Published in the Sunday Vijay Karnataka on 24 November, 2024
ಈಜಾಟ ಕಲಿಸಲು ನನ್ನ ಅಪ್ಪ ನನ್ನನ್ನು ಬಾವಿಗೆ ಕರೆದುಕೊಂಡು ಹೋಗುತ್ತಿದ್ದುದು ನನಗೆ ನೆನಪಿದೆ. ನಾನು ನೀರಿಗಿಳಿಯಲು ಹಿಂಜರಿದಾಗ, ನನ್ನ ತಂದೆ ದೂಡುತ್ತಿದ್ದರು. ನೀರಿಗೆ ಬಿದ್ದ ತಕ್ಷಣ ನಾನು ಜೀವ ಉಳಿಸಿಕೊಳ್ಳುವ ಸಲುವಾಗಿ ನನ್ನ ಕಾಲುಗಳನ್ನು ಆಚೀಚೆ ಆಡಿಸುತ್ತಿದ್ದೆ…..
ನಮ್ಮ ತಾಂತ್ರಿಕ ತಂಡದಿಂದ ಕಳೆದ ವರ್ಷ ಸೂಚನೆಯೊಂದು ಹೊರಬಿತ್ತು: “ನಾವು ನಮ್ಮ ಪ್ಲ್ಯಾಟ್ ಫಾರ್ಮ್ ಅನ್ನು ಪರಿಷ್ಕೃತಗೊಳಿಸುತ್ತಿದ್ದೇವೆ. ‘ವರ್ಕ್ ಚಾಟ್’ ನಿಂದ ‘ಟೀಮ್ಸ್’ ಗೆ ಬದಲಾಯಿಸುತ್ತಿದ್ದೇವೆ” ಎಂದು. ಎಲ್ಲಾ ಪರೀಕ್ಷಾರ್ಥ ಪ್ರಯೋಗಗಳೂ ಮುಗಿದಿವೆ; ಈ ಹೊಸ ಪ್ಲ್ಯಾಟ್ ಫಾರ್ಮ್ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ; ತ್ವರಿತ ನಿರ್ಧಾರ ತಳೆಯುವಿಕೆಯನ್ನು ಬೆಂಬಲಿಸುತ್ತದೆ ಹಾಗೂ ಒಟ್ಟಾರೆ ಸಂಸ್ಥೆಗೆ ಹೆಚ್ಚಿನ ಪ್ರಯೋಜನ ತಂದುಕೊಡುತ್ತದೆ ಎಂದು ವಿವರಿಸಲಾಗಿತ್ತು. ‘ವೀಣಾ ವರ್ಲ್ಡ್’ ಕಂಪನಿಯು ಯುವ ಪ್ರಾಯದಲ್ಲಿರುವ ಸಂಸ್ಥೆ. ಆದರೆ, ಸುಧೀರ್ ಮತ್ತು ನಾನು ಹಳೆಯ ತಲೆಮಾರಿಗೆ ಸೇರಿದವರಾಗಿದ್ದು, ಹಿರಿಯ ನಾಗರಿಕರಾಗಿದ್ದೇವೆ. ಇನ್ನು ನನಗಂತೂ ತಂತ್ರಜ್ಞಾನದ ಬಗ್ಗೆ ಆಸಕ್ತಿ ಇಲ್ಲವೇ ಇಲ್ಲ ಎನ್ನಬಹುದು. ಇದನ್ನು ಮನಗಂಡಿರುವ ಕಂಪನಿಯು ನನಗೆ ಲ್ಯಾಪ್ ಟಾಪ್ ಅನ್ನೂ ಕೊಟ್ಟಿಲ್ಲ- ಇದಕ್ಕೆ ‘ವೆಚ್ಚ ನಿಯಂತ್ರಣ’ದ ಕಾರಣ ಕೊಡಲಾಗಿದೆ. ಹೀಗಾಗಿ ತಂಡದವರೆಲ್ಲಾ, “ಲ್ಯಾಪ್ ಟಾಪ್ ಉಪಯೋಗಿಸದ ಒಬ್ಬರೇ ಒಬ್ಬ ಸಿಇಒ ಇಲ್ಲಿದ್ದಾರೆ ನೋಡಿ!” ಎಂದು ತಮಾಷೆ ಮಾಡುತ್ತಾರೆ. ಆದರೆ ನನ್ನ ಕೆಲಸವೆಲ್ಲಾ ಪೆನ್ನು, ಕಾಗದ, ಒಂದು ಐಪ್ಯಾಡ್ ಹಾಗೂ ನನ್ನ ಫೋನಿನಿಂದಲೇ ಸುಸೂತ್ರವಾಗಿ ನಡೆಯುತ್ತಿರುವಾಗ ನಾನು ಲ್ಯಾಪ್ ಟಾಪ್ ಬಳಸುವ ಅಗತ್ಯವಾದರೂ ಏನು? ನಮ್ಮ ಬದುಕಿಗೆ ಅನಗತ್ಯವಾಗಿ ತಾಂತ್ರಿಕ ಸಾಧನಗಳನ್ನು ಸೇರ್ಪಡೆ ಮಾಡುತ್ತಾ ಹೋಗಬಾರದು ಎಂಬುದು ನನ್ನ ಅಭಿಪ್ರಾಯ. “ಕೆಲಸ ನಡೆಯುತ್ತಿದೆಯೇ ಅಥವಾ ಇಲ್ಲವೇ?’ ಎಂಬುದಷ್ಟೇ ನನ್ನ ಪ್ರಶ್ನೆಯಾಗಿರುತ್ತದೆ. ನಮ್ಮ ಜನರಲ್ ಮ್ಯಾನೇಜರ್ ಶಿಲ್ಪಾ ಮೋರೆ ಅವರು ಹೇಳುವ ಪ್ರಕಾರ, ‘ಈ ಫೋನು ನಮ್ಮ ಕೆಲಸಕ್ಕೆ ಸಾಕಾಗುತ್ತದೆ’.
ಕಳೆದ ಹತ್ತು ವರ್ಷಗಳಲ್ಲಿ ತಾಂತ್ರಿಕತೆಗಳು ಹಾಗೂ ಪ್ರಕ್ರಿಯೆಗಳ ವಿಧಾನಗಳು ಸಾಕಷ್ಟು ಸಲ ಬದಲಾಗಿವೆ. ಅದಕ್ಕೆ ತಕ್ಕಂತೆ ನಮಗೆಲ್ಲರಿಗೂ ಅಂತಹ ಬದಲಾವಣೆಗಳಿಗೆ ಒಗ್ಗಿಕೊಳ್ಳುವುದೂ
ಅಭ್ಯಾಸವಾಗಿಬಿಟ್ಟಿದೆ. ‘ಬದಲಾವಣೆಯೊಂದೇ ಸ್ಥಿರವಾದುದು’ ಎನ್ನುವುದು ನಾವು ಹಿಂದೆಂದಿಗಿಂತಲೂ ಇದೀಗ ಹೆಚ್ಚು ಮೈಗೂಡಿಸಿಕೊಳ್ಳಬೇಕಾದ ಮಂತ್ರವಾಗಿದೆ. ಬದಲಾವಣೆಗೆ ಒಗ್ಗಿಕೊಳ್ಳುವುದು ನಮಗೆ ರೂಢಿಯಾಗಿರುವುದೇನೋ ನಿಜವೇ. ಆದರೂ, ನಮಗೆ ಒಗ್ಗಿದ್ದ ಸಾಧನಗಳನ್ನು ಅಥವಾ ವ್ಯವಸ್ಥೆಗಳ ಜಾಗಕ್ಕೆ ಹೊಸತನ್ನು ಅಳವಡಿಸಿಕೊಳ್ಳಲು ಯಾವಾಗಲೂ ಒಂದು ಪ್ರತಿರೋಧ ಅಥವಾ ತಾತ್ಸಾರ ಇದ್ದೇ ಇರುತ್ತದೆ. ಅದೇ ರೀತಿಯಲ್ಲಿ, ‘ವರ್ಕ್ ಚಾಟ್’ ಅಳವಡಿಸಿಕೊಳ್ಳುವಾಗಲೂ ನಮ್ಮ ಆಫೀಸಿನಲ್ಲಿ ತಕ್ಕಮಟ್ಟಿಗೆ ಅಹಿತದ ವಾತಾವರಣ ಸುಳಿದಾಡುತ್ತಿತ್ತು. ‘ಹೋ, ಈ ಹೊಸ ವ್ಯವಸ್ಥೆ? ಹೊಸದಾಗಿ ಕಲಿಯುವುದು ತುಂಬಾ ಇರುತ್ತದಲ್ಲವೇ?’ ಎಂಬ ಅನಿಸಿಕೆಗಳಿದ್ದವು. ಆದರೆ, ಒಬ್ಬರಾದ ಮೇಲೊಬ್ಬರು ಹೊಸತರ ಮೇಲೆ ಕ್ರಮೇಣ ಹಿಡಿತ ಸಾಧಿಸುತ್ತಾ ಹೋದಂತೆ ಹೊಸ ವ್ಯವಸ್ಥೆಯು ಸರಾಗವಾಗಿ ಅಳವಡಿಕೆಯಾಗಿಬಿಟ್ಟಿತು. ಮೊದಲೇ ಹೇಳಿದಂತೆ, ತಾಂತ್ರಿಕ ಬದಲಾವಣೆಯು ಯಾವಾಗಲೂ ನನ್ನ ಮಟ್ಟಿಗೆ ದಿಗಿಲನ್ನೇ ಮೂಡಿಸುತ್ತದೆ. ಇದರೊಂದಿಗೆ ಉದ್ವೇಗವೂ ಮೂಡುತ್ತದೆ. ಹೀಗೆ, ‘ವರ್ಕ್ ಚಾಟ್’ ನಿಂದ ‘ಟೀಮ್ಸ್’ ಗೆ ಬದಲಾವಣೆಯು ನನಗೆ ಆತಂಕವನ್ನೇ ಉಂಟುಮಾಡಿತು. ಆದ್ದರಿಂದ ನಾನು ‘ಬರ್ನ್ ದಿ ಬೋಟ್ಸ್’ ವಿಧಾನವನ್ನು ಪಾಲಿಸಲು ನಿರ್ಧರಿಸಿದೆ. ಪ್ರಾಯಶಃ ವಯಸ್ಸು ಹೆಚ್ಚುತ್ತಾ ಹೋದಂತೆ ಸ್ವಲ್ಪ ಬುದ್ಧಿವಂತಿಕೆಯೂ ಹೆಚ್ಚುತ್ತದೆ ಅನ್ನಿಸುತ್ತದೆ. ಆ ಸ್ಥಿತ್ಯಂತರದ ಬೆಳಿಗ್ಗೆ ನನ್ನ ಐಪ್ಯಾಡ್ ನಲ್ಲಿ ‘ವರ್ಕ್ ಚಾಟ್’ ನಲ್ಲಿ ಕೆಲಸ ಮಾಡುವುದಕ್ಕೆ ಅಂತಿಮ ವಿದಾಯ ಹೇಳಿದೆ. ಗಟ್ಟಿ ಮನಸ್ಸಿನಿಂದ ಅದನ್ನು ಡಿಲೀಟ್ ಮಾಡಿ, ‘ಇದರೊಂದಿಗಿನ ನನ್ನ ಪಯಣ ಇಲ್ಲಿಗೆ ಮುಗಿದಿದೆ’ ಎಂದುಕೊಂಡೆ. ಅದಾಗುತ್ತಿದ್ದಂತೆಯೇ ‘ಟೀಮ್ಸ್’ ಬಳಕೆಗೆ ಕಲಿಕೆ ಶುರುವಾಯಿತು. ನನಗೇ ಅಚ್ಚರಿಯಾಗುವಂತೆ ಕೇವಲ ಎರಡೇ ದಿನಗಳಲ್ಲಿ ಅದನ್ನು ಕಲಿತುಬಿಟ್ಟೆ. ‘ವರ್ಕ್ ಚಾಟ್’ ಬೆಂಬಲ ನನಗೆ ಇಲ್ಲವಾದ್ದರಿಂದ ‘ಟೀಮ್ಸ್’ ಮೇಲೆ ಹಿಡಿತ ಸಾಧಿಸುವುದನ್ನು ಬಿಟ್ಟು ನನಗೆ ಬೇರೆ ಯಾವ ಆಯ್ಕೆಯೂ ಇರಲಿಲ್ಲ. ಈ ಅನಿವಾರ್ಯಕ್ಕೆ ಮುಖಾಮುಖಿಯಾಗಿ ನಾನು ‘ಟೀಮ್ಸ್’ ಬಳಸಲು ಕಲಿತದ್ದು, ಭೀತಿಯಿಂದ ಹೊರಬಂದು ಒತ್ತಡ ಮುಕ್ತನಾಗಲು ಅನುಕೂಲ ಮಾಡಿಕೊಟ್ಟಿದೆ.
