Published in the Sunday Prajavani on 13 October, 2024
ಜಾರ್ಜಿಯಾದ ಟಬಲೀಸಿಯಲ್ಲಿನ ಐತಿಹಾಸಿಕ ಬೀದಿಗಳಲ್ಲಿ ಅಡ್ಡಾಡಿದ ನಂತರ ನಾನು ಕೇಬಲ್ ಕಾರಿನಲ್ಲಿ ಕುಳಿತು ರಮಣೀಯ ದೃಶ್ಯಗಳನ್ನು ನೋಡುತ್ತಾ ಪರ್ವತವೊಂದರ ತುದಿ ತಲುಪಿದ್ದೆ. ಅಲ್ಲಿದ್ದ ಜಗತ್ತಿನ ಎಲ್ಲಾ ಮೂಲೆಗಳ ಪ್ರವಾಸಿಗರು ವಿಹಂಗಮ ನೋಟವನ್ನು ಖುಷಿಯಿಂದ ವೀಕ್ಷಿಸುತ್ತಿದ್ದರು. ಅವರುಗಳ ನಡುವೆ ಭಾರತೀಯರಂತೆ ತೋರುತ್ತಿದ್ದ ಕುಟುಂಬವೊಂದು ನನ್ನ ಕಣ್ಣಿಗೆ ಬಿದ್ದಿತು. ಪ್ರಸ್ತುತ ಪ್ರಪಂಚದಲ್ಲಿ ಯಾರ ತಾಯ್ನಾಡಿನ ಮೂಲವನ್ನೇ ಆಗಲಿ ಕೇವಲ ಕಣ್ಣೋಟದಿಂದ ನಿರ್ದಿಷ್ಟವಾಗಿ ಊಹಿಸಲಾಗದು. ಆದರೆ, ಅಲ್ಲಿ ತಾಯಿಯ ಧ್ವನಿಯು ನನ್ನ ಗಮನವನ್ನು ಆ ಕಡೆಗೆ ಸೆಳೆದಿತ್ತು. "ಸುಮ್ಮನೆ ಕಿರಿಕಿರಿ ಮಾಡಬೇಡ! ನಾವು ಪ್ರವಾಸದ ದಿನಗಳನ್ನು ಕಳೆಯುವ ಪ್ರಯತ್ನವನ್ನಾದರೂ ಮಾಡೋಣ" ಎಂದು ಆ ತಾಯಿಯು ತನ್ನ ಮಗನಿಗೆ ಬುದ್ಧಿವಾದ ಹೇಳುತ್ತಿದ್ದರು. ಅದಕ್ಕೆ ದನಿಗೂಡಿಸಿದ ತಂದೆಯು "ನಾವು ಎಲ್ಲರೂ ಒಟ್ಟು ಸೇರಿ ಚಟುವಟಿಕೆಯಿಂದ ಇರುವುದನ್ನು ಆನಂದಿಸಬೇಕು. ನೀನು ಕೂಡ ಅದಕ್ಕಾಗಿ ಪ್ರಯತ್ನ ಮಾಡಬೇಕು" ಎಂದರು.
ನನ್ನ ಹೃದಯ ತಕ್ಷಣ ಅವರಿಗಾಗಿ ಮಿಡಿಯಿತು. ಆ ಹುಡುಗನು ಸಮಾಧಾನವಿಲ್ಲದೆ ಚಡಪಡಿಸುತ್ತಿದ್ದ. ಯಾವುದೋ ಕಾರಣಕ್ಕೆ ಬಹುಶಃ ಅವನು ತುಂಬಾ ಕೋಪಗೊಂಡಿರಬೇಕು ಅಥವಾ ತನ್ನ ಇಷ್ಟದ ಡಿಜಿಟಲ್ ಗೇಮ್ ಗಳಿಲ್ಲದೆ ಚಡಪಡಿಸುತ್ತಿರಬೇಕು ಅಥವಾ ಅವನಿಗೆ ಹಸಿವಾಗುತ್ತಿದ್ದಿರಬೇಕು. ಆ ಹುಡುಗನ ಮನಃಸ್ಥಿತಿಗೆ ಹೀಗೆ ಹತ್ತು ಹಲವಾರು ಕಾರಣಗಳು ಇದ್ದಿರಬಹುದು. ಆ ಹುಡುಗನು ಕಾಲುಗಳನ್ನು ನಿಧಾನವಾಗಿ ಎಳೆದು ಹಾಕುತ್ತಾ ತನ್ನ ಪೋಷಕರ ಹಿಂದೆ ಸಾಗುತ್ತಿದ್ದ.
