Published in the Sunday Prajavani on 09 February, 2025
ನೀವು ಬೇರಾವುದೋ ಸ್ಥಳಕ್ಕೆ ಮೊದಲ ಸಲ ಭೇಟಿ ನೀಡಿದ್ದರ ನಡುವೆಯೂ ಅದು ನಿಮ್ಮ ಸ್ಥಳದಂತೆಯೇ ಭಾಸವಾದ ಅನುಭವ ನಿಮಗಾಗಿದೆಯೇ? ಪ್ರತಿಯೊಂದೂ ಹೊಸತು ಎನ್ನಿಸಿದರೂ ಏನೋ ಒಂದು ಬಗೆಯ ಸಮಾಧಾನಕರ ಅನುಭವವಾಗಿದೆಯೆ? ಈ ಬಗೆಯ ಹೊಸತನ ಹಾಗೂ ಅಸ್ಪಷ್ಟ ಪರಿಚಿತತೆಯು ಆ ಸ್ಥಳದ ಅನ್ವೇಷಣೆಯ ಖುಷಿಯನ್ನು ಇನ್ನಷ್ಟು ಅಧಿಕಗೊಳಿಸುತ್ತದೆ. ನೀವು ಅಷ್ಟೂ ವರ್ಷಗಳ ಕಾಲ ಕನಸು ಕಾಣುತ್ತಿದ್ದುದು ಅದೇ ಸ್ಥಳಕ್ಕೇನೋ ಎಂಬ ಭಾವನೆ ಮೂಡುತ್ತದೆ. ನನಗೆ ಲಂಡನ್ ವಿಷಯದಲ್ಲಿ ಇಂತಹ ಅನುಭವವಾಯಿತು.
ನಾನು ಮೊದಲಿಗೆ ಲಂಡನ್‌ಗೆ 1999ರಲ್ಲಿ ವ್ಯಾಸಂಗಕ್ಕೆಂದು ಹೋದೆ. ಆ ಅನುಭವವು ಈಗ ಸಂಪೂರ್ಣ ವಿಭಿನ್ನ ಬದುಕಿನ ಕಾಲಘಟ್ಟಕ್ಕೆ ಸಂಬಂಧಿಸಿದ್ದೇನೋ ಎನ್ನಿಸುತ್ತದೆ. ಆಗ ಭಾರತದ ಪರಿಸ್ಥಿತಿ ತುಂಬಾ ಬೇರೆಯದೇ ರೀತಿಯಲ್ಲಿತ್ತು. ತಂತ್ರಜ್ಞಾನ ಹಾಗೂ ದೂರಸಂಪರ್ಕ ಸೇವೆಗಳು ಅಷ್ಟೊಂದು ಅಭಿವೃದ್ಧಿ ಆಗಿರಲಿಲ್ಲ. ವಿದೇಶ ಪ್ರಯಾಣವೆಂದರೆ ಜಾಗ್ರತೆಯಿಂದ ಸಾಕಷ್ಟು ಪೂರ್ವತಯಾರಿ ಮಾಡಿಕೊಳ್ಳಬೇಕಾಗುತ್ತಿತ್ತು. ಅದಲ್ಲದೆ, ನಾನು ಒಂದು ವರ್ಷ ಪೂರ್ತಿ ಅವಧಿಗೆ ದೂರ ದೇಶದಲ್ಲಿರಲು ಹೊರಟಿದ್ದೆ. ಇವೆಲ್ಲದರ ಮಧ್ಯೆಯೂ ಲಂಡನ್ ನೆಲದಲ್ಲಿ ಕಾಲೂರುತ್ತಿದ್ದಂತೆಯೇ ನನಗೆ ನನ್ನ ತಾಯ್ನಾಡಿನಲ್ಲೇ ಇರುವೆನೇನೋ ಅನ್ನಿಸಿತು.
ಲಂಡನ್ನಿನ ಸೊಬಗು ತಕ್ಷಣವೇ ನನ್ನನ್ನು ಸಮ್ಮೋಹಕಗೊಳಿಸಿತು. ಆ ನಗರದಲ್ಲಿ ನೋಡಲೇಬೇಕಾದಂಥವುಗಳನ್ನು ಕಣ್ತುಂಬಿಕೊಳ್ಳಲು ಒಂದು ವರ್ಷ ಕೂಡ ಸಾಕಾಗದು ಎನ್ನುವುದು ಅಲ್ಲಿಗೆ ಹೋದ ಒಂದೇ ತಿಂಗಳಲ್ಲಿ ನನಗೆ ಮನವರಿಕೆಯಾಯಿತು. ಬಹಳಷ್ಟು ಕಾರಣಗಳಿಗಾಗಿ ಲಂಡನ್ ಈ ಪ್ರಪಂಚದ ಕೇಂದ್ರವೇನೋ ಎಂದು ನಿಜವಾಗಿಯೂ ಅನ್ನಿಸಿತು. ನಾನು ಕೇವಲ ಓದಿ ತಿಳಿದಿದ್ದ ಅಲ್ಲಿನ ವಾಸ್ತುಶಿಲ್ಪ, ಭೂಗತ ಹಾಗೂ ನೆಲದ ಮೇಲಿನ ಸುಗಮ ರೈಲು ಸಂಪರ್ಕ ವ್ಯವಸ್ಥೆ, ಮತ್ತು ಹೆಸರಾಂತ ಸ್ಮಾರಕಗಳು ಹುಬ್ಬೇರಿಸುವಂತೆ ಮಾಡಿ ನನ್ನಲ್ಲಿ ಬೆರಗು ಮೂಡಿಸಿದವು.