ಈ ‘ಬರ್ನ್ ದಿ ಬೋಟ್ಸ್’ ಮಾರ್ಗೋಪಾಯದ ಜನಕ ಜೂಲಿಯಸ್ ಸೀಸರ್ ಎನ್ನಲಾಗುತ್ತದೆ. ಸೀಸರನು ಎರಡು ಸಾವಿರ ವರ್ಷಗಳಿಗೂ ಹಿಂದೆ ರೋಮನ್ ಸರ್ವಾಧಿಕಾರಿ, ಸುಧಾರಕ ಹಾಗೂ ವ್ಯೂಹರಚನಾ ನಿರೂಪಕನಾಗಿದ್ದ. ಇಂಗ್ಲೆಂಡ್ ಮೇಲೆ ಅವನು ದಂಡೆತ್ತಿ ಹೋದಾಗ ಆತನ ಸೈನಿಕರು ಪ್ರಬಲ ಇಂಗ್ಲಿಷ್ ಸೇನೆಯನ್ನು ಎದುರಿಸಬೇಕೆಂಬ ಭೀತಿಯಿಂದ ಉತ್ಸಾಹಹೀನರಾಗಿ ಧೈರ್ಯಗೆಟ್ಟು ಹೋದರು. ಎಷ್ಟು ಬೇಗ ತಾಯ್ನಾಡಿಗೆ ವಾಪಸ್ಸಾಗುತ್ತೇವೋ ಎಂದು ಹಪಹಪಿಸುತ್ತಿದ್ದರು. ತಮ್ಮ ದೃಷ್ಟಿಗೆ ದೋಣಿಗಳು ಬಿದ್ದಾಗಲೆಲ್ಲಾ ತಾಯ್ನಾಡಿಗೆ ವಾಪಸು ಹೋಗುವ ಆಲೋಚನೆಗಳು ಅವರನ್ನು ಮುತ್ತಿಕ್ಕುತ್ತಿದ್ದವು. ಹೀಗೆ ಹೋರಾಟದಿಂದ ಹಿಮ್ಮೆಟ್ಟಿ ತಾಯ್ನಾಡಿಗೆ ವಾಪಸ್ಸಾಗುವ ಆಲೋಚನೆಯನ್ನು ಸೈನಿಕರ ತಲೆಯಿಂದ ಕಿತ್ತುಹಾಕಲು ಸೀಸರನು ದೋಣಿಗಳಿಗೆ ಬೆಂಕಿ ಹಚ್ಚಿ ಭಸ್ಮ ಮಾಡಿದ ಎನ್ನಲಾಗುತ್ತದೆ. ಇದರಿಂದ, ಆತನ ಸೈನಿಕರು ‘ಗೆಲ್ಲು ಇಲ್ಲವೇ ಅಸುನೀಗು’ ಎಂಬ ದೃಢನಿಶ್ಚಯದೊಂದಿಗೆ ಹೋರಾಡಿದರು. ಕೆಲವು ಇತಿಹಾಸಕಾರರು ಇದನ್ನು ಕಟ್ಟುಕತೆ ಎನ್ನುತ್ತಾರೆ. ಅದೇನೆ ಇರಲಿ, ಇದರಲ್ಲಿ ಅಡಗಿರುವ “ಯಶಸ್ವಿಯಾಗಬೇಕೆಂದರೆ ಬೇರೆ ಯಾವ ಆಯ್ಕೆಯೂ ಇರಬಾರದು” ಎಂಬ ತತ್ತ್ವವು ಶತಮಾನಗಳಿಂದಲೂ ಅನುಸರಣೆಯಾಗುತ್ತಿರುವ ಕಾರ್ಯತಂತ್ರವಾಗಿದೆ.
