ಅಚ್ಚರಿಗೊಂಡ ನಾನು ವಾಹನ ನಿಲ್ಲಿಸಿದ್ದು ಏಕೆ ಎಂದು ಕೇಳಿದೆ. ಅವರು, "ಕೆಂಪು ಸಿಗ್ನಲ್ ಇರುವ ಕಾರಣಕ್ಕಾಗಿ ನಾನು ವಾಹನ ನಿಲ್ಲಿಸಿದ್ದರೂ ನಿಯಮಗಳಿಗೆ ಬೆಲೆ ಕೊಡದ ಹಿಂದಿನ ವಾಹನಗಳಲ್ಲಿರುವವರು ನಾನು ಜಾಗ ಬಿಡಬೇಕೆಂದು ನಿರೀಕ್ಷಿಸಿ ಹೇಗೆ ಹಾರ್ನ್ ಮಾಡುತ್ತಾರೆ ನೋಡಿ ಎಂಬುದನ್ನು ನಿಮಗೆ ತೋರಿಸಲು” ಎಂದರು.
ನಾನು ಈಗ ನಿಮ್ಮ ಜೊತೆ ಹಂಚಿಕೊಳ್ಳಲಿರುವ ಘಟನೆ ವೀಣಾ ವರ್ಲ್ಡ್ ಆಗಷ್ಟೇ ಆರಂಭಗೊಳ್ಳುತ್ತಿದ್ದಾಗ ನಡೆದದ್ದು. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಾ ಸಂಸ್ಥೆಯನ್ನು ಕಟ್ಟುವುದರಲ್ಲಿ ನಿರತರಾಗಿದ್ದೆವು. ಪ್ರತಿಯೊಬ್ಬರಿಂದಲೂ ಬೆಂಬಲ ದೊರೆತಾಗ ಅದು ನಮಗೆ ಸಿಕ್ಕ ವರವೇನೋ ಎಂದು ಅನ್ನಿಸುತ್ತಿತ್ತು. ಇಂತಹ ಬೆಂಬಲವು ನಮ್ಮ ಕಾರ್ಯ ಮುಂದುವರಿಸಲು ಶಕ್ತಿ ತುಂಬುತ್ತಿತ್ತು. ಒಂದು ದಿನ ಬಹುಕಾಲದ ಗೆಳತಿ ನೀಲು ಸಿಂಗ್ ಕಚೇರಿಗೆ ಭೇಟಿ ಕೊಟ್ಟಳು. ಒಂದಷ್ಟು ಹೊತ್ತು ಹರಟೆ ಹೊಡೆದ ಮೇಲೆ ಆಕೆ ಹೇಳಿದಳು: "ನೀನು ಈ ಎಲ್ಲಾ ಕೆಲಸಗಳಲ್ಲಿ ಪೂರ್ತಿ ಮುಳುಗಿ ಹೋಗಿದ್ದೀಯ! ಸ್ವಲ್ಪ ವಿಶ್ರಾಂತಿ ತೆಗೆದುಕೋ. ಈ ವಾರದ ಕೊನೆಯಲ್ಲಿ ಚೆಂಬೂರಿನಲ್ಲಿರುವ ಟಾಟಾ ಸಾಮಾಜಿಕ ವಿಜ್ಞಾನಗಳ ಸಂಸ್ಥೆಯ ಸಭಾಂಗಣಕ್ಕೆ ಬಾ. ಅಲ್ಲಿ ಅದ್ಭುತ ಕಾರ್ಯಕ್ರಮವೊಂದು ಏರ್ಪಾಡಾಗಿದೆ. ಅದರಲ್ಲಿ ಪಾಲ್ಗೊಂಡು ಖುಷಿ ಅನುಭವಿಸು. ಏನಾದರೂ ಒಂದಿಷ್ಟು ವಿಭಿನ್ನವಾದುದನ್ನು ಮಾಡು". ಹೀಗೆ ಹೇಳಿದ ಅವಳ ಮಾತಿನ ಪ್ರಕಾರ, ನಾವು ವಾರಾಂತ್ಯದಲ್ಲಿ ಅಲ್ಲಿಗೆ ಹೋದೆವು.
