Published in the Sunday Prajavani on 15 December, 2024
ನನ್ನ ಸ್ನೇಹಿತರೊಬ್ಬರು ನನಗೆ ತಾವು ತಂದಿದ್ದ ಬೊನ್ಸಾಯ್ ಗಿಡ ತೋರಿಸಿದರು. ಅದರ ಬಗ್ಗೆ ಕಾಳಜಿವಹಿಸಿ ಅದರ ಪ್ರತಿಯೊಂದು ರೆಂಬೆಯ ಅಂಕುಡೊAಕಿನೊAದಿಗೆ ಭಾವಾನಾತ್ಮಕ ಸಂಬAಧ ಹೊಂದುವುದರಲ್ಲಿ ಅವರು ಅದೆಷ್ಟು ಖುಷಿ ಕಾಣುತ್ತಿದ್ದರು ಎಂಬುದು ನನಗೆ ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. “ಇದು ನನ್ನ ಜಪಾನ್ ಪ್ರವಾಸವನ್ನು ನೆನಪಿಸುತ್ತದೆ” ಎಂದು ಅವರು ಮೆಚ್ಚುಗೆಯಿಂದ ಹೇಳಿದರು. ಅವರ ಆ ಮಾತುಗಳು ನನಗೆ ನಾಟಿದವು. ಅವರ ಹೃದಯ ಈಗಲೂ ಸೂರ್ಯೋದಯದ ನಾಡಿನಲ್ಲಿ ಉಳಿದಿರುವುದು ಎದ್ದುಕಾಣುತ್ತಿತ್ತು. ಆಗ, ನನಗೆ ಜಪಾನಿನ ನನ್ನ ಮೊದಲ ಭೇಟಿಯ ನೆನಪಾಗಿ ಮುಖದ ಮೇಲೆ ಮಂದಹಾಸ ಮೂಡಿತು. ಆ ಭೇಟಿಯ ವೇಳೆ, ಜಪಾನ್ ನನ್ನ ಮಟ್ಟಿಗೊಂದು ನಿಗೂಢ ದೇಶವಾಗಿತ್ತು. ತಂತ್ರಜ್ಞಾನ ಉನ್ನತಿಯಲ್ಲಿ ಹಾಗೂ ನಾಗಾಲೋಟದ ಅಭಿವೃದ್ಧಿಯಲ್ಲಿ ಇಡೀ ಪ್ರಪಂಚಕ್ಕೆ ಮುಂಚೂಣಿಯಲ್ಲಿದ್ದೂ ಹೃದಯವನ್ನು ಸಮಾಧಾನಗೊಳಿಸುವ ತೀವ್ರ ಶಾಂತತೆ ನೀಡಬಲ್ಲ ಆ ದೇಶವನ್ನು ಅನ್ವೇಷಿಸುವ ಕಾತರದಲ್ಲಿ ನಾನಿದ್ದೆ. ಪ್ರಸ್ತುತ ನಾವೆಲ್ಲರೂ ಬದುಕುತ್ತಿರುವ ವೇಗದ ಬದುಕಿಗೆ ಅತ್ಯುತ್ತುಮ ಉಪಶಮನಕಾರಕವನ್ನು ಜಪಾನ್ ಹೊಂದಿದೆಯೇನೋ ಎಂಬ ಅನಿಸಿಕೆ ಆ ದೇಶದಲ್ಲಾಗುತ್ತದೆ. ನನಗೆ ಕೆಲವು ವರ್ಷಗಳ ಹಿಂದೆ ಜಪಾನಿಗೆ ಭೇಟಿ ನೀಡುವ ಅವಕಾಶ ಒದಗಿಬಂದಿತ್ತು. ಅದಾದ ನಂತರ, ಅಲ್ಲಿಗೆ ಪದೇಪದೇ ಭೇಟಿ ನೀಡಬೇಕೆಂಬ ನನ್ನ ಹಂಬಲ ಮುಂದುವರಿದೇ ಇದೆ. ಆ ದೇಶಕ್ಕೆ ಭೇಟಿ ನೀಡುವ ಇತರ ಪ್ರವಾಸಿಗರಿಗೂ ಹೀಗನ್ನಿಸುವುದರಲ್ಲಿ ಅಚ್ಚರಿಯೇನೂ ಇಲ್ಲ. ಜಪಾನಿನ ಮೋಹಕತೆಯು ಅಲ್ಲಿನ ಪ್ರಖ್ಯಾತ ತಾಣಗಳಿಗಿಂತ ಮಿಗಿಲಾದುದು; ನಮ್ಮ ಸುತ್ತಲ ಪ್ರಪಂಚವನ್ನು ಹೇಗೆ ಅನುಭವಿಸಬೇಕು ಎಂಬುದನ್ನು ಪ್ರಭಾವಿಸುವ ಜಪಾನಿನ ಜೀವನ ವಿಧಾನ ಅದಾಗಿದೆ.