ಮೆಕ್ಸಿಕೊದಲ್ಲಿ ಆಜ್ಟೆಕ್ ಸಾಮ್ರಾಜ್ಯ ವಶಪಡಿಸಿಕೊಳ್ಳಲು ಅಹ್ನನ್ ಕಾಟೆಸ್ ಇದೇ ತಂತ್ರವನ್ನು ಬಳಸಿದ್ದನು. ಕಾಟೆಸ್ ಕೇವಲ 600 ಯೋಧರೊಂದಿಗೆ 1519ರಲ್ಲಿ ಮೆಕ್ಸಿಕೊಗೆ ಬಂದಿಳಿದಾಗ, 10,000 ಕಿಲೊಮೀಟರ್ ಪ್ರಯಾಣದಿಂದಾಗಿ ಯೋಧರೆಲ್ಲರೂ ಪ್ರಯಾಸಗೊಂಡಿದ್ದರು. ಪ್ರಬಲ ಆಜ್ಟೆಕ್ ಸಾಮ್ರಾಜ್ಯವನ್ನು ಎದುರಿಸುತ್ತಿದ್ದ ಅವರಿಗೆ ತಾಯ್ನಾಡಿಗೆ ವಾಪಸ್ಸಾಗುವ ಆಲೋಚನೆಗಳು ಸುಳಿದಾಡಲು ಮೊದಲಾದವು. ಯೋಧರು ಹಿಮ್ಮೆಟ್ಟುವುದು ವೈಫಲ್ಯಕ್ಕೆ ಕಾರಣವಾಗಬಹುದು ಎಂದು ಊಹಿಸಿದ ಕಾಟೆಸ್ ನು ಹಡಗುಗಳನ್ನು ಸುಟ್ಟು ಹಾಕಿಬಿಟ್ಟನು. ಆಗ ಯೋಧರಿಗೆ ಯುದ್ಧದಲ್ಲಿ ಹೋರಾಡದೆ ಬೇರೆ ಯಾವ ಮಾರ್ಗವೂ ಇರಲಿಲ್ಲ. ಕಾಟೆಸ್ ನ ಈ ನಿರ್ಣಾಯಕ ನಿರ್ಧಾರದ ನಂತರ ಆಜ್ಟೆಕ್ ಸಾಮ್ರಾಜ್ಯವು 1521ರಲ್ಲಿ ಶರಣಾಗತವಾಯಿತು. ಆಗಿನಿಂದಲೂ ‘ಬರ್ನ್ ದಿ ಶಿಪ್ಸ್’ ಮಾರ್ಗೋಪಾಯದ ಅನುಸರಣೆಯು ವಿವಿಧ ಕ್ಷೇತ್ರಗಳಲ್ಲಿ ಬಳಕೆಯಾಗುತ್ತಲೇ ಬರುತ್ತಿದೆ.
ಹಳ್ಳಿಯೊಂದರಲ್ಲಿ ಬೆಳೆದ ನನಗೆ, ನನ್ನ ಅಪ್ಪನು ಈಜಾಟ ಕಲಿಸಲು ಬಾವಿಯೊಂದಕ್ಕೆ ಕರೆದುಕೊಂಡು ಹೋಗುತ್ತಿದ್ದುದು ನೆನಪಿದೆ. ನಾನು ನೀರಿಗಿಳಿಯಲು ಹಿಂಜರಿದಾಗ ಅವರು ನನ್ನನ್ನು ನೀರಿಗೆ ದೂಡುತ್ತಿದ್ದರು. ನೀರಿಗೆ ಬಿದ್ದ ತಕ್ಷಣ ನಾನು ಜೀವ ಉಳಿಸಿಕೊಳ್ಳುವ ಸಲುವಾಗಿ ನನ್ನ ಕಾಲುಗಳನ್ನು ಆಚೀಚೆ ಆಡಿಸುವುದು ಅನಿವಾರ್ಯವಾಗುತ್ತಿತ್ತು. ಕಾಟೆಸ್ ತನ್ನ ಯೋಧರನ್ನು ಅನಿವಾರ್ಯತೆಗೆ ದೂಡಿದಂತೆಯೇ ನಮ್ಮ ಪೋಷಕರು ಹಾಗೂ ಶಿಕ್ಷಕರು ಕೂಡ ಕೆಲವೊಮ್ಮೆ ನಮ್ನನ್ನು ದೂಡುತ್ತಾರೆ. ಆದರೆ, ನಮಗೆ ಇದರ ಹಿಂದಿರುವ ದೂರದೃಷ್ಟಿ ಹಲವು ವರ್ಷಗಳಾದ ಮೇಲೆ ಅರ್ಥ ವಾಗಬಹುದು. ನಮ್ಮಲ್ಲಿ ಹೋರಾಡುವ ಪ್ರವೃತ್ತಿ ಮೈಗೂಡಲಿ ಎಂಬುದಷ್ಟೇ ಅವರ ದೂಡುವಿಕೆಯ ಉದ್ದೇಶವಾಗಿರುತ್ತದೆ.