ಆ ದಿನಗಳಲ್ಲಿ ವಿಡಿಯೊಕಾಸ್ಟ್ ಗಳಾಗಲಿ ಅಥವಾ ಪಾಡ್ ಕಾಸ್ಟ್ ಗಳಾಗಲಿ ಇರಲಿಲ್ಲ. ಯೂಟ್ಯೂಬ್ ಈಗಿನಷ್ಟು ಪ್ರಚಲಿತಕ್ಕೆ ಬಂದಿರಲಿಲ್ಲ. ಗಣ್ಯ ವ್ಯಕ್ತಿಗಳ ಒಳನೋಟಗಳ ಬಗ್ಗೆ ಕೇಳಿ ತಿಳಿದುಕೊಳ್ಳಲು ನಾವು ಖುದ್ದು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದೆವು. ನೀಲು ಈ ಮುಂಚೆಯೇ ಹೇಳಿದ್ದಂತೆ, ಆ ಕಾರ್ಯಕ್ರಮ ಅತ್ಯುತ್ತಮವಾಗಿತ್ತು. ಆ ಸಂಜೆ ಯಾವತ್ತಿಗೂ ನೆನಪಿನಲ್ಲಿ ಉಳಿಯುವ ಸಂಜೆಯೇ ಸರಿ. ಕಾಲ ಕಳೆಯುತ್ತಾ ಹೋದಂತೆ ಆ ಕಾರ್ಯಕ್ರಮದ ವಿವರಗಳು ನನ್ನ ಸ್ಮೃತಿ ಪಟಲದಿಂದ ಅಳಿಸಿ ಹೋಗಿರಬಹುದು. ಆದರೆ, ಟಾಟಾ ಇಂಡಸ್ಟ್ರೀಸ್ ಲಿಮಿಟೆಡ್ ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಶ್ರೀ ಕಿಶೋರ್ ಚೌಕರ್ ಅವರು ಅವತ್ತು ಮಾಡಿದ ಭಾಷಣದ ಎರಡು ಪ್ರಮುಖ ಅಂಶಗಳು ನನ್ನಲ್ಲಿ ಈಗಲೂ ಅಚ್ಚೊತ್ತಿದಂತೆ ಉಳಿದುಕೊಂಡಿವೆ. ಆಗಿನಿಂದ ನಾವು ಆ ಮಾತುಗಳ ಸಾರವನ್ನು ವೀಣಾ ವರ್ಲ್ಡ್ ಕಂಪನಿಯ ಪ್ರಧಾನ ಮೌಲ್ಯಗಳಾಗಿ ಅಳವಡಿಸಿಕೊಂಡಿದ್ದೇವೆ. ಅವು ನಮ್ಮ ವಾರ್ಷಿಕ ಡೈರಿಯ ಪ್ರಮುಖ ಭಾಗವಾಗಿಯೂ ಮುಂದುವರಿಯುತ್ತಿವೆ.