ಕುಟುಂಬ ಸಮೇತ ಪ್ರವಾಸವು ಹೇಗೆ ಯಶಸ್ವಿಯಾಗಲು ಸಾಧ್ಯ ಎಂಬುದರ ಬಗ್ಗೆ ಆಲೋಚಿಸಲು ಈ ಪ್ರಸಂಗ ನನಗೆ ಎಡೆಮಾಡಿಕೊಟ್ಟಿತು. ಇಂತಹ ಪ್ರವಾಸಗಳು ದೈನಂದಿನ ಚಟುವಟಿಕೆಗಳಿಗಿಂತ ವಿಭಿನ್ನವಾಗಿರುವ ಉದ್ದೇಶ ಹೊಂದಿರುತ್ತವೆ ತಾನೆ? ಹೊಸ ಸ್ಥಳಗಳನ್ನು ಅನ್ವೇಷಿಸಲು ಹಾಗೂ ಕುಟುಂಬವೊಂದು ಒಟ್ಟಾಗಿ ಕಲೆತು ಸಮಯ ಕಳೆಯಲು ಇಂತಹ ಅವಧಿಯೆಂದರೆ ಸುಸಂದರ್ಭ ತಾನೆ? ಆದರೂ ಹೆಚ್ಚಿನ ಸಂದರ್ಭಗಳಲ್ಲಿ ಪೋಷಕರು ಮಕ್ಕಳ ಅಭಿಪ್ರಾಯ ಕೇಳದೆ ಪ್ರವಾಸ ಸ್ಥಳಗಳನ್ನು ತಾವೇ ನಿರ್ಧರಿಸುತ್ತಾರೆ. ಆದರೆ ಈಗೀಗ ಮಕ್ಕಳು ಕೂಡ ಪ್ರಪಂಚದ ವಿವಿಧ ಸ್ಥಳಗಳ ಬಗ್ಗೆ ಹೆಚ್ಚಿನ ಜ್ಞಾನ ಬೆಳೆಸಿಕೊಂಡು ತಮ್ಮದೇ ಆದ್ಯತೆಗಳ ಆಯ್ಕೆಗೆ ಮುಂದಾಗುತ್ತಿರುವುದರಿಂದ ಈ ಪ್ರವೃತ್ತಿಯಲ್ಲೂ ಬದಲಾವಣೆ ಕಂಡುಬರುತ್ತಿದೆ. ಸುಮಧುರ ಅನುಭವ ಉಂಟು ಮಾಡಲು ಪ್ರತಿಯೊಬ್ಬರ ಬಯಕೆಗಳನ್ನು ಆಧರಿಸಿ ಸಮತೋಲನ ಸಾಧಿಸುವ ಅಗತ್ಯ ಇರುತ್ತಾದ್ದರಿಂದ ಕುಟುಂಬ ಸಮೇತ ಪ್ರವಾಸದ ಯೋಜನೆ ರೂಪಿಸುವುದು ಸವಾಲಿನ ಕೆಲಸ ಎಂದೇ ಹೇಳಬಹುದು.
ಮೇಲೆ ಹೇಳಲಾದ ಪ್ರಸಂಗದಲ್ಲಿ, ಟಬಲೀಸಿಗೆ ಭೇಟಿ ಕೊಟ್ಟಿದ್ದ ಈ ಕುಟುಂಬವು ಎಳೆಯ ಪ್ರಾಯದ ಹುಡುಗನನ್ನು ಲವಲವಿಕೆಯಿಂದ ಇರಿಸುವ ಸಲುವಾಗಿ ತನ್ನ ಪ್ರವಾಸ ಪಟ್ಟಿಗೆ ‘ಮ್ ತತ್ಸ್ ಮಿಂಡಾ ಪಾರ್ಕ್’ ಸೇರಿಸಬಹುದಿತ್ತು, ಹತ್ತಿರದ ಅಮ್ಯೂಸ್ ಮೆಂಟ್ ಪಾರ್ಕ್ ಒಳಗೊಳ್ಳಬಹುದಿತ್ತು. ಈ ಪಾರ್ಕ್ ನಿಂದ ನಗರದ ಸೊಬಗಿನ ನೋಟಗಳನ್ನು ನೋಡಬಹುದು. ಜೊತೆಗೆ, ಅತ್ಯುತ್ತಮ ಕೋಲ್ಡ್ ಕಾಫಿ ಹಾಗೂ ಸ್ಥಳೀಯ ತಿನಿಸುಗಳನ್ನು ಲಭ್ಯವಾಗಿಸುವ ಅದ್ಭುತವಾದ ಕೆಫೆಯೂ ಇಲ್ಲಿದೆ. ಇಲ್ಲವೇ ಆ ಕುಟುಂಬದವರು ಸುತ್ತಲ ಪರ್ವತಗಳಲ್ಲಿ ಹೈಕಿಂಗ್ (ಸುದೀರ್ಘ ನಡಿಗೆ) ತೆರಳಲು ಯೋಜಿಸಬಹುದಿತ್ತು. ಇಲ್ಲಿನ ಹಲವು ನಗರಗಳಲ್ಲಿ ಬಾಡಿಗೆಗೆ ಬೈಕ್ ಗಳು ಲಭ್ಯವಿದ್ದು, ಹೆಚ್ಚು ಪ್ರಯಾಸವಿಲ್ಲದೆ ಹೊಸ ಜಾಗಗಳನ್ನು ಅನ್ವೇಷಿಸಲು ಅನುಕೂಲ ಮಾಡಿಕೊಡುತ್ತವೆ. ಆದರೆ, ಟಬಲೀಸಿ ನಗರದ ವಿಷಯಕ್ಕೆ ಬಂದಾಗ ಅಲ್ಲಿ ಕಾಲ್ನಡಿಗೆಯೇ ಹೆಚ್ಚು ಸೂಕ್ತವೆನಿಸುತ್ತದೆ. ಇದರ ಜೊತೆಗೆ, ದೇಹದ ಚೈತನ್ಯ ಕಾಪಾಡಿಕೊಳ್ಳಲು ಶರೀರವು ನಿರ್ಜಲೀಕರಣದಿಂದ ಬಳಲದಂತೆ ಎಚ್ಚರ ವಹಿಸುವುದು ಹಾಗೂ ವಿಶ್ರಾಂತಿ ಕೂಡ ಮುಖ್ಯವಾಗುತ್ತದೆ.