ಲಂಡನ್ನಿನ ವಸಹಾತುಶಾಹಿ ವಾಸ್ತುಶಿಲ್ಪಗಳಾದ ಕಮಾನುಗಳು, ಸ್ತಂಭಗಳು ಹಾಗೂ ಭವ್ಯವಾದ ಕಲ್ಲಿನ ಕಟ್ಟಡಗಳು ನನಗೆ ನಮ್ಮ ಮುಂಬೈನ ಫೋರ್ಟ್ ಏರಿಯಾ, ಕೋಲ್ಕತ್ತದ ವಿಕ್ಟೋರಿಯಾ ಸ್ಮಾರಕ ಹಾಗೂ ಶಿಮ್ಲಾದ ಪಾರಂಪರಿಕ ತಾಣಗಳನ್ನು ನೆನಪಿಸಿದವು. ಈ ಹೋಲಿಕೆಗಳೊಂದಿಗೆ ಎಲ್ಲೆಡೆ ಕಿವಿಗೆ ಬೀಳುತ್ತಿದ್ದ ಇಂಗ್ಲಿಷ್ ಭಾಷೆಯು ನನ್ನಂತಹ ಭಾರತೀಯ ವ್ಯಕ್ತಿಗೆ ಪರಿಚಿತತೆಯ ಭಾವನೆಯನ್ನು ಅನಿರೀಕ್ಷಿತವಾಗಿ ಉಂಟುಮಾಡಿತ್ತು.
ಆ ಮೊದಲ ಭೇಟಿಯ ನಂತರ ನಾನು ಹೆಚ್ಚುಕಡಿಮೆ ಪ್ರತಿ ವರ್ಷವೂ ಲಂಡನ್ನಿಗೆ ಭೇಟಿ ನೀಡುತ್ತಿದ್ದೇನೆ. ಇಲ್ಲಿಗೆ ಪ್ರತಿ ಸಲ ಭೇಟಿ ನೀಡಿದಾಗಲೂ ಈ ಹಿಂದೆ ಕಂಡಿರದಿದ್ದ ಅಮೂಲ್ಯ ನೋಟಗಳು ಅನಾವರಣಗೊಳ್ಳುತ್ತಲೇ ಇವೆ. ಹೀಗಾಗಿ, ಲಂಡನ್ ನಗರವು ಅನ್ವೇಷಣೆ ಎಂಬುದು ಕೊನೆಗೊಳ್ಳದ ಸ್ಥಳ ಎಂಬುದು ನನಗೆ ಮತ್ತೆ ಮತ್ತೆ ದೃಢಪಡುತ್ತಿದೆ. ಹೀಗಿರುವಾಗ, ನನ್ನ ಬಾಲ್ಯದ ಗೆಳತಿಯು, ತನಗೆ ಕಳೆದ ಬಾರಿಯ ಲಂಡನ್ ಪ್ರವಾಸವು ಅಷ್ಟೇನೂ ಇಷ್ಟವಾಗಲಿಲ್ಲ ಎಂದಾಗ ನನಗೆಷ್ಟು ಆಘಾತವಾಗಿರಬಹುದು ಎಂದು ಒಮ್ಮೆ ಊಹಿಸಿಕೊಳ್ಳಿ. ಅವಳ ಆ ಅಭಿಪ್ರಾಯ ಅರಗಿಸಿಕೊಳ್ಳಲಾಗದ ನಾನು, ಆ ಕ್ಷಣದಲ್ಲೇ ಅವಳ ಅಭಿಪ್ರಾಯವನ್ನು ಬದಲಾಗುವಂತೆ ಮಾಡಬೇಕೆಂದು ಪಣ ತೊಟ್ಟೆ. ನಾನು ತುಂಬಾ ಇಷ್ಟಪಡುವ ಲಂಡನ್ ಹೇಗಿದೆ ಎಂಬುದನ್ನು ಅವಳಿಗೆ ತೋರಿಸಬೇಕು ಎಂದುಕೊಂಡೆ. ಅವಳ ತಪ್ಪು ಕಲ್ಪನೆಗಳನ್ನು ಚಿಂದಿ ಉಡಾಯಿಸಬೇಕು ಹಾಗೂ ಈ ಅಪೂರ್ವ ನಗರದಲ್ಲಿ ಪ್ರತಿ ಸಲ ಹೊರಗೆ ಹೋದಾಗಲೂ ನಾನು ನೋಡುವ ಮಾಯೆಯನ್ನು ಅವಳೂ ನೋಡುವಂತೆ ಮಾಡಬೇಕೆಂದುಕೊಂಡೆ.