‘ಬೇರೆ ಯಾವ ಆಯ್ಕೆಯೂ ಇಲ್ಲ’ ಎಂಬ ಈ ನೀತಿಯು ಅಮೂಲ್ಯವಾದುದು ಎಂಬುದು ಕೋವಿಡ್ ಸಂದರ್ಭದಲ್ಲಿ ನಮ್ಮ ಮನಸ್ಸಿಗೆ ಚೆನ್ನಾಗಿ ನಾಟಿತು. ಪ್ರವಾಸೋದ್ಯಮ ವಲಯಕ್ಕೆ ಕೋವಿಡ್ ಸೋಂಕು ಕಂಡು ಕೇಳರಿಯದಂತಹ ಹಿನ್ನಡೆ ಉಂಟುಮಾಡಿತು. ಈ ಸೋಂಕಿನಿಂದ ಮೊದಲ ಹೊಡೆತ ಬಿದ್ದುದು ಹಾಗೂ ಕಟ್ಟಕಡೆಗೆ ಚೇತರಿಸಿಕೊಂಡಿದ್ದು, ಎರಡೂ ಪ್ರವಾಸೋದ್ಯಮವೇ. ಜನರು ಎರಡೂವರೆ ವರ್ಷಗಳ ಕಾಲ ನಮ್ಮನ್ನು ಮನಸ್ಸಿನಿಂದ ತೆಗೆದುಹಾಕಿಯೇ ಬಿಟ್ಟಿದ್ದರು. ಆ ಅವಧಿಯಲ್ಲಿ ಕೆಲವರು ಹೊಸ ಉದ್ಯೋಗಗಳಿಗಾಗಿ ಅದುವರೆಗೆ ತಮಗೆ ಆಸರೆಯಾಗಿದ್ದ ಕ್ಷೇತ್ರವನ್ನೇ ತೊರೆದರು. ಆದರೆ ನಾವು, ಅಂತಿಮವಾಗಿ ಪ್ರವಾಸೋದ್ಯಮವು ಚೇತರಿಸಿಕೊಂಡು ಹಳಿಗೆ ಬಂದೇ ಬರುತ್ತದೆ ಎಂಬ ದೃಢನಿಶ್ಚಯದೊಂದಿಗೆ ಅದಕ್ಕೇ ಬಿಗಿಯಾಗಿ ಅಂಟಿಕೊಂಡೆವು. ನಮಗೆ ಬೇರೆ ಯಾವ ಆಯ್ಕೆಯೂ ಇರಲಿಲ್ಲ. ಬೇರೆ ಯಾವ ‘ಬ್ಯಾಕ್ ಅಪ್ ಪ್ಲ್ಯಾನ್’ ಕೂಡ ನಮಗೆ ಇರಲಿಲ್ಲ. ನಮಗೆ ಇದ್ದ ಒಂದೇ ಆಯ್ಕೆ ಎಂದರೆ ಪ್ರವಾಸೋದ್ಯಮ ಮಾತ್ರವೇ ಆಗಿತ್ತು. ಕೋವಿಡ್ ಸಂಕಷ್ಟ ತೀರಿ ಕಚೇರಿಗಳು ಪುನಃ ಶುರುವಾಗುತ್ತಿದ್ದಂತೆ ನಾವು ನಮ್ಮ ಮ್ಯಾನೇಜರುಗಳು ಮತ್ತು ಟೂರ್ ಮ್ಯಾನೇಜರುಗಳ ಮೀಟಿಂಗುಗಳನ್ನು ನಡೆಸಿದೆವು. ಆಗ , “ಸಂಕಷ್ಟದಿಂದ ಪಾರಾಗಿ ಬದುಕುಳಿದಿರುವ ನಾವು ಅವಕಾಶವನ್ನು ಬಹಳ ಸಮರ್ಪಕವಾಗಿ ಬಳಸಿಕೊಳ್ಳಬೇಕು. ನಾವು ಪ್ರವಾಸೋದ್ಯಮದ ಕೆಲಸಕ್ಕಾಗಿಯೇ ಇದ್ದೇವೆ ಎಂಬುದು ನಮಗೆ ಸ್ಪಷ್ಟವಾಗಿ ಅರಿವಿಗೆ ಬಂದಿದೆ. ಹೀಗಾಗಿ, ನಮ್ಮ ಉಪಸ್ಥಿತಿಯನ್ನು ಹಾಗೂ ಶ್ರದ್ಧೆಯನ್ನು ನಾವು ಇನ್ನಷ್ಟು ದೃಢಪಡಿಸಬೇಕು” ಎಂದು ನಾನು ಮೀಟಿಂಗುಗಳಲ್ಲಿ ಹೇಳುತ್ತಿದ್ದುದು ಜ್ಞಾಪಕಕ್ಕೆ ಬರುತ್ತಿದೆ.
