Published in the Sunday Prajavani on 29 September, 2024
ಪ್ರಪಂಚದ ಶ್ವಾಸಕೋಶ! ಹೌದು, ಅಮೆಜಾನ್ ದಟ್ಟಾರಣ್ಯದ ಅತ್ಯಂತ ಸೂಕ್ತ ಬಣ್ಣನೆ ಇದು! ನಮ್ಮ ವಾರದ ಪಾಡ್ ಕಾಸ್ಟ್ "ಟ್ರ್ಯಾವೆಲ್, ಎಕ್ಸ್ ಪ್ಲೋರ್, ಸೆಲೆಬ್ರೇಟ್ ಲೈಫ್" ಗೆ ಸಂಬಂಧಿಸಿದಂತೆ ನಾನು ನೀಲ್ ಜೊತೆ ದಕ್ಷಿಣ ಅಮೆರಿಕ ಬಗ್ಗೆ ಚರ್ಚಿಸುತಿದ್ದೆ. ನಮ್ಮ ಕೇಳುಗರಿಂದ ಈ ವಿಷಯಕ್ಕಾಗಿ ತುಂಬಾ ಬೇಡಿಕೆಯಿತ್ತು. ನಮಗೂ ಕೇಳುಗರನ್ನು ನಿರಾಸೆಗೊಳಿಸುವ ಮನಸ್ಸಿರಲಿಲ್ಲ. ಈ ಬಗ್ಗೆ ಸಂಶೋಧನೆ ನಡೆಸಿದ ನಮ್ಮಿಬ್ಬರಿಗೂ ಕಷ್ಟವಾದ ನಿರ್ಧಾರ ತೆಗೆದುಕೊಳ್ಳುವ ಸವಾಲು ಎದುರಾಗಿತ್ತು: ನಾವು ಪ್ರವಾಸ ಪಟ್ಟಿಯಿಂದ ಯಾವುದನ್ನು ಸೇರಿಸಬೇಕು ಹಾಗೂ ಯಾವುದನ್ನು ಕೈ ಬಿಡಬೇಕು? ಇದು, ಹೆಸರಿಸಲೇಬೇಕಾದ ಹಲವಾರು ಸುಂದರ ದೇಶಗಳನ್ನು ಒಳಗೊಂಡ ಬಲು ದೊಡ್ಡ ಭೂಭಾಗ. ದಕ್ಷಿಣ ಅಮೆರಿಕಾದ ವಿಷಯಕ್ಕೆ ಬಂದಾಗ ಇದು ನನಗೆ ಯಾವಾಗಲೂ ಎದುರಾಗುವ ಸವಾಲು ಕೂಡ ಹೌದು. ವೀಣಾ ವರ್ಲ್ಡ್ ಪ್ರಾಡಕ್ಟ್ ತಂಡದವರು ಈ ಮನಮೋಹಕ ಖಂಡದ ಪ್ರವಾಸಕ್ಕಾಗಿ ವೇಳಾಪಟ್ಟಿ ಸಿದ್ಧಪಡಿಸುವಾಗಲೂ ಇದೇ ದ್ವಂದ್ವ ನಮಗೆ ಎದುರಾಗಿತ್ತು. ದಕ್ಷಿಣ ಅಮೆರಿಕಕ್ಕೆ ಈ ಮುಂಚೆಯೇ ಭೇಟಿ ಕೊಟ್ಟಿದ್ದ ಟೂರ್ ಮ್ಯಾನೇಜರ್ ಗಳು ಮತ್ತು ನಾವುಗಳೆಲ್ಲಾ ನಮ್ಮ ಮೆಚ್ಚಿನ ಸ್ಥಳಗಳನ್ನು ಪಟ್ಟಿಗೆ ಸೇರಿಸಬೇಕೆಂದು ಪಟ್ಟು ಹಿಡಿದಿದ್ದೆವು.
ದಕ್ಷಿಣ ಅಮೆರಿಕದ ಪ್ರವಾಸಯನ್ನು ತುಂಬಾ ಜಾಣ್ಮೆಯಿಂದ ಯೋಜಿಸುವುದು ಅತ್ಯಗತ್ಯ. ಆ ಪ್ರದೇಶವನ್ನು ತಲುಪಲು 24 ತಾಸುಗಳು ಹಿಡಿಯುತ್ತವೆ. ಆದರೆ ಎಲ್ಲರಿಗೂ ಅಷ್ಟು ವ್ಯವದಾನ ಇರುವುದಿಲ್ಲ! ಅಲ್ಲದೆ, ಪ್ರಪಂಚದಲ್ಲಿ ಭೇಟಿ ಕೊಡಬೇಕಾದ ಇನ್ನಿತರ ಸ್ಥಳಗಳು ಕೂಡ ಇವೆಯಲ್ಲ. ಹಾಗಾದರೆ, ಒಂದು ಪರಿಪೂರ್ಣ ಪ್ರವಾಸವನ್ನು ಯೋಜಿಸುವುದು ಹೇಗೆ? ಈ ಪ್ರಶ್ನೆ ಉಂಟಾದಾಗ, ವೀಣಾ ವರ್ಲ್ಡ್ ಪ್ರಾಡಕ್ಟ್ ತಂಡದವರು ಬೇರೆ ಬೇರೆ ಮನಃಸ್ಥಿತಿಯವರಿಗಾಗಿ ಪ್ರತ್ಯೇಕ ಪ್ರವಾಸಗಳನ್ನು ಯೋಜಿಸುವ ನಿರ್ಧಾರಕ್ಕೆ ಬಂದರು. ಇದರ ಭಾಗವಾಗಿ, ದಕ್ಷಿಣ ಅಮೆರಿಕದ ಬಹುತೇಕ ಪ್ರಮುಖ ಸ್ಥಳಗಳಿಗೆ ಭೇಟಿ ಕೊಡಲು ಸಾಧ್ಯವಾಗುವಂತಹ 22 ದಿನಗಳ ಸುಂದರ ಪ್ರವಾಸ ಯೋಜನೆಯನ್ನು ಕೂಡ ಸಿದ್ಧಪಡಿಸಿದವು. ಭೂಮಂಡಲದ ಅರ್ಧದಷ್ಟನ್ನು ವಿಮಾನದಲ್ಲಿ ಕ್ರಮಿಸಿ ನಮಗೆ ಬರೋಬ್ಬರಿ ತದ್ವಿರುದ್ಧ ಸಮಯ ವಲಯದಲ್ಲಿರುವ ಪ್ರದೇಶಕ್ಕೆ ಹೋದ ಮೇಲೆ ಅಲ್ಲಿನ ಅದ್ಭುತ ತಾಣಗಳಿಗೆ ಭೇಟಿ ಕೊಡದಿದ್ದರೆ ಅನ್ಯಾಯವಾದೀತು. ಒಂದೊಮ್ಮೆ, ಯಾರಿಗಾದರೂ ಸಮಯದ ಅಭಾವವಿದ್ದಲ್ಲಿ ಅಥವಾ ಕೆಲವೇ ದೇಶಗಳನ್ನು ನೋಡಿದರೆ ಸಾಕು ಎನ್ನುವುದಿದ್ದಲ್ಲಿ ಅಂತಹ ಆಯ್ಕೆಗೂ ಅವಕಾಶವಿದೆ. ದಕ್ಷಿಣ ಅಮೆರಿಕಕ್ಕೆ ಭೇಟಿ ನೀಡುವುದೆಂದರೆ ಅದು ನಿಸರ್ಗ ಸೌಂದರ್ಯ, ಸಾಂಸ್ಕೃತಿಕ ಸಮೃದ್ಧಿ ಹಾಗೂ ಎಲ್ಲೆ ಇಲ್ಲದ ಸಾಹಸಗಳಿಗೆ ಕೈಬೀಸಿ ಕರೆಯುವ ಭೂಭಾಗವನ್ನು ಅನ್ವೇಷಿಸಿಲು ಆಮಂತ್ರಣವಾಗಿರುತ್ತದೆ. ನೀವು ಪ್ರಾಚೀನ ಅವಶೇಷಗಳಲ್ಲಿ ಆಸಕ್ತಿ ಹೊಂದಿರಬಹುದು, ಅರಣ್ಯದ ಬಗೆಗೆ ಕುತೂಹಲ ಹೊಂದಿರಬಹುದು ಅಥವಾ ರಂಗುರಂಗಿನ ನಗರಗಳೆಡೆಗೆ ಸೆಳೆತ ಹೊಂದಿರಬಹುದು, ಇವೆಲ್ಲಕ್ಕೂ ದಕ್ಷಿಣ ಅಮೆರಿಕವು ಇನ್ನಷ್ಟು ಮತ್ತಷ್ಟು ಹಂಬಲಿಸುವಂತಹ ಮರೆಯಲಾಗದ ಅನುಭವವನ್ನು ಮೊಗೆದುಕೊಡುವುದಂತೂ ನಿಸ್ಸಂಶಯ. ಬಾಯ್ ನೆಸ್ ಐರಿಸ್ ಮತ್ತು ರಿಯೋ ಡಿ ಜನೈರೋ ನಗರಗಳಲ್ಲಿ ಸಂಸ್ಕೃತಿಗಳ ಸಮ್ಮಿಲನದ ಚಲನಶೀಲತೆ ಎದ್ದು ಕಾಣುತ್ತದೆ. ಅರ್ಜೆಂಟೀನಾದ ಟ್ಯಾಂಗೊ, ಬ್ರೆಜಿಲ್ ನ ಸಾಂಬಾ, ಹಾಗೂ ಖಂಡದಾದ್ಯಂತ ಕಂಡುಬರುವ ಸಮೃದ್ಧ ಪಾಕ ಪದ್ದತಿಗಳು ದಕ್ಷಿಣ ಅಮೆರಿಕಕ್ಕೆ ನಿರ್ದಿಷ್ಟ ಎನ್ನಬಹುದಾದ ಅನನ್ಯ ಸಾಂಸ್ಕೃತಿಕ ಮೇಳೈಸುವಿಕೆಯನ್ನು ಸಾರುತ್ತವೆ. ಬ್ರೆಜಿಲ್ ನ ಕಾರ್ನಿವಲ್ ನಂತಹ ಹಬ್ಬಗಳು ಈ ಖಂಡದ ಜನರ ಸಂಗೀತ, ನೃತ್ಯ ಹಾಗೂ ಸಂಭ್ರಮಾಚರಣೆಗಳೆಡೆಗಿನ ಪ್ರೀತಿಯ ಪ್ರತೀಕವಾಗಿ ಗಮನ ಸೆಳೆಯುತ್ತದೆ.
ನನಗೆ ಕೆಲವು ವರ್ಷಗಳ ಹಿಂದೆ ಇಲ್ಲಿಗೆ ಭೇಟಿ ನೀಡುವ ಅವಕಾಶ ಒದಗಿ ಬಂದಿತ್ತು. ಆ ಭೇಟಿಯ ವೇಳೆ ಅಲ್ಲಿನ ಲ್ಯಾಟಿನ್ ಜನರು ಹಾಗೂ ನಮ್ಮ ಭಾರತೀಯರ ನಡುವೆ ಸಾಕಷ್ಟು ಸಾಮ್ಯತೆಗಳಿವೆ ಎಂದು ನನಗೆ ಅನ್ನಿಸಿತ್ತು. ನಮ್ಮಂತೆಯೇ ಅವರು ಕೂಡ ಆತಿಥ್ಯ ನೀಡುವುದರಲ್ಲಿ ಖುಷಿ ಕಾಣುವ, ಬೆಚ್ಚನೆಯ ಪ್ರೀತಿ ತೋರಿಸುವ, ಅನ್ಯರನ್ನು ಆದರದಿಂದ ಕಾಣುವ, ಸಾಂಸ್ಕೃತಿಕ ಹಾಗೂ ಕೌಟುಂಬಿಕ ಮೌಲ್ಯಗಳಿಗೆ ಹೆಚ್ಚು ಒತ್ತುಕೊಡುವ ಮನೋಭಾವ ಹೊಂದಿದವರಾಗಿದ್ದಾರೆ.