ಕುಟುಂಬ ಸಮೇತ ಯಾವುದೇ ಪ್ರವಾಸ ಹೊರಡುವ ಮುನ್ನ ಸದಸ್ಯರೆಲ್ಲರ ಅಭಿರುಚಿಗಳಿಗೆ ಹೊಂದುವಂತಹ ಸ್ಪಷ್ಟವಾದ ಗುರಿಗಳನ್ನು ನಿಗದಿ ಮಾಡಿಕೊಳ್ಳುವುದು ಮಹತ್ವದ ವಿಷಯವಾಗುತ್ತದೆ. ಇದನ್ನು ಗಮನದಲ್ಲಿರಿಸಿಕೊಂಡೇ ಸ್ಥಳಗಳ ಆಯ್ಕೆ ಮಾಡಬೇಕಾಗುತ್ತದೆ. ಒಮ್ಮೆ ನನ್ನ ಮಗಳು ಸಾರಾ ಮತ್ತು ನಾನು ಇಬ್ಬರೂ ಒಟ್ಟಾಗಿ ಪ್ರವಾಸ ತೆರಳಲು ಯೋಜನೆ ಸಿದ್ಧಪಡಿಸುವ ಸಂದರ್ಭವುಂಟಾದಾಗ, ಆಕೆ ಸ್ಪೇನ್ ಗೆ ಭೇಟಿ ಕೊಡಲು ಉತ್ಸುಕಳಾಗಿದ್ದಳು. ಬಹುಶಃ ಅವಳು "ಜಿಂದಗೀ ನ ಮಿಲೇಗೀ ದೋಬಾರಾ" ಸಿನಿಮಾ ನೋಡಿ ಪ್ರೇರಣೆಗೊಂಡಿದ್ದು ಅಥವಾ ವಾಸ್ತುಶಿಲ್ಪದ ಬಗ್ಗೆ ಅವಳಿಗಿದ್ದ ಆಸಕ್ತಿ ಇದಕ್ಕೆ ಕಾರಣವಾಗಿದ್ದಿರಬಹುದು. ಸ್ಪೇನಿನ ಅಡುಗೆ ಭಕ್ಷ್ಯಗಳಿಂದ ಹಿಡಿದು ಪ್ಯಾರಾಗ್ಲೈಡಿಂಗ್, ಸ್ನಾಕಲಿಂಗ್ ಹಾಗೂ ಕ್ಲಿಫ್ ಡೈವಿಂಗ್ ನಂತಹ ಅಲ್ಲಿನ ಸಾಹಸಮಯ ಚಟುವಟಿಕೆಗಳವರೆಗೆ ಪ್ರತಿಯೊಂದನ್ನೂ ಅನುಭವಿಸಬೇಕು ಎಂದು ಅವಳು ಕಾತರಿಸುತ್ತಿದ್ದಳು. ಕೊನೆಗೆ, ಈ ಪ್ರವಾಸದಿಂದ ನಮಗಿಬ್ಬರಿಗೂ ಖುಷಿಯಾಗುವುದನ್ನು ಖಾತರಿಗೊಳಿಸಿಕೊಳ್ಳಲು ನಾವು ನಮ್ಮ ಸ್ಪೇನ್ ಪ್ರವಾಸವನ್ನು ಎರಡು ಪ್ರತ್ಯೇಕ ಪಯಣಗಳನ್ನಾಗಿ ಬೇರ್ಪಡಿಸಿಕೊಂಡೆವು. ಹೀಗಾಗಿ, ನಮಗೆ ಒಂದು ಪ್ರವಾಸದಲ್ಲಿ ಮ್ಯಾಡ್ರಿಡ್, ಬಾರ್ಸಿಲೋನಾ ಮತ್ತು ಕೋಸ್ಟ ಬ್ರಾವಾಗಳನ್ನು ಅನ್ವೇಷಿಸಲು ಸಾಧ್ಯವಾಯಿತು. ಮತ್ತೊಂದು ಪಯಣದಲ್ಲಿ, ಆಂಡಲೂಸಿಯಾ ಮತ್ತು ಕೋಸ್ಟ ಡೆಲ್ ಸಾಲ್ ಇವುಗಳನ್ನು ನೋಡಲು ಆಯಿತು. ಇದರ ಜೊತೆಗೆ ನನ್ನ ಹಾಲಿಡೇ ಶಾಪಿಂಗ್ ಬಯಕೆ ತಣಿಸಿಕೊಳ್ಳಲು ಡಿಸೈನರ್ ಔಟ್ಲೆಟ್ ವಿಲೇಜ್ ಆಗಿರುವ ಲಾ ರೊಕಾವನ್ನು ಕೂಡ ಪ್ರವಾಸ ಪಟ್ಟಿಗೆ ಸೇರಿಸಿಕೊಳ್ಳಲು ಅನುಕೂಲವಾಯಿತು. ಹೀಗೆ ನಾವು ಯೋಜನೆ ರೂಪಿಸಿದ್ದರಿಂದ ಪ್ರವಾಸದ ಬಗ್ಗೆ ನಾವಿಬ್ಬರೂ ಆಸಕ್ತಿ ತಳೆಯಲು ಸಾಧ್ಯವಾಯಿತು. ಹೀಗಾಗಿ, ನಾವಿಬ್ಬರೂ ಸಮಾನ ಕಾತರದಿಂದ ಪ್ರವಾಸ ಹೊರಡಲು ದಿನಗಳನ್ನು ಎದುರು ನೋಡುತ್ತಿದ್ದೆವು.
ನಾವು ನಮ್ಮ ಬಜೆಟ್ ಮಿತಿಯಲ್ಲಿಯೇ ಪ್ರತಿಯೊಬ್ಬರನ್ನು ಪ್ರವಾಸದ ಪ್ಲ್ಯಾನಿಂಗ್ ಪ್ರಕ್ರಿಯೆಯಲ್ಲಿ ಭಾಗಿಯಾಗಿಸಿಕೊಳ್ಳುವುದು ಮುಖ್ಯವಾಗುತ್ತದೆ. ಒಂದು ಸಲ ನಮ್ಮ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾದ ಆನಿ ಅವರು ಆಕೆಯ ಮಗ ಆರವ್ ಗೆ ಅತ್ಯುತ್ತಮವಾದ ಈಜುಕೊಳ ಯಾವ ಹೋಟೆಲ್ ನಲ್ಲಿ ಇದೆ ಎಂದು ಕೇಳಿದರು. ಆರವ್ ದೃಷ್ಟಿಯಲ್ಲಿ ಪ್ರವಾಸವೆಂದರೆ ಗಂಟೆಗಟ್ಟಲೆ ನೀರಿನಲ್ಲಿ ಮೋಜು ಮಾಡುವುದು ಎಂಬುದಾಗಿತ್ತು. ಹೋದ ಜಾಗದಲ್ಲಿ ಒಂದು ಒಳ್ಳೆಯ ಸ್ವಿಮ್ಮಿಂಗ್ ಪೂಲ್ ಇದ್ದರಾಯ್ತು ಎಂಬುದನ್ನು ಬಿಟ್ಟರೆ ಪ್ರವಾಸ ಸ್ಥಳದ ಆಯ್ಕೆ ಬಗ್ಗೆ ಅವನು ಬೇರೇನೂ ತಲೆಕೆಡಿಸಿಕೊಳ್ಳುವುದಿಲ್ಲ. ವೀಣಾ ವರ್ಲ್ಡ್ ನಲ್ಲಿರುವ ನಮ್ಮ ಕಸ್ಟಮೈಡ್ ಹಾಲಿಡೇಸ್ ತಂಡದವರು ಒಳ್ಳೆಯ ಈಜುಕೊಳವಿರುವ ಹೋಟೆಲ್ ಗಳನ್ನು ಪಟ್ಟಿ ಮಾಡಿ ಆನಿ ಅವರಿಗೆ ನೀಡಿದರು. ಜೊತೆಗೆ, ಪೋಷಕರಿಗೆ ತಮ್ಮ ಆದ್ಯತೆಯ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕೂ ಅವಕಾಶ ಕಲ್ಪಿಸಿದರು.
ತುಂಬಾ ಚಿಕ್ಕ ಮಕ್ಕಳ ಸಮೇತ ಪ್ರಯಾಣಿಸುವುದು ಸ್ವಲ್ಪ ಬೇರೆಯದೇ ಸವಾಲನ್ನು ಮುಂದಿರಿಸುತ್ತದೆ. ಒಂದರ್ಥದಲ್ಲಿ ಅದು ಸುಲಭ ಕೂಡ. ಏಕೆಂದರೆ, ಇಂಥದ್ದೇ ಸ್ಥಳ ಬೇಕು ಎಂದು ಎಳೆಯ ವಯಸ್ಸಿನ ಮಕ್ಕಳು ಯಾವುದೇ ತಕರಾರು ಮಾಡುವುದಿಲ್ಲ. ಆದರೆ ಅವರು ಪ್ರವಾಸದ ಸಂದರ್ಭದಲ್ಲಿ ಏನಾದರೂ ಒಂದು ಚಟುವಟಿಕೆಯಲ್ಲಿ ಇರುವಂತೆ ನೋಡಿಕೊಳ್ಳುವುದು ಹಾಗೂ ಅವರು ಕಿರಿಕಿರಿಗೊಳ್ಳದಂತೆ ಇರಿಸಲು ಆಹಾರ ಸೇವನೆಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಮುಖ್ಯವಾಗುತ್ತದೆ. ಇದರ ಬಗ್ಗೆ ಹೇಳುವಾಗ ನಾನು ನನ್ನ ಮಗಳೊಂದಿಗೆ ಅವಳು ಇನ್ನೂ ಹನ್ನೊಂದು ತಿಂಗಳ ಮಗುವಾಗಿದ್ದಾಗ ಮೊದಲ ಪ್ರವಾಸ ತೆರಳಿದ್ದು ನೆನಪಾಗುತ್ತದೆ. ಇದು ಎರಡು ದಶಕಗಳ ಹಿಂದಿನ ಘಟನೆ. ಅಂದರೆ, ಜಿಪಿಎಸ್ ಹಾಗೂ ಸ್ಮಾರ್ಟ್ ಫೋನ್ ಗಳು ಕಾಲಿಡುವ ಮುನ್ನ ಪ್ರವಾಸ ತೆರಳಿದ ಸಂದರ್ಭ ಅದು. ಏನಿಲ್ಲವೆಂದರೂ ಕನಿಷ್ಠ ಜಜ್ಜಿದ ಆಲೂಗೆಡ್ಡೆ, ಅನ್ನ ಮತ್ತು ಯೋಗರ್ಟ್ ಎಲ್ಲಿ ಬೇಕೆಂದರೂ ಸಿಗುತ್ತದೆ ಎಂಬುದನ್ನು ತಿಳಿದಿದ್ದ ನಾವು ಜಾಣ್ಮೆಯಿಂದ ಪ್ರವಾಸ ಯೋಜನೆ ರೂಪಿಸಿ ಕೇವಲ ಅಗತ್ಯ ಔಷಧಿಗಳನ್ನು ಮಾತ್ರ ಆಗ ನಮ್ಮೊಂದಿಗೆ ಕೊಂಡೊಯ್ದಿದ್ದೆವು.
ಪ್ರವಾಸದ ಸಂದರ್ಭದಲ್ಲಿ ಮಕ್ಕಳಿಗೆ ಮನರಂಜನೆ ಲಭ್ಯವಾಗಿಸಲು ಆಟಗಳು ಅತ್ಯುತ್ತಮ ಮಾರ್ಗೋಪಾಯಗಳಾಗಿರುತ್ತವೆ. ಪೋರ್ಟಬಲ್ ಬೋರ್ಡ್ ಗೇಮ್ ಗಳು, ಕಾರ್ಡ್ ಗೇಮ್ ಗಳು ಮತ್ತು ಇಂಟರಾಕ್ಟಿವ್ ಆಪ್ ಗಳು ದೀರ್ಘ ಪ್ರಯಾಣದ ಸಂದರ್ಭದಲ್ಲಿ ಬಹಳ ಉಪಯುಕ್ತ. ‘ಐ ಸ್ಪೈ’, ‘20 ಕ್ವೆಶ್ಚನ್ಸ್’ ಮತ್ತು ‘ಸ್ಕ್ಯಾವೆಂಜರ್ ಹಂಟ್ಸ್’ನಂತಹ ಕ್ಲ್ಯಾಸಿಕ್ ಗೇಮ್ ಗಳನ್ನು ಯಾವುದೇ ಜಾಗದಲ್ಲಿ ಆಡಬಹುದಾಗಿರುತ್ತದೆ. ಇವುಗಳ ಜೊತೆಗೆ, ಮಕ್ಕಳನ್ನು ಚಟುವಟಿಕೆಯಲ್ಲಿ ತೊಡಗಿಸಲು ಟ್ರಾವೆಲ್ ಜರ್ನಲ್ ಗಳು ಅಥವಾ ಅವರಿಗಾಗುವ ಅನುಭವಗಳನ್ನು ಸೃಜನಾತ್ಮಕವಾಗಿ ದಾಖಲಿಸಲು ಸ್ಕೆಚ್ ಬುಕ್ಕುಗಳು ಅವಕಾಶ ಮಾಡಿಕೊಡುತ್ತವೆ. ಡಿಜಿಟಲ್ ಮನರಂಜನೆಗಾಗಿ ಟ್ಯಾಬ್ ಗಳನ್ನು ಅಥವಾ ಸ್ಮಾರ್ಟ್ ಫೋನ್ ಗಳನ್ನು ಶೈಕ್ಷಣಿಕ ಆಪ್ ಗಳು ಮತ್ತು ಗೇಮ್ ಗಳಿಂದ ಲೋಡ್ ಮಾಡಿಕೊಳ್ಳಬೇಕಾಗುತ್ತದೆ.ಇವು ಮಕ್ಕಳಿಗೆ ಮನರಂಜನೆ ನೀಡುವ ಜೊತೆಗೆ ಹೊಸ ಕಲಿಕೆಗೆ ಕೂಡ ವೇದಿಕೆಯಾಗುತ್ತವೆ. ವಿವಿಧ ಚಟುವಟಿಕೆಗಳನ್ನು ಹೊಂದಿರುವುದು ಬೇಸರವನ್ನು ಕಡಿಮೆಗೊಳಿಸಲು ಸಹಕಾರಿಯಷ್ಟೇ ಅಲ್ಲದೆ ಪ್ರತಿಯೊಬ್ಬರನ್ನು ಪ್ರವಾಸದುದ್ಕಕ್ಕೂ ಚೈತನ್ಯದಿಂದ ಇರಿಸಲು ಅನುವು ಮಾಡಿಕೊಡುತ್ತದೆ.