ಅಂದಂತೆ, ಅವರ ಮಾತುಗಳಲ್ಲಿನ ಮೊದಲನೆಯ ಅಂಶವು ಸುಸ್ಥಿರತೆಗೆ ಸಂಬಂಧಿಸಿದ್ದು. ಶ್ರೀ ಚೌಕರ್ ಅವರು ಹೇಳಿದರು: "ನಾವು ಭೂಮಿಯ ಏರುತ್ತಿರುವ ತಾಪಮಾನ, ಜಲ ಸಂರಕ್ಷಣೆ, ಮತ್ತು ಸಂಪನ್ಮೂಲಗಳ ಬಗ್ಗೆ ತುಂಬಾನೆ ಮಾತಾಡುತ್ತೇವೆ. ಆದರೆ, ಎಲ್ಲಿಯವರೆಗೆ ನಾನು ಪ್ರತಿದಿನ ಬೆಳಿಗ್ಗೆ ಹಲ್ಲುಜ್ಜುವಾಗ ಸುರಿದು ಹೋಗುವ ನಲ್ಲಿಯ ನೀರನ್ನು ನಿಲ್ಲಿಸಲು ಕಾಳಜಿ ತೋರುವುದಿಲ್ಲವೋ ಅಲ್ಲಿಯ ತನಕ ಇಂತಹ ಚರ್ಚೆಗಳಿಗೆ ಯಾವ ಅರ್ಥವೂ ಇಲ್ಲ" ಎಂದು. ಅವರು ಆಡಿದ ಈ ಮಾತುಗಳು ನನ್ನ ಪಾಲಿಗೆ ಕಣ್ಣು ತೆರೆಸುವಂತಹ ನುಡಿಗಳಾಗಿದ್ದವು. ನೀರನ್ನು ಪೋಲು ಮಾಡಬಾರದೆಂಬ ಬಗ್ಗೆ ನಮಗೆ (ವೀಣಾ ವರ್ಲ್ಡ್ ಪ್ರಮುಖರಿಗೆ) ಎಚ್ಚರಿಕೆ ಮುಂಚೆಯೇ ಇತ್ತಾದರೂ, ಅವರ ಮಾತುಗಳು ನಮ್ಮನ್ನು ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿದವು. ಇದರ ಫಲವಾಗಿ, ನಾವು ನಮ್ಮ ವಾಷ್ ಬೇಸಿನ್ ಗಳಲ್ಲಿನ ನಲ್ಲಿಗಳ ನೀರಿನ ರಭಸವನ್ನು ಹೊಂದಾಣಿಕೆಗೊಳಿಸಿದೆವು. ಇದರೊಟ್ಟಿಗೆ, ನೀರಿನ ವಿಷಯದಲ್ಲಿ ಮಾತ್ರವಲ್ಲದೆ ಬದುಕಿನ ಪ್ರತಿಯೊಂದು ವಿಷಯದಲ್ಲಿಯೂ ಪೋಲು ಮಾಡದಿರುವ ಬಗ್ಗೆ ಪ್ರಜ್ಞಾಪೂರ್ವಕವಾಗಿ ಆಲೋಚಿಸುವುದನ್ನು ರೂಢಿಸಿಕೊಂಡೆವು. ಈ ಪ್ರವೃತ್ತಿಯು ನಮ್ಮ ಒಟ್ಟಾರೆ ಜೀವನಶೈಲಿಯ ಮೇಲೆ ಗಮನಾರ್ಹ ಪ್ರಭಾವ ಉಂಟುಮಾಡಿರುವುದು ನಿಸ್ಸಂಶಯ.