ಟೋಕಿಯೋಗೆ ನಾನು ಮಾಡಿದ ಬಿಜೆನೆಸ್ ಪ್ರವಾಸವೊಂದು ನನ್ನ ಮರೆಯಲಾಗದ ನೆನಪುಗಳಲ್ಲಿ ಒಂದಾಗಿದೆ. ದಿನವಿಡೀ ಸಮಾವೇಶದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಮೇಲೆ ನಾನು ನಗರಾನ್ವೇಷಣೆಗೆ ಹೊರಟೆ. ಜಪಾನಿ ಭಾಷೆಯ ಅಷ್ಟೇನೂ ಜ್ಞಾನವಿರದ ನಾನು, ನಿರ್ದಿಷ್ಟ ಸ್ಥಳವೊಂದಕ್ಕೆ ತೆರಳಲು ಯಾವ ರಸ್ತೆಯಲ್ಲಿ ಹೋಗಬೇಕೆಂಬ ಬಗ್ಗೆ ಸ್ಥಳೀಯ ಮಹಿಳೆಯೊಬ್ಬರ ಬಳಿ ಕೇಳಿ ತಿಳಿದುಕೊಳ್ಳಲು ಪ್ರಯತ್ನಿಸಿದೆ. ಆಗ ಆ ಮಹಿಳೆಯು, ನನಗೆ ಕೇವಲ ತನ್ನ ಕೈಯಲ್ಲಿ ಆ ರಸ್ತೆಯ ದಿಕ್ಕು ತೋರಿಸಿ ಸುಮ್ಮನಾಗಬಹುದಿತ್ತು. ಆದರೆ, ಆಕೆ ಹಾಗೆ ಮಾಡಲಿಲ್ಲ. ಬದಲಿಗೆ, ನಿಗದಿತ ಜಾಗದÀವರೆಗೆ ನನ್ನ ಜೊತೆ ಬಂದು, ನಾನು ಸರಿಯಾದ ರಸ್ತೆಯಲ್ಲೇ ಸಾಗುತ್ತೇನೆ ಎಂಬುದನ್ನು ಖಚಿತಪಡಿಸಿಕೊಂಡು ನಂತರ ವಾಪಸ್ಸಾದರು. ಇದು ಜಪಾನೀಯರು ತಾವು ಪ್ರಜ್ಞಾಪೂರ್ವಕವಾಗಿ ಬೆಳೆಸಿಕೊಂಡಿರುವ ಸಂಸ್ಕಾರಕ್ಕೆ ಒಂದು ನಿದರ್ಶನವಷ್ಟೆ. ಜಪಾನಿನಲ್ಲಿ ಇಂತಹ ಆತಿಥ್ಯಕ್ಕೆ ‘ಒಮೊತೆನಾಸಿ’ ಎನ್ನಲಾಗುತ್ತದೆ. ಈ ಪ್ರಸಂಗವು ನನ್ನ ಮೇಲೆ ಅಚ್ಚಳಿಯದ ನೆನಪಿನ ಮುದ್ರೆಯೊತ್ತಿತು. ‘ಒಮೊತೆನಾಸಿ’ ಎಂಬುದು ನಿಸ್ವಾರ್ಥದಿಂದ ಕೂಡಿದ ಆತಿಥ್ಯ ವಿಧಾನವಾಗಿದೆ. ಇಲ್ಲಿ ಆತಿಥ್ಯ ನೀಡುವವರು ತಮ್ಮ ಅತಿಥಿಗಳ ಅಗತ್ಯಗಳನ್ನು ಸ್ವತಃ ಮನಗಂಡು, ಅಪ್ಪಟ ಕಾಳಜಿಯೊಂದಿಗೆ ಯಾವ ಪ್ರತಿಫಲವನ್ನೂ ನಿರೀಕ್ಷಿಸದೆ ಅವನ್ನು ಪೂರೈಸುತ್ತಾರೆ. ಜಪಾನಿನ ಸಾಂಪ್ರದಾಯಿಕ ಅತಿಥಿ ಗೃಹಗಳಾದ ‘ರಿಯೋಕಾನ್’ನಲ್ಲಿ ವಾಸ್ತವ್ಯ ಹೂಡಿದಾಗ ಈ ಸಾಂಸ್ಕೃತಿಕ ಮೌಲ್ಯವು ಇನ್ನಷ್ಟು ನಿಚ್ಚಳವಾಗಿ ಅನುಭವಕ್ಕೆ ಬರುತ್ತದೆ. ಈ ‘ರಿಯೋಕಾನ್’ ಗಳು ಟಟಾಮಿ ಮ್ಯಾಟ್‌ಗಳಿಂದ ಕೂಡಿದ ಅಚ್ಚುಕಟ್ಟಾಗಿ ವ್ಯವಸ್ಥೆಗೊಳಿಸಲಾದ ಕೊಠಡಿಗಳಾಗಿರುತ್ತವೆ. ಅತಿಥಿಗಳಿಗೆ ತಾವಿರುವ ಕೊಠಡಿಗೇ ಊಟ ಪೂರೈಸಲಾಗುತ್ತದೆ. ಅಲ್ಲಿನ ನೈಸರ್ಗಿಕ ಬಿಸಿನೀರಿನ ಬುಗ್ಗೆಗಳು (ಆನ್‌ಸೆನ್) ಮೈಮನಸ್ಸುಗಳೆರಡಕ್ಕೂ ಚೈತನ್ಯ ನೀಡುತ್ತವೆ. ಇಲ್ಲಿ ಪ್ರತಿಯೊಂದನ್ನೂ ಅತಿಥಿಗಳಿಗೆ ಅನುಕೂಲ ಹಾಗೂ ಅನುಭೂತಿಯ ಅನುಭವ ಒದಗಿಸುವ ದೃಷ್ಟಿಯಿಂದ ವ್ಯವಸ್ಥೆ ಮಾಡಲಾಗಿರುತ್ತದೆ. ಇಂತಹುದೇ ಆತಿಥ್ಯವನ್ನು ರೆಸ್ಟೋರೆಂಟ್‌ಗಳು ಮತ್ತು ಟೀ ಹೌಸ್‌ಗಳಲ್ಲಿ ಕೂಡ ಕಾಣಬಹುದು. ಇದನ್ನು ಕಣ್ಣಾರೆ ಅನುಭವಿಸುವವರಿಗೆ, ಇಲ್ಲಿ ಸೇವೆ ಎನ್ನುವುದು ಕೇವಲ ಒಂದು ವ್ಯವಹಾರವಲ್ಲ. ಅದೊಂದು ಕಲೆಗಾರಿಕೆಯಾಗಿ ವಿಕಸನಗೊಂಡಿದೆ ಎಂಬುದು ಮನವರಿಕೆಯಾಗುತ್ತದೆ. ಇನ್ನು, ಜಪಾನೀಯರ ಚಹಾ ಆಚರಣೆಯಾದ ‘ಚನೋಯು’ ಎಂಬುದು ಸಮರಸತೆ, ಗೌರವ ಹಾಗೂ ಪ್ರಶಾಂತತೆಯನ್ನು ಕೇಂದ್ರೀಕರಿಸಿದ ಸಂವೇದನಾಶೀಲ ಆಚರಣೆಯಾಗಿದೆ. ಇಲ್ಲಿ ಚಹಾ ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ಪ್ರತಿಯೊಂದು ಚಲನೆಯೂ ಪ್ರಜಾಪೂರ್ವಕವಾಗಿರುತ್ತದೆ. ಇಲ್ಲಿ, ಚಹಾ ಮಾಡಲು ಪಾತ್ರೆಪಗಡಿ ಬಳಸುವುದರಿಂದ ಹಿಡಿದು, ನಂತರ ಸಿದ್ಧಪಡಿಸಿದ ಚಹಾ ಸವಿಯುವ ತನಕದ ಪ್ರತಿಯೊಂದು ಕ್ರಿಯೆಯೂ ಅತಿಥಿಗಳಿಗೆ ವರ್ತಮಾನದ ಕ್ಷಣದಲ್ಲಿ ಮಗ್ನವಾಗಲು ಪೂರಕವಾಗಿರುವಂತೆ ವಿಧಿಬದ್ಧವಾಗಿ ನಡೆಯುತ್ತದೆ. ಜಪಾನಿನ ಸಂಸ್ಕೃತಿಯಲ್ಲಿ ಮಿಳಿತಗೊಂಡಿರುವ ‘ಇಕಿಗಾಯ್’ ತತ್ತ್ವವು ಅಲ್ಲಿನ ಮತ್ತೊಂದು ಪ್ರೇರಣಾದಾಯಕ ಸಂಗತಿಯಾಗಿದೆ. ವ್ಯಕ್ತಿಯ ಉದ್ಯೋಗದ ಉದ್ದೇಶವನ್ನು ಗುರುತಿಸುವ ಪರಿಕಲ್ಪನೆ ಇದಾಗಿರುತ್ತದೆ. ಅದು ದಿನನಿತ್ಯದ ಸಾಮಾನ್ಯ ಕೆಲಸವಾಗಿರಬಹುದು ಅಥವಾ ಜೀವನಪರ್ಯಂತದ ಉದ್ಯೋಗವಾಗಿರಬಹುದು, ಮಾಡುವ ಕಾಯಕದಲ್ಲಿ ಹಿತ ಕಾಣುವ ಹಾಗೂ ಅರ್ಥ ಶೋಧಿಸುವ ದೃಷ್ಟಿಕೋನ ಇದಾಗಿದೆ. ನಮ್ಮ ಬಹಳಷ್ಟು ಅತಿಥಿಗಳು ಜಪಾನ್ ಭೇಟಿಯ ವೇಳೆ ‘ಇಕಿಗಾಯ್’ಗೆ ಖುದ್ದು ಸಾಕ್ಷಿಯಾಗಲು ತೀವ್ರವಾಗಿ ಹಂಬಲಿಸುತ್ತಾರೆ. ಇದನ್ನು ಮನಗಂಡು ನಾವು ಕೂಡ, ‘ವೀಣಾ ವರ್ಲ್ಡ್’ ನಲ್ಲಿ ನಮ್ಮ ಅತಿಥಿಗಳಿಗೆ ಜಪಾನ್ ಅನ್ವೇಷಣೆಯ ವೇಳೆ ‘ಇಕಿಗಾಯ್’ ಅನುಭವ ಲಭ್ಯವಾಗಿಸಲು ವ್ಯವಸ್ಥೆ ಮಾಡುತ್ತೇವೆ. ಜಪಾನ್‌ನಲ್ಲಿ ಇದನ್ನು ಸ್ಯಾಕಾಯ್‌ನಲ್ಲಿರುವ ಚಾಕು ತಯಾರಿಕಾ ವರ್ಕ್ ಶಾಪ್‌ಗಳಿಂದ ಹಿಡಿದು ಕೋಬಿಯಲ್ಲಿನ ವ್ಯಾಗ್ಯು ಬೀಫ್ ಫಾರ್ಮ್ಗಳವರೆಗೂ ಎಲ್ಲೆಡೆ ಕಾಣಬಹುದಾಗಿದೆ. ಇಲ್ಲಿಯ ಸಮೃದ್ಧ ಪ್ರಾಯೋಗಿಕ ಅನುಭವಗಳಲ್ಲಿ ಪ್ರವಾಸಿಗರು ತಮ್ಮನ್ನು ತಾವೇ ಮರೆತುಬಿಡುತ್ತಾರೆ; ಸ್ಥಳೀಯ ಕುಶಲಕರ್ಮಿಗಳೊಂದಿಗೆ ಕಲೆತು ಅವರ ಕುಶಲತೆಯ ಹಿಂದಿರುವ ನಿಖರತೆ ಹಾಗೂ ಶ್ರದ್ಧೆ ಕಂಡು ಬೆರಗಾಗುತ್ತಾರೆ. ಮತ್ತೊಂದು ರೀತಿಯಲ್ಲಿ ನೋಡಿದರೆ, ನಮ್ಮ ಅತಿಥಿಗಳಿಗೆ ಪ್ರವಾಸವೇ ಒಂದು “ಇಕಿಗಾಯ್” ಆಗಿ, ಅವರನ್ನು ಹೊಸ ಸಂಸ್ಕೃತಿಗಳು, ಪರಿಕಲ್ಪನೆಗಳು ಹಾಗೂ ಬದುಕಿನ ವಿಧಾನಗಳೊಂದಿಗೆ ಬೆಸೆಯುತ್ತದೆ.