ಸಿಂಗಪುರ, ಥಾಯ್ಲೆಂಡ್ ಮತ್ತು ಮಲೇಷ್ಯಾದಂತಹ ಕೆಲವು ತಾಣಗಳು ವಿಶೇಷವಾಗಿ ಕುಟುಂಬ ಸಮೇತ ಪ್ರವಾಸಕ್ಕೆ ಹೇಳಿ ಮಾಡಿಸಿದಂತಿರುತ್ತವೆ. ಇಲ್ಲೆಲ್ಲಾ ಮಕ್ಕಳನ್ನು ಆಕರ್ಷಿಸುವಂತಹ ತಾಣಗಳು ಮತ್ತು ಪಾರ್ಕುಗಳು ಬಹಳಷ್ಟಿವೆ. ಈ ಸ್ಥಳಗಳು ಮಕ್ಕಳ ಸಹಜ ಕುತೂಹಲ ತಣಿಸಲು ಹಾಗೂ ಅವರ ಲವಲವಿಕೆಗೆ ಸೂಕ್ತವಾಗಿದ್ದು ಕುಟುಂಬ ಸಮೇತ ಪ್ರವಾಸವನ್ನು ಸ್ಮರಣೀಯವಾಗಿಸಲು ಪ್ರಶಸ್ತವಾಗಿವೆ.
ಉದಾಹರಣೆಗೆ, ಥಾಯ್ಲೆಂಡ್ ನಲ್ಲಿ ಮಕ್ಕಳು ಪ್ರಾಣಿಗಳಿಂದ ಸಹಜವಾಗಿಯೇ ಆಕರ್ಷಿತರಾಗುತ್ತಾರೆ. ಇಲ್ಲಿ ಸಫಾರಿ ವರ್ಲ್ಡ್ ಗೆ ನೀಡುವ ಭೇಟಿಯು ಅವರಿಗೆ ಎಂದೆಂದೂ ಮರೆಯಲಾಗದ ಅನುಭವವಾಗಿ ಮನಸ್ಸಿನಲ್ಲಿ ಉಳಿಯುತ್ತದೆ. ಈ ಥೀಮ್ ಪಾರ್ಕ್ ನಲ್ಲಿ ರೋಮಾಂಚಕ ವೈಲ್ಡ್ ಲೈಫ್ ಷೋಗಳ ಜೊತೆಗೆ ಎಳೆಯ ಮನಸ್ಸುಗಳನ್ನು ಸೆಳೆಯುವಂತಹ ಸಫಾರಿಗಳು ಕೂಡ ಇವೆ. ಅದೇ ರೀತಿಯಾಗಿ ಯೂನಿವರ್ಸಲ್ ಸ್ಟುಡಿಯೋಸ್, ಡಿಸ್ನಿಲ್ಯಾಂಡ್ ಮತ್ತು ಲೆಗೋ ಲ್ಯಾಂಡ್ ಗಳನ್ನು ವರ್ಷದ ಯಾವುದೇ ಅವಧಿಯಲ್ಲಾದರೂ ಮನರಂಜನೆ ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಇಲ್ಲಿನ ರೋಮಾಂಚಕ ರೋಲರ್ ಕೋಸ್ಟರ್ ಗಳು, ವಿವಿಧ ಸವಾರಿಗಳು ಹಾಗೂ ಗೇಮ್ ಗಳು ಮಕ್ಕಳಿಗೆ ಗಂಟೆಗಟ್ಟಲೆ ಮನರಂಜನೆ ಒದಗಿಸುತ್ತವೆ.
ಈ ಪಾರ್ಕುಗಳ ಮತ್ತೊಂದು ಮಾಂತ್ರಿಕತೆ ಏನೆಂದರೆ, ಇವು ಮಕ್ಕಳಿಗೆ ತಮ್ಮ ನೆಚ್ಚಿನ ಸಿನಿಮಾಗಳ ಪಾತ್ರಧಾರಿಯಾಗಿ ತಾವೇ ಅಭಿನಯಿಸುತ್ತಿದ್ದೇವೇನೋ ಎಂಬ ಭಾವನೆ ಮೂಡಿಸುತ್ತವೆ. ಡಿಸ್ನಿ ಪಾರ್ಕಿನಲ್ಲಿ ನೀವು ‘ಫ್ರೋಜನ್’ ನ ಮನಮೋಹಕ ಜಗತ್ತನ್ನು ಹೊಕ್ಕಂತೆ ಭಾಸವಾಗುತ್ತದೆ. ಹಾಗೆಯೇ ಯೂನಿವರ್ಸಲ್ ಸ್ಟುಡಿಯೋಸ್ ನಲ್ಲಿ ಹುರುಪು ಮೂಡಿಸುವ ‘ಟ್ರಾನ್ಸ್ ಫಾರ್ಮರ್ಸ್ ರೈಡ್’ ಲಭ್ಯವಾಗುತ್ತದೆ. ಈ ಅನುಭವಗಳು ಸಿನಿಮಾದ ಮಾಂತ್ರಿಕತೆ ಹಾಗೂ ಅಮ್ಯೂಸ್ ಮೆಂಟ್ ಪಾರ್ಕುಗಳ ರೋಮಾಂಚನದೊಂದಿಗೆ ಮಕ್ಕಳನ್ನು ಮಾತ್ರವಲ್ಲದೆ ವಯಸ್ಕರನ್ನು ಕೂಡ ಮುದಗೊಳಿಸುವ ವಾತಾವರಣ ಸೃಷ್ಟಿಸುತ್ತವೆ. ಹೀಗೆ ಎಲ್ಲರನ್ನೂ ತೊಡಗಿಸಿಕೊಳ್ಳುವಂತಹ ಆಕರ್ಷಣೆಗಳ ನೆರವಿನಿಂದ ಈ ತಾಣಗಳು ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಏನಾದರೊಂದು ಖುಷಿ ಕಾಣಲು ಅವಕಾಶ ಮಾಡಿಕೊಟ್ಟು ಪ್ರವಾಸದ ಅನುಭವವು ಸದಾ ನೆನಪಿನಲ್ಲಿ ಉಳಿಯುವಂತೆ ಮಾಡುತ್ತವೆ.