ಇನ್ನು, ಅವರ ಮಾತಿನ ಎರಡನೆಯ ಅಂಶವನ್ನು ಜಾಕ್ ಪಾಟ್ ಹೊಡೆಯುವುದಕ್ಕೆ ಹೋಲಿಸಬಹುದು . ಅದು, ಶ್ರೀ ಚೌಕರ್ ಅವರು ಹಂಚಿಕೊಂಡ ವೈಯಕ್ತಿಕ ಅನುಭವವೊಂದಕ್ಕೆ ಸಂಬಂಧಪಟ್ಟಿದ್ದಾಗಿತ್ತು. ಅದೇನೆಂದರೆ, ಒಂದು ಸಲ ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ಚೌಕರ್ ಅವರು ಶ್ರೀ ರತನ್ ಟಾಟಾ ಅವರ ಅಭಿಪ್ರಾಯ ಕೋರುತ್ತಾರೆ. ಚೌಕರ್ ಅವರು ಪ್ರಕರಣದ ಬಗ್ಗೆ ವಿವರಿಸಿ ತಾವು ತೆಗೆದುಕೊಳ್ಳಲು ಉದ್ದೇಶಿಸಿರುವ ಕ್ರಮಗಳ ಬಗ್ಗೆ ತಿಳಿಸುತ್ತಾರೆ. ಆಗ ಶ್ರೀ ಟಾಟಾ ಅವರು ಕೇಳುತ್ತಾರೆ: “ನೀವು ಕಾನೂನಾತ್ಮಕವಾಗಿ ಸರಿ ಇದ್ದೀರಾ?” ಎಂದು. ಚೌಕರ್ ಅವರು, "ಹೌದು ಸರ್!" ಎನ್ನುತ್ತಾರೆ. ಮುಂದೆ, ಟಾಟಾ ಅವರು, "ನೀವು ಎಥಿಕಲಿ (ವೃತ್ತಿ ಮೌಲಿಕವಾಗಿ) ಸರಿ ಇದ್ದೀರಾ?" ಎಂದು ಕೇಳುತ್ತಾರೆ. ಚೌಕರ್ ರವರು ಪುನಃ "ಹೌದು ಸರ್!" ಎಂದು ಪ್ರತ್ಯುತ್ತರ ನೀಡುತ್ತಾರೆ. ಮುಂದುವರಿದು, ಟಾಟಾ ಅವರು "ನೀವು ನೈತಿಕವಾಗಿ ಸರಿ ಇದ್ದೀರಾ?" ಎಂಬ ಪ್ರಶ್ನೆ ಮುಂದಿಡುತ್ತಾರೆ. ಈ ಪ್ರಶ್ನೆಯು ಚೌಕರ್ ಅವರನ್ನು ಸ್ತಬ್ಧಗೊಳಿಸುತ್ತದೆ. ಸ್ಪಷ್ಟವಾಗಿ ಏನೂ ತೋಚದಿದ್ದರೂ ಚೌಕರ್ ಅವರು ಆ ಕ್ಷಣಕ್ಕೆ ಅದಕ್ಕೂ "ಹೌದು ಸರ್!" ಎಂದೇ ಉತ್ತರಿಸುತ್ತಾರೆ. ಆಗ ಟಾಟಾ ಅವರು ಅವರಿಗೆ "ಹಾಗಾದರೆ ಮುಂದುವರಿಯಿರಿ" ಎಂದು ಸಲಹೆ ನೀಡುತ್ತಾರೆ.