ಅಂದಂತೆ, ಲಂಡನ್ ಎಂಬುದು 32 ಬರೊಗಳು ಹಾಗೂ ಸಿಟಿ ಆಫ್ ಲಂಡನ್ ಆಗಿ ವರ್ಗೀಕರಣಗೊಂಡಿರುವ ನಗರವಾಗಿದೆ. ಇದರಲ್ಲಿ, ಸಿಟಿ ಆಫ್ ಲಂಡನ್ ವ್ಯಾಪ್ತಿಯು ಬೇರೆಯದೇ ಆದ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಈ ಬರೊಗಳು, ಇನ್ನರ್ ಲಂಡನ್ (ಕೇಂದ್ರ, ಚಾರಿತ್ರಿಕ ಹಳೆಯ ಪ್ರದೇಶಗಳು) ಮತ್ತು ಔಟರ್ ಲಂಡನ್ (ಉಪನಗರ ಜಿಲ್ಲೆಗಳು)ಗಳನ್ನು ಒಳಗೊಂಡಿವೆ. ಇನ್ನು, ಸಿಟಿ ಆಫ್ ಲಂಡನ್ ಅನ್ನು ‘ದಿ ಸ್ಕ್ವೇರ್ ಮೈಲ್’ ಎಂದೂ ಕರೆಯಲಾಗುತ್ತದೆ. ಇದು, ಗ್ರೇಟರ್ ಲಂಡನ್‌ನ ಹೃದಯ ಭಾಗದಲ್ಲಿರುವ ಪುಟ್ಟ ಚಾರಿತ್ರಿಕ ಪ್ರದೇಶವಾಗಿದೆ. ಒಟ್ಟಾರೆ ಲಂಡನ್‌ಗಿಂತ ವಿಭಿನ್ನವಾಗಿರುವ ಇದು ಯುನೈಟೆಡ್ ಕಿಂಗ್‌ಡಮ್‌ನ ಆರ್ಥಿಕ ಹಾಗೂ ವಾಣಿಜ್ಯದ ಕೇಂದ್ರ ನೆಲೆಯಾಗಿದೆ. ಸಿಟಿ ಆಫ್ ಲಂಡನ್ ಮೂಲತಃ ರೋಮನ್ನರಿಂದ ಕ್ರಿ.ಶ. 43ರಲ್ಲಿ ಲೊಂಡಿನಿಯಂ ಎಂಬ ವಸತಿ ನೆಲೆಯಾಗಿ ಸ್ಥಾಪನೆಗೊಂಡಿತು. ಇದು, ರೋಮನ್ನರ ಆಳ್ವಿಕೆಯ ಅವಧಿಯಲ್ಲಿ ವಾಣಿಜ್ಯ ವಹಿವಾಟು ಹಾಗೂ ಆಡಳಿತ ಕೇಂದ್ರವಾಗಿ ಬೆಳೆಯಿತು.
ರೋಮನ್ನರು ಕ್ರಿ.ಶ. 43ರಲ್ಲಿ ಸ್ಥಾಪಿಸಿದ ಲೊಂಡಿನಿಯAದಿAದ ಮೊದಲ್ಗೊಂಡು 2,000 ವರ್ಷಗಳಿಗೂ ಹೆಚ್ಚಿನ ಐತಿಹಾಸಿಕ ಹಿನ್ನೆಲೆ ಲಂಡನ್‌ಗೆ ಇದೆ. ಥೇಮ್ಸ್ ನದಿಯ ದಂಡೆಯಲ್ಲಿರುವ ಈ ನಗರವು ತರುವಾಯ ಪ್ರಮುಖ ಬಂದರಾಗಿ ಹಾಗೂ ವಾಣಿಜ್ಯ ನೆಲೆಯಾಗಿಯೂ ಬೆಳೆಯಿತು. ರೋಮನ್ನರು ಹಿಂದೆ ಸರಿದ ಮೇಲೆ ನಗರದ ಪ್ರಸಿದ್ಧಿಯೂ ತಗ್ಗಿತು. ಆದರೆ, ಸ್ಯಾಕ್ಸನ್ನರಿಂದ ನಗರವು ಪುನಃ ಮುನ್ನೆಲೆಗೆ ಬಂತು. ನಂತರ, ನಾರ್ಮನ್‌ರಿಂದ ಅದು ಇನ್ನಷ್ಟು ಸದೃಢಗೊಂಡಿತು. ಅಂದAತೆ, ನಾರ್ಮನ್ನರು 11ನೇ ಶತಮಾನದಲ್ಲಿ ಇಲ್ಲಿ ‘ಟವರ್ ಆಫ್ ಲಂಡನ್’ ನಿರ್ಮಿಸಿದರು.