ಈಗ ದಕ್ಷಿಣ ಅಮೆರಿಕದಲ್ಲಿನ ಪ್ರೇಕ್ಷಣೀಯ ಸ್ಥಳಗಳ ವಿಷಯಕ್ಕೆ ಬರೋಣ. ಇನ್ನು, ಇಲ್ಲಿನ ಪ್ರವಾಸ ಶುರು ಮಾಡಲು ಇಗ್ ವಾಸ್ಸು ಜಲಪಾತಕ್ಕಿಂತ ಬೇರೆ ಯಾವ ತಾಣ ಬೇಕು ಹೇಳಿ? ಮೊದಲ ನೋಟದಲ್ಲೇ ನಿಬ್ಬೆರಗಾಗಿಸುವ ಈ ಜಲಪಾತವು ಬ್ರೆಜಿಲ್ ಹಾಗೂ ಅರ್ಜೆಂಟೀನಾದ ಗಡಿಭಾಗದಲ್ಲಿದೆ. ಅಂದಂತೆ, ಇದು 275 ಬಿಡಿ ಜಲಪಾತಗಳು ಸೇರಿ ರೂಪುಗೊಂಡಿರುವ ನಯನ ಮನೋಹರ ಜಲಪಾತವಾಗಿದೆ. ಇದು ಈ ಖಂಡದಲ್ಲಿನ ಅತ್ಯಂತ ವಿಸ್ಮಯ ನೈಸರ್ಗಿಕ ಅದ್ಭುತಗಳಲ್ಲಿ ಕೂಡ ಒಂದು. ಅರ್ಜೆಂಟೀನಾದ ಮಿಸಿಯೋನ್ಸ್ ಪ್ರಾಂತ್ಯ ಹಾಗೂ ಬ್ರೆಜಿಲ್ ನ ಪರನ್ ಪ್ರಾಂತ್ಯದ ಸರಹದ್ದಿನಲ್ಲಿ ಹರಿಯುವ ಇಗ್ ವಾಸ್ಸು ನದಿಯಿಂದ ಈ ಜಲಪಾತ ರೂಪುಗೊಂಡಿದೆ. ಇದರ ಮೇಲ್ಭಾಗ ಅಪ್ಪರ್ ಇಗ್ವಾಸ್ಸು ಆಗಿದ್ದರೆ, ಕೆಳಭಾಗ ಲೋಯರ್ ಇಗ್ವಾಸ್ಸು ಎಂದು ಕರೆಸಿಕೊಳ್ಳುತ್ತದೆ. ಇದು ಸುಮಾರು 2.7 ಕಿಲೋಮೀಟರ್ (1.7 ಮೈಲು) ವಿಸ್ತಾರಕ್ಕೆ ಚಾಚಿಕೊಂಡಿರುವ ವಿಶಾಲ ಜಲಪಾತ. ಬಹಳ ಹಿಂದೆ ಜ್ವಾಲಾಮುಖಿ ಭುಗಿಲದ್ದ ಸಂದರ್ಭದಲ್ಲಿ ಭೂಮಿಯಲ್ಲಿ ಉಂಟಾದ ಕೊರಕಲು ಈ ಜಲಪಾತದ ಸೃಷ್ಟಿಗೆ ಕಾರಣ ಎಂದು ಹೇಳಲಾಗುತ್ತದೆ. ಇಗ್ ವಾಸ್ಸು ಜಲಪಾತದ ಅತ್ಯಂತ ಪ್ರಸಿದ್ಧ ವಿಶೇಷವೆಂದರೆ ಗರ್ಘಂಟ ಡೆಲ್ ಡಿಯಾಬ್ಲೊ ಅಥವಾ ಡೆವಿಲ್ಸ್ ಥ್ರೋಟ್. ಈ ಇಂಗ್ಲಿಷಿನ ‘ಯು’ ಆಕಾರದ ಕಮರಿಯು ಜಲಪಾತದ ಅತ್ಯಂತ ಆಕರ್ಷಕ ಹಾಗೂ ರುದ್ರರಮಣೀಯ ಭಾಗವಾಗಿದೆ. ಇಲ್ಲಿ ಅಪಾರ ಜಲರಾಶಿಯು ಮೇಲಿನಿಂದ 80 ಮೀಟರುಗಳಷ್ಟು (262 ಅಡಿ) ಆಳಕ್ಕೆ ಭೋರ್ಗರೆಯುತ್ತಾ ಧುಮ್ಮಿಕ್ಕಿ ನೊರೆಯಂತೆ ಉಕ್ಕಿ ಮೇಲೇರಿ ನಂತರ ಕೆಳಮುಖವಾಗಿ ಸಾಗುತ್ತದೆ. ಈ ಜಲಪಾತವನ್ನು ಬ್ರೆಜಿಲ್ ಹಾಗೂ ಅರ್ಜೆಂಟೀನಾ ಎರಡೂ ಭಾಗಗಳಿಂದ ನೋಡಬಹುದಾಗಿದ್ದು ವಿಭಿನ್ನ ನೋಟಗಳನ್ನು ಲಭ್ಯವಾಗಿಸುತ್ತವೆ. ಹೀಗಾಗಿ, ನಾವು ನಮ್ಮ ದಕ್ಷಿಣ ಅಮೆರಿಕಾ ಪ್ರವಾಸ ಯೋಜನೆಯಲ್ಲಿ ಈ ಎರಡೂ ಭಾಗಗಳಿಂದ ಇಗ್ ವಾಸ್ಸು ಜಲಪಾತದ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದೇವೆ.
ಸಮೃದ್ಧ ಸಂಸ್ಕೃತಿ, ಅಚ್ಚರಿ ಮೂಡಿಸುವ ಭೂಪ್ರದೇಶಗಳು ಹಾಗೂ ಜೀವವೈವಿಧ್ಯ ಪರಿಸರದ ಮಡಿಲಾದ ಬ್ರೆಜಿಲ್ ದೇಶವು ರಜೆಯ ದಿನಗಳನ್ನು ಕಳೆಯಲು ಹೇಳಿ ಮಾಡಿಸಿದಂತಿದೆ. ಅಲ್ಲಿನ ಹಲವಾರು ಪ್ರೇಕ್ಷಣೀಯ ತಾಣಗಳ ಪೈಕಿ ರಿಯೋ ಡಿ ಜನೈರೊ ಮತ್ತು ಅಮೆಜಾನ್ ಅರಣ್ಯ ನೋಡಲೇಬೇಕಾದ ತಾಣಗಳಾಗಿವೆ. ಈ ಸ್ಥಳಗಳ ವಿಶೇಷತೆಯ ಬಗ್ಗೆ ಒಂದಿಷ್ಟು ಅವಲೋಕಿಸೋಣ. ಸಿದಾದೆ ಮಾರವಿಲೋಸ (ಮಾರ್ವೆಲಸ್ ಸಿಟಿ) ಎಂದೂ ಹೆಸರಾದ ರಿಯೋ ಡಿ ಜನೈರೊವು ಪ್ರಕೃತಿ ಸೌಂದರ್ಯ, ಲವಲವಿಕೆಯ ಸಂಸ್ಕೃತಿ ಮತ್ತು ಪ್ರಸಿದ್ಧ ತಾಣಗಳ ಸಂಗಮವಾಗಿದೆ. ಪ್ರಪಂಚದ ಅತ್ಯಂತ ಹೆಸರಾಂತ ತಾಣಗಳಲ್ಲಿ ಒಂದಾಗಿರುವ ಇಲ್ಲಿನ ಕೊರ್ಕೊವಡೊ ಪರ್ವತದ ಮೇಲೆ ವಿರಾಜಮಾನವಾಗಿರುವ ಕ್ರೈಸ್ಟ್ ದ ರೆಡೀಮರ್ ಪ್ರತಿಮೆಯು ತನ್ನೆಡೆಗೆ ಬರುವವರನ್ನು ತೆರೆದ ತೋಳುಗಳಿಂದ ಅಪ್ಪಿಕೊಳ್ಳಲು ಸಿದ್ಧವಾಗಿ ನಿಂತಿರುವ ಭಂಗಿಯಲ್ಲಿದೆ. ಇಲ್ಲಿಗೆ ಭೇಟಿ ನೀಡಿ ಗಗನಚುಂಬಿ ಪ್ರತಿಮೆಯನ್ನು ಪ್ರತ್ಯಕ್ಷ ಕಣ್ತುಂಬಿಕೊಳ್ಳುವ ಜೊತೆಗೆ ಪರ್ವತದ ಬುಡದಲ್ಲಿರುವ ನಗರದ ವಿಹಂಗಮ ನೋಟವನ್ನು ಕೂಡ ದಕ್ಕಿಸಿಕೊಳ್ಳಬಹುದಾಗಿದೆ.
