಗೆ!
ಸದಾ ಅತ್ಯುತ್ತಮ ಆಯ್ಕೆ!
ಸಾವಿರಾರು ಜನರ ಅಭಿಮತ ಹಾಗೂ ವಿಶ್ವಾಸಪಾತ್ರ!
ಯೂರೊಪ್ ಪ್ರವಾಸ ಬುಕ್ ಮಾಡುವಾಗ ಜಾಣ್ಮೆಯ ಸೂಕ್ತ ಆಯ್ಕೆ ನಿಮ್ಮದಾಗಿರಲಿ. ಅಲ್ಪ ಉಳಿತಾಯಕ್ಕಾಗಿ ದೊಡ್ಡ ಕೊಡುಗೆಯಿಂದ ವಂಚಿತರಾಗಬೇಡಿ.
ಕಳೆದ 11 ವರ್ಷಗಳಲ್ಲಿ 75,000ಕ್ಕೂ ಹೆಚ್ಚು ಅತಿಥಿಗಳು ‘ವೀಣಾ ವರ್ಲ್ಡ್’ನೊಂದಿಗೆ ಯೂರೊಪ್ ಅನ್ವೇಷಿಸಿದ್ದಾರೆ. ಇದೇ ವರ್ಷ ಏಪ್ರಿಲ್‌ನಿಂದ ನವೆಂಬರ್‌ವರೆಗೆ ನಮ್ಮ ಜೊತೆ ಯೂರೊಪ್ ಕಣ್ತುಂಬಿಕೊಂಡವರ ಸಂಖ್ಯೆ 16,000ಕ್ಕೂ ಹೆಚ್ಚು!
Post your Comment
Please let us know your thoughts on this story by leaving a comment.