ಲಂಡನ್ ಹಾಗೂ ಇಂಗ್ಲೆಂಡಿನ ಉಲ್ಲೇಖವಿರುವ ನರ್ಸರಿ ರೈಮ್‌ಗಳನ್ನು (ಶಿಶುಪ್ರಾಸಗಳನ್ನು) ಹಾಡುತ್ತಾ ಬೆಳೆದವಳು ನಾನು. ರಾಣಿಯನ್ನು ನೋಡಲು ಲಂಡನ್ನಿಗೆ ತೆರಳಿದ್ದರ ಚಿತ್ರಣವಿರುವ ಪುಸ್ಸಿ ಕ್ಯಾಟ್, ಲಂಡನ್ ಬ್ರಿಜ್ ಈಸ್ ಫಾಲಿಂಗ್ ಡೌನ್ ಸೇರಿದಂತೆ ಹಲವು ರೈಮ್‌ಗಳು ಈ ಪಟ್ಟಿಗೆ ಸೇರುತ್ತವೆ. ಈ ಶಿಶುಪ್ರಾಸಗಳ ಹಿಂದೆ ಸಮೃದ್ಧ ಚರಿತ್ರೆಯೇ ಅಡಗಿದೆ. ವೈಕಿಂಗರು ದಾಳಿ ಎಸಗಿ ಸೇತುವೆಗಳನ್ನು ಹಾನಿಗೆಡವಿದ್ದು ಅಥವಾ ಶತಮಾನಗಳ ಕಾಲದಿಂದ ಹಲವಾರು ಬೇರೆ ಬೇರೆ ನಿರ್ಮಿತಿಗಳು “ಲಂಡನ್ ಬ್ರಿಜ್” ಎಂಬ ಹೆಸರು ಹೊಂದಿರುವುದು ಇಂತಹ ಅದೆಷ್ಟೋ ಕತೆಗಳು ಈ ಪ್ರಾಸಗಳ ಹಿಂದಿವೆ . ಅದಿರಲಿ, ‘ಲಂಡನ್ ಬ್ರಿಜ್’ ಎಂದಾಕ್ಷಣ ನಮಗೆಲ್ಲಾ ಮನಸ್ಸಿಗೆ ಬರುವ ಚಿತ್ರವೆಂದರೆ ಅದು ‘ಟವರ್ ಬ್ರಿಜ್’ನದು. ಇದು ವಿಕ್ಟೋರಿಯನ್ ಎಂಜಿನಿಯರಿಂಗ್‌ನ ಅಚ್ಚರಿಯಾಗಿದ್ದು, ಇಂದಿಗೂ ಥೇಮ್ಸ್ ನದಿಯ ಗುಂಟ ಹಾದು ಹೋಗುವ ಹಡಗುಗಳಿಗೆ ತೆರೆದುಕೊಂಡು ಮಾರ್ಗ ಮುಕ್ತವಾಗಿಸುವ ಸೇತುವೆಯಾಗಿದೆ.
ಚಾರಿತ್ರಿಕ ‘ಟವರ್ ಆಫ್ ಲಂಡನ್’, ಹತ್ತಿರದಲ್ಲೇ ಇರುವ ಮತ್ತೊಂದು ನಿರ್ಮಿತಿಯಾಗಿದೆ. ಇದು ಪ್ರಪಂಚದ ಹೆಸರಾಂತ ರಾಜ ಪರಿವಾರದ ಆಭರಣಗಳಿರುವ ತಾಣವಾಗಿದೆ. ಜಗತ್ತಿನ ಅತ್ಯಂತ ದೊಡ್ಡ ವಜ್ರಗಳಲ್ಲೊಂದಾದ ಭವ್ಯವಾದ ಕೊಹಿನೂರ್ ಕೂಡ ಇಲ್ಲಿದೆ. ಈ ಬೆಲೆಬಾಳುವ ಸಂಪತ್ತನ್ನು ಬೀಫೀಟರ್ಸ್ ಗಳು ಅಥವಾ ಯೋಮನ್ ವಾರ್ಡರ್‌ಗಳು ರಕ್ಷಿಸುತ್ತಿದ್ದು, ಈ ಸಂರಕ್ಷಿತ ಆಭರಣಗಳ ಬಗ್ಗೆ ಸಾಕಷ್ಟು ಕುತೂಹಲಕರ ಕತೆಗಳೂ ಇವೆ. ಈ ಆಭರಣಗಳು