ವಿಶ್ವ ಪಾರಂಪರಿಕ ತಾಣವಾದ ಷುಗರ್ ಲೋಫ್ ಮೌಂಟೈನ್ ವಿಸ್ಮಯ ನೋಟಗಳನ್ನು ಲಭ್ಯವಾಗಿಸುವ ಮತ್ತೊಂದು ಸ್ಥಳವಾಗಿದೆ. ಈ ಪರ್ವತದ ತುದಿಗೆ ಕೇಬಲ್ ಕಾರ್ ಸವಾರಿಯು ರಿಯೋ ಸಮುದ್ರತೀರ, ಅಟ್ಲಾಂಟಿಕ್ ಸಾಗರ ಹಾಗೂ ರಿಯೋ ನಗರದ ಜನಜೀವನದ ನೋಟಗಳನ್ನು ತೆರೆದಿಡುತ್ತದೆ.
ರಿಯೋ ನಗರದ ಹೆಸರಾಂತ ಕಡಲ ದಂಡೆಗಳಲ್ಲಿನ ನಡಿಗೆಯು ಬ್ರೆಜಿಲ್ ನ ನನ್ನ ಅಚ್ಚುಮೆಚ್ಚಿನ ನೆನಪುಗಳಲ್ಲಿ ಒಂದಾಗಿದೆ. ಅಲ್ಲಿನ ಪ್ರಸಿದ್ಧ ಸಮುದ್ರ ದಂಡೆಗಳಲ್ಲಿ ಸೂರ್ಯ ಕಿರಣಗಳಿಗೆ ಮೈ ಒಡ್ಡಿಕೊಳ್ಳದೆ (ಸೂರ್ಯಸ್ನಾನ) ಬ್ರೆಜಿಲ್ ಪ್ರವಾಸವು ಪರಿಪೂರ್ಣ ಎನ್ನಿಸಿಕೊಳ್ಳುವುದಿಲ್ಲ. ಕೋಪಕೆಬಾನ ಮತ್ತು ಇಪನೇಮ ಕಡಲ ದಂಡೆಗಳು ಬಂಗಾರದಂತಹ ಮರಳು, ಪರಿಶುಭ್ರ ಜಲರಾಶಿ, ಮತ್ತು ಬೀಚ್ ಸಂಸ್ಕೃತಿಯ ರೀತಿ ರಿವಾಜುಗಳಿಗೆ ಇಡೀ ಪ್ರಪಂಚದಲ್ಲೇ ಹೆಸರಾಗಿವೆ. ಸೂರ್ಯ ಕಿರಣಗಳಿಗೆ ಮೈ ಒಡ್ಡುವುದಿರಬಹುದು, ಬೀಚ್ ವಾಲಿಬಾಲ್ ಆಡುವುದಿರಬಹುದು ಅಥವಾ ಸಮುದ್ರ ತೀರದಲ್ಲಿ ಅಳವಡಿಸಿರುವ ಕಿಯೋಸ್ಕ್ ಗಳಲ್ಲಿ ಕೊಡಲಾಗುವ ಕೈಪಿರೀನ ಗುಟುಕರಿಸುವುದು ಇರಬಹುದು, ಇಲ್ಲಿನ ಬೀಚುಗಳು ರಿಯೊ ನಗರದ ಸ್ಫೂರ್ತಿಯ ಚಿಲುಮೆಗಳಂತೆ ಭಾಸವಾಗುತ್ತವೆ. ನಾನು ಅಲ್ಲಿನ ಸಮುದ್ರ ದಂಡೆಯುದ್ದಕ್ಕೂ ಒಂದು ಬೆಳಿಗ್ಗೆ ನಡೆದು ಹೋಗುತ್ತಿದ್ದಾಗ ಅಲ್ಲಿನ ಕಿಯೋಸ್ಕ್ ಗಳಲ್ಲಿ ಎಳನೀರಿನ ಜೊತೆಗೆ ಕೈಪಿರೀನ ಕೂಡ ಕೊಡುತ್ತಾರೆಂಬುದು ನನಗೆ ಗೊತ್ತಾಯಿತು. ಅಂದಂತೆ, ಈ ಕೈಪಿರೀನವು