ಅದಾದ ನಂತರ, ಶ್ರೀ ಚೌಕರ್ ಅವರು ಎಥಿಕ್ಸ್ ಹಾಗೂ ಮಾರಲ್ಸ್, ಇವುಗಳ ನಿಜವಾದ ವ್ಯತ್ಯಾಸದ ಬಗ್ಗೆ ತಿಳಿಯಲು ಮೊದಲಾದರು. ಈ ಬಗ್ಗೆ ಚೌಕರ್ ಅವರು ನೀಡಿದ ಒಳನೋಟಗಳು ಸ್ವತಃ ನಾನು ಅನುಭವಿಸುತ್ತಿದ್ದ ಹಲವಾರು ಮಾನಸಿಕ ತಾಕಲಾಟಗಳಿಗೆ ಪರಿಹಾರ ಒದಗಿಸಿದ್ದವು. ‘ಕಾನೂನುಬದ್ಧ’ ಹಾಗೂ ‘ಕಾನೂನುಬಾಹಿರ’ ಇವುಗಳ ನಡುವಿನ ವ್ಯತ್ಯಾಸ ನಮಗೆಲ್ಲರಿಗೂ ಗೊತ್ತು. 'ಕಾನೂನು ಬದ್ಧವಾಗಿ ಸರಿಯಾಗಿರುವುದು' ಎಂದರೆ ಆಡಳಿತ ವ್ಯವಸ್ಥೆ ರೂಪಿಸಿದ ಕಾನೂನು ಚೌಕಟ್ಟಿನ ವ್ಯಾಪ್ತಿಯಲ್ಲಿ ವರ್ತಿಸುವುದು/ಕಾರ್ಯಾಚರಿಸುವುದು ಎಂದು ಅರ್ಥ. ಆದರೆ, ಎಥಿಕ್ಸ್ ಎಂದರೆ ನಾವು ಉದ್ಯೋಗದಲ್ಲಿರುವ ಸಂಸ್ಥೆಯು ರೂಪಿಸಿರುವ ನಿಯಮಗಳು ಅಥವಾ ವರ್ತನಾ ಸಂಹಿತೆಯಾಗಿರುತ್ತದೆ. ಅಂದರೆ, ಇದನ್ನು’ವೃತ್ತಿ ಮೌಲಿಕತೆ’ ಎನ್ನಬಹುದು. ನಾವು ಸಂಸ್ಥೆಯ ಭಾಗವಾಗಿದ್ದಾಗ ಇಂತಹ ತತ್ವಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಈ ಮಾರ್ಗದರ್ಶಿ ಸೂತ್ರಗಳ ಪ್ರಕಾರ ನಾವು ನಡೆದುಕೊಂಡಾಗ ‘ಎಥಿಕಲಿ ರೈಟ್’ (ವೃತ್ತಿಮೌಲಿಕವಾಗಿ ಸರಿ ಇರುವುದು) ಎನ್ನಿಸಿಕೊಳ್ಳುತ್ತೇವೆ. ಆದರೆ, "ನೈತಿಕವಾಗಿ ಸರಿ ಇರುವುದು" ಎನ್ನುವುದು ಇವೆರಡಕ್ಕಿಂತ ಭಿನ್ನವಾದುದು. ನೈತಿಕ ಮೌಲ್ಯಗಳು ಎಂಬುದು ನಮಗೆ ನಾವೇ ರೂಪಿಸಿಕೊಂಡ ವ್ಯಕ್ತಿಗತ ನಿಯಮಗಳು, ವಿಧಿಸಿಕೊಂಡ ಮಿತಿಗಳು ಹಾಗೂ ಶಿಸ್ತುಗಳಾಗಿರುತ್ತವೆ. ಈ ಮೌಲ್ಯಗಳನ್ನು ನಮ್ಮ ಮೇಲೆ ಬೇರೆ ಯಾರೂ ಹೇರಿರುವುದಿಲ್ಲ. ಹೀಗಾಗಿಯೇ, ಇವುಗಳು ತುಂಬಾ ಮಹತ್ವಪೂರ್ಣವೂ ಹೌದು. ನೈತಿಕವಾಗಿ ಸರಿಯಾಗಿ ಇರುವುದೆಂದರೆ ವೈಯಕ್ತಿಕ ವ್ಯಕ್ತಿಗತ ಉತ್ತರದಾಯತ್ವದ ಅಗತ್ಯವಿರುತ್ತದೆ.