ಇಲ್ಲವಾದ ದಿನ ಸಾಮ್ರಾಜ್ಯ ಕೂಡ ಪತನವಾಗುತ್ತದೆಂಬುದು ಎಂಬುದು ಇಲ್ಲಿನ ಪ್ರತೀತಿ. ನದಿ ಹರಿವ ದಿಕ್ಕಿನಲ್ಲಿ ಕೊಂಚ ಕೆಳ ಸಾಗಿದರೆ ಲಂಡನ್ ಐ ಇದೆ. ಗಾಜಿನ ಕೋಶಗಳಿರುವ ಈ ಜೈಂಟ್ ವೀಲ್‌ನಲ್ಲಿ (ಬೃಹತ್ ತೂಗುತೊಟ್ಟಿಲು) ಕುಳಿತು ಗಿರಗಿಟ್ಲೆ ಸುತ್ತುವಾಗ ಲಂಡನ್ ನಗರದ ಹಾಗೂ ಬಾಗಿ ಬಳುಕುತ್ತಾ ನಗರವನ್ನು ಸುತ್ತುವರಿದು ಹರಿಯುವ ಥೇಮ್ಸ್ ನದಿಯ ನಿಬ್ಬೆರಗಾಗಿಸುವ ದೃಶ್ಯಗಳು ಸುರುಳಿಯಂತೆ ಬಿಚ್ಚಿಕೊಳ್ಳುತ್ತವೆ. ಬೆಳಕು ನಿಚ್ಚಳವಾಗಿರುವ ದಿನಗಳಲ್ಲಿ ರಾಣಿಯ ಅಧಿಕೃತ ನಿವಾಸವಾದ ವಿಂಡ್ಸರ್‌ವರೆಗಿನ ನೋಟ ಇಲ್ಲಿಂದ ದಕ್ಕುತ್ತದೆ.
ಸಿಟಿಗೆ ಸನಿಹದಲ್ಲೇ ಬಕಿಂಗ್ ಹ್ಯಾಮ್ ಅರಮನೆ ಹಾಗೂ ಅದರ ಸುತ್ತ ಇರುವ ಉದ್ಯಾನಗಳ ಗುಂಟ ನೀವು ಹಾದು ಹೋಗುತ್ತೀರಿ. ಇಲ್ಲಿ ಪ್ರತಿದಿನವೂ ‘ಚೇಂಜಿಂಗ್ ಆಫ್ ಗಾರ್ಡ್’ (ರಕ್ಷಣೆಯ ಹೊಣೆಯ ಹಸ್ತಾಂತರ) ನಡೆಯುತ್ತದೆ. ಸಂಪ್ರದಾಯವಾಗಿ ಬೆಳೆದು ಬಂದಿರುವ ಈ ವಿಧಿಯು ಮನಸೂರೆಗೊಳ್ಳುವ ನೋಟವಾಗಿದೆ. ಇವೆಲ್ಲಕ್ಕಿಂತ ಮಿಗಿಲಾಗಿ, ಇಲ್ಲಿ ಅರಮನೆಯ ಸುತ್ತಲೂ ಇರುವ ಉದ್ಯಾನಗಳೆಂದರೆ ನನಗೆ ಬಲು ಇಷ್ಟ. ಗ್ರೀನ್ ಪಾರ್ಕ್ ಮತ್ತು ಸೇಂಟ್ ಜೇಮ್ಸ್ ಪಾರ್ಕುಗಳಷ್ಟೇ ಅಲ್ಲದೆ ಅನತಿ ದೂರದಲ್ಲೇ ಹೈಡ್ ಪಾರ್ಕ್ ಇದೆ. ಹೆಸರಾಂತ ಸ್ಪೀಕರ್ಸ್ ಕಾರ್ನರ್ ಇರುವುದು ಈ ಹೈಡ್ ಪಾರ್ಕಿನಲ್ಲೇ. ಎಲ್ಲೆಡೆಯ ಜನರು ಇಲ್ಲಿ ಬಂದು ಪರಸ್ಪರ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದಕ್ಕೆ ಹಾಗೂ ಮುಕ್ತ ಸಂವಾದದ ಪರಂಪರೆಗೆ ಶತಮಾನಗಳಿಂದ ಹೆಸರಾದ ತಾಣ ಇದಾಗಿದೆ.
ಲಂಡನ್‌ನಲ್ಲಿ ನಿನಗೆ ಅತ್ಯಂತ ಇಷ್ಟವಾದ ಕೆಲಸವೇನೆಂದು ನನ್ನನ್ನು ಕೇಳಿದವರಿಗೆಲ್ಲಾ, ನನ್ನ ಉತ್ತರ ಮಾತ್ರ ಯಾವಾಗಲೂ ಒಂದೇ ಆಗಿರುತ್ತದೆ: ಅದೇನೆಂದರೆ ಅಲ್ಲಿ ನಡೆದಾಡುವುದು. ಲಂಡನ್ನಿನಲ್ಲಿ ನಡೆದಾಡುವ ಅನುಭವವನ್ನು ಬೇರಾವುದಕ್ಕೂ ಹೋಲಿಸಲು ಸಾಧ್ಯವೇ ಇಲ್ಲ. ಅದರಲ್ಲೂ ಸಿಟಿಯ ಮಧ್ಯ ಭಾಗದಲ್ಲಿ ಹೈಡ್ ಪಾರ್ಕ್ ಇರುವಾಗ ಬೇರಿನ್ನೇನು ಬೇಕು? ಇಲ್ಲಿ ಕಾಲ್ನಡಿಗೆಯಲ್ಲಿ ಅನ್ವೇಷಿಸುತ್ತಾ ಸಾಗುವಾಗ ನಗರದ ಸೊಬಗು ಎಳೆಎಳೆಯಾಗಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಅವಿತುಕೊಂಡAತಿರುವ ಓಣಿಗಳು, ಆಕರ್ಷಕ ಕೆಫೆಗಳು, ಸಾರ್ವಜನಿಕ ಸ್ಥಳಗಳಲ್ಲಿರುವ ಮನಮೋಹಕ ದೃಶ್ಯ ಕಲೆಗಳು ಹಾಗೂ ಅನ್ವೇಷಣೆಗೊಳ್ಳಲು ಕಾದು ನಿಂತಂತಿರುವ ಚಾರಿತ್ರಿಕ ತಾಣಗಳಿಗೆ ನೀವು ಸಾಕ್ಷಿಯಾಗುತ್ತೀರಿ.
ಲಂಡನ್ ನಗರವನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಒಂದೊಂದೇ ಹೆಜ್ಜೆ ಇರಿಸುತ್ತಾ ಅದರಲ್ಲಿ ಮುಳುಗಿಬಿಡಬೇಕು. ಅಂದಂತೆ, ನನ್ನ ಈ ಅನುಭವವನ್ನು ಗೆಳತಿಯೊಂದಿಗೆ ಹಂಚಿಕೊಳ್ಳಲು ನಾನು ಕಾತರಳಾಗಿದ್ದೆ.
ಲಂಡನ್ನಿನ ಬಹಳಷ್ಟು ಪ್ರಮುಖ ಸ್ಥಳಗಳನ್ನು ನಾನು ಹಾಗೂ ನನ್ನ ಗೆಳತಿ ಮುಂಚೆಯೇ ನೋಡಿದ್ದೆವು. ಆದ್ದರಿಂದ ನಮ್ಮ ಈ ಭೇಟಿಯಲ್ಲಿ ಅಷ್ಟಾಗಿ ಪರಿಚಿತವಲ್ಲದ ಸ್ಥಳಗಳನ್ನು ನೋಡಲು ನಿರ್ಧರಿಸಿದ್ದೆವು. ನಾವಿಬ್ಬರೂ ಪಿ.ಜಿ.ವೋಡ್ ಹೌಸ್ ಪುಸ್ತಕಗಳನ್ನು ಓದುತ್ತಾ ಬೆಳೆದವರು. ಜೀವ್ಜ್ ಮತ್ತು ಬರ್ಟಿ ವೂಸ್ಟ ಅವರ ವಿನೋದ ಕತೆಗಳನ್ನು ಓದುವ ಖುಷಿಯು ನಮ್ಮ ಬದುಕುಗಳನ್ನು ಉದ್ದೀಪನಗೊಳಿಸುತ್ತದೆ. ಅವುಗಳಲ್ಲಿ ಬರುವ ಬೀದಿಗಳು, ಜೆಂಟಲ್ ಮ್ಯಾನ್ಸ್ ಕ್ಲಬ್‌ಗಳು, ಹ್ಯಾಟ್ ಷಾಪ್‌ಗಳು ಹಾಗೂ ರೈಲು ನಿಲ್ದಾಣಗಳನ್ನೆಲ್ಲಾ ಕಲ್ಪಿಸಿಕೊಂಡಿದ್ದೆವು. ಹೀಗಾಗಿ ಮೇಫೇರ್‌ನಿಂದಲೇ ನಮ್ಮ ಪ್ರವಾಸ ಆರಂಭಿಸುವುದು ಬಹಳ ಸೂಕ್ತವಾಗಿತ್ತು.