ಜಪಾನಿನ ಹೆಸರಾಂತ ಸಾಕೂರ (ಚೆರಿ ಅರಳುವ) ಋತುವು ಆ ದೇಶದ ‘ಮೋನೋ ನೋ ಅವಾರೆ’ ದೃಷ್ಟಿಕೋನದ ಪ್ರತೀಕವಾಗಿದ್ದು ಬದುಕಿನ ಕ್ಷಣಿಕತೆಯನ್ನು ಸಂಕೇತಿಸುತ್ತದೆ. ಚೆರಿ ಮೊಗ್ಗುಗಳು ಅರಳಿ ಉದುರುವುದು ಭೌತಿಕ ಸಂಗತಿಗಳ ನಶ್ವರತೆಯನ್ನು ಸಾಕ್ಷೀಕರಿಸುತ್ತದೆ. ಜಪಾನೀಯರು ಕ್ಷಣಿಕತೆಯ ಸೌಂದರ್ಯವನ್ನು ಆರಾಧಿಸುವ ಜೊತೆಗೆ ವರ್ತಮಾನದ ಬದುಕಿಗೆ ತೀವ್ರವಾಗಿ ತುಡಿಯುವುದನ್ನು ಕೂಡ ಇದು ಬಿಂಬಿಸುತ್ತದೆ. ಜಪಾನಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಆ ಜನರ ಈ ಮನೋಧೋರಣೆಯು ಸ್ಪಷ್ಟವಾಗಿ ಅರಿವಿಗೆ ಬರುತ್ತದೆ. ಈ ಎಲ್ಲಾ ಕಾರಣಗಳಿಗಾಗಿ, ಪ್ರವಾಸಿಗರು ಭೇಟಿ ನೀಡಿದಾಗ ಮನಸೂರೆಗೊಳ್ಳುವ ದೇಶ ಇದಾಗಿದೆ. ಪ್ರತಿಯೊಂದು ಋತುವಿನಲ್ಲೂ ಈ ದೇಶವು ಏನಾದರೊಂದು ಹೊಸತನ್ನು ಕೊಡಮಾಡುತ್ತದೆ- ವಸಂತದಲ್ಲಿ ಬಿರಿಯುವ ಚೆರಿ ನಸುಗುಲಾಬಿ, ಬೇಸಿಗೆಯಲ್ಲಿ ಸಂಭ್ರಮದ ಹಬ್ಬಗಳು, ಶರದೃತುವಿನÀಲ್ಲಿ ವರ್ಣಮಯ ಎಲೆಗಳು ಹಾಗೂ ಚಳಿಗಾಲದಲ್ಲಿ ಹಿಮಾಚ್ಛಾದಿತ ಪ್ರಶಾಂತ ದೇಗುಲಗಳು ಹೀಗೆ. ‘ಮೋನೋ ನೋ ಅವಾರೆ’ಯು ಋತುವಿನ ಬದಲಾವಣೆಗಳನ್ನು ಆಸ್ವಾದಿಸುವುದರ ಮಹತ್ವವನ್ನು ನಮಗೆ ಕಲಿಸುತ್ತದೆ. ಬದುಕಿನಲ್ಲಿ ಯಾವುದೂ ಚಿರಂತನವಲ್ಲ ಎಂಬುದನ್ನು ನೆನಪಿಸುವ ಜೊತೆಗೆ ಪ್ರತಿಯೊಂದು ಕ್ಷಣವೂ ಅಮೂಲ್ಯ ಎಂಬ ಅರಿವು ಮೂಡಿಸುತ್ತದೆ.