ನಮ್ಮ ನಾಯಕತ್ವಕ್ಕೆ ಸಂಬಂಧಪಟ್ಟ ಸಭೆಗಳಲ್ಲಿ ನಾನು "ನಮ್ಮಲ್ಲಿ ಎಷ್ಟು ಜನ ರಸ್ತೆಯಲ್ಲಿ ಕೆಂಪು ಸಿಗ್ನಲ್ ಕಂಡಾಗ ರಸ್ತೆ ಖಾಲಿಯಾಗಿದ್ದರೂ ನಿಲ್ಲುತ್ತೇವೆ?" ಎಂಬ ಪ್ರಶ್ನೆ ಯನ್ನು ಆಗಾಗ ಕೇಳುತ್ತಿರುತ್ತೇನೆ. ಆರಂಭದಲ್ಲಿ ಪ್ರತಿಯೊಬ್ಬರೂ ತಮ್ಮ ಕೈ ಎತ್ತುತ್ತಾರೆ. ಅದನ್ನು ನೋಡಿ ನನಗೆ, "ಎಂತಹ ಮಾದರಿ ತಂಡ ಇದು!" ಎಂದು ಹೆಮ್ಮೆಯಾಗುತ್ತದೆ. ಆಗ ಯಾರೋ ಒಬ್ಬರು ಹೇಳುತ್ತಾರೆ "ಅಲ್ಲಿ ಕ್ಯಾಮೆರಾ ಇರುತ್ತದೆ!" ಎಂದು. ಇದನ್ನು ನಾನು ಅರ್ಥೈಸಿಕೊಳ್ಳುವುದು ಹೇಗೆಂದರೆ, ಜನರು ನಿಯಮಗಳನ್ನು ನೈತಿಕ ಜವಾಬ್ದಾರಿಯಿಂದ ಪಾಲಿಸುವುದಿಲ್ಲ. ಅದಕ್ಕೆ ಬದಲಾಗಿ ದಂಡ ಕಟ್ಟಬೇಕಾಗುತ್ತದೆ ಎಂಬ ಭಯದ ಕಾರಣಕ್ಕೆ ಪಾಲಿಸುತ್ತಾರೆ.
ಶ್ರೀ ಪ್ರಕಾಶ್ ಅಯ್ಯರ್ ಅವರು ಈ ದೃಷ್ಟಿಕೋನದ ಬಗ್ಗೆ ತಮ್ಮ ಪುಸ್ತಕದಲ್ಲಿ ಬಹಳ ಉತ್ತಮವಾಗಿ ವಿವರಿಸುತ್ತಾರೆ. ನಾವು ಕೆಂಪು ಸಿಗ್ನಲ್ ಇದ್ದಾಗ ನಮ್ಮ ಮೇಲೆ ಯಾರೋ ನಿಗಾ ಇಟ್ಟಿದ್ದಾರೆ ಎಂಬ ಕಾರಣಕ್ಕೆ ನಿಲ್ಲುವುದು ಅಥವಾ ದಂಡ ಹಾಕುತ್ತಾರೆ ಎಂಬ ಭಯದ ಕಾರಣಕ್ಕೆ ನಿಲ್ಲುವುದು ಬೇರೆ ವಿಷಯ . ಆದರೆ, “ಹಾಗೆ ಕೆಂಪು ಸಿಗ್ನಲ್ ದಾಟುವುದು ಸರಿಯಲ್ಲ” ಎಂಬ ಕಾರಣಕ್ಕಾಗಿ ನಿಲ್ಲಬೇಕು. ಈ ಮನಃಸ್ಥಿತಿಯನ್ನು ನಾವು ನಮ್ಮ ಮಕ್ಕಳಲ್ಲಿ ಮೈಗೂಡುವಂತೆ ಮಾಡಬೇಕು. ಇಂತಹ ಸಣ್ಣ ಅಭ್ಯಾಸಗಳು ಸಮಾಜದಲ್ಲಿನ ದೊಡ್ಡ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತವೆ. ಪ್ರಸ್ತುತ, ನಮ್ಮಲ್ಲಿ ಬಹುತೇಕರು ನಿಯಮಗಳನ್ನು ಅನುಸರಿಸುವ ಬಗ್ಗೆ ತಾತ್ಸಾರ ಧೋರಣೆ ತೋರುತ್ತೇವೆ. ಆದರೆ ಈ ಪ್ರವೃತ್ತಿಯು ಬರುಬರುತ್ತಾ ದೊಡ್ಡ ವೃತ್ತಿಮೌಲಿಕ ವೈಫಲ್ಯ ಹಾಗೂ ನೈತಿಕ ವೈಫಲ್ಯವಾಗಿ ಬೆಳೆದುಬಿಡುತ್ತದೆ. ನಾವು ನಾಗರಿಕರಾಗಿ ದೊಡ್ಡ ಹಗರಣಗಳ ಸಂತ್ರಸ್ತರಾಗಲು ಇಂತಹ ಧೋರಣೆ ಕೂಡ ಒಂದು ಕಾರಣವಾಗಿರುತ್ತದೆ.
ವೀಣಾ ವರ್ಲ್ಡ್ ನಲ್ಲಿ ನಮ್ಮ ಡ್ರೈವರ್ ಗಳು ಉದ್ಯೋಗಕ್ಕೆ ನೇಮಕಗೊಂಡ ಸಂದರ್ಭದಲ್ಲಿ, "ಎಂಥದ್ದೇ ಪರಿಸ್ಥಿತಿ ಇರಲಿ, ಸಿಗ್ನಲ್ ನಿಯಮಗಳನ್ನು ಮೀರಬೇಡಿ" ಎಂದು ಒತ್ತಿ ಹೇಳುತ್ತೇವೆ. ಹೀಗೆ ನಮ್ಮಿಂದ ತರಬೇತುಗೊಂಡ ಡ್ರೈವರ್ ರೊಬ್ಬರ ಸಮಕ್ಷಮದಲ್ಲಿ ಒಂದು ದಿನ ನಾನು ಆಸಕ್ತಿಕರ ಪ್ರಸಂಗವೊಂದಕ್ಕೆ ಸಾಕ್ಷಿಯಾದೆ. ನಮ್ಮ ಚಾಲಕರಲ್ಲಿ ಒಬ್ಬರಾದ ಪ್ರಥಮೇಶ್ ಅವರು ಆ ದಿನ ನಾವು ಎಡ ತಿರುವು ತೆಗೆದುಕೊಳ್ಳಬೇಕಿದ್ದಾಗಲೂ ಕೆಂಪು ಸಿಗ್ನಲ್ ಬಳಿ ವಾಹನ ನಿಲ್ಲಿಸಿದರು. ಅಚ್ಚರಿಗೊಂಡ ನಾನು ವಾಹನ ನಿಲ್ಲಿಸಿದ್ದು ಏಕೆ ಎಂದು ಕೇಳಿದೆ. ಅವರು, "ಕೆಂಪು ಸಿಗ್ನಲ್ ಇರುವ ಕಾರಣಕ್ಕಾಗಿ ನಾನು ವಾಹನ ನಿಲ್ಲಿಸಿದ್ದರೂ ನಿಯಮಗಳಿಗೆ ಬೆಲೆ ಕೊಡದ ಹಿಂದಿನ ವಾಹನಗಳಲ್ಲಿರುವವರು ನಾನು ಜಾಗ ಬಿಡಬೇಕೆಂದು ನಿರೀಕ್ಷಿಸಿ ಹೇಗೆ ಹಾರ್ನ್ ಮಾಡುತ್ತಾರೆ ನೋಡಿ ಎಂಬುದನ್ನು ನಿಮಗೆ ತೋರಿಸಲು” ಎಂದರು. ನನಗೆ ತಕ್ಷಣವೇ, "ನಾವು ನಿಯಮ ಮುರಿಯುವವರ ಬಗ್ಗೆ ಎಷ್ಟೊಂದು ಉದಾರಿಗಳಲ್ಲವೇ?" ಅನ್ನಿಸಿತು!