ಇದು ಕೇವಲ ಮಾನವ ನಿರ್ಮಿತ ಆಕರ್ಷಣೆಗಳು ಅಥವಾ ಥೀಮ್ ಪಾರ್ಕುಗಳಿಗಷ್ಟೇ ಸೀಮಿತಗೊಳ್ಳಬೇಕೆಂದೇನೂ ಇಲ್ಲ. ಪ್ರಕೃತಿಯ ಅದ್ಭುತಗಳನ್ನು ಪರಿಚಯಿಸುವುದು ಮಕ್ಕಳಿಗೆ ಮುದ ನೀಡುವ ಜೊತೆಗೆ ಶೈಕ್ಷಣಿಕವಾಗಿಯೂ ಉಪಯುಕ್ತವಾಗುತ್ತದೆ. ಲಘು ಸಾಹಸಗಳನ್ನು ನಿಮ್ಮ ಪ್ರವಾಸದ ಭಾಗವಾಗಿಸುವುದು ಇದನ್ನು ಸಾಧಿಸುವ ಅತ್ಯುತ್ತಮ ಮಾರ್ಗೋಪಾಯವಾಗಿರುತ್ತದೆ. ಮಕ್ಕಳಿಗೆ ಸುರಕ್ಷಿತವಾಗಿ ಪರ್ವತಗಳ ಮೇಲೆ ತೇಲಾಡಿದ ಭಾವ ಮೂಡಿಸುವ ‘ಜಿಪ್ ಲೈನಿಂಗ್’ ನಂತಹ ಚಟುವಟಿಕೆಗಳು, ಅವರೊಳಗಿನ ‘ಟಾರ್ಜಾನ್ ‘ಅನ್ನು ಹೊರಹೊಮ್ಮಿಸಲು ಅನುವು ಮಾಡಿಕೊಟ್ಟು ಸಾಹಸ ಹಾಗೂ ಆತ್ಮವಿಶ್ವಾಸದ ಗುಣಗಳನ್ನು ಉತ್ತೇಜಿಸುತ್ತವೆ.
ಜಲಕ್ರೀಡೆಗಳ ರೋಮಾಂಚನವನ್ನು ಸುರಕ್ಷತೆಯೊಂದಿಗೆ ಅನುಭವಿಸಲು ಮೈಲ್ಡ್ ರಾಪಿಡ್ ಗಳ ಮೇಲಿನ ರಾಫ್ಟಿಂಗ್ ಅವಕಾಶ ಕಲ್ಪಿಸುತ್ತದೆ. ಹಾಗೆಯೇ ಪ್ಯಾರಾ ಸೈಲಿಂಗ್ ಮತ್ತು ಬನಾನಾ ಬೋಟ್ ರೈಡ್ ನಂತಹ ಚಟುವಟಿಕೆಗಳು ನೀರಿನ ಮೇಲೆ ಉಲ್ಲಾಸದಾಯಕ ಅನುಭವಗಳನ್ನು ನೀಡುತ್ತವೆ. ಸ್ನಾಕಲಿಂಗ್ ಮತ್ತೊಂದು ಅತ್ಯುತ್ತಮ ಆಯ್ಕೆಯಾಗಿದ್ದು ಕಡಲೊಳಗಿನ ಜೀವಸಂಕುಲವನ್ನು ಹತ್ತಿರದಿಂದ ನೋಡುವ ಅವಕಾಶ ಒದಗಿಸಿ ಸಾಗರದಾಳದ ಜೀವವೈವಿಧ್ಯದ ಬಗ್ಗೆ ಪ್ರೀತಿ ಹುಟ್ಟಿಸುವ ಚಟುವಟಿಕೆಯಾಗಿರುತ್ತದೆ.