ಕಬ್ಬಿನ ರಸವನ್ನು ಹುಳಿ ಬರಿಸಿ ಸಿದ್ದಪಡಿಸಿದ ಒಂದು ಕಾಕ್ ಟೇಲ್ (ಪಾನೀಯ ಮಿಶ್ರಣ). ಇಲ್ಲಿ ಯೋಗ ಮಾಡುವವರು, ಜಾಗಿಂಗ್ ಮಾಡುವವರು, ವಾಲಿಬಾಲ್ ಆಟದಲ್ಲಿ ಕಳೆದು ಹೋಗಿರುವವರು, ಜೊತೆಗೆ ಕೈಪಿರೀನ ಗುಟುಕರಿಸುತ್ತಾ ಪಾರ್ಟಿ ಆನಂದಾಚಾರಣೆಯಲ್ಲಿ ತೊಡಗಿರುವವರು ಎಲ್ಲರನ್ನೂ ಕಾಣಬಹುದು. ಇದು ಎಂದೆಂದಿಗೂ ನನ್ನಲ್ಲಿ ಅಚ್ಚೊತ್ತಿರುವ ಬ್ರೆಜಿಲ್ ನ ನೆನಪಾಗಿರುತ್ತದೆ.
ಮತ್ತೊಂದೆಡೆ, ಅಮೆಜಾನ್ ಅರಣ್ಯದ ಒಳಹೊಕ್ಕರೆ ರಿಯೋ ನೀಡುವ ಅನುಭವಗಳಿಗಿಂತ ತದ್ವಿರುದ್ಧವಾದ ಪರಿಸ್ಥಿತಿ. ಇಲ್ಲಿ ನೀವು ಪ್ರಪಂಚದ ಅತ್ಯಂತ ದೊಡ್ಡ ಜೀವವೈವಿಧ್ಯ ಹಾಗೂ ನಿಬ್ಬೆರಗಾಗಿಸುವ ಪರಿಸರದಲ್ಲಿ ಮಿಂದು ಹೋಗುತ್ತೀರಿ.
ಅಮೆಜಾನ್ ನ ಪ್ರವೇಶ ದ್ವಾರವೆಂದೇ ಹೆಸರಾದ ಮೆನಾಸ್ ನಿಂದ ನಮ್ಮ ಅಮೆಜಾನ್ ಯಾನ ಆರಂಭಗೊಳ್ಳುತ್ತದೆ. ಅಮೆಜಾನ್ ನ ಅನುಭವವನ್ನು ದಕ್ಕಿಸಿಕೊಳ್ಳಲು ನದಿಯಲ್ಲಿನ ಕ್ರೂಸ್ ಯಾನವು ಅತ್ಯುತ್ತಮವಾಗಿರುತ್ತದೆ. ಹೀಗೆ ಸಾಗುವಾಗ ಜಾಗ್ವಾರ್, ನಸುಗೆಂಪು ಬಣ್ಣದ ರಿವರ್ ಡಾಲ್ಫಿನ್, ಅಸಂಖ್ಯ ಹಕ್ಕಿ ಪ್ರಭೇದಗಳು ಸೇರಿದಂತೆ ಸಮೃದ್ಧ ವನಸಂಕುಲದ ದರ್ಶನವಾಗುತ್ತದೆ. ಇದೇ ಮಾರ್ಗದಲ್ಲಿ, ರಿಯೋ ನೆಗ್ರೋ ನದಿಯ ಕಪ್ಪು ನೀರು ಹಾಗೂ ರಿಯೋ ಸಾಲಿಮೋಸ್ ನದಿಯ ಮಣ್ಣು ಮಿಶ್ರಿತ ನೀರು ಬದಿ ಬದಿಯಲ್ಲಿ ಒಂದಕ್ಕೊಂದು ಬೆರೆಯದೆ ಹಲವಾರು ಕಿಲೋಮೀಟರುಗಳವರೆಗೆ ಹರಿಯುವ ನಿಸರ್ಗದ ಅಚ್ಚರಿಗೆ ಮುಖಾಮುಖಿಯಾಗಬಹುದು. ಇಲ್ಲಿನ ಅರಣ್ಯದ ವಸತಿಗೃಹದಲ್ಲಿ ತಂಗುವ ಮೂಲಕ ಸ್ಥಳೀಯ ಸಮುದಾಯಗಳ ಜೊತೆ ಕಲೆತು ಮಾತುಕತೆ ನಡೆಸಬಹುದು. ಅಮೆಜಾನ್ ವಲಯದಲ್ಲಿರುವ ರೆಸಾರ್ಟ್ ಗಳು ಪರಿಸರ ಸ್ನೇಹಿಯಾಗಿದ್ದು ಆಧುನಿಕ ಸೌಲಭ್ಯಗಳನ್ನು ಇಲ್ಲಿ ನಿರೀಕ್ಷಿಸಲಾಗದು. ಆದರೆ, ಇವು ಪ್ರಕೃತಿ ಸಿರಿಯ ಮಡಿಲಿನಲ್ಲಿದ್ದು ಅತ್ಯಂತ ಪರಿಶುದ್ಧ ಆಮ್ಲಜನಕ ಲಭ್ಯವಾಗಿಸುವ ಜೊತೆಗೆ ಬೆರಗು ಮೂಡಿಸುವ ಸಸ್ಯ ಮತ್ತು ಜೀವಸಂಕುಲದ ದರ್ಶನ ಮಾಡಿಸುತ್ತವೆ. ಚೈತನ್ಯವನ್ನು ಮರಳಿ ಪಡೆಯಲು ಪ್ರಪಂಚದ ಶ್ವಾಸಕೋಶವೆಂದೇ ಹೆಸರಾದ ಪ್ರದೇಶದ ಆಮ್ಲಜನಕಕ್ಕಿಂತ ಬೇರೆ ಇನ್ನೇನು ಬೇಕು ಹೇಳಿ?
ನಮ್ಮ ಪಾಡ್ ಕಾಸ್ಟ್ ನಂತೆಯೇ ಈ ಲೇಖನ ಕೂಡ ದಕ್ಷಿಣ ಅಮೆರಿಕದ ಅಮೂಲ್ಯ ಭಂಡಾರದ ಮೇಲ್ಮೈಯನ್ನಷ್ಟೇ ನಿಮ್ಮ ಮುಂದಿರಿಸಿದೆ. ಇಲ್ಲಿ ಬ್ರೆಜಿಲ್ ನ ಬಗ್ಗೆ ನಾನು ಹೇಳಿರುವುದು ತುಣುಕು ಮಾತ್ರ. ಆದರೆ ಚಿಂತೆ ಬೇಡ. ಎಲ್ ಕಲಫಟ್ಟೆಯ ಹಿಮಹಾಸುಗಳು, ಅಟಕಾಮ ಮರುಭೂಮಿ ಮತ್ತು ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾದ ಮಚ್ಚು ಪಿಚ್ಚು ಇವುಗಳನ್ನು ನಮ್ಮ ಪ್ರವಾಸದಲ್ಲಿ ನೀವು ಪ್ರತ್ಯಕ್ಷ ಕಾಣುವಿರಿ. ಶೀಘ್ರವೇ ಮುಖಾಮುಖಿ ಭೇಟಿಯಾಗೋಣ. ಕೊನೆ ಇರದ ಸಾಹಸಗಳಿಗೆ ಆಹ್ವಾನಿಸುವ ಬ್ರೆಜಿಲ್ ದೇಶವು ತೆರೆದ ತೋಳುಗಳಿಂದ ನಿಮ್ಮ ಆಗಮನಕ್ಕಾಗಿ ಕಾಯುತ್ತಿದೆ!
Post your Comment
Please let us know your thoughts on this story by leaving a comment.