ಮೇಫೇರ್ ಲಂಡನ್ನಿನ ಅತ್ಯಂತ ಪ್ರತಿಷ್ಠಿತ ಜಿಲ್ಲೆಗಳಲ್ಲಿ ಒಂದಾಗಿದೆ. ಇದು ಸೊಬಗು ಹಾಗೂ ಐಷಾರಾಮಕ್ಕೆ ಮತ್ತೊಂದು ಹೆಸರೇ ಆಗಿದೆ. ಜಾರ್ಜಿಯನ್ ವಾಸ್ತುಶಿಲ್ಪ, ಪ್ರತಿಷ್ಠಿತ ಬೊಟಿಕ್‌ಗಳು, ಪಂಚತಾರಾ ಹೋಟೆಲ್‌ಗಳು ಹಾಗೂ ವಿಶ್ವದರ್ಜೆಯ ಔತಣಗಳಿಂದ ಇದು ಗಮನ ಸೆಳೆಯುತ್ತದೆ. ನಗರದ ಅತ್ಯಾಧುನಿಕ ಜೀವನಶೈಲಿಯ ಇಣುಕು ನೋಟವನ್ನು ಇದು ಲಭ್ಯವಾಗಿಸುತ್ತದೆ. ಲಂಡನ್ನಿನಲ್ಲಿ ನಡೆದಾಡುವಾಗ ಕಟ್ಟಡಗಳ ಮೇಲಿನ ನೀಲಿ ಬಣ್ಣದ ಫಲಕಗಳನ್ನು ಗಮನಿಸಲು ಮರೆಯಬಾರದು. ಇದು ಪ್ರಸಿದ್ಧ ವ್ಯಕ್ತಿಗಳು ಬಾಳಿ ಬದುಕಿನ ಸ್ಥಳಗಳ ಬಗೆಗಿನ ಮಾಹಿತಿಯನ್ನು ತಿಳಿಸಿ, ನಮಗೆ ಇತಿಹಾಸದ ಕೊಂಡಿಯೊಂದಿಗೆ ಬೆಸೆದುಕೊಂಡ ಅನುಭವವನ್ನು ಕೊಡಮಾಡುತ್ತದೆ. ಹೀಗೆ ನಡೆದಾಡುವಾಗ, ಬ್ರಿಟಿಷ್ ಲೈಬ್ರರಿ ಹತ್ತಿರದ ರಸೆಲ್ ಸ್ಕ್ವೇರ್‌ನಲ್ಲಿ ಚಾರ್ಲ್ಸ್ ಡಿಕೆನ್ಸ್ ವಾಸಿಸುತ್ತಿದ್ದ ಕಟ್ಟಡ ನನ್ನ ಕಣ್ಣಿಗೆ ಬಿತ್ತು. ಮೇಫೇರ್‌ನಲ್ಲಿ ಬೀಜೀಸ್ ಒಂದೊಮ್ಮೆ ವಾಸಿಸುತ್ತಿದ್ದುದರ ಕುರಿತ ಮಾಹಿತಿ ಇದ್ದ ಫಲಕವೊಂದು ಕಂಡುಬಂತು. ಕೊನೆಗೆ, ನಮ್ಮ ಸಾಹಿತ್ಯಿಕ ಯಾನಕ್ಕೆ ಒಪ್ಪುವಂತೆ ಸ್ವತಃ ಪಿ.ಜಿ.ವೋಡ್ ಹೌಸ್ ಬಾಳಿ ಬದುಕಿದ ಡನ್ ರೇವನ್ ಸ್ಟ್ರೀಟ್‌ಗೆ ನಾವು ಹೋದೆವು.
ಅಲ್ಲಿಂದ ಮುಂದೆ ನಾವು ನಾಟಿಂಗ್ ಹಿಲ್ ಮತ್ತು ಪೋರ್ಟೊಬೆಲ್ಲೊ ರಸ್ತೆಯ ವಿಂಟೇಜ್ ಮಾರ್ಕೆಟ್‌ಗೆ ಹೋದೆವು. ‘ನಾಟಿಂಗ್ ಹಿಲ್’ ರೊಮಾಂಟಿಕ್ ಕಾಮಿಡಿಯಿಂದ ಮನೆಮಾತಾದ ಈ ಚಲನಶೀಲ ಮಾರ್ಕೆಟ್ ತನ್ನ ಕಂಗೊಳಿಸುವ ನಿವಾಸಗಳು, ವಿಶಿಷ್ಟ ಪ್ರಾಚೀನ ವಸ್ತುಗಳು ಹಾಗೂ ಲವಲವಿಕೆಯ ವಾತಾವರಣದಿಂದ ಎಂದಿನಿಂದಲೂ ಪ್ರವಾಸಿಗರನ್ನು ಸೆಳೆಯುತ್ತಲೇ ಬಂದಿದೆ. ಹೀಗೆ, ಕಾಲಾತೀತ ಸೊಬಗಿಗೆ ಸಾಕ್ಷಿಯಾಗುತ್ತಾ ನಾವು ನಮ್ಮ ಸಂಜೆಯನ್ನು ‘ದಿ ರಿಟ್ಜ್’ನಲ್ಲಿ ಕೊನೆಗೊಳಿಸಿದೆವು. ಅಂದಹಾಗೆ, ವಿಶಿಷ್ಟ ಬ್ರಿಟಿಷ್ ಅನುಭವವನ್ನು ಪ್ರತಿನಿಧಿಸುವ ಲಂಡನ್‌ನಲ್ಲಿನ ಮಧ್ಯಾಹ್ನದ ರುಚಿಕರ ಸ್ವಾದದ ಚಹಾಕ್ಕೆ ಹೆಸರಾದ ಹೋಟೆಲ್ ಇದಾಗಿದೆ.