ಮುಖ್ಯವಾಗಿ ಶರದೃತುವಿನ ಈ ಸಮಯವು ಜಪಾನ್ ಭೇಟಿಗೆ ಬಹಳ ಪ್ರಶಸ್ತವಾದುದು. ಅಕ್ಟೋಬರ್ ಕೊನೆಯಿಂದ ಡಿಸೆಂಬರ್ ಆರಂಭದವರೆಗಿನ ಸಂದರ್ಭವು ಜಪಾನಿನ ಪ್ರಕೃತಿಯು ಬಣ್ಣಗಳಲ್ಲಿ ಮೇಳೈಸುವ ಅವಧಿಯಾಗಿದ್ದು, ಮ್ಯಾಪಲ್ ಮರದೆಲೆಗಳು (ಮೊಮಿಜಿ) ಕೆಂಪು, ಕಿತ್ತಳೆ ಹಾಗೂ ಹೊಂಬಣ್ಣದ ಛಾಯೆಗಳಿಂದ ಕಣ್ಸೆಳೆಯುತ್ತವೆ. ಕ್ಯೂಟೊ ಅರಾಶಿಯಾಮ ಮತ್ತು ನೀಕೋದ ದೇವಸ್ಥಾನಗಳು ಶರದೃತುವಿನ ಭೂರಮಣೀಯತೆಯಿಂದ ಸಮ್ಮೋಹಕಗೊಳಿಸುತ್ತವೆ. ಪ್ರಾಚೀನ ದೇಗುಲಗಳು ಹಾಗೂ ಪರಿಶುಭ್ರ ಸರೋವರಗಳ ಪರಿಸರದಲ್ಲಿನ ಉದುರಿ ಚದುರಿದ ಉಜ್ವಲ ಎಲೆಗಳು ಪ್ರಪಂಚದಲ್ಲೇ ಅಪರೂಪದ ನೋಟಗಳನ್ನು ಲಭ್ಯವಾಗಿಸುತ್ತವೆ. ಮರಮರ ಸದ್ದು ಮಾಡುವ ಸುರಿದ ಎಲೆಗಳ ಮೇಲೆ ನಡೆಯುತ್ತಾ ದಿವ್ಯಮೌನದ ಕಾಡುದಾರಿಗಳಲ್ಲಿ ಸಾಗುತ್ತಿದ್ದರೆ ವರ್ಣಚಿತ್ರದ ಲೋಕದಲ್ಲಿದ್ದೇವೇನೋ ಎಂಬ ಭಾವ ಮೂಡುತ್ತದೆ.