ಒಂದು ದಿನ ಕಚೇರಿಯಲ್ಲಿ ಬಹಳಷ್ಟು ಹೊತ್ತು ಕೆಲಸ ಮಾಡಿ ಮನೆಗೆ ಕಾರಿನಲ್ಲಿ ಹೋಗುತ್ತಿದ್ದಾಗ ಯೂಟ್ಯೂಬ್ ನಲ್ಲಿ ಲಘು ಹಾಸ್ಯದ ತುಣುಕೊಂದನ್ನು ನೋಡುತ್ತಿದ್ದೆ. ಅದರಲ್ಲಿ ನಗೆ ಕವಿ ಸುರೇಂದ್ರ ಶರ್ಮಾ ಕಾಣಿಸಿಕೊಂಡರು. ಅವರ ಕೆಲವು ವಿಡಿಯೊಗಳನ್ನು ನೋಡಿದ ಮೇಲೆ ನನಗೆ ಅವರಿಗೆ ಏಕೆ ಪದ್ಮಶ್ರೀ ಪುರಸ್ಕಾರ ಪ್ರದಾನ ಮಾಡಲಾಗಿದೆ ಎನ್ನುವುದು ಮನವರಿಕೆಯಾಯಿತು. ಆ ವಿಡಿಯೊವೊಂದರಲ್ಲಿ ಅವರು ವಿನೋದ ಸಾದೃಶ್ಯವೊಂದನ್ನು ಹಂಚಿಕೊಳ್ಳುತ್ತಾರೆ: ಸರ್ಕಾರಿ ಅಧಿಕಾರಿಯೊಬ್ಬರು ಒಮ್ಮೆ ಅವರ ಹತ್ತಿರ ಬಂದು, "ಶರ್ಮಾಜಿ, ಭ್ರಷ್ಟಾಚಾರ ಎಲ್ಲಾ ಕಡೆ ಇದೆ. ನನ್ನ ತಲೆ ಹೋಳಾಗಿ ಹೋಗುತ್ತಿದೆಯೇನೋ ಅನ್ನಿಸುತ್ತದೆ. ಇದರಿಂದ ಹೊರಬರುವ ದಾರಿ ತೋರಿಸಿ" ಎಂದು ಕೇಳುತ್ತಾರೆ. ಶರ್ಮಾಜಿ ಅವರು ಶಾಂತಚಿತ್ತದಿಂದ ಪ್ರತಿಕ್ರಿಯಿಸಿ "ಸುಮ್ಮನೆ ಹಾಗೆಯೇ ಕುಳಿತುಕೊಳ್ಳಿ" ಎನ್ನುತ್ತಾರೆ. ಆ ಆಧಿಕಾರಿ ಮುಂದುವರಿದು, "ಭ್ರಷ್ಟಾಚಾರ ಸುತ್ತಮುತ್ತೆಲ್ಲಾ ಇದೆ. ಇಡೀ ಪ್ರಪಂಚವು ಇದರಲ್ಲಿ ಸಿಲುಕಿದೆ ಎಂಬಂತೆ ತೋರಿಬರುತ್ತಿದೆ" ಎನ್ನುತ್ತಾರೆ. ಆಗ, ಶರ್ಮಾಜಿ ಅವರು ಪುನಃ ಅಷ್ಟೇ ಸಮಾಧಾನದಿಂದ, "ನಿಮ್ಮ ಮತವನ್ನು ಚಲಾಯಿಸಿ ಅಷ್ಟೆ" ಎನ್ನುತ್ತಾರೆ.
ಇತ್ತೀಚೆಗೆ ತೆರೆಕಂಡ "ಫೈಲ್" ಸಿನಿಮಾವು ನೈತಿಕ ಮೌಲ್ಯಗಳ ಪರಿಕಲ್ಪನೆಯನ್ನು ಸುಂದರವಾಗಿ ಪ್ರತಿಬಿಂಬಿಸುತ್ತದೆ. ಇದು ಶಾಲೆಗಳು ಆರಂಭಿಕ ಹಂತದಿಂದಲೇ ಮಕ್ಕಳಿಗೆ ಮೈಗೂಡಿಸಬೇಕಾದ ಪಾಠಗಳಿಗೆ ಸಂಬಂಧಿಸಿದಂತೆ ತೋರಿಸಲೇಬೇಕಾದ ಸಿನಿಮಾ ಕೂಡ ಆಗಿದೆ.
Post your Comment
Please let us know your thoughts on this story by leaving a comment.