ನಮ್ಮ ಅತಿಥಿಗಳಾದ ಪ್ರವಾಸಿಗರಿಗೆ ಹೃದಯಪೂರ್ವಕವಾಗಿ ಸೇವೆ ಒದಗಿಸುವುದು ಹಾಗೂ ಪ್ರಮಾದವೆಸಗದಂತೆ ಎಚ್ಚರಿಕೆ ಕಾಯ್ದುಕೊಳ್ಳುವುದು ಸೇವಾ ಉದ್ಯಮದಲ್ಲಿರುವ ನಮ್ಮಗಳ ಕೆಲಸವಾಗಿರುತ್ತದೆ. ಕೋವಿಡ್ ಸಂಕಷ್ಟವು ಕಲಿಸಿದ ಈ ಅರಿವು ನಮ್ಮಲ್ಲಿ ಈಗಲೂ ಉಳಿದುಕೊಂಡಿದೆ. ತಂಡದ ಪ್ರತಿಯೊಬ್ಬ ಸದಸ್ಯರೂ ಪ್ರತಿ ದಿನವೂ ಸುಧಾರಣೆ ಕಂಡುಕೊಳ್ಳಲು ಶ್ರಮಿಸುತ್ತಾರೆ. ಪರಿಪೂರ್ಣ ಸೇವೆ ಎಂಬುದು ನಿರಂತರ ಪ್ರಯಾಣವೇ ಹೊರತು ಅದು ತಲುಪಬೇಕಾದ ಗುರಿಯಲ್ಲ. ಇದನ್ನು ಮನವರಿಕೆ ಮಾಡಿಕೊಂಡು ಸತತ ಸುಧಾರಣೆಗೆ ಒತ್ತು ಕೊಡುವುದಷ್ಟೇ ನಮ್ಮ ಆದ್ಯತೆಯಾಗಿರುತ್ತದೆ. ತಪ್ಪುಗಳಾಗುತ್ತವೆ. ಆದರೆ, ನಾವು ತಕ್ಷಣವೇ ಅವನ್ನು ತಿದ್ದಿಕೊಳ್ಳಲು ಬದ್ಧರಾಗಿರುತ್ತೇವೆ. ಭವಿಷ್ಯದಲ್ಲಿ ತಪ್ಪುಗಳಾಗದಂತೆ ತಡೆಯಲು ಕಾಳಜಿ ವಹಿಸುತ್ತೇವೆ. ಈ ವಿವೇಚನೆಯು ಸರಿಯಾದ ಮಾರ್ಗವೆಂಬುದು ನನ್ನ ಅನಿಸಿಕೆಯಾಗಿದೆ. ನಾವೆಷ್ಟು ಶಕ್ತಿಮೀರಿ ಪ್ರಯತ್ನಿಸುತ್ತೇವೆ ಎಂಬುದು ನಮಗೆ ಬಿಟ್ಟ ವಿಷಯವಾಗಿರುತ್ತದೆ.
ಒಟ್ಟಾರೆ ಹೇಳುವುದಾದರೆ, ‘ಬೇರೆ ಆಯ್ಕೆ ಇಲ್ಲ’ ಎಂಬುದು ‘ವೀಣಾ ವರ್ಲ್ಡ್’ನ ಯಶಸ್ಸಿನ ಮಂತ್ರವಾಗಿದೆ. ನಾನು, ‘ಬೇರೆ ಆಯ್ಕೆ ಇಲ್ಲ’ದಿರುವುದೇ ಅತ್ಯುತ್ತಮ ಆಯ್ಕೆ ಎಂದು ದೃಢವಿಶ್ವಾಸದಿಂದ ಹೇಳಬಲ್ಲೆ.
Post your Comment
Please let us know your thoughts on this story by leaving a comment.