ನೀವು ಚಳಿಗಾಲದ ಅನನ್ಯ ಅನುಭವಕ್ಕಾಗಿ ಬಯಸುತ್ತಿದ್ದರೆ, ‘ತತೆಯಾಮ ಕುರೋಬೆ ಆಲ್ಪೈನ್ ರೂಟ್’ ಭೇಟಿ ನೀಡಲೇಬೇಕಾದ ತಾಣವಾಗಿದೆ. ಉತ್ತರ ಜಪಾನಿನ ಆಲ್ಪ್ ಪರ್ವತಗಳ ಮೂಲಕ ಸಾಗುವ ಈ ಅದ್ಭುತ ಮಾರ್ಗದಲ್ಲಿ ನಿಬ್ಬೆರಗಾಗಿಸುವ ಹಿಮ ಮುಸುಕಿದ ಭೂಪ್ರದೇಶಗಳಿಗೆ ಸಾಕ್ಷಿಯಾಗಬಹುದು. ಈ ಆಲ್ಪೆöÊನ್ ಮಾರ್ಗವು ವಸಂತ ಋತುವಿನಲ್ಲಿ ಉದ್ಭವಿಸುವ ಬೃಹತ್ ಹಿಮಗೋಡೆಗಳಿಗೆ ಹೆಸರಾಗಿದ್ದು, ಈ ಗೋಡೆಗಳು 20 ಮೀಟರುಗಳಷ್ಟು (65 ಅಡಿಗಳು) ಎತ್ತರ ಮುಟ್ಟುತ್ತವೆ. ಮುಗಿಲಿಗೆ ಚಾಚಿದ ಶ್ವೇತವರ್ಣದ ನೈಸರ್ಗಿಕ ಗೋಡೆಗಳ ಗುಂಟ ಸಾಗುವಾಗ ಪ್ರಕೃತಿಯ ಮುಂದೆ ನಾವು ಹುಲುಮಾನವರಷ್ಟೇ ಎಂಬ ಭಾವನೆ ಮೂಡುತ್ತದೆ. ಹಿಮಾಚ್ಶಾದಿತ ಪರ್ವತಗಳು ಹಾಗೂ ಶ್ವೇತವರ್ಣದ ಕಣಿವೆಗಳು ಮನಸ್ಸನ್ನು ಪ್ರಶಾಂತತೆಯಿAದ ಆವರಿಸುವ ಜೊತೆಗೆ ವಿನಮ್ರತೆ ಮೂಡಿಸಿ ಪ್ರಕೃತಿ ವಿಸ್ಮಯ ಕಣ್ತುಂಬಿಕೊಳ್ಳಲು ಹಂಬಲಿಸುವವರಿಗೆ ಹೇಳಿ ಮಾಡಿಸಿದಂತಿವೆ.
ನಿರಂತರ ಬದಲಾವಣೆಗಳನ್ನು ಕಾಣುವ ಭೂಪ್ರದೇಶಗಳು ಹಾಗೂ ಸಂಪ್ರದಾಯಗಳು ಜಪಾನಿನ ಚೈತನ್ಯಶೀಲತೆಯನ್ನು ಸಂಕೇತಿಸುತ್ತವೆ. ಟೋಕಿಯೋದ ಜನನಿಬಿಡ ರಸ್ತೆಗಳಿಂದ ಹಿಡಿದು ಕ್ಯೂಟೋದ ದಿವ್ಯಮೌನದವರೆಗೆ, ಭವ್ಯ ಫ್ಯೂಜಿ ಪರ್ವತದಿಂದ ಹಿಡಿದು ಒಸಾಕಾದ ರುಚಿಭರಿತ ಅಡುಗೆ ಖಾದ್ಯಗಳವರೆಗೆ ಜಪಾನ್ ದೇಶವು ಸರಿಸಾಟಿಯಿಲ್ಲದ ಅನುಭವಗಳನ್ನು ಕೊಡಮಾಡುತ್ತದೆ. ನೀವು ಟೋಕಿಯೋದಲ್ಲಿ ಟೀಮ್ ಲ್ಯಾಬ್ ಪ್ಲ್ಯಾನೆಟ್‌ನಂತಹ ಡಿಜಿಟಲ್ ಕಲಾಕೃತಿಗಳ ಬಳಿ ಸುಳಿದಾಡುತ್ತಿರಬಹುದು ಅಥವಾ ಕ್ಯೂಟೋದ ಜೆನ್ ಗಾರ್ಡನ್‌ನಲ್ಲಿ ಧ್ಯಾನಿಸುತ್ತಿರಬಹುದು, ಜಪಾನ್ ದೇಶವು ಹಳತು ಮತ್ತು ಹೊಸತನ್ನು ಪರಂಪರೆ ಹಾಗೂ ನಾವೀನ್ಯತೆಯ ಅವಿಚ್ಛಿನ್ನ ಸಂಯೋಜನೆಗಳೊAದಿಗೆ ಅನ್ವೇಷಿಸಲು ಅವಕಾಶ ಕಲ್ಪಿಸುತ್ತದೆ.