ಮರುದಿನ ನಾವು ಕೋವೆಂಟ್ ಗಾರ್ಡನ್‌ಗೆ ತೆರಳಿದೆವು. ಇದು, ಸಾರ್ವಜನಿಕ ಕಲಾ ಪ್ರದರ್ಶಕರು, ಬೊಟಿಕ್‌ಗಳು ಹಾಗೂ ತಿಂಡಿತಿನಿಸಿನ ಮಳಿಗೆಗಳಿಂದ ಗಿಜಿಗುಡುವ ಜಿಲ್ಲೆಯಾಗಿದೆ. ಅಲ್ಲದೆ, ಮಂತ್ರಮುಗ್ಧಗೊಳಿಸುವ ಮೋಹಕತೆ, ಐತಿಹಾಸಿಕ ವಾಸ್ತುಶಿಲ್ಪ ಹಾಗೂ ಆಧುನಿಕ ನಾಡಿಮಿಡಿತ ಹದವಾಗಿ ಮಿಳಿತಗೊಂಡ ತಾಣವೂ ಹೌದು. ಕ್ಯಾಮ್ಡೆನ್ ಮಾರ್ಕೆಟ್ ಮತ್ತೊಂದು ಖಾದ್ಯ ನೆಲೆಯಾಗಿದ್ದು, ಸ್ಟ್ರೀಟ್ ಫುಡ್‌ಗಳಿಂದಾಗಿ ಪ್ರಪಂಚದ ಎಲ್ಲಾ ಭಾಗಗಳ ಪ್ರವಾಸಿಗರ ಬಾಯಲ್ಲಿ ನೀರೂರಿಸುತ್ತದೆ. ಆಧುನಿಕ ಭಾರತೀಯ ರುಚಿಯ ಖಾದ್ಯಕ್ಕಾಗಿ ನಾವು ಡಿಶೂಮ್‌ನಲ್ಲಿ ಔತಣ ಸವಿದೆವು. ಅಂದಂತೆ, ಇದು ಬಾಂಬೆಯ ಸ್ವಾದಗಳನ್ನು ಲಂಡನ್‌ನ ಕಾಸ್ಮೋಪಾಲಿಟನ್ ರುಚಿಗಳೊಂದಿಗೆ ಮೇಳೈಸುವ ರೆಸ್ಟೋರೆಂಟ್ ಆಗಿದೆ.
ನಾವು ಅಂತಿಮವಾಗಿ ‘ದಿ ಶಾರ್ಡ್’ ರೆಸ್ಟೋರೆಂಟ್‌ನಲ್ಲಿ ಸಂಭ್ರಮಾಚರಣೆಯ ಔತಣದೊಂದಿಗೆ ನಮ್ಮ ಪ್ರವಾಸಕ್ಕೆ ತೆರೆ ಎಳೆದೆವು. ಕಿಟಕಿ ಬದಿಯಲ್ಲಿ ಕುಳಿತು, ಅಲ್ಲಿನ ಭವ್ಯ ನೋಟಗಳನ್ನು ಕಣ್ತುಂಬಿಕೊಳ್ಳುತ್ತಾ ಮೆಚ್ಚುಗೆ ಸೂಚಿಸಿದೆವು. ಕೆಳಗೆ ಸಂಜೆಯ ದೀಪಗಳಲ್ಲಿ ‘ಟವರ್ ಬ್ರಿಜ್’ ಮಿನುಗುತ್ತಿತ್ತು. ಇದು, ಲಂಡನ್ನಿನ ಸಮೃದ್ಧ ಇತಿಹಾಸ ಹಾಗೂ ವರ್ತಮಾನದ ಪ್ರಭಾವಳಿಯನ್ನು ಸಮತೋಲನ ಮಾಡಿದಂತೆ ತೋರುತ್ತಿತ್ತು. ನಾವು ನಮ್ಮ ಪಯಣವನ್ನು ಅವಲೋಕಿಸಿದಾಗ, ಲಂಡನ್ ಎಂಬುದು ಕೇವಲ ನಗರವಲ್ಲ, ಅದು ಅನ್ವೇಷಣೆಗಾಗಿ ಕಾದು ಕುಳಿತಿರುವ ಕೊನೆಯಿರದ ಕತೆ ಎನ್ನಿಸಿತು. ಅಂದಂತೆ, ನಿಮ್ಮ ಪಯಣವನ್ನು ಯಾವಾಗ ಆರಂಭಿಸುವಿರಿ?
Post your Comment
Please let us know your thoughts on this story by leaving a comment.