ಸಮುದ್ರದ ದಡದಲ್ಲಿ ಮರಳಿನಲ್ಲಿ ಗೂಡು ಕಟ್ಟುವಂತಹ ಸರಳ ಚಟುವಟಿಕೆ ಕೂಡ ಮಕ್ಕಳನ್ನು ಆನಂದದಲ್ಲಿ ತಲ್ಲೀನ ಗೊಳಿಸಬಲ್ಲದು. ಇಂತಹ ಚಟುವಟಿಕೆಗಳು ಮಕ್ಕಳಿಗೆ ಮನರಂಜನೆ ನೀಡುವ ಜೊತೆಗೆ ತಮ್ಮ ಸುತ್ತಲ ನಿಸರ್ಗವನ್ನು ಮೆಚ್ಚಿ ಅದರೊಂದಿಗೆ ಸಂಪರ್ಕ ಕಲ್ಪಿಸಿಕೊಳ್ಳಲು ಪ್ರೋತ್ಸಾಹಿಸುತ್ತವೆ. ಇವು ಹೊರಾಂಗಣ ಅನ್ವೇಷಣೆ ಬಗ್ಗೆ ಪ್ರೀತಿ ಹುಟ್ಟಿಸುವ ಜೊತೆಗೆ ಅಚ್ಚಳಿಯದ ನೆನಪುಗಳನ್ನು ಕೂಡ ಮನಸ್ಸಿನಲ್ಲಿ ಮೂಡಿಸುತ್ತವೆ.
ಪ್ರವಾಸದ ವೇಳೆ ಕೆಲವರು ತಾವು ಸಂಪೂರ್ಣ ವಿಶ್ರಾಂತಿಯಿಂದಿರುವ ಜೊತೆಗೆ ಆ ಸಂದರ್ಭದಲ್ಲಿ ಖುಷಿ ಅನುಭವಿಸುವ ಸಲುವಾಗಿ ಪ್ರತಿಯೊಂದು ನಿರ್ವಹಣೆಯನ್ನೂ ಯಾರಿಗಾದರೂ ವಹಿಸುವ ಆಲೋಚನೆಯಲ್ಲಿ ಇರುತ್ತಾರೆ. ಪ್ರವಾಸದ ವೇಳೆ ತಮ್ಮ ಮಕ್ಕಳೊಂದಿಗೆ ಆಟವಾಡಲು ಗೆಳೆಯರಿರಬೇಕು ಹಾಗೂ ಅವರು ಉತ್ಸಾಹದಿಂದ ತೊಡಗಿಕೊಳ್ಳುವಂತಹ ಚಟುವಟಿಕೆಗಳು ಇರಬೇಕು ಎಂಬ ನಿರೀಕ್ಷೆಯೂ ಅವರಲ್ಲಿರುತ್ತದೆ. ಪುಣೆಯಲ್ಲಿರುವ ನಮ್ಮ ಕಚೇರಿಯ ಸಂದೀಪ್ ರವರು ಈ ಕಾರಣಕ್ಕಾಗಿ ವೀಣಾ ವರ್ಲ್ಡ್ ಕುಟುಂಬ ಸಮೇತ ಪ್ರವಾಸಗಳನ್ನು ನೆಚ್ಚಿಕೊಳ್ಳುತ್ತಾರೆ. ಇದರಿಂದ ಅವರ ಮಗಳು ಸಾಯಿಗೆ ಪ್ರವಾಸಗಳ ವೇಳೆ ಯಾವಾಗಲೂ ಉತ್ತಮ ಗೆಳೆಯರನ್ನು ಪಡೆಯಲು ಸಾಧ್ಯವಾಗುತ್ತಿದೆ. ಇದು ಅವರಿಗೆ ಪ್ರವಾಸಗಳಿಂದ ನಿರೀಕ್ಷಿಸುವ ಖುಷಿ ಹಾಗೂ ತೃಪ್ತಿಯನ್ನು ನೀಡುತ್ತಿದೆ. ವೀಣಾ ವರ್ಲ್ಡ್ ಟೂರ್ ಮ್ಯಾನೇಜರ್ ರವರು ಎಲ್ಲಾ ಪೀಳಿಗೆಯವರಿಗೂ ಸರಿಹೊಂದುವಂತಹ ವಿವಿಧ ಆಟಗಳು ಮತ್ತು ಚಟುವಟಿಕೆಗಳ ಮೂಲಕ ಪ್ರವಾಸವು ಸಂತಸದಾಯಕವೂ ಮೋಜಿನಿಂದ ಕೂಡಿದ್ದೂ ಆಗಿರುವಂತೆ ಪ್ರವಾಸ ಪಟ್ಟಿಯನ್ನು ಸಂಯೋಜನೆಗೊಳಿಸುತ್ತಾರೆ.
ಅಂತಿಮವಾಗಿ, ಒಂದು ಯಶಸ್ವಿ ಕುಟುಂಬಸಮೇತ ಪ್ರವಾಸವೆಂದರೆ ಸದಸ್ಯರೆಲ್ಲರ ಬಯಕೆಗಳನ್ನು ಸಮತೋಲನಗೊಳಿಸುವ, ಆಲೋಚನಾಶೀಲವಾಗಿ ಯೋಜನೆ ರೂಪಿಸುವ ಹಾಗೂ ಪ್ರಯಾಣದ ಅನುಭವವನ್ನು ಸಮೃದ್ಧಗೊಳಿಸುವ ಅನಿರೀಕ್ಷಿತ ಕ್ಷಣಗಳಿಗೆ ಹೊಂದಿಕೊಳ್ಳುವಂತಹ ಮನೋಧರ್ಮವಾಗಿರುತ್ತದೆ.
Post your Comment
Please let us know your thoughts on this story by leaving a comment.