ಜಪಾನ್ ಪ್ರವಾಸವೆಂಬುದು ಕೇವಲ ಭೇಟಿ ಆಗಿರುವುದಿಲ್ಲ; ಅದು, ಪ್ರಜ್ಞಾಪೂರ್ವಕತೆ, ಗೌರವ ಮತ್ತು ಸಮತೋಲನವನ್ನು ಮೌಲ್ಯಗಳೆಂದು ಪರಿಭಾವಿಸುವ ಸಂಸ್ಕೃತಿಯಲ್ಲಿ ಮಿಂದು ಮೀಯುವುದಾಗಿರುತ್ತದೆ. ಇಕಿಗಾಯ್ ಹಾಗೂ ಕಿಂತ್ಸೂಗಿಯ ತಾತ್ತ್ವಿಕತೆಗಳಿಂದ ಹಿಡಿದು ಮೋನೋ ನೋ ಅವಾರೆ ಹಾಗೂ ವಾಬಿ-ಸಾಬಿಯ ಸೊಬಗಿನವರೆಗೆ ಜಪಾನಿನ ಪ್ರತಿಯೊಂದು ಆಯಾಮವೂ ಉನ್ನತ ಧ್ಯೇಯದೊಂದಿಗೆ ಬದುಕಲು ಪ್ರೇರೇಪಿಸುವ ಜೊತೆಗೆ ಬದುಕಿನ ಪಯಣವನ್ನು ಹಾಗೂ ಅದರ ಅಪರಿಪೂರ್ಣತೆಗಳನ್ನು ಮೆಚ್ಚುವ ಬಗೆಯನ್ನು ಕಲಿಸುತ್ತದೆ. ಜಪಾನ್ ದೇಶದ ಸುತ್ತಾಟವು ಕೇವಲ ಭೌತಿಕ ಯಾನವಾಗಿರದೆ ಆಧ್ಯಾತ್ಮಿಕ ಮತ್ತು ಭಾವನಾತ್ಮಕ ಪಯಣಗಳನ್ನು ಕೂಡ ಕೊಡಮಾಡುತ್ತದೆ. ಈ ಅದ್ಭುತ ದೇಶವು ನೀಡುವ ಅನುಭವಗಳ ಬಗ್ಗೆ ಮೆಲುಕು ಹಾಕಿದಾಗ, ಸುದೀರ್ಘ ಅವಧಿಯ ನಂತರವೂ ಅದು ಹೃದಯದಲ್ಲಿ ಅಚ್ಚಳಿಯದೆ ಉಳಿಯುವ ದೇಶ ಎಂಬುದು ನನಗೆ ಸ್ಪಷ್ಟವಾಗುತ್ತದೆ. ಈಗ ನಿಮಗೆ ನನ್ನ ಪ್ರಶ್ನೆ ಏನೆಂದರೆ: ನಿಮ್ಮ ಮುಂದಿನ ಪ್ರವಾಸದಲ್ಲಿ ಜಪಾನ್ ನಿಮ್ಮನ್ನು ಹೇಗೆ ಪ್ರೇರೇಪಿಸುತ್ತದೆ?
Post your Comment
Please let us know your thoughts on this story by leaving a comment.